ಧಾರವಾಡ: ‘ಮಲೆಗಳಲ್ಲಿ ಮದುಮಗಳು ಕೃತಿ ರಚನೆಗೊಂಡು ಐವತ್ತು ವರ್ಷಗಳು ಕಳೆದರೂ ಹಲವು ಬಗೆಗಳಲ್ಲಿ ಓದುಗರನ್ನು ತಟ್ಟುತ್ತಲೇ ಇದೆ. ಈ ಕೃತಿ ಕುವೆಂಪು ರಚಿಸಿದ ಸಂವಿಧಾನ’ ಎಂದು ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಸಿ. ಶಿವಾರೆಡ್ಡಿ ಬಣ್ಣಿಸಿದರು.

‘ಸಾಹಿತ್ಯ ಕೃತಿಗಳ ಮರು ಓದು’ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕೃತಿಯು ಕುವೆಂಪು ಅವರ ಸ್ವಾತಂತ್ರ್ಯಾನಂತರ ಕಟ್ಟಿದ ಸಂವಿಧಾನ. ಜೀವ ಸಮುದಾಯಗಳ ಸಂಕಥನ ಇದರಲ್ಲಿದೆ. ಭೂತ, ವರ್ತಮಾನ, ಭವಿಷ್ಯದ ಬಗ್ಗೆ ಕಾಳಜಿ ಇದೆ. ಇದರಲ್ಲಿ ಕ್ಷುದ್ರತೆಗೂ ಬದುಕುವ ಹಕ್ಕಿದೆ. ವಿಶ್ವಮಾನವ ಸಂದೇಶ ಬಹಳ ಢಾಳವಾಗಿ ಕಾಣಿಸಿಕೊಂಡಿದೆ. ಈ ಕೃತಿಯಲ್ಲಿ ಅಧ್ಯಾತ್ಮದ ವೈಯಕ್ತೀಕರಣವನ್ನು ಬೋಧಿಸಿದರು’ ಎಂದರು.

‘ಕಾನೂರು ಹೆಗ್ಗಡಿತಿ ಕಾದಂಬರಿಯನ್ನು ಕುವೆಂಪು 1930ರಲ್ಲಿ ಬರೆದರು. 1967ರಲ್ಲಿ ಮಲೆಮಗಳಲ್ಲಿ ಮದುಮಗಳು ಕಾದಂಬರಿ ರಚಿಸಿದರು. ಎರಡರ ವಿಷಯ–ವಸ್ತುವಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪ್ರಖ್ಯಾತ ಸಾಹಿತಿಯೊಬ್ಬರಿಗೆ ಈ ಕೃತಿಯನ್ನು ಕೊಟ್ಟು, ಮರು ಸಂಪಾದನೆ ಮಾಡಲು ಹೇಳಿದಾಗ, ಇದು ಕನ್ನಡದ ಅಭಿಜಾತ ಕೃತಿಯಾಗಿ ಉಳಿಯಬೇಕು ಎಂದರೆ ಒಂದು ಪದವನ್ನೂ ತೆಗೆಯಕೂಡದು ಎನ್ನುತ್ತಾರೆ. ಅಷ್ಟರಮಟ್ಟಿಗೆ ಇದು ಪರಿಪೂರ್ಣ ಕೃತಿ’ ಎಂದು ಅವರು ಹೇಳಿದರು.

ಹಿರಿಯ ಸಂಶೋಧಕ, ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ, ‘ಈ ಕೃತಿಯ 255 ಹಾಗೂ 484ನೇ ಪುಟಗಳನ್ನು ಹದಿಹರೆಯದ ಯುವಕರು ಎಷ್ಟು ಬಾರಿ ಓದಿದ್ದಾರೋ ಎಂಬುದನ್ನು ಲೆಕ್ಕ ಹಾಕುವುದು ಕಷ್ಟ. ನಾನಂತೂ ನೂರು ಬಾರಿಯಾದರೂ ಓದಿದ್ದೇನೆ. ಮನುಷ್ಯನ ದೇಹ ವ್ಯಾಪಾರವನ್ನು ಕುವೆಂಪು ಅಶ್ಲೀಲ ಮಾತುಗಳನ್ನು ತರದೇ ವಿವರಿಸಿದ ಪರಿ ಬೆರಗು ಮೂಡಿಸುವಂಥದು. ಸಾಂಕೇತಿಕತೆಯನ್ನು ಬಳಸಿಯೇ ಹೇಳಬೇಕಾದ ವಿಷಯಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

