ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ಳೆಯ ಡುಂಡಿರಾಜ ಈಗ ಬಲಿತ ಡುಂಡಿರಾಜನಾಗಿ ಮೆರೆಯುತ್ತಿದ್ದಾನೆ’ ಎಂದು ಹಿರಿಯ ಲೇಖಕ ಅ.ರಾ. ಮಿತ್ರ ಅಭಿಮಾನದಿಂದ ಡುಂಡಿಯನ್ನು ನಿಂದಾಸ್ತುತಿಯಲ್ಲಿ ಪ್ರಶಂಸಿದ್ದಾರೆ. ಯಾರ ಕಣ್ಣಿಗೂ ಉರಿ ತರಿಸದ ಡುಂಡಿರಾಜರ ಈ ‘ಮೆರೆತ’ ನಮ್ಮಂಥ ಆತನ ಅಸಂಖ್ಯ ಅಭಿಮಾನಿಗಳಿಗೆ ಸಂತೋಷ ತಂದಿರುವುದಂತೂ ಸತ್ಯ.

ಡುಂಡಿರಾಜರಿಗೆ ಈಗ ಅರವತ್ತು. ಅರವತ್ತಾದುದು ಮಹತ್ವದ ಸಂಗತಿಯಲ್ಲ; ಅರವತ್ತಾದರೂ ಡುಂಡಿ ತಮ್ಮ ಮುಖದಲ್ಲಿ ನಗೆಯ ಮಿನುಗು ಉಳಿಸಿಕೊಂಡಿದ್ದಾರೆ ಎಂಬುದು ಮಹತ್ವದ ಸಂಗತಿ. ನಗೆಯೇ ಡುಂಡಿರಾಜರ ಸ್ವಧರ್ಮ. ‘ನನ್ನ ಕವಿತೆ ನನ್ನ ಹಾಗೆ’ ಎಂಬ ತಮ್ಮ ‘ಸೆಲ್ಫಿ’ ಕವಿತೆಯಲ್ಲಿ ಡುಂಡಿರಾಜ ಇದನ್ನು ಬಹು ಸೊಗಸಾಗಿ ಸ್ಥಾಪಿಸಿದ್ದಾರೆ.

ನನ್ನ ಕವಿತೆ

ಇಲ್ಲೇ ಹೀಗೇ

ನಿಮ್ಮೆಲ್ಲರ ಜೊತೆಗೆ

ನಗುನಗುತ್ತಾ ಮಾತಾಡಿಕೊಂಡು

ತನ್ನ ಪಾಡಿಗೆ ತಾನು

ಗುನುಗುನು ಹಾಡಿಕೊಂಡು

ಹಾಯಾಗಿರುತ್ತದೆ

ಬೊಜ್ಜಿನ ವಜ್ಜೆ ಇಲ್ಲದೆ

ಫ್ರೀಯಾಗಿರುತ್ತದೆ

ಹೃದಯದ ಮಿಡಿತಕ್ಕೆ

ಸದಾ ಬಾಯಾಗಿರುತ್ತದೆ!

ಇದು ಡುಂಡಿರಾಜರ ಕವಿತೆಯ ವಿವರಣೆಯಾಗಿರುವಂತೆ ಡುಂಡಿರಾಜರ ವ್ಯಕ್ತಿತ್ವದ ವಿವರಣೆಯೂ ಹೌದು. ಯಾರು ತಮ್ಮ ಕನ್ನಡಿಯನ್ನು ನೋಡಿ ತಾವೇ ನಗಬಲ್ಲರೋ ಅವರು ಹೀಗೆ ಹಗುರಾಗಿ ಆರೋಗ್ಯವಂತರಾಗಿ ಹಾಯಾಗಿರುತ್ತಾರೆ! ಇನ್ನೊಬ್ಬರನ್ನು ನೋಡಿ ನಗುವುದು ಸುಲಭ; ತನ್ನನ್ನು ನೋಡಿ ತಾನೇ ನಗುವುದು ನಾವು ಅಂದುಕೊಳ್ಳುವಷ್ಟು ಸುಲಭವಲ್ಲ! ಡುಂಡಿರಾಜರ ಹಾಸ್ಯದ ಮಹತ್ವ ಇರುವುದೇ ಅಲ್ಲಿ.

