ಮುಸ್ಲಿಂ ಸಮುದಾಯದವರಿಗೆ ಉಡುಪಿಯ ಕೃಷ್ಣ ಮಠದಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದು ಹಾಗೂ ಆ ಸಂದರ್ಭದಲ್ಲಿ ಮಠದೊಳಗೆ ನಮಾಜ್ ಮಾಡಲು ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಅದನ್ನು ವಿರೋಧಿಸುವ ಬಣಗಳಲ್ಲಿ ಎರಡು ಪ್ರಕಾರದವರಿದ್ದಾರೆ: 1. ಹಿಂದುತ್ವ ಪ್ರತಿಪಾದಕರು. 2. ಕಟ್ಟಾ ಸಂಪ್ರದಾಯಸ್ಥರು. ಇವರಿಬ್ಬರೂ ಬೇರೆ ಬೇರೆ ಕಾರಣಗಳನ್ನಿಟ್ಟುಕೊಂಡು ಖಂಡಿಸಿದ್ದರೂ ಇವರು ಪರಸ್ಪರ ವಿರೋಧಿಗಳೇನಲ್ಲ ಹಾಗೂ ಈ ಗುಂಪುಗಳ ವಿರೋಧದ ಕುರಿತು ಆಶ್ಚರ್ಯವೇನೂ ಇಲ್ಲ.

ಆದರೆ ಅದನ್ನು ಬೆಂಬಲಿಸುವ ಗುಂಪಿನೊಳಗೆ ಎರಡು ಪರಸ್ಪರ ವಿರೋಧಿ ರಾಜಕೀಯ ಗುಂಪುಗಳು ಸೇರಿಕೊಂಡಿವೆ ಎಂಬುದು ವಿಲಕ್ಷಣವಾಗಿದೆ: 1. ಹಿಂದುತ್ವ ಬಣದವರು. 2. ಸೆಕ್ಯುಲರ್ ಪ್ರಗತಿಪರರು. ಸೆಕ್ಯುಲರ್ ಪ್ರಗತಿಪರರು ಸ್ವಾಭಾವಿಕವಾಗಿಯೇ ಈ ನಡೆಯನ್ನು ಸ್ವಾಗತಿಸಿದ್ದಾರೆ, ಅದರಲ್ಲೇನೂ ಆಶ್ಚರ್ಯವಿಲ್ಲ. ಅವರ ಮಾನದಂಡಗಳು ಸ್ಪಷ್ಟವಾಗಿವೆ. ಅದರಲ್ಲೂ ಹಿಂದುತ್ವವಾದಿಗಳಿಂದ ವಿರೋಧ ಬಂದದ್ದಂತೂ ಈ ವಿಚಾರದಲ್ಲಿ ಸೆಕ್ಯುಲರ್‌ವಾದಿಗಳು ಯಾರ ಪರ ನಿಲ್ಲಬೇಕೆಂಬುದನ್ನು ಸರಳಗೊಳಿಸಿದೆ.

ಆದರೆ ಹಿಂದುತ್ವವಾದಿಗಳು ಹಾಗೂ ಸಂಪ್ರದಾಯಸ್ಥರಲ್ಲೇ ಬಹುಸಂಖ್ಯಾತರು ಪೇಜಾವರ ಸ್ವಾಮೀಜಿ ಜೊತೆಗೇ ಇರುವಂತಿದೆ. ಇದು ಈ ಪ್ರಸಂಗದ ವಿಶೇಷ. ಸ್ವತಃ ಪೇಜಾವರ ಶ್ರೀಗಳೇ ಹಿಂದುತ್ವ ಚಳವಳಿಯ ನಾಯಕರಲ್ಲೊಬ್ಬರು. ಇಂಥವರ ನಡೆಯನ್ನು ಹೇಗೆ ಅರ್ಥೈಸುವುದು?

ಸೆಕ್ಯುಲರ್‌ವಾದಿಗಳ ಮತಸಹಿಷ್ಣುತೆಯ ಮಂತ್ರವನ್ನು ಈ ಹಿಂದುತ್ವವಾದಿಗಳೂ ಒಪ್ಪಿಕೊಂಡಂತಿದೆ ಹಾಗೂ ಸೆಕ್ಯುಲರ್ ರಾಜಕಾರಣದ ತಂತ್ರಗಳನ್ನು ಹಿಂದುತ್ವದವರೂ ಕಾಪಿ ಮಾಡಿದಂತಿದೆ! ಇದು, ಇವರೆಲ್ಲ ಸೆಕ್ಯುಲರ್ ರಾಜಕೀಯವನ್ನು ಅಪ್ಪಿಕೊಂಡ ಲಕ್ಷಣವೇ?

