ಪ್ಯಾರಿಸ್ ಎನ್ನುವ ಹೆಸರು ನನ್ನ ನೆನಪಿನ ಭಾಗವಾದದ್ದು ಪಿ. ಲಂಕೇಶ್ ಅನುವಾದಿಸಿದ್ದ ‘ಪಾಪದ ಹೂವುಗಳು’ ಸಂಕಲನ ಓದಿದಾಗ. ಆಗಷ್ಟೆ ಕಾಲೇಜು ಮೆಟ್ಟಿಲನ್ನು ಹತ್ತಿದ್ದೆ. ಬೊದಿಲೇರ್ ಕಾವ್ಯ ಜಗತ್ತು ಮತ್ತು ಅಂಥ ಜಗತ್ತಿಗೆ ಕಾರಣವಾಗಿದ್ದ ಪ್ಯಾರಿಸ್ ನಗರ ಮನದಲ್ಲಿ ಅಚ್ಚೊತ್ತಿ ನಿಂತಿತ್ತು. ಪ್ಯಾರಿಸ್ ಎಂದರೆ ಬೊದಿಲೇರ್. ಬೊದಿಲೇರ್ ಎಂದರೆ ಪ್ಯಾರಿಸ್ ಎನ್ನುವುದಷ್ಟೆ ಗೊತ್ತಿತ್ತು.

ಆದರೆ, 2017ರ ಡಿಸೆಂಬರ್ ಮೊದಲ ವಾರದಲ್ಲಿ ಇಲ್ಲಿಗೆ ಬಂದಿಳಿದಾಗ ಈ ಕೆಂಡಸಂಪಿಗೆಯಂಥ ನಗರದಲ್ಲಿ ಎಷ್ಟೆಲ್ಲ ಸಾಹಿತ್ಯದ ನೆನಪುಗಳು ಚೆಲ್ಲಿಕೊಂಡಿದ್ದಾವಲ್ಲ ಅನ್ನಿಸಿತು. ಇಂಥ ಸಾಹಿತ್ಯದ ನಗರಿಗೆ ನಾನು ಹಿಂದಿಯ ಯುವಲೇಖಕ ಮಿತ್ರ ಸೂರಜ್ಕುಮಾರ್ ಜೊತೆಗೆ ಬಂದಿದ್ದೆ. ನಾವಿಬ್ಬರೂ ಇಲ್ಲಿನ ವಿಪರೀತದ ಚಳಿಗೆ ಕಂಗಾಲಾದೆವು. ಕಲಬುರ್ಗಿಯ 44 ಡಿಗ್ರಿ ಸೆಲ್ಸಿಯಸ್ ಬಿಸಿಲಲ್ಲಿ ಹಾಯಾಗಿ ಇದ್ದವರಿಗೆ ಹಿಮಪರ್ವತದಲ್ಲಿ ಹೂತು ಹಾಕಿದಂತಾಯಿತು. ಮರುದಿನ ಇದಕ್ಕಾಗಿ ಸಾಕಷ್ಟು ಬಂದೋಬಸ್ತನ್ನು ಮಾಡಿಕೊಂಡೆವು.

