ಆ ಮನೆಯ ಹಿರೀಕರ ಹೆಸರು ನಾಗಪ್ಪ ಸವಡಿ. ಅಂದಹಾಗೆ, ಅವರು ಸರ್ಕಾರಿಶಾಲೆಯ ಹೆಡ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದವರು. ವೃತ್ತಿಯಲ್ಲಿ ತಮ್ಮ ಹಾದಿಯನ್ನೇ ತುಳಿದ ಸಹೋದರರು, ಪುತ್ರರು, ಪುತ್ರಿಯರು ಹಾಗೂ ಸೊಸೆಯಂದಿರ ಹೆಸರುಗಳನ್ನು ಅವರು ಪಟಪಟನೆ ಹೇಳುತ್ತಾ ಹೋದರು. ಪಟ್ಟಿ ಮಾಡಿದರೆ ಅವರ ಕುಟುಂಬದಲ್ಲಿ ಹದಿನಾಲ್ಕು ಮಂದಿ ಶಿಕ್ಷಕರು!

ಇತ್ತ ವೆಂಕಣ್ಣ ಆದೋನಿ ಅವರ ಕಿರಾಣಿ ಅಂಗಡಿಗೆ ಬನ್ನಿ. ಒಂದೊಮ್ಮೆ ಸರದಿ ಮೇಲೆ ಮನೆಗೆಲಸ ಪೂರೈಸಿ ವ್ಯಾಪಾರಕ್ಕೆ ಕೂರುತ್ತಿದ್ದ ಅವರ ಮೂವರು ಪುತ್ರಿಯರೂ ಈಗ ಶಿಕ್ಷಕಿಯರು. ಪೊಟ್ಟಣ ಕಟ್ಟುತ್ತಾ ಗ್ರಾಹಕರು ಖರೀದಿಸಿದ ಸರಕುಗಳ ದರವನ್ನು ಬಾಯಿಯಲ್ಲೇ ಲೆಕ್ಕ ಹಾಕುತ್ತಿದ್ದವರಿಗೆ ಶಾಲೆಯಲ್ಲಿ ಮಕ್ಕಳಿಗೆ ಲೆಕ್ಕ ಹೇಳಿಕೊಡುವ ಹೊಣೆ.

ಆದೋನಿಯವರ ಅಂಗಡಿಯಿಂದ ಕೂಗಳತೆಯಷ್ಟು ದೂರದ ಮನೆಯಲ್ಲಿ ಚಿದಂಬರ ಭಟ್ಟರು ನೆಲದ ಮೇಲೆ ಪಂಚಾಂಗ ಹರಡಿಕೊಂಡು ಕುಳಿತರೆ, ನಿವೃತ್ತಿ ಅಂಚಿನಲ್ಲಿದ್ದ ಅವರ ಪತ್ನಿ, ಇಬ್ಬರು ಪುತ್ರರೊಂದಿಗೆ ಶಾಲೆಗೆ ಹೋಗುತ್ತಿದ್ದರು. ಅಮ್ಮ ಒಂದು ಕ್ಲಾಸಿನಲ್ಲಿ ಪಾಠ ಮಾಡಿದರೆ, ಪುತ್ರರದು ಮತ್ತೊಂದು, ಮಗದೊಂದು ಕ್ಲಾಸಿನಲ್ಲಿ ಪಾಠ. ಅಷ್ಟೇ ಏಕೆ? ತುಸು ದೂರದ ದಲಿತರ ಕೇರಿಯತ್ತ ಹೆಜ್ಜೆಹಾಕಿ; ಮೋಚಿ ಸಮುದಾಯದ ಭರಮಣ್ಣ ತಗಡಿನಮನಿ ಅವರ ಮನೆಯಲ್ಲಿ ಅವರನ್ನೂ ಒಳಗೊಂಡಂತೆ ನಾಲ್ವರು ಶಿಕ್ಷಕರು. ಅಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾದರೆ, ಮಗ ಹೈಸ್ಕೂಲಿನ ಹೆಡ್ ಮಾಸ್ಟರ್!

