ಹಾವಿಗೆ ಕಾಲಿದೆಯಾ ಹೆಜ್ಜೆ ಗುರುತು ಮೂಡಲು, ಅಂತ ಪ್ರಶ್ನಿಸಬೇಡಿ. ಮೆತ್ತನೆ ಮಣ್ಣಿನ ನೆಲದಲ್ಲಿ, ದೂಳಿನ ನೆಲದಲ್ಲಿ ಹಾವು ಹರಿದಿದ್ದರೆ ಅದರ ಗುರುತು ಸ್ಪಷ್ಟವಾಗಿ ಮೂಡಿರುತ್ತದೆ. ನಾವು ಸ್ಕೂಲ್ಗೆ ಹೋಗುವಾಗ ಮಣ್ಣಿನ ರಸ್ತೆಯಲ್ಲೇ ಹೋಗುತ್ತಿದ್ದುದು. ಬಸ್ ಓಡಾಡಿ ನುಣ್ಣನೆ ದೂಳು ರಸ್ತೆ ತುಂಬ. ದಿನಕ್ಕೊಮ್ಮೆ ಬಂದು ಹೋಗುವ ಬಸ್ಸಿನ ಚಕ್ರದ ಗುರುತು ಬಿಟ್ಟರೆ ಅಲ್ಲೊಂದು ಇಲ್ಲೊಂದು ಸೈಕಲ್ ಚಕ್ರದ ಗುರುತು.

ಆಗ ಕಾರು ನಮ್ಮೂರಲ್ಲಿ ಯಾರ ಹತ್ತಿರಾನೂ ಇರಲಿಲ್ಲ. ಚಳಿಗಾಲದ ದೂಳಿನ ರಸ್ತೆಯಲ್ಲಿ ಈ ಹಾವು ಹರಿದ ಗುರುತನ್ನು ನಾವು ತಕ್ಷಣ ಗುರುತಿಸುತ್ತಿದ್ದೆವು. ನಮ್ಮ ಆರನೇ ಇಂದ್ರಿಯ ಹಾವಿನ ಇರುವಿಕೆಯ ಕುರಿತು ಸದಾ ಜಾಗೃತವಾಗಿರುತ್ತಿತ್ತು. ಕಾಡಿನ ದಾರಿಯಲ್ಲಿ ನಡೆದು ಹೋಗುವಾಗ ಸರ್ ಎಂಬ ಶಬ್ದ ಕೇಳಿದರೆ ಹಾವಿರಬಹುದೇ ಎಂದು ಸುತ್ತ ಮುತ್ತ ನೋಡುವುದು.

ಹಾವಿರುವ ಸೂಚನೆ ಸಿಕ್ಕರೆ ಆ ಜಾಗದಿಂದ ದೂರ ಹೋಗುವುದು. ಹುಲ್ಲು ಬೆಳೆದ ಗದ್ದೆ ಅಂಚಿನಲ್ಲಿ ಹೆಜ್ಜೆಯಿಡುವ ಮುನ್ನ ಹಾವಿಲ್ಲ ಎಂದು ಖಾತ್ರಿಪಡಿಸಿಕೊಳ್ಳುವುದು, ರಾತ್ರಿ ಹೊರಗೆ ಹೋಗದಿರುವುದು, ಹೋಗಲೇಬೇಕಾದಾಗ ಟಾರ್ಚ್ ಹಿಡಿದುಕೊಂಡು ಜತೆಗೆ ಕಾಲನ್ನು ನೆಲಕ್ಕೆ ಬಡಿದು ಶಬ್ದ ಮಾಡುತ್ತಾ ಹೋಗುವುದು, ಹಾವು ಇದ್ದರೆ ದೂರ ಹೋಗಲಿ ಅಂತ.

ಕಾಡು ಗಿಡ ಮರಗಳ ನಡುವೆ ಸದಾಕಾಲ ಓಡಾಡುವಾಗ ಹಾವುಗಳೊಡನೆ ಮುಖಾಮುಖಿ ಅನಿವಾರ್ಯವಾಗಿತ್ತು. ಆದರೆ ನನಗೆ ಸರೀಸೃಪಗಳ ಗುಂಪಿನ ಹಾವು, ಹಲ್ಲಿ, ಓತಿಕ್ಯಾತ, ಹಾವುರಾಣಿ, ಉಡ, ಮೊಸಳೆಗಳನ್ನು ಕಂಡರೆ ಅಸಹ್ಯ. ಊಟ ಮಾಡುವಾಗ ಹಾವಿನ ನೆನಪಾದರೆ ವಾಕರಿಕೆ ಬರುತ್ತಿತ್ತು. ತಮ್ಮನ ಜತೆ ಜಗಳವಾಗಿದ್ದ ದಿನ ಅವನು ‘ಬೆಳಿಗ್ಗೆ ಕಲ್ಲಾರೆ ಹತ್ತಿರ ಹಾವು ನೋಡಿದೆ’ ಎಂದು ಊಟ ಮಾಡುವಾಗ ವರ್ಣಿಸಲು ಶುರು ಮಾಡಿದರೆ ನಾನು ಸಿಟ್ಟಿನಿಂದ ಕೂಗುತ್ತಿದ್ದೆ.

