ಬೆಂಗಳೂರು: ಒಂದು ಭಾಷೆಯ ಮಹತ್ವದ ಕವಿಗೆ ಆ ಭಾಷೆಯ ಕಾವ್ಯಾಭಿಮಾನಿಗಳು, ಸಾಹಿತ್ಯಾಸಕ್ತರು ಸಲ್ಲಿಸಬಹುದಾದ ಬಹು ದೊಡ್ಡ ಗೌರವ ಎಂದರೆ ಆ ಕವಿಯ ಕಾವ್ಯದೊಂದಿಗೆ ಮತ್ತೆ ಮತ್ತೆ ನಡೆಸುವ ಅನುಸಂಧಾನ ಎಂಬುದಕ್ಕೆ ‘ಮೊಗೇರಿ ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ’ ಕಾರ್ಯಕ್ರಮ ಸಾಕ್ಷಿಯಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಅಡಿಗರ ಕುರಿತ ವಿಚಾರ ಸಂಕಿರಣದ ಎರಡನೇ ದಿನವಾದ ಭಾನುವಾರ ಸಭಾಂಗಣದಲ್ಲಿ ನೆರೆದಿದ್ದ ಬಹುತೇಕರು ಅಡಿಗರ ಕವಿತೆಗಳ ಸಾಲುಗಳನ್ನು ತಮ್ಮ ನೆನಪಿನಿಂದಲೇ ಉದ್ಧರಿಸಿ ಅವರ ಕಾವ್ಯದ ಒಳಗನ್ನು ತೆರೆದಿಡುವ ಪ್ರಯತ್ನ ಮಾಡಿದರು.

ಅಡಿಗರ ಸಾಹಿತ್ಯ ಕುರಿತ ಪ್ರಬಂಧ ಮಂಡನೆ, ಚರ್ಚೆಗಳ ಜತೆಗೆ ಅವರ ಕಾವ್ಯ ಹಾಗೂ ವ್ಯಕ್ತಿತ್ವದ ಬಗೆಗಿನ ವಾಗ್ವಾದಗಳೂ ಕಾರ್ಯಕ್ರಮದಲ್ಲಿ ಮರುವ್ಯಾಖ್ಯಾನಕ್ಕೆ ಒಳಗಾದವು. ಅಡಿಗರ ಪರಂಪರೆಯ ಪ್ರಜ್ಞೆ, ರಾಜಕೀಯ ನಿಲುವು, ಆಧುನಿಕತೆ ಕುರಿತ ಅವರ ಒಳನೋಟಗಳ ಬಗ್ಗೆ ಸಭಿಕರೂ ಗಂಭೀರ ಚರ್ಚೆ ನಡೆಸಿದರು. ಅಡಿಗರನ್ನು ಶ್ರೇಷ್ಠ ಕವಿ ಎಂದು ಒಪ್ಪುವ ಜತೆಗೇ ಅವರ ಮಿತಿಗಳ ಬಗ್ಗೆಯೂ ಮಾತುಕತೆ ನಡೆಯಿತು.

‘ಅಡಿಗರು ಪರಂಪರೆಯಲ್ಲಿನ ಹಳತನ್ನು ಶೋಧಿಸಿ ಶ್ರೇಷ್ಠ ಕಾವ್ಯವಾಗಿಸುವಲ್ಲಿ ವಹಿಸಿದ ತಾಳ್ಮೆ ಮತ್ತು ಸಂಯಮವನ್ನು ರಾಜಕೀಯದ ವಿಚಾರದಲ್ಲಿ ವಹಿಸಲಿಲ್ಲ. ಹಾಳಾಗಿ ಹೋಗಿರುವ ಸಿದ್ಧಾಂತವನ್ನು ಎತ್ತುವ ಬಗ್ಗೆ ಅವರಿಗೆ ತಾಳ್ಮೆ ಇರಲಿಲ್ಲ’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ ವಿಶ್ಲೇಷಿಸಿದರು.

‘ಅಡಿಗರದ್ದು ಒಂದು ಯುಗಧರ್ಮದ ಆಧುನಿಕತೆ. ಇಂತಹ ಆಧುನಿಕತೆಗೆ ಚಾರಿತ್ರಿಕವಾದ ಗತಿ ಇದೆ. ಅಡಿಗರನ್ನು ಪ್ರಶ್ನಿಸಲು ಸಾಧ್ಯವಿರುವುದರಿಂದಲೇ ಅವರು ಶ್ರೇಷ್ಠ ಕವಿ ಎನಿಸುತ್ತಾರೆ’ ಎಂದು ಲೇಖಕಿ ತಾರಿಣಿ ಶುಭದಾಯಿನಿ ನುಡಿದರು.

‘ಅಡಿಗರಿಗೆ ಕೆ.ಎಸ್. ನರಸಿಂಹಸ್ವಾಮಿ, ಕುವೆಂಪು, ಗೋಕಾಕ್ ಅವರ ಬಗ್ಗೆ ಅತೃಪ್ತಿ ಇತ್ತು. ‘ಲೇಖಕನನ್ನು ನಂಬಬೇಡ, ಅವನ ಕೃತಿಯನ್ನು ನಂಬು’ ಎಂದು ಲಾರೆನ್ಸ್ ಹೇಳುತ್ತಾನೆ. ಈ ಮಾತನ್ನು ಅಡಿಗರಿಗೂ ಅನ್ವಯಿಸಿಕೊಳ್ಳಬಹುದು’ ಎಂದು ಹಿರಿಯ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಹೇಳಿದರು.