ಹೌದು, ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ ಊರ ನಡುವಿರುವ ಬಜಾರದ ಬಳಿ ನಿಂತುಕೊಂಡು ಎತ್ತ ಕಲ್ಲು ಬೀಸಿದರೂ ಅದು ಶಿಕ್ಷಕರೊಬ್ಬರ ಮನೆಯ ಮೇಲೇ ಹೋಗಿ ಬೀಳುವುದು ಗ್ಯಾರಂಟಿ. ಗೊತ್ತೆ? ಕೊಪ್ಪಳ ಜಿಲ್ಲೆಯ ಯಾವುದೇ ಊರಿಗೆ ಹೋದರೂ ಅಳವಂಡಿಯ ಶಿಕ್ಷಕರಿಲ್ಲದ ಒಂದು ಶಾಲೆಯೂ ಸಿಗುವುದಿಲ್ಲ. ರಾಜ್ಯದಲ್ಲಿ ಈ ಊರಿನ ಶಿಕ್ಷಕರ ಹೆಜ್ಜೆ ಗುರುತುಗಳಿಲ್ಲದ ಯಾವ ಜಿಲ್ಲೆಯೂ ಉಳಿದಿಲ್ಲ.

ಎಷ್ಟಿದ್ದಾರೆ ಶಿಕ್ಷಕರು?: ಹಾಗಾದರೆ ಈ ಊರಿನಿಂದ ಶಿಕ್ಷಕರಾಗಿ ನೇಮಕಗೊಂಡವರ ಸಂಖ್ಯೆ ಎಷ್ಟಿದ್ದೀತು? ‘850ಕ್ಕಿಂತಲೂ ತುಸು ಹೆಚ್ಚೇ ಇದೆ. ರಾಜ್ಯದ ನೂರಾರು ಶಾಲೆಗಳಲ್ಲಿ ಅವರೀಗ ಮಕ್ಕಳ ಬದುಕಿನ ದಾರಿದೀಪಗಳಾಗಿ ಬೆಳಗುತ್ತಿದ್ದಾರೆ. ನಮ್ಮೂರಿನಲ್ಲಿಯೇ ಓದಿ ಶಿಕ್ಷಕರಾದ ಕವಲೂರು, ಭೈರಾಪುರ, ರಘುನಾಥನಹಳ್ಳಿ, ಬೋಚನಹಳ್ಳಿ ಹಾಗೂ ತಿಗರಿ ಗ್ರಾಮದವರನ್ನೂ ಗಣನೆಗೆ ತೆಗೆದುಕೊಂಡರೆ ಇಲ್ಲಿನ ಶಾಲೆಗಳಿಗೆ ಸಾವಿರ ಶಿಕ್ಷಕರನ್ನು ಹೆತ್ತ ಶ್ರೇಯ ಸಲ್ಲುತ್ತದೆ’ ಎಂದು ಲೆಕ್ಕಕೊಟ್ಟರು, 40 ವರ್ಷಗಳಿಂದ ಇದೇ ಗ್ರಾಮದಲ್ಲಿ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ, ವಿಠಲ ಕುಲಕರ್ಣಿ.

ತಂದೆ–ಮಗ, ಅತ್ತೆ–ಸೊಸೆ, ಪತಿ–ಪತ್ನಿ, ಮಾವ–ಸೊಸೆ, ಅಮ್ಮ–ಮಗ, ಅಣ್ಣ–ತಮ್ಮ, ಅಕ್ಕ–ತಂಗಿ... ಇಂತಹ ಸಂಬಂಧಿಗಳೆಲ್ಲ ಶಾಲೆಗಳಲ್ಲಿ ಸಹೋದ್ಯೋಗಿಗಳು. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಶಿಕ್ಷಕರಲ್ಲದೆ, ಕಾಲೇಜುಗಳಲ್ಲಿ ಅಧ್ಯಾಪಕರಾದವರ ಸಂಖ್ಯೆ ಕೂಡ ಈ ಗ್ರಾಮದಲ್ಲಿ ಹೆಚ್ಚಾಗಿಯೇ ಇದೆ.