ನಾನು ಝೂನಲ್ಲಿ ಯಾವತ್ತೂ ಹಾವು, ಮೊಸಳೆಗಳನ್ನು ನೋಡಲು ಹೋಗುವುದಿಲ್ಲ. ಇತ್ತೀಚೆಗೆ ಕಾಂಬೋಡಿಯ ಪ್ರವಾಸದಲ್ಲಿ ತೋನ್ಲೆ ಸ್ಯಾಪ್ ಸರೋವರ ನೋಡಲು ಹೋದಾಗ ಅಲ್ಲಿ ಸರೋವರ ಮಧ್ಯದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ನಿರ್ಮಿಸಿದ ತಂಗುದಾಣದಲ್ಲಿ ಮೊಸಳೆಗಳನ್ನು ದೊಡ್ಡ ಟ್ಯಾಂಕ್ನಲ್ಲಿರಿಸಿದ್ದರು. ಕಡಿಮೆ ನೀರಿನಲ್ಲಿ ಅವು ಅಸಹ್ಯ ವಾಸನೆ ಬೀರುತ್ತಿದ್ದವು.

ಸ್ಕೂಲ್ ದಾರಿಯಲ್ಲಿ ನಮಗೆ ಆಗಾಗ ಹಾವುಗಳು ಕಾಣಿಸುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಕ್ಲಾಸ್ರೂಮ್ ಒಳಗೂ ಬರುತ್ತಿದ್ದವು. ಮೇಷ್ಟ್ರು ನಮ್ಮನ್ನು ಹೊರಗೆ ಕಳಿಸಿ ದೊಡ್ಡ ಹುಡುಗರ ಸಹಾಯದಿಂದ ಹಾವನ್ನು ಹೊರಗೆ ಕಳಿಸಿದ ಬಳಿಕ ನಾವು ಒಳಗೆ ಹೋಗುತ್ತಿದ್ದೆವು. ಆದರೆ ಒಬ್ಬರೇ ಹೋಗುವಾಗ ಹಾವು ಕಂಡರೆ ವಿಪರೀತ ಭಯವಾಗುತ್ತಿತ್ತು.

ಒಮ್ಮೆ ನಾನು ಆರನೇ ಕ್ಲಾಸ್ನಲ್ಲಿದ್ದಾಗ ಬಸವಾನಿ ಶಾಲೆಗೆ ಒಂದು ದಿನ ಒಬ್ಬಳೆ ನಡೆದುಹೋಗುತ್ತಿದ್ದೆ. ಅವತ್ತು ನನ್ನ ಜತೆಗೆ ದಿನವೂ ಬರುತ್ತಿದ್ದ ಗೆಳತಿಯರು ಇರಲಿಲ್ಲ. ಹಳುವಾನಿ ದಾಟಿದ ಮೇಲೆ ಹೊಸದೇವರ ಬನ ಎಂಬ ಜಾಗದಲ್ಲಿ ನಾವು ಮುಖ್ಯರಸ್ತೆ ಬಿಟ್ಟು ಹತ್ತಿರದ ಕಾಲುದಾರಿಯಲ್ಲಿ ಹೋಗುತ್ತಿದ್ದೆವು.

ಅಲ್ಲಿ ಎರಡೂ ಬದಿ ಕುರುಚಲು ಗಿಡ, ಬಿದಿರು ಮೆಳೆ ಇದ್ದವು. ರಿಬ್ಬನ್ನಿನಂತೆ ಕಿರಿದಾಗಿದ್ದ ಕಾಲುದಾರಿ ಮುಕ್ಕಾಲು ಅಡಿಯಷ್ಟು ಸವೆದು ಜನರು ನಡೆದಾಡಿ ಕೆಮ್ಮಣ್ಣು ಗಟ್ಟಿಯಾಗಿರುತ್ತಿತ್ತು. ಎರಡೂ ಬದಿಯಲ್ಲಿ ಹಸಿರು ಹುಲ್ಲು, ಗಿಡ ಪೊದೆ ಇರುತ್ತಿದ್ದವು.

ಇದ್ದಕ್ಕಿದ್ದಂತೆ ಈ ಮೆಳೆಯಿಂದ ಹಾವೊಂದು ಹೊರಬಂದು ಅಂಕು ಡೊಂಕಾಗಿ ಹರಿದು ನಮ್ಮ ಎದುರಿಗೆ ದಾರಿಯನ್ನು ಕ್ರಾಸ್ ಮಾಡಿದಾಗ ಒಂದು ಕ್ಷಣ ಮೈ ನಡುಗುತ್ತಿತ್ತು. ಗುಂಪಿನಲ್ಲಿದ್ದಾಗ ಅಷ್ಟೊಂದು ಭಯವಾಗುತ್ತಿರಲಿಲ್ಲ. ಆ ದಿನ ಒಬ್ಬಳೆ ಇದ್ದಾಗ ಪೊದೆಯಲ್ಲಿ ಸರ ಸರ ಶಬ್ದ ಕೇಳಿದಾಗ ನಿಂತು ನೋಡಿದೆ. ಮಣ್ಣಿನ, ಕೆಂಬಣ್ಣದ ಹಾವೊಂದು ಹರಿದು ಹೋಯಿತು. ಅದರ ಬೆನ್ನಿನ ಮೇಲೆ ಮೀನಿನ ರೆಕ್ಕೆಯಂತಹ ರಚನೆ ಇತ್ತು. ನಾನು ಅಂತಹ ಹಾವನ್ನು ಅದೇ ಮೊದಲ ಸಲ ನೋಡಿದ್ದು ಮತ್ತು ಅದೇ ಕೊನೆಯ ಸಲವೂ... ಆದರೆ ಅವತ್ತಿನ ಆ ಅನುಭವ ದಶಕಗಳ ನಂತರವೂ ಮರೆತಿಲ್ಲ.

