ಧಾರವಾಡ:‘ಕಂದಾಚಾರ, ಕೃತಿ ನಿಷೇಧ, ತನ್ನ ನಂಬಿಕೆಗಳಿಗೆ ವಿರುದ್ಧವಾಗಿ ವ್ಯಕ್ತಿಯೊಬ್ಬರು ಮಾತನಾಡಿದರೆಂದು ಅವರು ಮಾತನಾಡಿದ ಸ್ಥಳವನ್ನು ಶುದ್ಧೀಕರಿಸುವ ಅಸ್ಪೃಶ್ಯತೆಯ ಆಚರಣೆ ಹಾಗೂ ಜಾತಿ ವಿನಾಶದ ಒಂದು ಪ್ರಯತ್ನವೂ ಆಗದಿರುವ ಸಂದರ್ಭದಲ್ಲಿ ಸಾಂವಿಧಾನಿಕ ಆಶಯಗಳನ್ನುಳ್ಳ ಸಾಂಸ್ಕೃತಿಕ ನೀತಿಯೊಂದು ಅಗತ್ಯವಿದೆ’ ಎಂದು ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.

’ಸಾಹಿತ್ಯ ಸಂಭ್ರಮ’ದ 6ನೇ ಆವೃತ್ತಿಯ ಕೊನೆಯ ದಿನ ನಡೆದ ’ಕರ್ನಾಟಕ ಸಾಂಸ್ಕೃತಿಕ ನೀತಿ’ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅವರು, ಬರಗೂರು ರಾಮಚಂದ್ರಪ್ಪ ಅವರ ಸಾಂಸ್ಕೃತಿಕ ನೀತಿಯ ಶಿಫಾರಸುಗಳಲ್ಲಿ ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಹಾಗೂ ಬಹುಸಂಸ್ಕೃತಿಯ ಪ್ರತಿಪಾದನೆಗಳು ಅತ್ಯಂತ ಮಹತ್ವವಾದವು ಎಂದರು.

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಕೂಡ ರಾಜ್ಯಕ್ಕೊಂಡು ಸಾಂಸ್ಕೃತಿಕ ನೀತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಅವರು, ‘ಹೊಸ ನೀತಿ ಜಾರಿಗೆ ತರಬೇಕು ಎಂದರೆ ಹಳೇ ನೀತಿ ಸರಿ ಇಲ್ಲ ಎಂಬುದನ್ನು ಸಾಬೀತು ಮಾಡಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಹಾಕಿಕೊಂಡಿರುವ ಅಂಗಿ ಹರಿದಿದೆಯೇ, ಕೊಳೆ ಆಗಿದೆಯೇ ಎಂಬುದನ್ನು ನೋಡಿಕೊಂಡು ಹೊಸ ಅಂಗಿ ಖರೀದಿಸಬೇಕು. ಇದು ಸಾಂಸ್ಕೃತಿಕ ನೀತಿಗೂ ಅನ್ವಯಿಸುತ್ತದೆ. ಇಲ್ಲಿಯವರೆಗೂ ಸಂಸ್ಕೃತಿ ಇಲಾಖೆ ಯಾವ ನೀತಿಯನ್ನು ಅಳವಡಿಸಿಕೊಂಡಿತ್ತು, ಅದು ಸರಿ ಇರಲಿಲ್ಲವೇ ಎಂಬ ಬಗ್ಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಿಶೀಲನೆ ನಡೆಯಬೇಕು. ಆ ಬಳಿಕವಷ್ಟೇ ಹೊಸ ನೀತಿಯ ಬಗ್ಗೆ ಚರ್ಚೆ ನಡೆಯಬೇಕು. ಅದನ್ನು ಮಾಡದೇ ಬರಗೂರು ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ. ಆ ಸಮಿತಿಯ ಶಿಫಾರಸಿನಲ್ಲಿ ಇನ್ನಷ್ಟು ಕಚೇರಿಗಳನ್ನು ತೆರೆಯಬೇಕು ಎಂದು ಹೇಳಿದ್ದಾರೆ. ಇದು ಸರಿಯಾದುದಲ್ಲ. ಇದ್ದ ಕಚೇರಿಗಳನ್ನೇ ಮುಚ್ಚಬೇಕಿದೆ’ ಎಂದು ವಿಠ್ಠಲಮೂರ್ತಿ ಹೇಳಿದರು.