ಅಳವಂಡಿಯ ಯುವಕ–ಯುವತಿಯರಿಗೆ ಬೇರೆ ಆಯ್ಕೆಗಳೇ ಇರಲಿಲ್ಲವೆ? ಶಿಕ್ಷಕ ವೃತ್ತಿಯ ತರಬೇತಿಯನ್ನೇ ಏಕೆ ಅಷ್ಟೊಂದು ಮಂದಿ ಪಡೆದರು ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿತ್ತು. ಗ್ರಾಮದ ಸಿದ್ದೇಶ್ವರ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಎ.ಟಿ. ಕಲ್ಮಠ ಅವರ ಮುಂದೆ ಈ ಪ್ರಶ್ನೆ ಬಂತು.

‘ದಶಕಗಳ ಹಿಂದೆಯೇ ಪಿಯು ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗದಂತೆ ‘ಶಿಕ್ಷಣ’ ವಿಭಾಗವನ್ನೂ ಪರಿಚಯಿಸಲಾಯಿತು. ತಕ್ಷಣವೇ ನಮ್ಮ ಕಾಲೇಜಿನಲ್ಲೂ ಅದನ್ನು ಆರಂಭಿಸಲಾಯಿತು. ಈ ವಿಭಾಗಕ್ಕೆ ದೊಡ್ಡ ಸಂಖ್ಯೆಯಲ್ಲೇ ವಿದ್ಯಾರ್ಥಿಗಳು ಸೇರಿಕೊಂಡರು. ಶಿಕ್ಷಣ ಕೋರ್ಸ್ ಪೂರೈಸಿದವರನ್ನೇ ಆಗ ಶಿಕ್ಷಕರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಹೀಗಾಗಿ ಊರಿನ ಹುಡುಗರ ಅದೃಷ್ಟ ಖುಲಾಯಿಸಿತು’ ಎಂದು ಅವರು ಉತ್ತರಿಸಿದರು. ಅದಕ್ಕೆ ಹಾಲಿ ಪ್ರಾಚಾರ್ಯ ಎಂ.ಎಸ್.ಹೊಟ್ಟಿನ ಹೂಂಗುಟ್ಟಿದರು.

ಶಿಕ್ಷಕರ ನೇಮಕದ ರುಚಿ ಒಮ್ಮೆ ಹತ್ತಿದ ಬಳಿಕ ಈ ಊರಿನ ಯುವಪಡೆ ಟಿಸಿಎಚ್ ಕೋರ್ಸ್‌ನ ಬೆನ್ನಿಗೆ ಬಿದ್ದುಬಿಟ್ಟಿತು. ‘ಹೆಚ್ಚಿನ ಖರ್ಚಿಲ್ಲ, ಕೆಲಸ ಗ್ಯಾರಂಟಿ’ ಎನ್ನುವುದು ಇಲ್ಲಿನವರ ಘೋಷವಾಕ್ಯವಾಯಿತು! ಟಿಸಿಎಚ್, ಮುಂದೆ ಡಿಇಡಿ ಆಗಿ ರೂಪಾಂತರ ಹೊಂದಿದಾಗಲೂ ಆ ಕೋರ್ಸ್‌ನ ಕಾಲೇಜುಗಳನ್ನು ಹುಡುಕಿಕೊಂಡು ಹೊರಟರು.

ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದ ದಿವಂಗತ ಎಚ್.ಜಿ. ಗೋವಿಂದೇಗೌಡರು ಗ್ರಾಮದ ಬಹುತೇಕರ ಪಾಲಿಗೆ ಈಗಲೂ ಆರಾಧ್ಯ ದೈವ. ಅವರ ಅಧಿಕಾರದ ಅವಧಿಯಲ್ಲಿಯೇ (1995–99) ಅಲ್ಲವೆ, ರಾಜ್ಯದಾದ್ಯಂತ ಸರಿಸುಮಾರು 90 ಸಾವಿರ ಶಿಕ್ಷಕರ ನೇಮಕವಾಗಿದ್ದು? ಅದರಲ್ಲಿ ಅಳವಂಡಿ ಗ್ರಾಮವೊಂದೇ 500ಕ್ಕೂ ಹೆಚ್ಚು ಹುದ್ದೆಗಳನ್ನು ಬಾಚಿಕೊಂಡಿತು. ಮುಂದಿನ ಅವಧಿಯಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ನೇಮಕಗಳು ನಡೆಯದಿದ್ದರೂ ಈ ಊರಿನ ಬಾಬತ್ತು ಇದ್ದೇ ಇರುತ್ತಿತ್ತು.