ನಮ್ಮ ಮನೆಯಲ್ಲಿ ಪೌಲ್ಟ್ರಿ ಇದ್ದುದರಿಂದ ಅಲ್ಲಿ ಯಾವಾಗಲೂ ಹಾವುಗಳು ಬರುತ್ತಿದ್ದವು. ಮನೆಯ ಮುಂದಿನ ರಸ್ತೆ ದಾಟಿ ಸ್ವಲ್ಪ ದೂರದಲ್ಲಿ ಕೋಳಿ ಕೊಟ್ಟಿಗೆ ಇತ್ತು. ಅದರ ಹಿಂಭಾಗ ಕಾಡು ಕಾಡಾಗಿದ್ದುದರಿಂದ ಯಾವಾಗಲೂ ಮೊಟ್ಟೆ ತಿನ್ನಲು ಹಾವುಗಳು ಬರುತ್ತಿದ್ದವು. ಮೊಟ್ಟೆ ತರಲು ಹೋದವರು ಮೈಯೆಲ್ಲ ಕಣ್ಣಾಗಿರಬೇಕಿತ್ತು. ಕೆಲವೊಮ್ಮೆ ನಾಗರಗಳು ಕೋಳಿಯನ್ನು ಕಚ್ಚಿ ಸಾಯಿಸುತ್ತಿದ್ದವು. ನಾನು ಆ ಕಡೆಗೆ ಹೋಗುತ್ತಿರಲಿಲ್ಲ.

ಹಾವಾಡಿಗರು ಬಂದಾಗ ಪ್ರತೀ ಮನೆಯಲ್ಲೂ ಅಕ್ಕಿ ತೆಗೆದುಕೊಂಡ ಮೇಲೆ ’ಹಾವು ಹಿಡೀಬೇಕಾಮ್ಮ’ ಅಂತ ಕೇಳುತ್ತಿದ್ದರು. ಬೇಡ ಅಂದರೆ, ‘ನಾನು ಪುಂಗಿ ಊದುವಾಗ ಕಾಣಿಸಿತು, ದೊಡ್ದ ಗೋಧಿ ಬಣ್ಣದ ಹಾವು. ಮಕ್ಕಳು ಮರಿ ಓಡಾಡುವ ಜಾಗ ಹಿಡಿಸಿಬಿಡಿ ಅಮ್ಮಾ, ಅಯ್ಯ’ ಅಂತ ಹೇಳಿದಾಗ, ‘ಆಯ್ತು ಹಿಡಿ, ಎಷ್ಟು ಕೊಡಬೇಕು’ ಎಂದು ಚರ್ಚೆಯಾಗಿ ಕೊನೆಗೆ ಅವನು ಪುಂಗಿ ಊದುತ್ತಾ ಅಂಗಳದ ಮೂಲೆಗಳಿಗೆ ಹೋಗುತ್ತಿದ್ದ, ನಾವು ನೋಡುತ್ತಲೇ ಇರುತ್ತಿದ್ದೆವು. ಅಕ್ಕಪಕ್ಕದ ಮನೆಯ ಮಕ್ಕಳೂ ಇರುತ್ತಿದ್ದರು.

ನಮಗೆ ಯಾವ ಹಾವೂ ಕಾಣದಿದ್ದರೂ ಅವನು ದಾಸವಾಳ ಗಿಡದ ಸಂದಿಯಿಂದಲೋ, ಮಾವಿನ ಮರದ ಬುಡದಿಂದಲೊ ಹಾವೊಂದನ್ನು ಎಳೆದು ತರುತ್ತಿದ್ದ. ಅಲ್ಲೆ ಯಾರಾದರೂ ಕೆಲಸದವರಿದ್ದರೆ ‘ಬರೀ ಕಣ್ಕಟ್ಟು ಮಾಡಿದ, ದುಡ್ಡು ದಂಡ’ ಅಂತ ಹೇಳುತ್ತಿದ್ದರು. ನಮಗೆ ಕಾಣದ ಹಾವು ಅವನಿಗೆ ಹೇಗೆ ಸಿಕ್ಕಿತು ಎಂದು ನಮಗೆ ಆಶ್ಚರ್ಯವಾಗುತ್ತಿತ್ತು. ಆ ಹಾವನ್ನು ದೂರ ತೆಗೆದುಕೊಂಡು ಹೋಗಿ ಹಲ್ಲು ಕಿತ್ತು ಬುಟ್ಟಿಯಲ್ಲಿಟ್ಟುಕೊಂಡು ಹೋಗುತ್ತಿದ್ದ.

ಕೆಲವೊಮ್ಮೆ ಸ್ವಲ್ಪ ದೂರ ಹೋಗಿ ಯಾರೂ ಕಾಣದಂತೆ ಅಲ್ಲಿಯೇ ಬಿಟ್ಟು ಹೋಗುತ್ತಾನೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಈ ಹಾವಿನ ಗೊಲ್ಲರನ್ನು ಕಂಡರೆ ನಮಗೆ ಭಯ. ವಿಪರೀತ ಹೊಲಿಗೆ ಹಾಕಿದ ಅವರ ಚೀಲ, (ಅದೊಂದು ರೀತಿಯ ಕಸೂತಿಯಂತೆ) ವಿಚಿತ್ರ ಆಕಾರದ ಬುಟ್ಟಿ ಅವುಗಳನ್ನು ಕಂಡರೇ ನನಗೆ ಇರುಸು ಮುರುಸಾಗುತ್ತಿತ್ತು. ಜನ ತಮಗೆ ಬೇಡವಾದ ನಾಯಿಗಳನ್ನು ಈ ಹಾವಾಡಿಗರಿಗೆ ಕೊಡುತ್ತಿದ್ದರು.