ಡುಂಡಿಯ ಹಾಸ್ಯ ಹುಟ್ಟುವುದು ಪಕ್ಕಾ ಭಾಷಿಕ ನೆಲೆಯಲ್ಲಿ. ಅವರ ವಕ್ರೋಕ್ತಿ ವಿಲಾಸವನ್ನು ಎಷ್ಟು ಸವಿದರೂ ಅದು ಸವೆಯದು. ಡುಂಡಿರಾಜರ ಭಾಷೆಯಲ್ಲಿ ಪ್ರಾಸಾನುಪ್ರಾಸಗಳ ಅನಿರೀಕ್ಷಿತ ತಿರುವುಗಳುಂಟು. ಅರ್ಥ–ಅಪಾರ್ಥಗಳ ಕಣ್ಣಾಮುಚ್ಚಾಲೆಯುಂಟು. ಬಡಿಯುವುದನ್ನು ನಿಲ್ಲಿಸಿದ ಮೇಲೂ ಅನುರಣಿಸುವ ಅಂತರ್ಧ್ವನಿಯ ಅವಿರತ ನಿನಾದವುಂಟು. ರೂಪಕ ಅರೂಪಕಗಳ ಚಾಟೂಕ್ತಿಗಳುಂಟು. ನಾಯಕ ಮಾಡಬಲ್ಲುದನ್ನೆಲ್ಲಾ ವಿದೂಷಕನೂ ಮಾಡಬಲ್ಲವನಾಗಿರುತ್ತಾನೆ! ನಾಯಕ ‘ಕವಿ’ ಆದರೆ ಇವನು ವಿಕಟಕವಿ! ಹೀಗೆ ಡುಂಡಿಯೂ ದೊಡ್ಡ ಕವಿಯ ಮಿನಿಯೇಚರ್ ಅಣಕುಪ್ರತಿ. ‘ಆಯುವ ಕವಿ – ಈಯುವ ಕವಿ’ ಎಂಬ ಬಹು ಸೊಗಸಾದ ಕವಿತೆಯಲ್ಲಿ ಕಾವ್ಯದ ಈ ಇಮ್ಮೈಯನ್ನು ಡುಂಡಿ ಲೇವಡಿಮಾಡುವ ಪರಿಯನ್ನು ಗಮನಿಸಿ!