ಈ ಡಿಸೆಂಬರ್ ತಿಂಗಳಲ್ಲಿ ಇಡೀ ನಗರ ಕ್ರಿಸ್ಮಸ್ ಹಬ್ಬಕ್ಕೆ ಸಜ್ಜುಗೊಳ್ಳುವಂತೆ ತೋರುತಿತ್ತು. ಸೂರ್ಯನೇ ಕಾಣದ ಮಬ್ಬು ನಗರ. ಜಿಂಕೆಯಂತೆ ಹೆಜ್ಚೆಹಾಕುತ್ತ ತಿರುಗಾಡುತಿದ್ದ ಜನ. ಅವರ ನಡುವೆ ನಮ್ಮದು ಮೊದಲ ಸಲ ರಸ್ತೆಗಿಳಿದ ಮೊಲದ ಸ್ಥಿತಿ. ನಾವು ತಿರುಗಾಡಿದ ಬೀದಿಗಳು, ಕೆಫೆಗಳು, ಬಾರುಗಳು, ಅಪಾರ್ಟ್ಮೆಂಟುಗಳು, ಥಿಯೇಟರುಗಳು, ವಿಶ್ವವಿದ್ಯಾಲಯಗಳು, ಪುಸ್ತಕದಂಗಡಿಗಳು, ಹೋಟೆಲ್ಗಳು, ಲಿಟರರಿ ಕ್ಲಬ್ಗಳು ತಮಗೆ ತಾವೇ ಇಲ್ಲಿನ ಸಾಹಿತ್ಯದ ನೆನಪುಗಳನ್ನು ನಮ್ಮೆಡೆಗೆ ತೂರುತಿದ್ದವು. ಹಲವು ವಾದಗಳನ್ನು ಹುಟ್ಟುಹಾಕಿ, ಹಲವು ಶೈಲಿಗಳನ್ನು ಕಾಣಿಸಿ, ಬದುಕಿನ ಹೊಸ ನೈತಿಕ ಹುಡುಕಾಟಕ್ಕಿಳಿದ ಲೇಖಕರ ದೊಡ್ಡ ದಂಡೇ ಇಲ್ಲಿನ ಪರಿಸರದಲ್ಲಿ ಬೆರೆತು ಹೋಗಿತ್ತು.

ರಾಷ್ಟ್ರೀಯವಾದ, ವಾಸ್ತವವಾದ, ಅತಿವಾಸ್ತವವಾದ, ಅಸಂಗತವಾದ, ಅಸ್ತಿತ್ವವಾದ, ಸ್ತ್ರೀವಾದ, ಮಾರ್ಕ್ಸ್ವಾದ, ನಿರಚನವಾದ, ಆಧುನಿಕೋತ್ತರವಾದ ಎಲ್ಲವನ್ನೂ ಜೀವಂತವಾಗಿ ಉಸಿರಾಡಿದಂತೆ, ತಮ್ಮ ಆಳವಾದ ಪ್ರಜ್ಞೆಯಿಂದ ಕೆತ್ತಿದಂತೆ ಸಾಹಿತ್ಯದ ನೆನಪುಗಳು ಚೆಲ್ಲಿಕೊಂಡಿದ್ದವು. ಇಲ್ಲಿನ ಪುಸ್ತಕದಂಗಡಿ, ಬಾರು, ಹೋಟೆಲ್, ವಿಶ್ವವಿದ್ಯಾಲಯ, ಲಿಟರರಿ ಕ್ಲಬ್ಗಳಲ್ಲಿ ತೂಗುಹಾಕಿದ ಫೋಟೊಗಳು ಇಂಥ ನೂರಾರು ಕಥೆಗಳನ್ನು ಹೇಳತೊಡಗಿದವು. ಮುಟ್ಟಿದರೆ ಮಿಡಿಯುವ ಇಲ್ಲಿನ ಸಾಹಿತ್ಯದ ಪರಿಸರ ಜಗತ್ತಿನ ಹಲವು ಲೇಖಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದರೆ ಅಚ್ಚರಿಯಿಲ್ಲ.

ಜಗತ್ತಿನ ಹಲವು ಲೇಖಕರು ಇಲ್ಲಿ ಬಂದು, ನೆಲೆಸಿ, ಜೀವಂತಿಕೆಯನ್ನು ಸೂಸಿದ್ದಾರೆ. ಕೊನೆಗೆ ಇಲ್ಲೇ ಸಾಯಲು ಹಂಬಲಿಸಿದ್ದಾರೆ. ಪ್ಯಾರಿಸ್ ಕುರಿತ ತಮ್ಮ ಪ್ರೀತಿಯನ್ನು ಸಾವಿರಾರು ಪುಟಗಳಲ್ಲಿ ದಾಖಲಿಸಿದ್ದಾರೆ. ಅರ್ನೆಸ್ಟ್ ಹೆಮಿಂಗ್ವೆ ಬರೆದ ‘ಎ ಮೂವೆಬಲ್ ಫೆಸ್ಟ್ ಪ್ಯಾರಿಸ್’ ಕುರಿತ ನೆನಪುಗಳ ಚಿತ್ರಸರಣಿ. ರಾಬರ್ಟ್ ಪ್ರೌಸ್ಟ್ ಬರೆದ ಏಳು ಸಂಪುಟಗಳ ‘ಇನ್ ಸರ್ಚ್ ಆಫ್ ಲಾಸ್ಟ್ ಟೈಮ್’ ಪ್ಯಾರಿಸ್ನ ವಿವರವಾದ ಚಿತ್ರಗಳನ್ನು ಹೊಂದಿದೆಯಂತೆ.