ಮಳೆಗಾಲದಲ್ಲಂತೂ ಕನ್ನಡಿ ಹಾವುಗಳ ಕಾಟ. ಕೊಟ್ಟಿಗೆಯ ಅಟ್ಟದಲ್ಲಿ ದನಗಳಿಗೆ ಮಳೆಗಾಲದ ಮೇವಿಗಾಗಿ ಸಂಗ್ರಹಿಸಿಟ್ಟ ಒಣ ಹುಲ್ಲಿನ ನಡುವೆ ನಾಗರಹಾವುಗಳು ಸಾಮಾನ್ಯ. ಹುಲ್ಲು ತೆಗೆಯುವವರು ಎಷ್ಟೊ ಸಲ ಹುಲ್ಲಿನ ಜತೆ ಹಾವನ್ನೂ ಎಳೆದು ಹಾಕಿದ್ದಿದೆ. ಕೆಲವೊಮ್ಮೆ ದನಗಳಿಗೆ ಕಚ್ಚಿ ಅವು ಸತ್ತು ಹೋದಾಗ ಬಳ್ಳಿ ಮುಟ್ಟಿತ್ತು ಅನ್ನುತ್ತಿದ್ದರು. ಹೂಗಿಡಗಳ ನಡುವೆ ಹಸಿರು ಹಾವು ಯಾವಾಗಲೂ ಇರುತ್ತಿದ್ದವು.

ಈ ಹಸಿರು ಹಾವಿನ ಕುರಿತು ವಿಚಿತ್ರ ನಂಬಿಕೆಯಿತ್ತು. ಹೆಣ್ಣು ಮಕ್ಕಳ ಜಡೆಗೆ ಈ ಹಾವು ತಾಗಿಸಿದರೆ ಹಾವಿನಷ್ಟೆ ಉದ್ದ ಜಡೆ ಬೆಳೆಯುತ್ತೆ ಅಂತ. ಬೇಲಿಮೇಲೆ ಹರಿಯುವ ಹಸಿರು ಹಾವಿಗೆ ಕೆಲವರು ತಮ್ಮ ಜಡೆಯನ್ನು ತಾಗಿಸುತ್ತಿದ್ದರು. ಹಸಿರು ಹಾವು ಕಚ್ಚುವುದಿಲ್ಲವಾದ್ದರಿಂದ ಅದನ್ನು ಕಂಡರೆ ಯಾರಿಗೂ ಭಯವಿಲ್ಲ. ಇನ್ನೊಂದು ನಿರಪಾಯಕಾರಿ ಹಾವು ನೀರೊಳ್ಳೆ.

ಹಳ್ಳ– ಕೆರೆಗಳಲ್ಲಿ ಮೀನು ಹಿಡಿಯುವವರು ಮೀನೆಂದು ಭಾವಿಸಿ ಇದನ್ನು ಹಿಡಿದು ಬಿಡುವುದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ಮೀನು ಹಿಡಿಯಲು ಇಟ್ಟ ಕೂಣಿಗೆ ಮೀನು ತಿನ್ನಲು ಹಾವುಗಳು ಬರುತ್ತಿದ್ದವು. ಕೂಣಿಯ ಮುಚ್ಚಳ ತೆಗೆಯುವವರು ಎಚ್ಚರಿಕೆಯಿಂದ ತೆಗೆಯುತ್ತಿದ್ದರು. ನಾನು ನನ್ನ ತಮ್ಮ ಈ ಮೀನುಗಳನ್ನೂ ತಿನ್ನುತ್ತಿರಲಿಲ್ಲ. ಅದಕ್ಕೂ ಹಾವಿನ ಬಗ್ಗೆ ಇದ್ದ ಅಸಹ್ಯವೇ ಕಾರಣ.

ನಮ್ಮ ಮನೆಗೆ ಅಡಿಕೆ ಸುಲಿಯಲು ಬರುತ್ತಿದ್ದ ಚೆನ್ನಿ ಈ ಮೀನುಗಳ ಸ್ವರೂಪದ ಕುರಿತು ಒಂದು ಕಥೆ ಹೇಳಿದ್ದಳು. ಗದ್ದೆ, ಹಳ್ಳದಲ್ಲಿರುವ ತೊಳ್ಳೆ ಮೀನು, ಮುರುಗುಂಡು, ಔಲು ಮೀನು ಇತ್ಯಾದಿಗಳು ನೋಡಲು ಬೇರೆ ಮೀನುಗಳಂತೆ ಹೊಳಪಾಗಿರುವುದಿಲ್ಲ. ಒಮ್ಮೆ ಕಾಡಿಗೆ ಬೆಂಕಿ ಬಿದ್ದಾಗ ಜೀವ ಉಳಿಸಿಕೊಳ್ಳಲು ಹಾವು, ಓತಿಕೇತಗಳೆಲ್ಲಾ ಹೊಳೆಗೆ ಹಾರಿದವು. ಅವೇ ಈ ಮೀನುಗಳು, ಎಂಬುದು ಅವಳ ಕಥೆಯ ಸಾರಾಂಶ. ಶೆ, ಇನ್ನು ನಾವಿದನ್ನೆಲ್ಲಾ ತಿನ್ನಬಾರದು ಎನಿಸಿತು ಅವಳ ವರ್ಣನೆ ಕೇಳಿ.

