‘ಯೋಗರಾಜ ಭಟ್ಟರು ನಮ್ಮೆಲ್ಲರಿಗಿಂತ ದೊಡ್ಡ ತರಲೆ. ಅವರ ತುಂಟತನಗಳನ್ನೆಲ್ಲ ನಮಗೆ ಹೇಳಿಕೊಡ್ತಿದ್ರು. ನಾವು ಅದನ್ನೇ ಕ್ಯಾಮೆರಾ ಎದುರು ಮಾಡ್ತಿದ್ವಿ’ – ಇಷ್ಟು ಹೇಳಿ ‘ಮುಗುಳು ನಗೆ’ಯ ನೆತ್ತಿಯ ಮೇಲೆ ಹೊಡೆವಂತೆ ದೊಡ್ಡದಾಗಿ ನಕ್ಕರು ಆಶಿಕಾ.

ಬಣ್ಣದ ಜಗತ್ತಿಗೆ ಅಡಿಯಿಡುವಾಗಲೇ ತಮ್ಮ ಮತ್ಸ್ಯಕಂಗಳಲ್ಲಿ ಕಾಪಿಟ್ಟುಕೊಂಡು ಬಂದಿದ್ದ ‘ಭಟ್ಟರ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು’ ಎಂಬ ಕನಸು ‘ಮುಗುಳು ನಗೆ’ಯ ಮೂಲಕ ಈಡೇರಿದ ಪುಲಕ ಅವರ ಮಾತಿನಲ್ಲಿತ್ತು. ಹಾಗೆಯೇ ಭಟ್ಟರ ಸಹವಾಸದೋಷದಿಂದ ಅಂಟಿಕೊಂಡ ತುಂಟತನವೂ ಜತೆ ಸೇರಿಕೊಂಡಿತ್ತು.

ಈಗಷ್ಟೇ ಬಿ.ಕಾಂ ಎರಡನೇ ವರ್ಷದ ಪರೀಕ್ಷೆ ಮುಗಿಸಿರುವ ಆಶಿಕಾ, ಪರೀಕ್ಷೆ ಮತ್ತು ಸಿನಿಮಾ ಎರಡರ ಫಲಿತಾಂಶವನ್ನೂ ಎದುರು ನೋಡುತ್ತಿದ್ದಾರೆ. ಶೈಕ್ಷಣಿಕ ಪರೀಕ್ಷೆಗಿಂತ ಸಿನಿಮಾ ಪರೀಕ್ಷೆಯ ಫಲಿತಾಂಶವೇ ಹೆಚ್ಚು ಕಾಡುತ್ತಿದೆ. ‘ಶೈಕ್ಷಣಿಕ ಪರೀಕ್ಷೆಯ ಬಗ್ಗೆ ನನಗೆ ಯಾವ ಭಯವೂ ಇಲ್ಲ. ಪಾಸಾಗುತ್ತೇನೆ ಎಂಬ ನಂಬಿಕೆ ಇದೆ. ಸಿನಿಮಾದ್ದೇ ಭಯ ಇರೋದು. ಯಾಕೆಂದರೆ ಜನರ ನಿರೀಕ್ಷೆ ದೊಡ್ಡದಿದೆ’ ಎನ್ನುತ್ತಾರೆ ಅವರು.

ಮಹೇಶ್ ಬಾಬು ನಿರ್ದೇಶನದ ‘ಕ್ರೇಜಿ ಬಾಯ್’ ಸಿನಿಮಾದ ಮೂಲಕ ‘ಚಂದನವನ’ದಲ್ಲಿ ಬೇರೂರಿದ ಚೆಲುವಿನ ಬಳ್ಳಿ ಆಶಿಕಾ, ಈಗ ಮೈತುಂಬ ಅವಕಾಶಗಳ ಹೂ ಅರಳಿಸಿಕೊಂಡು ನಿಂತಿದ್ದಾರೆ. ‘ಲೀಡರ್’ ಚಿತ್ರದಲ್ಲಿ ಶಿವರಾಜ್‌ಕುಮಾರ್ ತಂಗಿಯಾಗಿ, ‘ಮುಗುಳುನಗೆ’ಯಲ್ಲಿ ಗಣೇಶ್ ಅವರಿಗೆ ಜೊತೆಯಾಗಿ, ‘ಗರುಡ’ದ ರೆಕ್ಕೆಯಾಗಿ ಹಾರುವ ಉತ್ಸಾಹದಲ್ಲಿ ಅವರಿದ್ದಾರೆ.

‘ಯೋಗರಾಜ್ ಭಟ್ಟರ ಜತೆ ಕೆಲಸ ಮಾಡಬೇಕು ಎಂಬ ಕನಸು ಇಷ್ಟು ಬೇಗ ನನಸಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ‘ಮುಗುಳು ನಗೆ’ ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್‌ನ ಮೂರನೇ ಸಿನಿಮಾ. ಜನರ ನಿರೀಕ್ಷೆ ಜಾಸ್ತಿ ಇದೆ. ಈ ಬಗ್ಗೆ ನನಗೆ ತುಂಬ ಖುಷಿ ಮತ್ತು ಅಷ್ಟೇ ಭಯ ಇದೆ’ ಎನ್ನುವ ಅವರು ತಮ್ಮ ಪಾತ್ರದ ಬಗ್ಗೆ ಹೀಗೆ ವಿವರಿಸುತ್ತಾರೆ.