ಜೇಮ್ಸ್ಜಾಯ್ಸ್ ತನ್ನ ಜಗತ್ಪ್ರಸಿದ್ಧ ಕೃತಿ ‘ಯುಲಿಸಿಸ್’ ಬರೆದದ್ದು ಪ್ಯಾರಿಸ್ಸಿನಲ್ಲಿ. ಪಾಬ್ಲೊ ನೆರೂಡನ ಆತ್ಮಕಥೆಯಲ್ಲಿ ಪ್ಯಾರಿಸ್ನ ಪುಟಗಳಿವೆ. ಸಾರ್ತ್ರೆಯ ತಾತ್ವಿಕ ಕೃತಿಗಳಲ್ಲಿ ಪ್ಯಾರಿಸ್ ಇದೆ. ಸಿಮೋನ್ದ ಬೊವಾ ಕೃತಿಯ ಸ್ತ್ರೀವಾದದಲ್ಲಿ ಪ್ಯಾರಿಸ್ ಇದೆ, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಸಿಮೋನ್ದ ಬೊವಾಳ ಸಂಕೀರ್ಣ ವ್ಯಕ್ತಿತ್ವ ಕುರಿತು ಆಕೆಯ ವಿದ್ಯಾರ್ಥಿನಿ ಬಿನಾಕಾ ಲ್ಯಾಂಬ್ಲಿನ್ ಬರೆದ ಕೃತಿಯಲ್ಲಿ ಪ್ಯಾರಿಸ್ಸಿನ ವಿಭಿನ್ನ ಜಗತ್ತಿದೆ.

ಬೊದಿಲೇರ್ನ ನರಕವಂತೂ ಸರಿಯೇ ಸರಿ. ಸ್ಯಾಮುವೆಲ್ ಬೆಕೆಟ್ ತನ್ನ ನಾಟಕಗಳನ್ನು ಓದಿದ್ದು ಇಲ್ಲಿಯ ಪುಸ್ತಕದಂಗಡಿಗಳಲ್ಲಿ. ತಾನು ಸತ್ತಾಗ ತನ್ನ ಹೆಣವನ್ನು ಪ್ಯಾರಿಸ್ಸಿನಲ್ಲೆ ಮಣ್ಣು ಮಾಡಬೇಕೆಂದು ವಿಲ್ ಬರೆದಿಟ್ಟವನು ಪ್ರಸಿದ್ಧ ಕಾದಂಬರಿಕಾರ ಕಾರ್ಲೋಸ್ ಫಿಯಾಂಟಿಸ್. ಬೀದಿಬೀದಿಗಳಲ್ಲಿ ಮಾರ್ಕ್ಸ್ವಾದದ ಕರಪತ್ರಗಳನ್ನು ಹಂಚುತ್ತಾ ಸಿಮೋನ್ದ ಬೊವಾ ತಿರುಗಾಡಿದ್ದು ಪ್ಯಾರಿಸ್ಸಿನಲ್ಲಿ. ವಿಕ್ಟರ್ಹ್ಯೂಗೊನ ಸಾಂಪ್ರದಾಯಿಕ ಬರಹಗಳಲ್ಲಿನ ಪ್ಯಾರಿಸ್ಸೆ ಬೇರೆ. ಬಾಲ್ಜಾಕ್ ಬರಹಗಳ ಭಿತ್ತಿ ಪ್ಯಾರಿಸ್. ‘ಎಜ್ರಾಪೌಂಡ್ ಇನ್ ಎ ಮೆಟ್ರೊ ಸ್ಟೇಷನ್’ ಎಂಬ ಚುಟುಕಾದ ಕವಿತೆ ಬರೆದದ್ದು ಪ್ಯಾರಿಸ್ಸಿನ ಮೆಟ್ರೊ ಸ್ಟೇಷನ್ನಲ್ಲಿ. ಅಲೆಕ್ಸಾಂಡರ್ ಡೂಮಾ, ಮೊಪಾಸಾ, ಆಸ್ಕರ್ ವೈಲ್ಡ್, ಸೂಸಾನ್ ಸೊಂಟಾಗ್ ತಮ್ಮ ಅಂತಿಮ ದಿನಗಳನ್ನು ಕಳೆದದ್ದು ಪ್ಯಾರಿಸ್ಸಿನಲ್ಲಿ.