ಇಲ್ಲ ಹೊಸದೊಂದು ರಾಜಕೀಯ ಪ್ರಹಸನ ಮೊದಲಾಗಿದೆಯೇ ಎಂಬ ಗೊಂದಲ ಹುಟ್ಟುವುದು ಸಹಜ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಸ್ತುತ ಭಾರತೀಯ ರಾಜಕೀಯದ ಗೊಂದಲ ಕೂಡಾ. ಒಟ್ಟಾರೆಯಾಗಿ ಹಿಂದುತ್ವವಾದಿಗಳ ನಡೆ ತುಂಬ ಸಂಕೀರ್ಣವಾಗಿರುವಂತಿದೆ.

ಅವರೊಳಗೆ ತಮ್ಮ ಆಚರಣೆಯ ಕುರಿತು ಆಂತರಿಕ ವೈರುಧ್ಯ ಹಾಗೂ ಗೊಂದಲವಿರುವಂತಿದೆ. ಏನೇ ಆದರೂ ಈ ವಿದ್ಯಮಾನ ಸನಾತನವಾದಿ ಹಿಂದೂಗಳನ್ನು ಕೂಡಾ ಬೆಚ್ಚಿಬೀಳಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ನನ್ನ ಅಭಿಪ್ರಾಯವೆಂದರೆ ಒಟ್ಟಾರೆಯಾಗಿ ಭಾರತೀಯ ಸಾಂಪ್ರದಾಯಿಕ ಪರಿಸರವೇ ಇಂಥ ಕ್ರಿಯೆಗಳನ್ನು ಪೋಷಿಸುವ ಧೋರಣೆಯನ್ನು ಬೆಳೆಸುವಂಥದ್ದು. ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವವರೇ ಭಾರತೀಯ ಸಂಪ್ರದಾಯಗಳ ಜೊತೆಗೆ ಸಂಬಂಧವನ್ನು ಕಡಿದುಕೊಂಡವರಂತೆ ಕಾಣುತ್ತಾರೆ.

ಅದು ಅವರಿಗೆ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಲು ಇದು ಸಕಾಲ. ಈ ಸಂದರ್ಭದಲ್ಲಿ ಪ್ರಗತಿಪರ ಸೆಕ್ಯುಲರ್‌ವಾದಿ ಹಿಂದೂಗಳಿಗೆ ಕೂಡ ಅವರು ಹಿಂದೂಗಳಾಗಿರುವ ಕಾರಣದಿಂದಲೇ ಈ ಅನುಕಂಪ ಶ್ಲಾಘನೀಯವಾಗಿ ಕಂಡಿದ್ದರೂ ಆಶ್ಚರ್ಯವಿಲ್ಲ. ಅದು ಅವರಿಗೆ ಗೊತ್ತಿಲ್ಲದಿದ್ದರೆ ಅದನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಇದು ಸಕಾಲ.

ಈ ಹೇಳಿಕೆಯ ಮಹತ್ವವನ್ನು ಅರ್ಥೈಸಿಕೊಳ್ಳಬೇಕಾದರೆ ನಮ್ಮ ಮತಸಂಪ್ರದಾಯಗಳ ಸಹಬಾಳ್ವೆಯ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಭಾರತವು ವೈವಿಧ್ಯಪೂರ್ಣ ಮತಗಳು ಒಟ್ಟಾಗಿ ಬದುಕಿದ ಒಂದು ಅಪರೂಪದ ನೆಲ. ಭಾರತದಲ್ಲಿ ಸಾಂಪ್ರದಾಯಿಕ ಸಹಬಾಳ್ವೆ ಎಂದಾಕ್ಷಣ ಉರಿದುಬಿದ್ದು ಆಕ್ಷೇಪಿಸುವವರೂ ಇದ್ದಾರೆ.