ಕೊಟ್ಟಿಗೆಯಿಂದ ಶಾಲೆಗೆ: ಅದೇತಾನೆ ಟಿಸಿಎಚ್ ಮುಗಿಸಿದವರು, 10–15 ವರ್ಷಗಳ ಹಿಂದೆಯೇ ಓದು ಮುಗಿಸಿ ಖಾಲಿ ಕುಳಿತವರು ಒಟ್ಟೊಟ್ಟಿಗೆ ಶಿಕ್ಷಕರಾಗಿ ಸಂಭ್ರಮಿಸಿದರು. ಓದು ಮುಗಿಸಿದ ಬಳಿಕ ಕೆಲಸ ಸಿಗದೆ ಅಕ್ಷರಶಃ ದನ ಕಾಯಲು ನಿಂತವರು, ಅಂಗಡಿಯಲ್ಲಿ ಪೊಟ್ಟಣ ಕಟ್ಟಲು ಹೋದವರು, ಹೋಟೆಲ್‌ನಲ್ಲಿ ಬಜ್ಜಿ ಕರೆಯಲು ಕುಳಿತವರು... ಎಲ್ಲರಿಗೂ ಏಕಾಏಕಿ ಶಿಕ್ಷಕರಾಗುವ ಅವಕಾಶ.

ಒಂದೇ ಸಮನೆ ಹರಿದುಬಂದ ಶಿಕ್ಷಕರ ನೇಮಕಾತಿ ಆದೇಶ ಪತ್ರಗಳು ಗ್ರಾಮದಲ್ಲಿ ಬಹುದೊಡ್ಡ ಸಾಮಾಜಿಕ ಪಲ್ಲಟಗಳಿಗೆ ಕಾರಣವಾದವು. ‘ವಯಸ್ಸಾದ ಮಗಳಿಗೆ ಇನ್ನೇನು ಮದುವೆಯೇ ಆಗಲಾರದು’ ಎಂದು ಆಸೆ ಕೈಬಿಟ್ಟಿದ್ದ ಪಾಲಕರಿಗೆ, ಬೆರಗು ಮೂಡಿಸುವಂತೆ, ಮಗಳು ಶಿಕ್ಷಕಿಯಾಗುವುದೇ ತಡ ಸಂಬಂಧಗಳು ಸಾಲುಗಟ್ಟಿ ಬಂದವು.

ಮಗ ಶಿಕ್ಷಕನಾದ ಕೂಡಲೇ ಸಾಲ ತೀರಿಸುವ ಚಿಂತೆಯೇ ದೂರವಾಗಿ, ಹೊಲ ಮಾರುವ ಪ್ರಕ್ರಿಯೆಗೆ ಬ್ರೇಕ್ ಬಿತ್ತು. ಇನ್ನೇನು ಬೀಳುವಂತಿದ್ದ ಮನೆಗೆ ಹೊಸರೂಪ ಸಿಕ್ಕಿತು. ಪ್ರತೀ ತಿಂಗಳು ಬರಲಾರಂಭಿಸಿದ ವೇತನ, ಬೆಳೆನಷ್ಟದ ಹೊಡೆತವನ್ನು ತಾಳಿಕೊಳ್ಳಲು ಸಿಕ್ಕ ಟಾನಿಕ್ ಆಯಿತು.