‘ಸಾಂಸ್ಕೃತಿಕ ನೀತಿ ಅಗತ್ಯವಾಗಿ ಬೇಕು. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕಲಾವಿದರಿಗೆ ನೆರವು ನೀಡುತ್ತಿದ್ದರು. ಯುರೋಪ್ ದೇಶಗಳಲ್ಲಿ ಚರ್ಚ್ ಸಹಾಯ ಮಾಡುತ್ತಿತ್ತು. ಅಕಾಡೆಮಿಗಳು ಕೆಲಸ ಮಾಡಲು ಸರ್ಕಾರದ ನೆರವು ಬೇಕು. ಆದರೆ, ಅಕಾಡೆಮಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಾರೆ. ಕಲಾವಿದರು ತಮ್ಮ ಬಳಿ ಬರಬೇಕು ಎಂದು ಸರ್ಕಾರ ನಡೆಸುವವರು ಬಯಸುತ್ತಾರೆ. ಇದು ಅವರ ಅಹಂಕಾರ ತಣಿಸುವ ಕ್ರಮವೂ ಹೌದು’ ಎಂದು ಪದ್ಮರಾಜ ದಂಡಾವತಿ ಅಭಿಪ್ರಾಯಪಟ್ಟರು.

ಗೋಷ್ಠಿಯ ನಿರ್ದೇಶಕರಾಗಿದ್ದ ರಂಗಕರ್ಮಿ ಕೆ.ವಿ. ಅಕ್ಷರ, ‘ಕೇಂದ್ರ ಸರ್ಕಾರ ತನ್ನ ₹ 20 ಲಕ್ಷ ಬಜೆಟ್ ಪೈಕಿ ₹ 2,738 ಕೋಟಿಯನ್ನು ಸಂಸ್ಕೃತಿ ಇಲಾಖೆಗೆ ನೀಡುತ್ತದೆ. ಇದು ಒಟ್ಟು ಬಜೆಟ್‌ನ ಶೇ 0.15 ರಷ್ಟು ಮಾತ್ರ. ಕರ್ನಾಟಕ ಸರ್ಕಾರ ಸಾಂಸ್ಕೃತಿಕ ವಲಯಕ್ಕೆ ₹ 367 ಕೋಟಿ ಬಿಡುಗಡೆ ಮಾಡಿದೆ. ಸಾಂಸ್ಕೃತಿಕ ವಲಯವನ್ನು ರಂಗಮಂದಿರಗಳನ್ನು ಕಟ್ಟುವ ಮೂಲಕ, ಕೆಲ ನೀತಿಗಳನ್ನು ರೂಪಿಸುವ ಮೂಲಕ ನಿಯಂತ್ರಿಸುತ್ತವೆ. ಒಟ್ಟಾರೆಯಾಗಿ ನಮ್ಮನ್ನು ಮೊಬೈಲ್ ಫೋನ್, ಆಧಾರ್ ಕಾರ್ಡ್, ಸಿ.ಸಿ. ಟಿ.ವಿ. ಕ್ಯಾಮೆರಾಗಳ ಮೂಲಕ ನಮ್ಮ ಚಲನವಲನಗಳನ್ನು ಗಮನಿಸುತ್ತಿದೆ’ ಎಂದು ಟೀಕಿಸಿದರು.