‘ಬೇಂದ್ರೆ ಅವರ ಕವಿತೆಗಳಲ್ಲಿ ಅನುಭವಗಳ ವೈರುಧ್ಯದ ಸರಮಾಲೆಯೇ ಇದೆ. ಕವಿತೆಯೊಂದರಲ್ಲಿ ಜೀವನ ಅಮೃತವೋ ವಿಷವೋ ಎಂದು ಪ್ರಶ್ನಿಸುತ್ತಾರೆ. ಆದರೆ, ಕುವೆಂಪು ಕವಿತೆಗಳು ದರ್ಶನದ ಸಂಕೇತ. ಕುವೆಂಪು ಕೃತಿಗಿಂತಲೂ ಕವನಗಳಲ್ಲಿ ಬಳಕೆಯಾದ ಭಾಷೆ ಬಹಳ ಮೂರ್ತವಾದುದು’ ಎಂದು ವಿಶ್ಲೇಷಿಸಿದರು.

ಗೋಷ್ಠಿಯ ನಿರ್ದೇಶಕರಾಗಿದ್ದ ವಿಮರ್ಶಕ ಟಿ.ಪಿ. ಅಶೋಕ, ‘ಯಾವುದೇ ಲೇಖಕನ ಕೃತಿಗಳ ಮರು ಅಧ್ಯಯನ ಅತ್ಯಂತ ಅಗತ್ಯವಾದುದು. ಸಂಸ ಅವರು ‘ಗೋಕುಲ ನಿರ್ಗಮನ’ ನಾಟಕ ಬರೆದ ಹೊಸತರಲ್ಲಿ ಯಾರೂ ಅದರ ಮಹತ್ವವನ್ನು ಗ್ರಹಿಸಿರಲಿಲ್ಲ. ಕೆ.ವಿ. ಸುಬ್ಬಣ್ಣ ಆ ನಾಟಕದ ಬಗ್ಗೆ ಬರೆದ ಮೇಲೆ, ಬಿ.ವಿ. ಕಾರಂತರು ಇದನ್ನು ರಂಗಪ್ರಯೋಗ ಮಾಡಿದ ಮೇಲೆಯೇ ಇದು ಎಷ್ಟು ಮಹತ್ವದ ನಾಟಕ ಎಂಬುದು ಮನದಟ್ಟಾಯಿತು. ಹಾಗೆಯೇ ಕುವೆಂಪು ಕೃತಿಗಳನ್ನು ನವ್ಯ ಕಾಲದ ವಿಮರ್ಶಕರು ಸರಿಯಾಗಿ ಗುರ್ತಿಸಿರಲಿಲ್ಲ. ದಲಿತ–ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಕುವೆಂಪು ಕೃತಿಗಳ ಸಮಗ್ರ ಅಧ್ಯಯನ ಹಾಗೂ ವಿಮರ್ಶೆ ನಡೆಯಿತು’ ಎಂದು ಹೇಳಿದರು.