ಹೈದರಾಬಾದ್–ಕರ್ನಾಟಕ ಪ್ರದೇಶದ ಈ ಪುಟ್ಟ ಗ್ರಾಮ ಕಂಡಂತಹ ಸಾಮಾಜಿಕ ಸ್ಥಿತ್ಯಂತರದ ಬಿಡುಬೀಸು ನೋಟಗಳನ್ನು ಇಲ್ಲಿನ ಖಾದಿ ಕೇಂದ್ರದ ಮ್ಯಾನೇಜರ್ ಆಗಿದ್ದ ವೀರಣ್ಣ ಸುರಪುರ ಸೊಗಸಾಗಿ ಕಟ್ಟಿಕೊಟ್ಟರು.

‘ಅಳವಂಡಿಯ ಖಾದಿ ಕೇಂದ್ರ ಸುಮಾರು 150 ಮಹಿಳೆಯರಿಗೆ ಕೆಲಸ ಕೊಟ್ಟಿತ್ತು. ಬೆಳ್ಳಂಬೆಳಿಗ್ಗೆ ಮನೆ ಕೆಲಸ ಮುಗಿಸಿ ಬರುತ್ತಿದ್ದ ಮಹಿಳೆಯರು ಸಂಜೆವರೆಗೆ ಚರಕದಿಂದ ನೂಲು ತೆಗೆಯುತ್ತಿದ್ದರು. ಅವರ ಗಳಿಕೆಯಿಂದ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆಗೆ ದಾರಿ ಕಂಡುಕೊಂಡಿದ್ದವು. ಖಾದಿಗೆ ಸಿಗುತ್ತಿದ್ದ ಉತ್ತೇಜನ ಕಡಿಮೆಯಾಗಿ 2000ರ ದಶಕದ ಪೂರ್ವಾರ್ಧದಲ್ಲಿ ಇಲ್ಲಿನ ಚರಕಗಳು ಮೌನವಾಗುವ ಹೊತ್ತಿಗೆ ಶಿಕ್ಷಕರ ನೇಮಕದ ಸದ್ದು ಜೋರಾಗಿ ಮೊಳಗಿತ್ತು. ಹೀಗಾಗಿ ನೂರಾರು ಕುಟುಂಬಗಳು ಬೀದಿಗೆ ಬೀಳುವುದು ತಪ್ಪಿತು’ ಎಂದು ಅವರು ಇತಿಹಾಸದ ಮೇಲೆ ಇಣುಕುನೋಟ ಬೀರಿದರು.

ಖಾದಿಗೆ ಪರ್ಯಾಯವಾಗಿ ಶಿಕ್ಷಣ ಕ್ಷೇತ್ರ ಈ ಊರಿನ ಕೈಹಿಡಿದ ದ್ಯೋತಕವಾಗಿ ಚರಕಗಳು ಏಕತಾರಿ ಸ್ವರ ಹೊರಡಿಸುತ್ತಿದ್ದ ಕಟ್ಟಡದಲ್ಲೇ ಈಗ ಶಾಲೆಯೊಂದು ನಡೆಯುತ್ತಿದೆ!

ಅಳವಂಡಿ ಗ್ರಾಮದಲ್ಲಿ ಶಿಕ್ಷಣಕ್ಕೆ ಸಿಕ್ಕ ಮಹತ್ವದ ಪರಿಣಾಮವಾಗಿ ಎಂತಹ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ ಎಂಬುದನ್ನು ಕಾಣಲು ದಲಿತ ಕೇರಿಗೆ ಬರಬೇಕು. ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ 20 ಮಂದಿ ಶಿಕ್ಷಕರು, ಇಬ್ಬರು ವೈದ್ಯರು ಹಾಗೂ ಮೂವರು ಎಂಜಿನಿಯರ್‌ಗಳಾಗಿದ್ದಾರೆ. ಈ ಸ್ಥಿತ್ಯಂತರದ ಅವಧಿಯಲ್ಲಿ ಎದ್ದ ಸಾಮಿಲ್‌ಗಳು, ಕೂದಲು ಫ್ಯಾಕ್ಟರಿಗಳು, ಇಟ್ಟಿಗೆ ಬಟ್ಟಿಗಳು ದಲಿತ ಕೇರಿಯ ಚಿತ್ರಣವನ್ನೇ ಬದಲಿಸಿಬಿಟ್ಟಿವೆ.