ಮನೆಯ ಮಾಡಿನ ಮೇಲೆ ನಡುವೆ ಹಾವು ಸೇರಿಕೊಂಡರೆ ಸುಲಭದಲ್ಲಿ ಹೊರಹೋಗುತ್ತಿರಲಿಲ್ಲ. ಆಗ ಸಿಕ್ಕಾಪಟ್ಟೆ ಭಯವಾಗುತ್ತಿತ್ತು. ಒಮ್ಮೆ ನಾಯಿ ಬೊಗಳಿದ್ದನ್ನು ಕೇಳಿ ಅಜ್ಜಿ ‘ಚೂ ಚೂ ಹಿಡ್ಕ’ ಅಂದರು. ನಾವೆಲ್ಲ ಊಟ ಮಾಡುತ್ತಿದ್ದೆವು ನಾಯಿ ಯಾಕೆ ಬೊಗಳುತ್ತದೆಂದು ನೋಡದೆ ಅಜ್ಜಿ ನಾಯಿಗೆ ಹಿಡ್ಕ ಅಂದರೊ ಇಲ್ಲವೊ ಅದು ನಾಗರ ಹಾವೊಂದನ್ನು ನೋಡಿ ಬೊಗಳುತ್ತಿದ್ದುದು ಇನ್ನೂ ಹತ್ತಿರ ಹೋಗಿ ಬೊಗುಳತೊಡಗಿ ಹಾವಿನ ಕಡಿತಕ್ಕೆ ಬಲಿಯಾಯಿತು. ಅಜ್ಜಿ ಕೈಯಾರೆ ನಾಯಿಯನ್ನು ಕೊಂದೆ ಅಂತ ಬೇಜಾರು ಮಾಡಿಕೊಂಡರು.

ಜಗುಲಿಯಲ್ಲಿ ಇದ್ದ ನಿಸರ್ಗ ದೃಶ್ಯದ ಫೋಟೊವೊಂದರ ಹಿಂಬದಿ ಗುಬ್ಬಚ್ಚಿ ಗೂಡು ಮಾಡಿ ಮರಿ ಮಾಡಿತ್ತು. ಅದರ ಸಮೀಪದಲ್ಲಿ ಈಶ್ವರನ ಫೋಟೊ ಇತ್ತು. ಅದರ ಕೆಳಗೆ ಕನ್ನಡಿಯನ್ನು ತೂಗು ಹಾಕಿದ್ದರು, ನನ್ನ ತಮ್ಮ ಫೋಟೊ ಹಿಂದೆ ಬಾಚಣಿಗೆ ಇಡುತ್ತಿದ್ದ. ಬಾಚಣಿಗೆ ತೆಗೆಯಲು ಕೈಹಾಕಿದಾಗ ಕೈಗೆ ಏನೋ ತಗುಲಿತು ಎಂದು ನೋಡಿದರೆ ಮಾರುದ್ದದ ಹಾರುಂಬೆ ಹಾವು, ಗುಬ್ಬಚ್ಚಿಗಳನ್ನು ತಿನ್ನಲು ಬಂದಿತ್ತು!

ನಾನೊಮ್ಮೆ ರಾತ್ರಿ ಹಿಂಬಾಗಿಲು ಹಾಕಲು ಹೋದಾಗ ಬಾಗಿಲು ಸುಲಭದಲ್ಲಿ ಹಾಕಿಕೊಳ್ಳಲಿಲ್ಲ ಸ್ವಲ್ಪ ಒತ್ತಿ ಹಾಕಲು ಪ್ರಯತ್ನಿಸಿದರೂ ಆಗಲಿಲ್ಲ. ಏನಾಗಿದೆ ಎಂದು ಬಾಗಿಲನ್ನು ತೆಗೆದು ನೋಡಿದರೆ ಹಾವೊಂದು ಬಾಗಿಲ ಸಂದಿಯಲ್ಲಿ ಅಪ್ಪಚ್ಚಿ. ಕಿರುಚಿ ಓಡಿದ್ದೆ ಅಲ್ಲಿಂದ. ಹಿಂಭಾಗದ ಥಣೆಯ ಮೇಲೆ ಮಳೆಗಾಲದಲ್ಲಿ ಕನ್ನಡಿ ಹಾವುಗಳು ಬಂದಾಗ ಹೊಡೆದು ಹಾಕುತ್ತಿದ್ದರು. ಕೆಲವು ಸಲ ಮನೆಯಲ್ಲಿ ಯಾರೂ ಇಲ್ಲದಿರುವಾಗ ನಾನು ಒಬ್ಬಳೆ ಇದ್ದಾಗ ಮನೆಯೊಳಗೆ ಹಾವು ನೋಡಿಬಿಟ್ಟರೆ ಬೇಡಾ ಫಜೀತಿ.