‘ಅಡಿಗರ ಕಾವ್ಯವನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಅಡಿಗರ ಕಾವ್ಯ ಮತ್ತೆ ಪಠ್ಯಪುಸ್ತಕಗಳಲ್ಲಿ ಬರಬೇಕು. ಅಡಿಗರ ಕಾಲದ ಜನಸಂಘದ ಆಶಯಗಳಿಗೂ ಇಂದಿನ ಆಶಯಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇಂದು ಅಡಿಗರು ಇದ್ದಿದ್ದರೆ ಜನಸಂಘವನ್ನು ಬೆಂಬಲಿಸುತ್ತಿರಲಿಲ್ಲ’ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ತಿಳಿಸಿದರು.

‘ಕನ್ನಡ ಓದುಗರು ಅಡಿಗರನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇದೇ ಕನ್ನಡ ಓದುಗರು ಅಡಿಗರಿಗೆ ಕೊಡುವ ದೊಡ್ಡ ಗೌರವ. ಪ್ರತಿಭೆಯ ವಿಷಯಕ್ಕೆ ಬಂದಾಗ ವಯಸ್ಸಿನ ಪ್ರಶ್ನೆ ಮುಖ್ಯವಾಗುವುದಿಲ್ಲ ಎಂದು ಹೇಳುತ್ತಿದ್ದ ಅಡಿಗರು ನವ್ಯದ ಅನೇಕರ ಸಾಹಿತ್ಯ ರಚನೆಯ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ಹಿರಿಯ ವಿಮರ್ಶಕ ಟಿ.ಪಿ. ಅಶೋಕ ಅಭಿಪ್ರಾಯಪಟ್ಟರು.

‘ಯಾವ ಹೊಸತೂ ಸುಲಭವಾಗಿ ಒಪ್ಪಿತವಾಗುವುದಿಲ್ಲ ಎಂಬ ಅರಿವು ಅಡಿಗರಿಗಿತ್ತು. ಅವರು ತಮಗನಿಸಿದ್ದನ್ನೆಲ್ಲಾ ಹೇಳುತ್ತಿದ್ದರು. ಆದರೆ, ಕೊನೆ ಮಾತು ಎಂದು ಯಾವುದನ್ನೂ ಹೇಳುತ್ತಿರಲಿಲ್ಲ. ಅವರು ಯಾವುದೇ ಪಕ್ಷಕ್ಕೆ ಬದ್ಧವಾಗಿ ಬರೆದಿಲ್ಲ. ಅಡಿಗರ ಕಾವ್ಯವನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು. ವಿಮರ್ಶೆ ಮಾಡದೇ ಅಡಿಗರು ಯಾರನ್ನೂ ಒಪ್ಪುತ್ತಿರಲಿಲ್ಲ. ಬೇಂದ್ರೆಯವರ ಬಗ್ಗೆಯೂ ಅಡಿಗರಿಗೆ ಅನುಮಾನಗಳಿದ್ದವು’ ಎಂದು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನುಡಿದರು.

‘ರಾಜಕೀಯದ ಬಗ್ಗೆ ಮಾತನಾಡದಿರುವುದೆಂದರೆ ಕರ್ತವ್ಯಭ್ರಷ್ಟರಾಗುವುದು ಎಂದು ಅಡಿಗರು ನಂಬಿದ್ದರು’ ಎಂದು ಲೇಖಕ ಬಸವರಾಜ ಡೋಣೂರ ಹೇಳಿದರು.

ಕಾರ್ಯಕ್ರಮದ ಕೊನೆಗೆ ಗಿರೀಶ್ ಕಾರ್ನಾಡ್ ನಿರ್ದೇಶನದ ಗೋಪಾಲಕೃಷ್ಣ ಅಡಿಗರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

‘ವಾಸ್ತವ ಮರೆಮಾಚುವ ಅಗತ್ಯವಿಲ್ಲ’

‘ಅಡಿಗರ ‘ಪುಷ್ಪಕವಿಯ ಪರಾಕು’ ಕೆ.ಎಸ್. ನರಸಿಂಹಸ್ವಾಮಿಯವರ ಬಗ್ಗೆಯೇ ಬರೆದಿರುವ ಕವಿತೆ. ಆ ಕಾಲದ ಕವಿಗಳು ಹೀಗೆ ಬಡಿದಾಡಿಕೊಂಡಿದ್ದಿದೆ. ಅದು ವಾಸ್ತವ. ಈಗ ಆ ಕವನದ ಬಗ್ಗೆ ಬೇರೆಯದೇ ವ್ಯಾಖ್ಯಾನ ಮಾಡಿ ವಾಸ್ತವವನ್ನು ಮರೆಮಾಚುವ ಅಗತ್ಯವಿಲ್ಲ’ ಎಂದು ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು.

‘ಕನ್ನಡ ಕಾವ್ಯಕ್ಕೆ ಹೊಸ ಲಯ, ಹೊಸ ಶಿಲ್ಪವನ್ನು ಕಟ್ಟಿಕೊಟ್ಟವರು ಅಡಿಗರು’
– ಗಿರಡ್ಡಿ ಗೋವಿಂದರಾಜ, ಹಿರಿಯ ವಿಮರ್ಶಕ

‘ಅಡಿಗರನ್ನು ವಿವಾದಗಳ ಸುಳಿಗೆ ಸಿಲುಕಿಸಿ ನೋಡುವುದಕ್ಕಿಂತ ಅವರ ಕಾವ್ಯದ ಒಳ್ಳೆಯ ಅಂಶಗಳ ಬಗ್ಗೆ ನೋಟ ಬೀರಬೇಕು’
– ಎಚ್. ದಂಡಪ್ಪ, ವಿಮರ್ಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.