‘ಶಿಕ್ಷಣವನ್ನೇ ಆಯುಧ ಮಾಡಿಕೊಂಡು ಇಲ್ಲಿನ ಚಿತ್ರಣವನ್ನು ಹೀಗೆ ಬದಲು ಮಾಡಲು ಶ್ರಮಿಸಿದವರಲ್ಲಿ ಭರಮಣ್ಣ ತಗಡಿನಮನಿ ಪ್ರಮುಖರು’ ಎಂದು ಹಲವು ಮಂದಿ ಯುವ ಶಿಕ್ಷಕರು ಕೃತಜ್ಞತೆಯಿಂದ ಸ್ಮರಿಸಿದರು.

ನಿಜಾಮರ ಕಾಲದಲ್ಲಿ: ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶ ಇದು. ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಸಕ್ರಿಯರಾಗಿದ್ದ ಈ ಭಾಗದ ನೆಚ್ಚಿನ ಮೇಷ್ಟ್ರು ರುದ್ರಪ್ಪ ಮಾಗಳದ ಆಗಿನ ಶೈಕ್ಷಣಿಕ ವಾತಾವರಣದ ಕಥೆಗಳ ಕಣಜ.

‘ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ನಮ್ಮೂರಿನಲ್ಲಿ ಮೂರನೇ ಇಯತ್ತೆವರೆಗೆ ಮಾತ್ರ ಶಾಲೆಯಿತ್ತು. ಉನ್ನತ ಶಿಕ್ಷಣಕ್ಕಾಗಿ ಕುಕನೂರಿಗೆ, ಅಲ್ಲಿಂದ ಕಲಬುರ್ಗಿಗೆ, ಕೊನೆಗೆ ಹೈದರಾಬಾದ್‌ಗೆ ಹೋಗಬೇಕಿತ್ತು. ಉರ್ದು ನಮ್ಮ ಕಲಿಕಾ ಮಾಧ್ಯಮವಾಗಿತ್ತು. ಪಠಾಣರ ಹಾವಳಿ ಹೆಚ್ಚಾದಾಗ ಊರಿಗೆ ಊರೇ ಖಾಲಿಯಾಗಿತ್ತು. ನಮ್ಮ ಕಲಿಕೆಗೂ ಬ್ರೇಕ್ ಬಿದ್ದಿತ್ತು.

ಸರ್ದಾರ್ ವಲ್ಲಭಭಾಯಿ ಪಟೇಲರು ರೈಲಿನಲ್ಲಿ ಕಳುಹಿಸಿದ ಫೌಜುಗಳು ನಮಗೆ ಹತ್ತಿರದ ಗದಗ ಮತ್ತು ಹೊಸಪೇಟೆಯಲ್ಲೂ ಬೀಡುಬಿಟ್ಟಿದ್ದವು. ಹೈದರಾಬಾದ್ ಸಂಸ್ಥಾನ ವಿಲೀನವಾದ ಮೇಲೆ ನಮ್ಮೂರು ಸಹಜಸ್ಥಿತಿಗೆ ಬಂದು, ಶಿಕ್ಷಣ ಚಟುವಟಿಕೆಗಳು ಗರಿಗೆದರಿದವು’ ಎಂದು ಇತಿಹಾಸ ಕೆದಕಿದರು.

‘ನಿಜಾಮರ ಕಾಲದಿಂದಲೂ ಕಾಪಿಟ್ಟುಕೊಂಡು ಬಂದಿದ್ದ ಶಿಕ್ಷಣದ ಬಯಕೆಯನ್ನು ಈಡೇರಿಸಿಕೊಳ್ಳಲು ಕೊಪ್ಪಳದ ಮೊದಲ ಸಂಸದರೂ ಆಗಿದ್ದ ಗ್ರಾಮದ ಶಿವಮೂರ್ತಿ ಸ್ವಾಮಿಯವರು ಕರ್ನಾಟಕ ವಿದ್ಯಾವರ್ಧಕ ಸಮಿತಿ ಸ್ಥಾಪಿಸಿದರು. ಗ್ರಾಮದ ಶೈಕ್ಷಣಿಕ ಪ್ರಗತಿಗೆ ಈ ಸಮಿತಿಯಿಂದ ನಡೆಸಲಾಗುತ್ತಿರುವ ಶಾಲಾ–ಕಾಲೇಜುಗಳ ಕೊಡುಗೆ ಬಲು ದೊಡ್ಡದು’ ಎನ್ನುವಾಗ ಅವರ ಕಣ್ಣುಗಳು ನೀರು ತುಂಬಿಕೊಂಡು ಹೊಳೆಯುತ್ತಿದ್ದವು.

ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳನ್ನು ತೆರೆಯುವಾಗಲೆಲ್ಲಾ ಪ್ರತಿಸಲ ಪದ್ಮರೆಡ್ಡಿ ಹಳ್ಳಿಕೇರಿ ಹಾಗೂ ಹನುಮಂತಗೌಡ ಗಾಳಿ ಅವರಂತಹ ಶಿಕ್ಷಣ ಪ್ರೇಮಿಗಳು ಹತ್ತಾರು ಎಕರೆಗಳಷ್ಟು ಭೂಮಿಯನ್ನು ದಾನ ಮಾಡಿದರು. ಊರಿನ ಸಿದ್ದೇಶ್ವರ ಮಠಕ್ಕೆ ಕೂಡ ಶಿಕ್ಷಣ ದಾಸೋಹವೇ ಮುಖ್ಯವಾಯಿತು. ಮನೆ–ಮನೆಯಲ್ಲೂ ಅಕ್ಷರ ಪೂಜೆ ಶುರುವಾಗಿ, ಅದರ ಪೂಜಾರಿಗಳಾದ ಶಿಕ್ಷಕರು ಹುಟ್ಟಿಕೊಂಡರು.

‘ಊರಿನಲ್ಲಿ ಭಾಳ ಮಂದಿ ಶಿಕ್ಷಕರು ಆಗ್ಯಾರ. ಆದ್ರ ಒಬ್ಬ ಹುಡುಗ, ಹುಡುಗಿಯಾದ್ರೂ ಐಎಎಸ್ ಅಧಿಕಾರಿ ಆಗ್ಬೇಕು ಅನ್ನುವ ಕನಸು ಇನ್ನೂ ಹಂಗ ಉಳಿದೈತಿ. ಆ ಕನಸನ್ನ ನನಸು ಮಾಡಾಕ ಒಂದ್ ಒಳ್ಳೇ ಲೈಬ್ರರಿ ಮತ್ತ ಒಂದ್ ಟ್ರೇನಿಂಗ್ ಸೆಂಟರ್ ಬೇಕಾಗೈತ್ರೀ’ ಎಂಬ ಆಸೆಯನ್ನು ನಾಗಪ್ಪ ಸವಡಿ ತೇಲಿಬಿಟ್ಟರು.

‘ಭವ್ಯ ಕಟ್ಟಡಗಳಿಗಿಂತ ಅಂತಃಸತ್ವ ತುಂಬುವ ಶಿಕ್ಷಕರ ಪಡೆ ಇದ್ದುದು ನಮ್ಮ ಅದೃಷ್ಟ. ಲಕ್ಷ್ಮಣ ಪಾಟೀಲ, ರುದ್ರಪ್ಪ, ವಿಠಲ್ ಅವರಂತಹ ಮೇಷ್ಟ್ರು ನಮ್ಮಲ್ಲಿ ಶೈಕ್ಷಣಿಕ ಶಿಸ್ತು ಮೂಡಿಸಿ, ಓದಿನ ಹಸಿವನ್ನೂ ಹೆಚ್ಚಿಸಿದರು’ ಎಂದವರು ಶಿಕ್ಷಕಿ ಜಯಶ್ರೀ ಹಕ್ಕಂಡಿ. ಅವರ ಮಾತಿಗೆ ಯುವಶಿಕ್ಷಕ ಜಗನ್ನಾಥ ಬಿಸರಳ್ಳಿ ಸಹ ದನಿಗೂಡಿಸಿದರು.