‘ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕೆಲವು ಬಾರಿ ಅನಿವಾರ್ಯವಾಗಿ ಕೆಲವರಿಗೆ ಪ್ರಶಸ್ತಿ ಹಂಚಲಾಗುತ್ತದೆ. ಸಾಮಾಜಿಕ ನ್ಯಾಯಕ್ಕಿಂತ ದೊಡ್ಡದಾದ ನ್ಯಾಯ ಎನ್ನುವುದಿದೆ. ಹಲವು ಬಾರಿ ಉತ್ತಮ ಕೃತಿ ರಚನೆ ಮಾಡಿದರೂ ಸಾಮಾಜಿಕ ನ್ಯಾಯದ ಕಾರಣದಿಂದಾಗಿ ಅಂಥವರಿಗೆ ಅವಕಾಶ ಸಿಗುತ್ತಿಲ್ಲ. ಒಂದು ದಿನ ನಡೆಯುವ ಜಯಂತಿಗಳಿಗೆ ₹ 69 ಲಕ್ಷ ಖರ್ಚು ಮಾಡಲಾಗುತ್ತದೆ. ಇದನ್ನು ಹೇಗೆ ಖರ್ಚು ಮಾಡಲಾಯಿತು ಎಂಬುದನ್ನು ಪ್ರಶ್ನಿಸುವವರು ಯಾರು’ ಎಂದರು.

ಇದಕ್ಕೆ ತಮ್ಮ ಮಾತು ಸೇರಿಸಿದ ವಿಠ್ಠಲಮೂರ್ತಿ, ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 6 ಕೋಟಿ ಖರ್ಚು ಮಾಡುತ್ತಾರೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕೇಳುವಂತಿಲ್ಲ. ಲೆಕ್ಕ ಪರಿಶೋಧಕರೂ ಕೇಳುವಂತಿಲ್ಲ’ ಎಂದು ಟೀಕಿಸಿದರು.

‘ಶಿಫಾರಸಿನ ಬಹುತೇಕ ಅಂಶಗಳನ್ನು ಒಪ್ಪಿಕೊಂಡ ಸರ್ಕಾರ, ಉತ್ಸವಗಳು ನಡೆಯುವ ಸಂದರ್ಭದಲ್ಲಿ ಸರ್ಕಾರಿ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳನ್ನು ಕರೆಯುವ ಅಗತ್ಯವಿಲ್ಲ. ಕಾಲಾವಧಿ ಮುಗಿಯದೇ ಅಕಾಡೆಮಿಗಳ ಮುಖ್ಯಸ್ಥರನ್ನು ಬದಲಿಸುವಂತಿಲ್ಲ ಎಂಬ ಅಂಶಗಳನ್ನು ಒಪ್ಪಿಕೊಂಡಿಲ್ಲ’ ಎಂದು ಅಕ್ಷರ ಹೇಳಿದರು. ಬರಗೂರು ಸಮಿತಿಯ ಶಿಫಾರಸುಗಳಲ್ಲಿ ಸಲಹೆಗಳಷ್ಟೇ ಇವೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಾಯೋಗಿಕ ಸಾಧ್ಯತೆಗಳನ್ನು ಪ್ರಸ್ತಾಪಿಸಿಲ್ಲ ಎಂದು ಅಕ್ಷರ ಅಭಿಪ್ರಾಯಪಟ್ಟರು.

ಜಗಳ ತರುವ ಜಯಂತಿಗಳು ಬೇಡ

ಸಂಭ್ರಮದಿಂದ ಆಚರಿಸಬೇಕಾದ ಜಯಂತಿಗಳು ಇದೀಗ ಜಗಳ ತರುತ್ತಿವೆ. ವಿವಾದಿತ ಜಯಂತಿಗಳನ್ನು ಆಚರಿಸದಿರುವುದೇ ಒಳ್ಳೆಯದು ಎಂದು ಹಿರಿಯ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಒತ್ತಾಯಿಸಿದರು.

ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಥಳೀಯ ಶಾಸಕರು ಹೇಳುತ್ತಾರೆ. ಮತ್ತೊಬ್ಬರು ಬರ್ತೀವಿ ಅಂತಾರೆ. ಇಂತಹ ಸಂದರ್ಭದಲ್ಲಿ ನಮ್ಮಂತಹ ಅಧಿಕಾರಿಗಳ ಸ್ಥಿತಿ ಯಾರಿಗೆ ಹೇಳೋಣ ಎಂದವರು ಸರ್ಕಾರಿ ಅಧಿಕಾರಿಗಳ ಸಮಸ್ಯೆಯ ಕಡೆಗೆ ಜನರ ಗಮನಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.