ಅಮೆರಿಕದ ಪ್ರಸಿದ್ಧ ಲೇಖಕ ಅಲೆನ್ ಗಿನ್ಸ್ಬರ್ಗ್ನ ಇಷ್ಟದ ತಾಣ ಕೂಡ ಪ್ಯಾರಿಸ್. ಈಗ ಜಗತ್ತಿನ ಶ್ರೇಷ್ಠ ಕಾದಂಬರಿಕಾರರ ಮೊದಲ ಸಾಲಿನಲ್ಲಿರುವ ಮಿಲನ್ ಕುಂದೇರಾ ನೆಲೆಸಿರುವುದು ಪ್ಯಾರಿಸ್ನಲ್ಲಿ. ಹೀಗೆ ಪ್ಯಾರಿಸ್ನ ಸಾಹಿತ್ಯದ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಫ್ರೆಂಚರ ಪ್ರಚಂಡ ಬುದ್ಧಿವಂತಿಕೆ, ಜೀವನದಾಹ, ಹುಚ್ಚಾಟಗಳು, ಜೀವನ ನೋಡಲು ನೂರು ಮಾರ್ಗಗಳಿದ್ದರೂ ನೂರಾ ಒಂದನೆಯ ಮಾರ್ಗಕ್ಕಾಗಿ ತಹತಹಿಸುವ ಅವರ ಮನಸ್ಸು ಅರಿವಾಗದೇ ಇರುವುದಿಲ್ಲ. ಇಲ್ಲಿನ ಬರಹಗಾರರು ತೀವ್ರತೆ, ಮುಕ್ತತೆ, ಅಸಾಂಪ್ರದಾಯಿಕತೆಯನ್ನು ಹಟದಿಂದ ಶೋಧಿಸಿದರು. ತಮ್ಮ ಅರಾಜಕ ನಡವಳಿಕೆಯಿಂದ ಜಗತ್ತನ್ನು ಬೆಚ್ಚಿಬೀಳಿಸಿದರು.

ಬೊಲಿವರ್ಡ್ ರಾಸಪೆಲ್ನಲ್ಲಿ ಒಂದು ಮಾಸಿದ ಮೂರ್ತಿಯಿದೆ. ಯಾರದೊ ದೊರೆಯ ಮೂರ್ತಿಯಿರಬೇಕೆಂದು ಅಂದುಕೊಂಡರೆ ಕೆಳಗೆ ಬಾಲ್ಜಾಕ್ ಎಂಬ ಹೆಸರು ಬರೆಯಲಾಗಿತ್ತು. ಫ್ರೆಂಚ್ ಸಾಹಿತ್ಯದ ಅಜ್ಜನಂತಿದ್ದ ಬಾಲ್ಜಾಕ್ ಕುರಿತು ನಾನು ಮಾತಿಗೆಳೆದ ಒಂದಿಬ್ಬರು ಹೊಸ ಬರಹಗಾರರು ಅಷ್ಟೇನೂ ಉತ್ಸಾಹದಿಂದ ಆತನನ್ನು ನೆನಪಿಸಿಕೊಳ್ಳಲಿಲ್ಲ.