ಈ ಯುವ ಕವಿ

ಎಡೆಬಿಡದೆ ಕವಿತೆ

ಈಯುವ ಕವಿ

ಆ ಯುವ ಕವಿ

ಶ್ರೇಷ್ಠ ಕಾವ್ಯವೇ ಬೇಕೆಂದು

ಆಯುವ ಕವಿ

ಈ ಯುವ ಕವಿಗೂ

ಆ ಯುವ ಕವಿಗೂ

ವ್ಯತ್ಯಾಸ ಹೆಚ್ಚೇನಿಲ್ಲ

ಈ ಯುವ ಕವಿ

ಈಯುವುದರಲ್ಲೇ

ಕಳೆಯುತ್ತಾನೆ ಕಾಲ

ಆಯುವುದಿಲ್ಲ

ಆ ಯುವ ಕವಿ

ಆಯುತ್ತಾ ಆಯುತ್ತಾ

ಸವೆಸುತ್ತಾನೆ ಆಯುಷ್ಯ

ಈಯುವುದೇ ಇಲ್ಲ

‘ಆಯುವ’ ಮತ್ತು ‘ಈಯುವ’ ಎಂಬ ಎರಡು ಕನ್ನಡ ಶಬ್ದಗಳ ಅಂತರಾರ್ಥವನ್ನು ಉಜ್ಜಿ ಉಜ್ಜಿ ಬೆಳಗುವ ಮೂಲಕವೇ ಕವಿತೆ ತನ್ನ ಅರ್ಥಪ್ರಕಾಶವನ್ನು ಪಡೆಯುತ್ತಾ ಇದೆ. ಶಬ್ದಗಳು ಹತ್ತಿರ ಬರುತ್ತಾ, ದೂರ ಸರಿಯುತ್ತಾ ಹೊಸ ಹೊಸ ಅರ್ಥಗಳನ್ನು ತೇಲಿಸುವ ಪರಿ ಡುಂಡಿಯ ಸಹಜ ಭಾಷಾ ಚಮತ್–ಕೃತಿ! ಇಲ್ಲಿ ವಿಡಂಬನೆಗೆ ಒಳಗಾದವರಾದರೂ ಯಾರು? ಆಯುವ ಕವಿಯೋ? ಈಯುವ ಕವಿಯೋ? ಅಥವಾ ಆ ಇಬ್ಬರೂ ಅತಿಯಲ್ಲಿ ಆತ್ಮಹಾನಿ ಮಾಡಿಕೊಳ್ಳುವ ದುರಂತವೋ?

ಸಣ್ಣ ಸಣ್ಣ ಪಾದಗತಿಯಲ್ಲೇ ನೂರಾರು ಮೈಲು ದೂರ ದಾಟಿಬಿಡುವ ಚಾರಣೋದ್ಯಮದಂತೆ ಡುಂಡಿಯದೂ ಚುಕ್ಕಿಗಳ ಮೂಲಕವೇ ಆಕಾಶಕ್ಕೆ ಬಲೆ ಬೀಸುವ ಹುಚ್ಚು ಸಾಹಸ! ವಿಕಟಕವಿ ಇನ್ನೇನು ಚಂದ್ರಲೋಕದಲ್ಲಿ ಕಾಲೂರಿದ ಎನ್ನುವಷ್ಟರಲ್ಲಿ ಆಯತಪ್ಪಿ ಭೂಮಿಗೆ ಅಪ್ಪಳಿಸುತ್ತಾನೆ! ಆದರೆ ಹಾಗೆ ಅಪ್ಪಳಿಸುವಾಗ ಸರ್ಕಸ್ಸಿನ ರಿಂಗಣದಲ್ಲಿ ಒಡ್ಡಿದ ಕ್ಷೇಮಬಲೆಯಲ್ಲೇ ಅವನು ಬೀಳಬೇಕು! ಇದೇ ವಿಕಟ ಕಾವ್ಯದ ಆತ್ಮಗುಣ. ಬಿದ್ದೂ ಚಿತ್ತಾಗದ ಚಮತ್ಕಾರ. ಡುಂಡಿ ಹೀಗೆ ತಮ್ಮ ಮಿನಿಮಿನುಕು ಕವಿತೆಗಳಲ್ಲಿ ನಿರಂತರವಾಗಿ ಸಂಭವಿಸುವ ನಕ್ಷತ್ರಪಥನದಲ್ಲೇ ಅದರ ಉಡ್ಡಯಣ ಸಾಮರ್ಥವನ್ನೂ ಸೂಚಿಸಿಬಿಡುವ ಕವಿ. ಎತ್ತರದಿಂದ ಬೀಳುವಿಕೆಯನ್ನು ಅಭಿನಯಿಸುವ ಕಲಾವಿದ ಬೀಳಲಿಕ್ಕಾದರೂ ಏರುವ ಸಾಮರ್ಥ್ಯ ಹೊಂದಿದವನಾಗಿರಬೇಕಲ್ಲವೇ? ಅದಕ್ಕೇ ಕಾವ್ಯದ ಈ ಇಬ್ಬಗೆಗಳದ್ದು ತಮ್ಮದೇ ಆದ ಏಳುವ ಮತ್ತು ಬೀಳುವ ಆಟ.