‘ಹಾಗಾದರೆ ಕರ್ನಾಟಕದ ಇತಿಹಾಸದಲ್ಲಿ ಶೈವ– ವೈಷ್ಣವರ, ಶೈವ– ಜೈನರ ಹೊಡೆದಾಟದ ಇತಿಹಾಸ ಸುಳ್ಳೆನ್ನುತ್ತೀರಾ, ಹಿಂದೂ ರಾಜರು ಪರಮತಗಳ ದೇವಾಲಯಗಳನ್ನು ಹಾಳುಮಾಡಿದ್ದು ಸುಳ್ಳೆನ್ನುತ್ತೀರಾ’ ಎಂಬ ಪ್ರಶ್ನೆಗಳನ್ನು ಹಾಗೆ ಹೇಳಿದವರ ಕಿವಿ ತೂತಾಗುವವರೆಗೂ ಕೇಳುತ್ತಾರೆ. ಅಂದರೆ ನಾವು ಮಧ್ಯಪ್ರಾಚ್ಯದ ರಿಲಿಜಿಯಸ್ ಯುದ್ಧಗಳನ್ನು ನಮ್ಮ ಮತಗಳ ನಡುವಿನ ಹೊಡೆದಾಟಗಳಿಗೆ ಆರೋಪಿಸುತ್ತೇವೆ. ಆದರೆ ಹಾಗೆ ಆರೋಪಿಸಲು ಹಿಂದೂ ಸಂಪ್ರದಾಯಗಳು ರಿಲಿಜನ್‌ಗಳೂ ಅಲ್ಲ, ಅವುಗಳ ನಡುವೆ ಸತ್ಯ-ಸುಳ್ಳುಗಳ ವೈರತ್ವವೂ ಇಲ್ಲ. ಹಾಗಾದರೆ ಅವುಗಳು ಪರಸ್ಪರ ಕಾದಾಡಿಲ್ಲವೇ, ಸಂಘರ್ಷಿಸಿಲ್ಲವೇ ಎಂದರೆ ಅದೂ ನಿಜ. ಆದರೆ ಈ ಸಂಘರ್ಷಗಳ ಸ್ವರೂಪ ಬೇರೆಯೇ ಆಗಿದೆ.

ಸಹಬಾಳ್ವೆ ಎಂದರೆ ಎರಡು ಸಮುದಾಯಗಳು ಸದಾ ನಗುನಗುತ್ತ ಕೈಕೈ ಹಿಡಿದುಕೊಂಡು ಇರುವುದು ಎಂಬ ಅರ್ಥವಲ್ಲ. ಅದೊಂದು ರಮ್ಯ ಕಲ್ಪನೆ ಹಾಗೂ ಅವಾಸ್ತವ! ಬದುಕೆಂಬುದು ಸದಾ ಸಂಘರ್ಷಗಳನ್ನು, ಪೈಪೋಟಿಗಳನ್ನು ಹುಟ್ಟುಹಾಕುತ್ತಲೇ ಇರುವ ಒಂದು ಕಾರ್ಖಾನೆಯಂತೆ ಇದೆ. ಆದರೆ ಇಂಥ ಸಂಘರ್ಷಗಳನ್ನು ನೀಗಿಕೊಂಡು ಸಂಬಂಧವನ್ನು ಉಳಿಸಿಕೊಳ್ಳುವ ಕಲೆಯನ್ನು ಕಲಿಯುವುದೇ ಸಹಬಾಳ್ವೆ ಎನಿಸಿಕೊಳ್ಳುತ್ತದೆ.

ವೈರತ್ವವನ್ನು ಸಾಧಿಸುವ ಬದಲು ಅದನ್ನು ಶಮನ ಮಾಡುವ ಉಪಾಯಗಳನ್ನು ಹುಡುಕುವುದು ಸಹಬಾಳ್ವೆಗೆ ಅತ್ಯಗತ್ಯವಾದ ಒಂದು ಗುಣ. ನಮ್ಮ ಮತಸಂಪ್ರದಾಯಗಳು ಈ ಗುಣವನ್ನು ಮೈಗೂಡಿಸಿಕೊಂಡಿವೆ. ಹಾಗಾಗಿಯೇ ಭಾರತವು ವೈವಿಧ್ಯಪೂರ್ಣವಾದ ಸಮಾಜವಾಗಿ ಮುಂದುವರೆದುಕೊಂಡು ಬಂದಿದೆ.