‘ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣರಾದ ಬಿ. ಕೃಷ್ಣಪ್ಪನವರು ಕುವೆಂಪು ಅವರಲ್ಲಿ ಮೂರು ಪ್ರಮುಖ ಸಂದಿಗ್ಧಗಳನ್ನು ಗುರ್ತಿಸಿದ್ದರು. ಶೂದ್ರರಾದರೂ ರಾಮಕೃಷ್ಣ ವಿವೇಕಾನಂದರ ಚಿಂತನೆಗಳಲ್ಲಿ ನಂಬಿಕೆ ಇಟ್ಟು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುವುದು. ಅದೇ ಕಾಲಕ್ಕೆ ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಬನ್ನಿರೈ ಮನುಜ ಮತಕೆ ಎಂದು ಕೈಬೀಸಿ ಕರೆಯುವುದು; ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಮಾಜವಾದಿ ತತ್ವಗಳನ್ನು ಒಪ್ಪಿಕೊಳ್ಳುವುದು. ಅದೇ ಸಮಯದಲ್ಲಿ ಸಮಾಜವಾದಿ ತತ್ವಕ್ಕೆ ವಿರುದ್ಧವಾದ ಜಮೀನ್ದಾರಿ ಪದ್ಧತಿಯನ್ನು ಒಪ್ಪಿಕೊಳ್ಳುವುದು; ಹಿಂದೂ ಜಾತಿವ್ಯವಸ್ಥೆಯ ಬ್ರಾಹ್ಮಣಶಾಹಿಯನ್ನು ವಿರೋಧಿಸುವುದು. ಅದೇ ಕಾಲಕ್ಕೆ ಶೂದ್ರರ ದಲಿತ ಶೋಷಣೆಯನ್ನು ಮೌನವಾಗಿ ಒಪ್ಪಿಕೊಳ್ಳುವುದು ಕುವೆಂಪು ಅವರ ಕಾದಂಬರಿ, ಕವಿತೆಗಳ ಪ್ರಮುಖ ವೈರುಧ್ಯಗಳು ಎಂಬುದನ್ನು ವಿಶದೀಕರಿಸಿದ್ದಾರೆ’ ಎಂದರು.

‘ಹುಡುಗರು ಕಾದಂಬರಿ ಓದುವುದಿಲ್ಲ’

ಇತ್ತೀಚೆಗೆ ಕಾಲೇಜಿಗೆ ಬರುವ ಹುಡುಗರು ಕಾದಂಬರಿಗಳನ್ನು ಓದುವುದನ್ನೇ ನಿಲ್ಲಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಇದು ಕ್ರಮೇಣ ಕಡಿಮೆಯಾಗುತ್ತಲೇ ಇದೆ ಎಂದು ಬಸವರಾಜ ಕಲ್ಗುಡಿ ವಿಷಾದಿಸಿದರು.

‘100 ವಿದ್ಯಾರ್ಥಿಗಳಿದ್ದ ನನ್ನ ತರಗತಿಯಲ್ಲಿ ಕೇವಲ ಎರಡೂವರೆ ವಿದ್ಯಾರ್ಥಿಗಳು ಮಾತ್ರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದ್ದರು. ಇಬ್ಬರು ಪೂರ್ತಿಯಾಗಿ ಓದಿದ್ದರೆ, ಮತ್ತೊಬ್ಬ ಆ ಕಾದಂಬರಿಯ ಎರಡು ಭಾಗಗಳನ್ನು ಓದಿದ್ದ. ಅಂತಹ ಅದ್ಭುತ ಕಾದಂಬರಿಯನ್ನು ಪೂರ್ತಿಯಾಗಿ ಓದದ ವಿದ್ಯಾರ್ಥಿಯನ್ನು ಕಂಡು ಬೇಸರ ಎನಿಸಿತು’ ಎಂದು ಕಲ್ಗುಡಿ ಹೇಳಿದಾಗ ಸಭಿಕರು ಕಾದಂಬರಿಯ 255 ಹಾಗೂ 484ನೇ ಪುಟಗಳಲ್ಲೇನಿರಬಹುದು ಎಂಬುದು ವಿದ್ಯಾರ್ಥಿಗೆ ಗೊತ್ತಿರಲಿಲ್ಲವೇ ಎಂದು ನೆನೆಸಿಕೊಂಡು ಮುಸಿಮುಸಿ ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.