‘ಮುಗುಳು ನಗೆ ಇಂದಿನ ಯುವಜನರಿಗೆ ಇಷ್ಟ ಆಗುವ, ಕುಟುಂಬದವರೆಲ್ಲರೂ ನೋಡುವ ಸಿನಿಮಾ. ಇದರಲ್ಲಿನ ಮೂವರು ನಾಯಕಿಯರಿಗೂ ಸಮಾನ ಮಹತ್ವ ಇದೆ. ನನ್ನದು ಕಾಲೇಜ್ ಹುಡುಗಿಯ ಪಾತ್ರ. ತುಂಟಿ, ಯಾವುದಕ್ಕೂ ಹೆದರದವಳು. ಕಾಲೇಜಲ್ಲಿ ಎಲ್ಲರಿಗೂ ಕಾಲೆಳೆಯುಳ್ಳುತ್ತಾ ಇರುವ ಪಾತ್ರ’ ಎನ್ನುವ ಆಶಿಕಾ ನಿಜಜೀವನದಲ್ಲಿಯೂ ತರಲೆ ಹುಡುಗಿಯೇ. ಅವರ ಸ್ವಭಾವದೊಟ್ಟಿಗೆ ನಿರ್ದೇಶಕರ ಸಲಹೆಗಳೂ ಸೇರಿ ತೆರೆಯ ಮೇಲೆ ಇನ್ನಷ್ಟು ಸಹಜವಾಗಿ ನಟಿಸಲು ಅವರಿಗೆ ಸಾಧ್ಯವಾಗಿದೆ. ‘ಈ ಪಾತ್ರ ನನ್ನ ಸ್ವಭಾವದ ವಿಸ್ತರಣೆ ಅಷ್ಟೆ’ ಎನ್ನುತ್ತಾರೆ.

‘‘ನನ್ನ ಕುಟುಂಬದಲ್ಲಿ ಯಾರೂ ಸಿನಿಮಾ ಹಿನ್ನೆಲೆಯವರಲ್ಲ. ನಟನೆಯ ಬಗ್ಗೆ ನನಗೆ ಏನೆಂದರೆ ಏನೂ ಗೊತ್ತಿಲ್ಲ. ಸಿನಿಮಾ ಹೇಗೆ ಆಗುತ್ತದೆ ಎನ್ನುವುದು ಮೊದಲು ತಿಳಿದುಕೊಂಡಿದ್ದೇ ‘ಕ್ರೇಜಿ ಬಾಯ್’ ಸಿನಿಮಾ ಸಮಯದಲ್ಲಿ’’ ಎಂದು ತಾವು ಸಿನಿಮಾರಂಗಕ್ಕೆ ಅಡಿಯಿಟ್ಟ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಮೊದಮೊದಲಿಗೆ ನಟನೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಆಸೆಯನ್ನು ಇಟ್ಟುಕೊಂಡಿರಲಿಲ್ಲ. ಯಾವಾಗ ಮೊದಲ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳು ನೀಡುವ ಪುಲಕದ ಅನುಭವವಾಯಿತೋ ಆಗ ನಟನೆಯ ಮಹತ್ವ ಅರ್ಥವಾಯಿತು.

ಮೊದಲ ಸಿನಿಮಾ ಹೊರತುಪಡಿಸಿದರೆ ಆಶಿಕಾ ನಟಿಸಿದ್ದೆಲ್ಲವೂ ಬಹುನಾಯಕಿಯರಿರುವ ಸಿನಿಮಾಗಳಲ್ಲಿಯೇ. ಸದ್ಯಕ್ಕೆ ಒಪ್ಪಿಕೊಂಡಿರುವ ‘ಗರುಡ’ ಸಿನಿಮಾದಲ್ಲಿಯೂ ದೀಪಾ ಸನ್ನಿಧಿ ಮತ್ತು ಆಶಿಕಾ ಇಬ್ಬರು ನಾಯಕಿಯರು. ಮೊದ ಮೊದಲು ಈ ಬಗ್ಗೆ ಹಿಂಜರಿಕೆ ಆಗಿದ್ದರೂ ಈಗ ಅವರಲ್ಲಿ ಯಾವ ಆತಂಕವೂ ಉಳಿದುಕೊಂಡಿಲ್ಲ. ‘ಪಾತ್ರ ಮತ್ತು ನಮ್ಮ ನಟನೆಯ ಮುಂದೆ ಇಂಥ ಅಂಶಗಳೆಲ್ಲ ಗೌಣ’ ಎಂದು ಅವರಿಗೆ ಅನಿಸಿದೆ. ‘ಎಷ್ಟೋ ಸಿನಿಮಾಗಳಲ್ಲಿ ಒಬ್ಬಳೇ ನಾಯಕಿ ಇದ್ದರೂ ಅವಳು ಹೆಸರಿಗೆ ಮಾತ್ರವೇ ಇರುತ್ತಾಳೆ. ಹಾಗೆ ಪ್ರಾಮುಖ್ಯವೇ ಇಲ್ಲದ ಪಾತ್ರಕ್ಕಿಂತ ನಟನೆಗೆ ಅವಕಾಶ ಇರುವ ಬಹುನಾಯಕಿಯರ ಸಿನಿಮಾವೇ ಒಳ್ಳೆಯದಲ್ಲವೇ?’ ಎನ್ನುತ್ತಾರೆ. ‘ನನಗೆ ಸಿಕ್ಕ ಅವಕಾಶದಲ್ಲಿ ನನ್ನ ಪ್ರತಿಭೆಯನ್ನು ಸಾಬೀತು ಮಾಡಿದರೆ ಮುಂದೆ ಒಳ್ಳೆಯ ಪಾತ್ರಗಳು ಸಿಕ್ಕೇ ಸಿಗುತ್ತವೆ’ ಎಂಬ ವಿಶ್ವಾಸವೂ ಅವರಿಗಿದೆ.