ಡುಂಡಿರಾಜರ ಭಾಷಾಚಮತ್ಕೃತಿಯ ಹಿಂದೆ ಸಮಾಜಮುಖಿಯೂ, ಕುಟುಂಬ ಕಲ್ಯಾಣಾಪೇಕ್ಷಿಯೂ ಆದ ಆರ್ದ್ರ ಹೃದಯಸ್ಪಂದನವಿದೆ ಎಂಬುದನ್ನು ನಾವು ಮರೆಯಬಾರದು. ಕೇವಲ ಚಮತ್ಕೃತಿ ಕೃತಿಯಾಗಲಾರದು. ಅಂತಃಕರಣವಿಲ್ಲದ ಚಮತ್ಕರಣಕ್ಕೆ ಏನು ಮಹತ್ವವಿದೆ? ಸದಾ ಲೇವಡಿಗೆ ಗುರಿಯಾಗುವ ತಮ್ಮ ಹೆಂಡತಿಯ ಬಗ್ಗೆ ಡುಂಡಿಗೆ ಇರುವ ಅಂತಃಕರಣ ಮತ್ತು ಭಯ–ಭಕ್ತಿ ಅಸಾಧಾರಣವಾದುದು. ತನ್ನ ನಿರ್ಮಿತಿ ಅವಸರದ್ದು; ವ್ರತತೊಟ್ಟು ಕಟ್ಟಿದ್ದು. ಆದರೆ ತನ್ನ ಪತ್ನಿಯದೋ ಸಹಜ ಸಾರ್ಥಕ ಕವನ ಎಂಬುದನ್ನು ಡುಂಡಿ ಬಲ್ಲವರಾದ್ದರಿಂದಲೇ ಅವರದ್ದು ಆ ಬಗೆಯ ಆರ್ದ್ರ ಅಂತಃಕರಣ! ಅವರು ನಿರ್ಮಮವಾಗಿ ಹೇಳುತ್ತಾರೆ:

ನನ್ನದು

ಅವಸರದಲ್ಲಿ

ಕಟ್ಟಿದ ಕವನ.

ನಿನ್ನದು

ತಿಂಗಳು ತುಂಬಿ

ಹುಟ್ಟಿದ ಕವನ

ಸಹಜ ಕವನ

ಸಾರ್ಥಕ ಕವನ

ಸಹಜ, ಸಾರ್ಥಕ ಡುಂಡಿ ದಂಪತಿಗಳ ಮಕ್ಕಳ ಹೆಸರು ಎಂಬುದು ಗೊತ್ತಿದ್ದಾಗ ಈ ಕವಿತೆಗೆ ಪ್ರಾಪ್ತವಾಗುವ ಅರ್ಥಸೌಂದರ್ಯ ಅಸಾಮಾನ್ಯವಾದುದು! ಡುಂಡಿಯವರ ಕಾವ್ಯದ ಹೃದಯ ಅವರ ಚಿಕ್ಕಚೊಕ್ಕ ಕುಟುಂಬ. ಆದರೆ ಅದು ಇಡೀ ಸಮಾಜವನ್ನೇ ಅದಮ್ಯವಾದ ಜೀವ ಕಾಳಜಿಯಿಂದ ಅಪ್ಪಿಹಿಡಿಯುವ ಕಾವ್ಯ. ಜೀವಪ್ರೀತಿಯನ್ನು ಅದ್ಭುತವಾಗಿ ಹಿಡಿದಿಡುವ ಡಾ. ಅಂಬೇಡಕರ್ ಬಗ್ಗೆ ಅವರು ಬರೆದಿರುವ ಸೊಗಸಾದ ಪದ್ಯದ ಧ್ವನಿಪೂರ್ಣವಾದ ಕೊನೆಯ ಸಾಲುಗಳನ್ನು ಗಮನಿಸಿ:

ಗಾಂಧಿಯೊಟ್ಟಿಗೆ ನಿಮ್ಮನ್ನೂ ತೂಗು ಹಾಕಿದ್ದಾರೆ ಗೋಡೆಗಳಿಗೆ

ನಿಮ್ಮ ಹೆಸರನ್ನು ಇಟ್ಟಿದ್ದಾರೆ ಪಟ್ಟಣದ ರೋಡುಗಳಿಗೆ

ಎಲ್ಲರೂ ನಿಮ್ಮ ದಾರಿಯನ್ನು ತುಳಿಯುತ್ತಿದ್ದಾರೆ

ಜಾಡಮಾಲಿಗಳು ಎಂದಿನಂತೆ ತೊಳೆಯುತ್ತಿದ್ದಾರೆ.