ಅದು ಎಲ್ಲಿ ಹೋಗುತ್ತದೆಂದು ಗಮನಿಸಬೇಕು. ಯಾರನ್ನಾದರೂ ಕರೆಯಲೂ ಬೇಕು. ಒಮ್ಮೆ ಹೀಗೆ ಮನೆಯ ಮಧ್ಯದ ಕೋಣೆಯ ಕತ್ತಲೆಯ ಮೂಲೆಯ ಕಡೆ ಭಯದಿಂದಲೇ ನೋಡುತ್ತ ಹೊರ ಜಗುಲಿಯ ಕಡೆಗೆ ಹೋಗುತ್ತಿದ್ದೆ, ಕತ್ತಲೆ ಮೂಲೆಯಲ್ಲಿ ಬಿಳಿಹೊಟ್ಟೆಯ ನಾಗರಹಾವು ಕಂಡೇ ಬಿಟ್ಟಿತು. ನಾನು ಅಂಗಳಕ್ಕೆ ಓಡಿ ಪಕ್ಕದ ಮನೆಯವರನ್ನು ಕರೆದೆ.

ಮನೆಯ ಒಳಭಾಗದ ಬಾಗಿಲುಗಳನ್ನೆಲ್ಲ ಹಾಕಿದಾಗ ಅದು ಬೇರೆ ದಾರಿಯಿಲ್ಲದೆ ಹೊರಗೆ ಬಂತು. ಆದರೆ ಬಾಗಿಲಿಂದ ಹೊರ ಹೋಗದೆ, ಕಬ್ಬಿಣದ ಗ್ರಿಲ್ ಮೂಲಕ ಮೇಲೇರಿ ಹೆಂಚಿನ ಮೇಲೆ ಹೋಯಿತು. ಮರುದಿನ ಪಕ್ಕದ ಮನೆಯಲ್ಲಿ ಮಾಡಿನ ಮೇಲಿತ್ತೆಂದು ಹೊಡೆದು ಹಾಕಿದರು. ಮನೆಯ ಪಕ್ಕದ ತೋಟದಲ್ಲಿ ಬಂದ ಹೆಬ್ಬಾವನ್ನು ಹೊಸದಾಗಿ ಕೋವಿ ಉಪಯೋಗಿಸಲು ಕಲಿತ ಹುಡುಗನೊಬ್ಬ ಹೊಡೆದಾಗ ದೊಡ್ಡವರೆಲ್ಲ ಬೈದರು.

ಆಗಿನ್ನೂ ಸುಬ್ರಹ್ಮಣ್ಯ, ಹಾವಿನ ಪೂಜೆ, ನಾಗ ಪ್ರತಿಷ್ಠೆಗಳು ಈಗಿನಷ್ಟು ಪ್ರಚಾರದಲ್ಲಿರಲಿಲ್ಲ. ಜನ ಮನೆ ಒಳಗೆ ಬರುವ ವಿಷದ ಹಾವುಗಳನ್ನು, ತೊಂದರೆ ಮಾಡುವ ಹಾವುಗಳನ್ನು, ಕೋಳಿ– ನಾಯಿಗಳನ್ನು ಕಚ್ಚಿ ಸಾಯಿಸುವ ಹಾವುಗಳನ್ನು ನಿರ್ದಾಕ್ಷಿಣ್ಯವಾಗಿ ಸಾಯಿಸುತ್ತಿದ್ದರು. ಯಾವಾಗ ಟಿ.ವಿ.ಯ ಮೂಲಕ ಸುಬ್ರಹ್ಮಣ್ಯಕ್ಕೆ ಸಿನಿಮಾ ನಟಿ ಶಿಲ್ಪಾ ಶೆಟ್ಟಿ, ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಬಂದು ನಾಗದೋಷ ಪೂಜೆ ಮಾಡಿದರೊ ಚಿತ್ರ ಬದಲಾಗಿ, ನಾಗಗಳಿಗೂ, ಪೂಜೆ ಮಾಡುವವರಿಗೂ ಅದೃಷ್ಟ ಖುಲಾಯಿಸಿತು.

ಜನ ಹಾವನ್ನು ಹೊಡೆಯುವುದು ಬಿಟ್ಟು ತೀರ್ಥಹಳ್ಳಿಯಿಂದ ಹಾವು ಹಿಡಿಯುವವರನ್ನು ಕರೆಸಿ ದೂರ ಒಯ್ದು ಬಿಡಲು ಆರಂಭಿಸಿದರು. ಉದ್ದ ಪ್ಲಾಸ್ಟಿಕ್ ಪೈಪ್ ಅನ್ನು ಒಂದು ಬದಿ ಮುಚ್ಚಿ ಇನ್ನೊಂದು ಬದಿಯಿಂದ ಹಾವು ಒಳಹೋಗುವಂತೆ ಮಾಡಿ, ಮತ್ತೆ ಹೊರಬರದಂತೆ ಗೋಣಿ ಹಾಕಿ, ತೀರ್ಥಮುತ್ತೂರಿನ ಬಳಿ ತುಂಗಾ ಸೇತುವೆ ದಾಟಿ ಆಚೆ ಬಿಟ್ಟು ಬಂದರು. ಆಚೆ ದಡದವರೂ ಹೀಗೇ ಮಾಡಿದರೋ ಗೊತ್ತಿಲ್ಲ. ನಮ್ಮ ಊರಿನಲ್ಲಿ ಹಾವುಗಳೂ, ನವಿಲುಗಳೂ ಮಂಗಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ.