‘ನಾವೇನೂ ವಿಶೇಷವಾಗಿದ್ದನ್ನು ಮಾಡಿಲ್ಲ. ಎಲ್ಲವೂ ಅನನ್ಯವಾದ ಗುರು ಪರಂಪರೆಯಿಂದ ಸಿಕ್ಕ ಕೊಡುಗೆ. ಆ ಪರಂಪರಾಗತ ಬೆಳಕನ್ನು ಸಾಧ್ಯವಾದ ಮಟ್ಟಿಗೆ ಪ್ರತಿಬಿಂಬಿಸುವ ಕೆಲಸವನ್ನು ಮಾಡಿದ್ದೇವಷ್ಟೆ’ ಎಂದ ವಿಠಲ್ ಸರ್, ಶಿಕ್ಷಕರಾಗಿ ತಾವು ಮಾಡಿದ ಕೆಲಸಕ್ಕೆ ಆಧ್ಯಾತ್ಮಿಕ ಸ್ಪರ್ಶ ಕೊಟ್ಟರು.

ಅಳವಂಡಿ ಶಿಕ್ಷಕರ ಊರೇ ಹೌದಾದರೂ ಬೇರೆ ವೃತ್ತಿ ಮಾಡುವವರು ಇಲ್ಲವೇ ಇಲ್ಲವೆಂದು ಭಾವಿಸಬೇಡಿ. ಸೈನಿಕರು, ಪೊಲೀಸರು, ಪಶುವೈದ್ಯರು, ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಊರಿನ ಪ್ರೊ. ತೇಜಸ್ವಿ ಕಟ್ಟಿಮನಿ ಅವರಂತೂ ಮಧ್ಯ ಪ್ರದೇಶದ ಇಂದಿರಾ ಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾರೆ. ಪಿಎಚ್.ಡಿ. ಮಾಡಿದ ಯುವಕರ ಸಂಖ್ಯೆಯೂ ಹೆಚ್ಚಿದೆ.

ಜನಗಣತಿಯಿಂದ ಸಿಕ್ಕ ಮಾಹಿತಿಯ ಮೇಲೆ ಸುಮ್ಮನೆ ಕಣ್ಣಾಡಿಸಿದಾಗ ಗೊತ್ತಾಗಿದ್ದು ಈ ಊರಿನಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎಂಬುದು. ಅದರಲ್ಲೂ ಎಸ್‌ಟಿ ಸಮುದಾಯದಲ್ಲೇ ಈ ವ್ಯತ್ಯಾಸ ಅಧಿಕ ಪ್ರಮಾಣದಲ್ಲಿದೆ. ಇಂತಹ ವಿಶೇಷಕ್ಕೆ ಏನು ಕಾರಣ ಎಂದು ಕೇಳಿದಾಗ, ‘ಹೌದ್ರೀ, ನಮ್ಮೂರಾಗ ಹೆಣ್ಮಕ್ಕಳು ಹೆಚ್ಗಿ ಅದಾರೇನ್ರಿ’ ಎಂದು ಕೇಳುತ್ತಾ ತಲೆ ಕೆರೆದುಕೊಂಡರು ಇಲ್ಲಿನ ಜನ.

ಅಂದಹಾಗೆ, ಈ ಊರಿನ ಸಾಕ್ಷರತೆ ಪ್ರಮಾಣ ಶೇ 80ರಷ್ಟಿದೆ (ಪುರುಷರ ಸಾಕ್ಷರತಾ ಪ್ರಮಾಣ ಶೇ 87). ಹೈದರಾಬಾದ್–ಕರ್ನಾಟಕ ಪ್ರದೇಶದ ಬೇರೆ ಯಾವ ಊರೂ ಇಷ್ಟೊಂದು ಎತ್ತರದ ಸಾಧನೆ ಮಾಡಿಲ್ಲ. ಅಲ್ಲವೆ ಮತ್ತೆ, ಇಂತಹ ಮತ್ತೊಂದು ವಿಶಿಷ್ಟ ಗ್ರಾಮ ಸಿಗುವುದು ಕಷ್ಟವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.