ಆದರೆ ಅವನ ಸುಂದರವಾದ ಮುಖ ಕಣ್ಣೊಳಗೆ ಉಳಿದುಬಿಟ್ಟಿದೆ. ಹೆಮಿಂಗ್ವೆ ತನ್ನ ಬಡತನದ ದಿನಗಳಲ್ಲಿ ಇಲ್ಲಿನ ಮಾರ್ಸೆ ಮುಫ್ಟೆರ್ಡ್ ಮಾರ್ಕೆಟ್ಟಿನಲ್ಲಿ ಕೆಲಸ ಮಾಡಿದ. ಆ ಮಾರ್ಕೆಟ್ಟಿನ ಒಂದು ತುದಿಗೆ ಅವನ ನೆನಪಿನ ಬೋರ್ಡಿದೆ. ಅವನು ತನ್ನ ಪ್ರೇಯಸಿಯೊಂದಿಗೆ ಮೊದಲ ರಾತ್ರಿ ಕಳೆದ ರೂಮ್ ನಂಬರ್ ಹದಿನಾಲ್ಕರ ಕೋಣೆಯ ಹೋಟೆಲ್ ದಿ ಆಂಗ್ಲಿಟೆಕ್ರೆಯಲ್ಲೂ ಅವರು ಉಳಿದುಕೊಂಡಿದ್ದರ ಉಲ್ಲೇಖವಿದೆ. ಶೇಕ್ಸ್ಪಿಯರ್ ಅಂಡ್ ಕಂಪನಿ ಅವನ ಓದಿನ ಹಸಿವನ್ನು ತಣಿಸಿದ ಪುಸ್ತಕ ದಂಗಡಿ. ಬರಹಗಾರರು ಓಡಾಡಿದ, ತಿಂದ, ಕುಡಿದ, ಮಲಗಿದ, ಓದಿದ ಸ್ಥಳಗಳೆಲ್ಲವನ್ನೂ ಈ ಪ್ಯಾರಿಸ್ನ ಜನ ಸಾಹಿತ್ಯದ ಸ್ಮಾರಕಗಳಾಗಿ ಪರಿವರ್ತಿಸಿದ್ದಾರೆ. ಪ್ಯಾರಿಸ್ನ ಇನ್ನೊಂದು ಮೂಲೆಯಲ್ಲಿ ಎಮಿಲಿ ಜೋಲಾ ಸ್ಕ್ವೇರ್ ಇದೆ. ಅಲ್ಲಿಯೂ ಗಿಜಿಗುಡುವ ಜನಸಂದಣಿ.

ವಿಕ್ಟರ್ ಹ್ಯೂಗೊ ಅಪಾರ ಜನಪ್ರಿಯ ಲೇಖಕ. ಫ್ರೆಂಚ್ ಕವಿ, ಕಾದಂಬರಿಕಾರ ಮತ್ತು ನಾಟಕಕಾರ. ಇಲ್ಲಿಯ ಸಮಾಜ, ರಾಜಕೀಯವನ್ನು ಧ್ಯಾನಿಸಿ ಬರೆದವ. ನಾತ್ರೊ ಡಾಮೆ ಡಿ ಪ್ಯಾರಿಸ್ ಚರ್ಚಿನ ಒಳಾಂಗಣದಲ್ಲಿ ಹಲವಾರು ಶಿಲ್ಪಗಳು, ಪೇಂಟಿಂಗ್ಗಳಿವೆ. ಒಳಗಿನ ಪ್ರತಿ ಸಂಗತಿಯ ಹಿಂದೆ ನೂರಾರು ಕಥೆಗಳಿವೆ. ಈ ಕಥೆಗಳನ್ನು ವಿವರವಾಗಿ ನಿರೂಪಿಸಲೆಂದೇ ವಿಕ್ಟರ್ ಹ್ಯೂಗೊ ಕೃತಿಯೊಂದನ್ನು ಬರೆದಿದ್ದಾನೆ. ಅಲ್ಲದೆ ಬಿಬಿಲಿಯಾಥಿಕ ಕಥೆಗಳ ಮಹಾನ್ ತಜ್ಞನಿವ. ಎಲ್ಲ ದೇಶ ಕಾಲಗಳಲ್ಲೂ ಧಾರ್ಮಿಕ ನೆನಪುಗಳನ್ನು, ಕಥೆಗಳನ್ನು ಮಂಡಿಸುವ ಬರಹಗಾರರಿಗೆ ಜನಪ್ರಿಯತೆ ಇದ್ದೇ ಇರುತ್ತದೇನೊ. ಇವನ ನೆನಪಿನ ಅವಿನ್ಯೂ ಒಂದಿದೆ. ಈತನ ಬದುಕು ಮತ್ತು ಕೃತಿಗಳ ಕುರಿತ ದೀರ್ಘ ವಿವರಣೆಯ ಫಲಕ ಎಲ್ಲ ಮೂಲೆಗಳಲ್ಲೂ ರಾರಾಜಿಸುತ್ತಿವೆ. ಫ್ರೆಂಚ್ ಸರ್ಕಾರ ಈತನ ಚಿತ್ರವನ್ನು ತನ್ನೊಂದು ನೋಟಿನ ಮೇಲೆ ಮುದ್ರಿಸಿದೆ ಕೂಡ.