ಮಂಗಗಳಂತೂ ಹಳ್ಳಿಯ ಮನೆಗಳಲ್ಲಿ ಬೆಳೆದ ಹಣ್ಣು ತರಕಾರಿ ಏನನ್ನೂ ಬಿಡದೆ ತಮಗಾಗಿ ಬೆಳೆದಿದ್ದಾರೆ ಎಂದು ಸಂತೃಪ್ತಿಯಿಂದ ತಿಂದು ಹೋಗುತ್ತವೆ. ವೈಕಮ್ ಮಹಮ್ಮದ್ ಬಷೀರರ ‘The rightful inheritors’ ಕಥೆಯಂತೆ ಈ ಪ್ರಾಣಿ ಪಕ್ಷಿಗಳೆ ನಿಜವಾದ ವಾರಸುದಾರರು ಎಂದು ಸುಮ್ಮನಿರಲೂ ಸಾಧ್ಯವಿಲ್ಲ. ಮಂಗಗಳು ಹೆಸರಿಗೆ ತಕ್ಕಂತೆ ವರ್ತಿಸುತ್ತವೆ, ಅಡಿಕೆ ಮರದ ಮೇಲೆ ಕುಳಿತು ಒಂದೊಂದೇ ಅಡಿಕೆ ಕಾಯನ್ನು ಕಿತ್ತು ರುಚಿ ನೋಡಿ ಎಸೆಯುತ್ತವೆ.

ಆಗ ಸಹಜವಾಗಿ ರೈತರಿಗೆ ಮಂಗಗಳ ಮೇಲೆ ಮಾತ್ರವಲ್ಲದೆ ಪ್ರಾಣಿದಯಾ ಸಂಘದವರ ಮೇಲೂ ಕೋಪ ಬರುತ್ತದೆ. ಮೊನ್ನೆ ಅಮ್ಮನ ಮನೆಗೆ ಹೋದಾಗ ತಮ್ಮನ ಜತೆ ತೋಟಕ್ಕೆ ಹೋಗಿದ್ದೆ. ಅಲ್ಲಿ ಅಡಿಕೆ ತೋಟದ ಅಂಚಿನಲ್ಲಿದ್ದ ತೆಂಗಿನ ಮರದ ಬುಡದಲ್ಲಿ ತೆಂಗಿನ ಕಾಯಿಗಳು ಯಾರೋ ಸುಲಿದಿಟ್ಟಂತೆ ಸಿಪ್ಪೆ ಬಿಡಿಸಿಕೊಂಡು ಬಿದ್ದಿದ್ದವು. ಅವುಗಳನ್ನು ಕಾಡುಹಂದಿಗಳು ತಿನ್ನಲೆಂದು ಸಿಪ್ಪೆ ಬಿಡಿಸಿವೆಯೆಂದು ತಮ್ಮ ಹೇಳಿದ ಮೇಲೆ ತಿಳಿಯಿತು. ಇನ್ನೂ ಕೆಲವು ಕಾಯಿಗಳು ಅಡ್ಡಾದಿಡ್ದಿ ಒಡೆದುಕೊಂಡು ತಿರುಳೆಲ್ಲ ಅರ್ಧಂಬರ್ದ ಯಾರೋ ತಿಂದುಬಿಟ್ಟಂತೆ ಇತ್ತು. ‘ಅದು ಮುಳ್ಳುಹಂದಿಯ ಕೆಲಸ’ ಎಂದು ತಮ್ಮ ಹೇಳಿದ.

ನಾವು ಈಗ ಇರುವ ಮನೆಯ ಜಾಗದಲ್ಲಿ ಇಪ್ಪತ್ತೆಂಟು ವರ್ಷದ ಹಿಂದೆ ಬಂದಾಗ ಸುತ್ತಲೂ ಖಾಲಿ ಸೈಟ್ಗಳಲ್ಲಿ ಕಾಡು ಗಿಡ– ಕಂಟಿ, ಹುತ್ತಗಳಿದ್ದವು. ಹಾವುಗಳು ನಿರಾತಂಕವಾಗಿ ಸಂಚರಿಸುತ್ತಿದ್ದವು. ಒಮ್ಮೆ ಶನಿವಾರ ಮಧ್ಯಾಹ್ನ ಕಾಲೇಜಿನಿಂದ ನಾವಿಬ್ಬರೂ ಮನೆಗೆ ಬಂದಾಗ ನಮ್ಮ ನಾಲ್ಕು ವರ್ಷದ ಮಗ, ಇನ್ನಿಬ್ಬರು ಚಿಕ್ಕ ಮಕ್ಕಳೊಡನೆ ಕೆಲಸದ ಹುಡುಗಿಯ ಜತೆಗೆ ಆಟವಾಡುತ್ತಿದ್ದ. ಪಕ್ಕದ ಕೊಠಡಿಯಲ್ಲಿ ನಾಗರ ಹಾವು ಹರಿದಾಡುತ್ತಿತ್ತು. ಮಕ್ಕಳು ತಿಳಿಯದೇ ತುಳಿದಿದ್ದರೆ ಎಂದು ಮೈ ಝುಮ್ ಎಂದಿತ್ತು.