ಇಂಥ ಮತೀಯ ಸಮುದಾಯಗಳ ವಾಸ್ತವಿಕ ಬದುಕಿನಲ್ಲಿ ವಿಭಿನ್ನ ಐತಿಹಾಸಿಕ ಸನ್ನಿವೇಶಗಳಿಂದಾಗಿ ಸಂಘರ್ಷಗಳು ಉದಿಸಿವೆ. ಆದರೆ ಅವು ವೈರಿಮತಗಳಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸುವ ಬದಲು ಸಹಬಾಳ್ವೆಗೆ ಒತ್ತುಕೊಟ್ಟಿವೆ ಹಾಗೂ ಈ ಧೋರಣೆಯೇ ಶ್ರೇಯಸ್ಕರ ಎಂಬುದನ್ನು ತಮ್ಮ ವಿಪುಲ ಆಚರಣೆ ಹಾಗೂ ಸಾಹಿತ್ಯ ಸೃಷ್ಟಿಯ ಮೂಲಕ ಅನುಯಾಯಿಗಳಲ್ಲಿ ರೂಢಿಸಿವೆ. ಹಾಗಾಗಿ ಹಿಂದೂಗಳಲ್ಲಿ ಯಾವುದೇ ಸಂಪ್ರದಾಯಕ್ಕೆ ಸೇರಿದವರಿರಬಹುದು, ಅವರೊಳಗೆ ಪರಮತಗಳೊಂದಿಗೆ ಸಹಬಾಳ್ವೆಯೇ ಶ್ರೇಯಸ್ಕರ ಎಂಬ ಧೋರಣೆ ಸಹಜವಾಗಿರುತ್ತದೆ.

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಅಬ್ಬಲೂರಿನಲ್ಲಿ ನಡೆದ ಶೈವರು–ಜೈನರ ಸಂಘರ್ಷ ಮತ್ತು ಹೊಂದಾಣಿಕೆಯನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಒಟ್ಟಾಗಿ ಬಾಳಿಕೊಂಡು ಬಂದಿದ್ದ ಶೈವ– ಜೈನ ಸಮುದಾಯಗಳು ಪರಸ್ಪರ ಸಂಘರ್ಷಕ್ಕಿಳಿದು ಜಿನದೇವಾಲಯಗಳ ನಾಶವಾದದ್ದು ಒಂದು ಸತ್ಯವಾದರೆ, ಈ ಹೊಸ ಐತಿಹಾಸಿಕ ಸನ್ನಿವೇಶದಿಂದ ಎಚ್ಚೆತ್ತು, ಬಿಗಡಾಯಿಸುತ್ತಿದ್ದ ತಮ್ಮ ಸಂಬಂಧವನ್ನು ಸರಿಪಡಿಸುವ ಪ್ರಯತ್ನ ಕೂಡ ಅವೇ ಸಮುದಾಯಗಳಿಂದ ಯಶಸ್ವಿಯಾಗಿ ನಡೆಯಿತು ಎಂಬುದು ಮತ್ತೊಂದು ಸತ್ಯ.

ಶೈವ ಸಂಪ್ರದಾಯಗಳು ತಮ್ಮ ಅನುಯಾಯಿಗಳಲ್ಲಿ ಶಿವಪ್ರಾಧಾನ್ಯಕ್ಕೆ ಧಕ್ಕೆ ಬರದಂತೆ ಪಾಪಭೀತಿ ಹಾಗೂ ಜಿನ ಭಕ್ತಿಯನ್ನು ಪ್ರೇರೇಪಿಸುವ ಮೂಲಕ ತಮ್ಮ ಮುಂದೆ ಅವತರಿಸಿದ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿದ್ದು ಸ್ಪಷ್ಟ ಹಾಗೂ ಅಂದಿನ ದಿನಗಳಲ್ಲಿ ಹಳ್ಳಿ ಮತ್ತು ಪಟ್ಟಣಗಳ ಜನರ ಬದುಕಿನಲ್ಲಿ ಶೈವ– ಜೈನ ಸಮುದಾಯಗಳ ವೃತ್ತಿಗಳು ಪರಸ್ಪರ ಅವಲಂಬನೆಯಲ್ಲಿ ಹೆಣೆದುಕೊಂಡಿದ್ದವು ಎಂಬುದು ನಮಗೆ ಶಾಸನಗಳನ್ನು ಅಧ್ಯಯನ ಮಾಡಿದರೆ ವಿದಿತವಾಗುತ್ತದೆ.