ಜೀನ್ ಪಾಲ್ ಸಾರ್ತ್ರೆ ಮತ್ತು ಸಿಮೋನ್ದ ಬೊವಾ ಕುರಿತ ನೆನಪುಗಳಿಗೆ ಪ್ಯಾರಿಸ್ನಲ್ಲಿ ಅದರದೇ ಆದ ತೂಕವಿದೆ. ಇವರಿಂದ ಪ್ಯಾರಿಸ್ನ ವಿದ್ವತ್ಲೋಕದ ಘನತೆ ಹೆಚ್ಚಾಯಿತು ಅಂತ ಪ್ರೊ.ಘನಶ್ಯಾಮ್ ಶರ್ಮಾ ಹೇಳಿದರು. ಶರ್ಮಾ ಅವರು ಹಲವು ವರ್ಷಗಳಿಂದ ಇಲ್ಲಿನ ಇನಾಲ್ಕೊ ಭಾಷಾ ಸಂಸ್ಥೆಯಲ್ಲಿ ಹಿಂದಿಯ ಪ್ರಾಧ್ಯಾಪಕರಾಗಿದ್ದಾರೆ. ಸಾರ್ತ್ರೆ ಫ್ರೆಂಚ್ ತತ್ವಜ್ಞಾನಿ, ನಾಟಕಕಾರ, ಮಾರ್ಕ್ಸ್ವಾದದ ಪ್ರಖರ ಚಿಂತಕ ಮತ್ತು ಅಸ್ತಿತ್ವವಾದದ ಶೋಧಕ.

ನೊಬೆಲ್ ಬಂದಾಗ ಪ್ಯಾರಿಸ್ನ ತನ್ನ ಮನೆಯನ್ನು ತೊರೆದು ಇನ್ನೊಂದು ಹಳ್ಳಿಗೆ ಹೋಗಿ ಅಡಗಿಕೊಂಡ. ಆತ ತನ್ನ ಪ್ರಖ್ಯಾತ ಚಿಂತನೆಗಳನ್ನು ಬರೆದ ಅಪಾರ್ಟ್ಮೆಂಟು ಹೇಗೆ ಪ್ರವಾಸಿ ತಾಣವೊ ಆತ ಅಡಗಿಕೊಂಡ ಹಳ್ಳಿ ಗಾಕ್ಸ್ವಿಲ್ಲರ್ ಕೂಡ ಈಗ ಪ್ರವಾಸಿ ತಾಣವೆ ಆಗಿಬಿಟ್ಟಿದೆ.

ಆದರೆ, ನಾವಲ್ಲಿಗೆ ಹೋಗಲಾಗಲಿಲ್ಲ. ಸಿಮೋನ್ದ ಬೊವಾ ಕುರಿತು ಹರಿದಾಡಿದ ಹಲವು ಕಥೆಗಳು ಕಿವಿಗೆ ಬಿದ್ದವು. ಆಕೆ ಹಲವು ವಿಶ್ವವಿದ್ಯಾಲಯಗಳನ್ನು ಬದಲಿಸಿದ್ದು, ಅನೇಕ ಆರೋಪಗಳಿಗೆ ಗುರಿಯಾದದ್ದು, ತನ್ನ ವಿದ್ವತ್ಪೂರ್ಣ ಚಿಂತನೆಗಳಿಂದ ಪುರುಷಲೋಕವನ್ನು ಮೆಟ್ಟಿನಿಂತದ್ದು ಪ್ಯಾರಿಸ್ನ ಸಾಹಿತ್ಯ ವಲಯದಲ್ಲಿ ಹಸಿರಾಗಿ ನಿಂತಿದೆ. ಅವಳ ಹೆಸರಿನ ಹಲವು ಸ್ಟಡಿ ಸರ್ಕಲ್ಗಳನ್ನು ಕಂಡು ನಮ್ಮ ಉತ್ಸಾಹ ಇಮ್ಮಡಿಸಿತು.