ಆತ್ಮವೇದಕವಾದ ಈ ತಣ್ಣನೆಯ ವ್ಯಂಗ್ಯ ಮತ್ತು ಕಣ್ಣಲ್ಲೊತ್ತುವ ಹರಳಗಂಬನಿ ಡುಂಡಿಯ ಕಾವ್ಯಕ್ಕೆ ತೀರ ಸಹಜವಾದದ್ದು. ‘ಅಂಬೇಡಕರ್’ ಕವಿತೆಯ ಬಗ್ಗೆ ಬರೆಯುವಾಗ ನನಗೆ ತಕ್ಷಣ ನೆನಪಾಗುವುದು ಅವರು ಗಾಂಧಿಯ ಬಗ್ಗೆ ಬರೆದಿರುವ ಇಷ್ಟೇ ಆತ್ಮಾರ್ಥವುಳ್ಳ ‘ಗಾಂಧಿಮೈದಾನ’ ಎಂಬ ಕವಿತೆ. ಗಾಂಧಿಯ ಆತ್ಮಬಲಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ಈ ಕವಿತೆ ಡುಂಡಿಯ ಬರವಣಿಗೆಯ ರಾಶಿಯ ಮೇಲೆ ನಾನು, ಜೋಳದ ಬೆಳಸಿನ ಕಳಸದ ಹಾಗೆ ಇರಿಸಿಕೊಂಡಿರುವ ಕವಿತೆ.

ಅಪರೂಪಕ್ಕೆ ಕೆಲವು ಸಲ ಅದೂ ರಾತ್ರಿಯ ವೇಳೆ

ಸದ್ದಿಲ್ಲದೆ ಮೈದಾನ ಬಿದ್ದುಕೊಳ್ಳುತ್ತದೆ ಬತ್ತಲೆ

ಯಾರೋ ಹಾಕಿದ ಚಪ್ಪರ ಅಥವಾ ಕಟ್ಟಿದ ವೇದಿಕೆ

ಗುರುತಿಗೋ ಎಂಬಂತೆ ಬಿಟ್ಟ ಗುಳಿಗಳು ನೋಟಕ್ಕೆ

ಮೈತುಂಬ ಗುಂಡೇಟು ತಾಗಿದಂತೆ ಕಾಣುತ್ತದೆ

ಹೇ ರಾಮ್ ಹೇ ರಾಮ್ ಕೂಗಿದಂತೆ ಕೇಳುತ್ತದೆ.

ಈ ಕಾರಣಕ್ಕೇ ಡುಂಡಿಯ ಚುಕ್ಕಿಗವನಗಳು ಕನ್ನಡದ ಮಹಾ ಕಾವ್ಯಮಾರ್ಗವೆಂಬ ನ್ಯಾಷನಲ್ ಹೈವೇಗೆ ಸಂಕರ್ಪ ಕಲ್ಪಿಸುವ ಷಾರ್ಟ್‌ಕಟ್ ಓಣಿಗಳ ಹಾಗೆ ನನಗೆ ಕಾಣುತ್ತವೆ. ಕಾವ್ಯವನ್ನು ಜನರ ನಡುವೆ ಹೀಗೆ ಪ್ರವರ್ತನಕಾರಿಯಾಗಿ, ಜೀವಂತವಾಗಿ, ಇಟ್ಟಿರುವ ಕಾರಣಕ್ಕೇ ಡುಂಡಿರಾಜರನ್ನು ಕನ್ನಡ ಕಾವ್ಯ ಸಂಸ್ಕೃತಿ ಕೃತಜ್ಞತೆಯಿಂದ ಅಭಿನಂದಿಸಬೇಕು. ಅರವತ್ತೆಂಬುದು ಅದಕ್ಕೊಂದು ನೆಪ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.