ಶೈವರು ತಾವು ಗೆದ್ದೆವೆಂಬ ಹುಮ್ಮಸ್ಸಿನಲ್ಲಿ ಅಳಿದುಳಿದ ಜಿನಾಲಯಗಳನ್ನು ಹಾಳುಮಾಡುವ ಗೋಜಿಗೆ ಹೋಗದೇ, ವಾಸ್ತವವನ್ನರಿತು ತಮ್ಮ ನಡುವಿನ ಬಿಕ್ಕಟ್ಟನ್ನು ಶಮನ ಮಾಡಿಕೊಳ್ಳುವ ತಂತ್ರವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಮುಖ್ಯವಾಗಬೇಕು. ಈ ಕೆಲಸವೇ ಇಂದು ನಡೆದರೆ ನಮಗೆ ನೂರಕ್ಕೆ ನೂರರಷ್ಟು ಸೆಕ್ಯುಲರ್ ತಂತ್ರವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ಆದರೆ 12ನೆಯ ಶತಮಾನದಲ್ಲಿ ಶೈವ ಮುನಿಗಳು ನಡೆಸಿದ ಈ ಕೆಲಸ ನಮ್ಮ ಸಂಪ್ರದಾಯಗಳ ಸಹಬಾಳ್ವೆಯ ಆಯಾಮಗಳ ಕುರಿತು ಸಾಕಷ್ಟು ತಿಳಿಸಬಲ್ಲದು. ಆದರೆ ಇದೇ ಸೆಕ್ಯುಲರ್‌ವಾದಿಗಳೇ ಅದು ಕೇವಲ ಒಂದು ರಿಲಿಜಿಯಸ್ ಯುದ್ಧವೆಂದು ಬಣ್ಣಿಸಿ ಆ ತಿಳಿವಳಿಕೆಯ ಬಾಗಿಲನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.

ಪೇಜಾವರರ ಇಫ್ತಾರ್ ಕೂಟವನ್ನು ಸೆಕ್ಯುಲರ್ ತಂತ್ರವಾಗಿ ನೋಡದೇ ಈ ತರಹದ ಸಾಂಪ್ರದಾಯಿಕ ತಂತ್ರದ ಮುಂದುವರಿಕೆಯಾಗಿ ಕೂಡ ನೋಡಬಹುದು. ಹಿಂದೂ ಸಂಪ್ರದಾಯಗಳನ್ನು ಬದುಕುತ್ತಿರುವ ಯತಿಗಳೊಬ್ಬರಿಗೆ ಅವರ ಪರಂಪರೆ ಬೇರೆ ಯಾವುದೋ ಪ್ರೇರಣೆಯನ್ನು ನೀಡುತ್ತಿರುವಂತಿದೆ. ಹಾಗಾಗಿಯೇ ಅವರಿಗೆ ತಮ್ಮ ಕ್ರಿಯೆಯಲ್ಲಿ ಅಸಹಜವಾದುದೇನೂ ಕಾಣುವುದಿಲ್ಲ.

ಆ ಪ್ರೇರಣೆ ಮುತಾಲಿಕ್ ಬಣದ ಹಿಂದುತ್ವವಾದಿಗಳಲ್ಲಿ ನಶಿಸಿಹೋಗಿದ್ದರೆ ಆಶ್ಚರ್ಯವೂ ಇಲ್ಲ. ಅವರು ಹೋರಾಡುತ್ತಿರುವುದು ನಮ್ಮ ಸಂಪ್ರದಾಯಗಳನ್ನು ರಿಲಿಜನ್ನಾಗಿ ಪರಿವರ್ತಿಸುವುದಕ್ಕೆ! ಹಾಗಾಗಿ ಅವರ ಹೋರಾಟದ ಪ್ರೇರಣೆಗಳು ನಮ್ಮ ಸಂಪ್ರದಾಯದೊಳಗಿನಿಂದ ಹುಟ್ಟಿದಂಥವಲ್ಲ ಹಾಗೂ ಅವರಿಗೆ ಈ ಕ್ರಿಯೆಯ ಕುರಿತು ವಿರೋಧ ಹುಟ್ಟಿದರೂ ಆಶ್ಚರ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.