ಈಗ ಸುತ್ತಲೂ ಮನೆಗಳಾಗಿರುವುದರಿಂದ ಹಾವುಗಳು ಕಡಿಮೆ. ಆದರೂ ಕೇರೆ ಹಾವು ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಒಂದು ದಿನ ಮಧಾಹ್ನ ಬಾತ್ ರೂಮ್ಗೆ ಹೋದಾಗ ಬಿಳೀ ಟೈಲ್ಸ್ ಹಿನ್ನೆಲೆಯಲ್ಲಿ ಬಾತ್ ಟಬ್ ಮೇಲೆ ಉದ್ದಕ್ಕೆ ಕಪ್ಪು ಬಟ್ಟೆಯಂತೆ ಬಿದ್ದುಕೊಂಡಿದ್ದು ಹಾವು ಎಂದು ತಿಳಿಯಲು ಒಂದು ಕ್ಷಣ ಬೇಕಾಯ್ತು. ಬಾತ್ ರೂಮ್ನ ಬಾಗಿಲು ಹಾಕಿ ಕಿಟಕಿಯಿಂದ ನೋಡಿದಾಗ ಆಗಲೇ ಅದು ಕಿಟಕಿಯಿಂದ ಹೊರಹೋಗುತ್ತಿತ್ತು. ಬೇರೆ ಕಿಟಕಿಗಳಿಗೆ ಸೊಳ್ಳೆ ಮೆಷ್ಗಳಿದ್ದರೂ ಬಾತ್ ರೂಮ್ ಕಿಟಕಿಗಿರಲಿಲ್ಲ.

ನಾವು ಮಕ್ಕಳಾಗಿದ್ದಾಗ ಈ ಹಾವುಗಳೇ ನಮಗೆ ಭಯೋತ್ಪಾದಕರು. ಅದ್ಯಾವುದೋ ಗ್ರೀನ್ ಲ್ಯಾಂಡ್ ಎಂಬ ಚಳಿ ಪ್ರದೇಶದಲ್ಲಿ ಹಾವುಗಳೇ ಇಲ್ಲವಂತೆ. ಇಲ್ಲೂ ಹಾಗಿದ್ದರೆ ಅಂತೆಲ್ಲ ಮಾತಾಡಿಕೊಳ್ತಿದ್ದೆವು. ಕೇರೆ ಹಾವು ಇಲಿಗಳನ್ನು ತಿಂದು ರೈತನಿಗೆ ಉಪಕಾರಿಯಾಗಿದೆ ಎಂದು ಆಮೇಲೆ ತಿಳಿಯಿತು. ಗದ್ದೆಯಲ್ಲಿ, ಕಾಡಿನಲ್ಲಿ ಕೆಲಸ ಮಾಡುವವರು ಹಾವು ಕಚ್ಚಿದರೆ ತಾಲ್ಲೂಕಾಸ್ಪತ್ರೆಯಲ್ಲಿ ಸೂಕ್ತ ಔಷಧಿ ಇಲ್ಲದೆ ದೂರದ ಮಣಿಪಾಲಕ್ಕೆ ಹೋಗುವುದರೊಳಗೆ ಜೀವ ಹೋದ ಉದಾಹರಣೆಗಳೂ ಇವೆ. ಹಾವು ಕಚ್ಚಿದ ಗಾಯವನ್ನು ದೊಡ್ಡದು ಮಾಡಿ ಅಲ್ಲಿಗೆ ಜೀವ ಇರುವ ಕೋಳಿಯ ರಕ್ತನಾಳವನ್ನು ಸಂಪರ್ಕಿಸಿದರೆ ಕಚ್ಚಿಸಿಕೊಂಡ ಮನುಷ್ಯನ ದೇಹದ ವಿಷ ಕೋಳಿಯ ದೇಹಕ್ಕೆ ಬಂದು ಮನುಷ್ಯ ವಿಷಮುಕ್ತ ಆಗಬಹುದು ಎಂಬ ದಂತಕಥೆಯೂ ಆಗ ಚಾಲ್ತಿಯಲ್ಲಿತ್ತು.

ಪ್ರೈಮರಿ ಸ್ಕೂಲ್ನಲ್ಲಿ ‘ನಾಗರ ಹಾವೇ, ಹಾವೊಳು ಹೂವೆ, ಬಾಗಿಲ ಬಿಲದೊಳು ನಿನ್ನಯ ಠಾವೇ’ ಎಂದು ರಾಗವಾಗಿ ಹೇಳಿದ ಪದ್ಯದಲ್ಲಿ ಬರುವ ಹಾವೂ ನಿಜದ ಹಾವೂ ನಮಗೆ ಎಂದೂ ಒಂದೇ ಆಗಿರಲಿಲ್ಲ. ದೊಡ್ಡವರಾದ ನಂತರವೂ ಹಾವನ್ನು ಕುರಿತ ಎಚ್ಚರಿಕೆ, ಭಯಗಳು ಕಡಿಮೆಯಾಗಲಿಲ್ಲ. ಜೀವನದಲ್ಲಿ ಅನಿರೀಕ್ಷಿತ ಅವಘಡಗಳಾಗದಂತಿರಲು, ಘಾಟಿ ರಸ್ತೆಯ ಎಚ್ಚರಿಕೆಯ ಡ್ರೈವಿಂಗ್ನಂತೆ ಮೈಯೆಲ್ಲ ಕಣ್ಣಾಗಿರುತ್ತೇವೊ ಹಾಗೇ ಹಾವಿನ ಜತೆಗೆ ಕೃಷಿಕರ ಸಹಬಾಳ್ವೆ. ದಿನವೂ ಹಾವಿನ ಭಯದಲ್ಲಿರುವವರ ಕಷ್ಟ ಅನುಭವಿಸಿದವರಿಗೆ ಮಾತ್ರ ತಿಳಿಯುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.