ತಮಗೆ ಸಿಗುತ್ತಿರುವ ಅವಕಾಶಗಳು ಆಶಿಕಾ ಅವರಲ್ಲಿ ಉತ್ಸಾಹವನ್ನು ಹುಟ್ಟಿಸುವುದರ ಜತೆಗೆ ಪ್ರಬುದ್ಧತೆಯನ್ನೂ ಕಲಿಸಿವೆ. ಇಷ್ಟು ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಕರು, ಸ್ಟಾರ್ ನಟರ ಬಳಿ ಕೆಲಸ ಮಾಡಿದ ಅನುಭವ ಆಶಿಕಾ ಮನಸಲ್ಲಿ ಇದ್ದ ನಟನೆ ಮತ್ತು ಸಿನಿಮಾ ಮಾಧ್ಯಮ ಎರಡರ ಕುರಿತ ಅಭಿಪ್ರಾಯಗಳನ್ನು ಬದಲಿಸಿದೆ.

‘ನಾನು ಮೊದಲು ನಟನೆ ಎಂದರೆ ನಿರ್ದೇಶಕರು ಕೊಟ್ಟ ಸಂಭಾಷಣೆಯನ್ನು ಕ್ಯಾಮೆರಾ ಎದುರು ಹೇಳಿ ಬರುವುದು ಎಂದುಕೊಂಡಿದ್ದೆ. ಈಗ ಅದು ನಟನೆ ಅಲ್ಲ ಎಂದು ಗೊತ್ತಾಗಿದೆ. ಆ ಕೆಲಸವನ್ನು ಯಾರು ಬೇಕಾದರೂ ಮಾಡುತ್ತಾರೆ. ನಿರ್ದೇಶಕರು ಹೇಳಿರುವ ಸಂಭಾಷಣೆ ಮತ್ತು ಅವರ ಅಪೇಕ್ಷೆಗೆ ನಮ್ಮ ಅನುಭವದಿಂದ ಇನ್ನಷ್ಟು ಅಂಶಗಳನ್ನು ಸೇರಿಸಿ ಪಾತ್ರವನ್ನು ಸಾಧ್ಯವಾದಷ್ಟೂ ಸಹಜವಾಗಿ ಜೀವಂತಗೊಳಿಸುವುದೇ ನಟನೆ ಎಂದು ಈಗ ಅರ್ಥವಾಗಿದೆ’ ಎಂದು ಅವರು ತಮ್ಮ ನಟನಾಮೀಮಾಂಸೆಯನ್ನು ಮುಂದಿಡುತ್ತಾರೆ.

ಗ್ಲಾಮರ್ ವಿಷಯದಲ್ಲಿಯೂ ಆಶಿಕಾ ಮಡಿವಂತರೇನೂ ಅಲ್ಲ. ‘ಪಾತ್ರವೇ ಬೇಡುವ ಹಾಗಿದ್ದರೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಲ್ಲಿ ತಪ್ಪಿಲ್ಲ’ ಎನ್ನುವ ಅವರಿಗೆ, ‘ಅದು ಆಶ್ಲೀಲ ಅನಿಸಿಕೊಳ್ಳಬಾರದು’ ಎನ್ನುವ ಎಚ್ಚರವೂ ಇದೆ.

ಸದ್ಯಕ್ಕೆ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿದ್ದರೂ ವೃತ್ತಿಜೀವನವನ್ನು ಎಚ್ಚರದಿಂದ ರೂಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅವುಗಳನ್ನು ತಿರಸ್ಕರಿಸಿದ್ದಾರೆ. ‘ಒಳ್ಳೆಯ ತಂಡ, ಒಳ್ಳೆಯ ಪಾತ್ರವನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ’ ಎನ್ನುವುದು ಅವರ ಸದ್ಯದ ಮಂತ್ರ. ಅದು ಬಣ್ಣದ ಬದುಕನ್ನು ಉಜ್ವಲಗೊಳಿಸಿಕೊಳ್ಳುವ ತಂತ್ರವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.