ಪ್ಯಾರಿಸ್ನಲ್ಲಿರುವ ಸ್ಮಾರಕವೊಂದರ ನೋಟ

ಪ್ಯಾರಿಸ್ ಬೊದಿಲೇರ್ನ ನಗರ. ಅವನ ಕಾವ್ಯದ ಪ್ರತಿಮೆ ರೂಪಕಗಳ ಊರು. ಜೀನ್ ದುವಾಲ್ಳನ್ನು ಭೇಟಿಯಾದ ನೆಲೆ. ಅವರಿಬ್ಬರ ಭೇಟಿಗೆ ಸಾಕ್ಷಿಯಾದ ಲಕ್ಸೆಂಬರ್ಗ್ ಗಾರ್ಡನ್ ವಿಶಾಲವಾಗಿ ಹರಡಿಕೊಂಡಿದೆ. ಈ ತೋಟದಲ್ಲಿ ಆತನ ಚಿಕ್ಕದೊಂದು ಮೂರ್ತಿ ಕೂಡ ನಿಲ್ಲಿಸಲಾಗಿದೆ. ಹಲವು ಗಿಡಮರಗಳ, ಶಿಲ್ಪಗಳ ಈ ತೋಟ ಆತನ ಬೇಸರ ಕಳೆಯುವ ತಾಣವಾಗಿತ್ತಂತೆ. ನಲವತ್ತಾರು ವರ್ಷ ಬದುಕಿದ ಈತ ಫ್ರೆಂಚ್ ಸಾಹಿತ್ಯ ಪ್ರಿಯರ ಕಣ್ಮಣಿ. ಸಿಮೆಟ್ರಿ ಆಫ್ ಮಾಂಟಾಪರಾನ್ಸೆಯಲ್ಲಿ ಅವನ ಸಮಾಧಿಯ ಸ್ಥಳವನ್ನು ಹುಡುಕಿಕೊಂಡು ಹೋದಾಗ ಬೇರೆ ಬೇರೆ ದೇಶದ ಜನ ತಮ್ಮ ಭಾಷೆಯಲ್ಲಿ ಅವನ ಕವಿತೆಗಳನ್ನು ಓದುತಿದ್ದರು.

ಹುಡುಗಿಯೊಬ್ಬಳಂತೂ ಅವನ ಸಮಾಧಿಯನ್ನು ಅಪ್ಪಿಕೊಂಡು ಕೆಲ ಹೊತ್ತು ಅಲ್ಲೆ ಕುಳಿತಿದ್ದಳು. ಛೆ! ನಾನು ಲಂಕೇಶರ ಅನುವಾದ ತಂದಿದ್ದರೆ... ಅಂತ ಮನಸ್ಸಿನಲ್ಲಿ ಒಂದು ಕ್ಷಣ ಅಂದುಕೊಂಡೆ. ತನ್ನ ಕಾವ್ಯದಲ್ಲಿ ಮನುಷ್ಯನಾಳದ ನರಕ ಸೃಷ್ಟಿಸಿದವನ ಸಮಾಧಿಯ ಮೇಲೆ ಅನೇಕ ಹೂಗಳು ನಳನಳಿಸುತಿದ್ದವು. ಹದಿಹರೆಯದವರು, ಮುಪ್ಪಿನವರು ಸಮಾನವಾಗಿ ಭೇಟಿ ನೀಡುತ್ತಿದ್ದ ಸ್ಥಳ ಅಂದರೆ ಇದೊಂದೆ ಎನ್ನುವ ಹಾಗೆ ಎಲ್ಲ ವಯೋಮಾನದ ಜನ ಅಲ್ಲಿದ್ದರು. ಅಲ್ಲಿನ ಒಟ್ಟು ಪರಿಸರ ಮಾತ್ರ ನನ್ನೊಳಗೆ ವಿಚಿತ್ರ ತರಂಗಗಳನ್ನು ಎಬ್ಬಿಸುತ್ತಿತ್ತು.

ಇಸ್ತಾಂಬುಲ್ ಲೇಖಕ ಯಾಹ್ಯಾ ಕೆಮಾಲ್ ಒಂಬತ್ತು ವರ್ಷಗಳ ಕಾಲ ಪ್ಯಾರಿಸ್ಸಿನಲ್ಲಿದ್ದು ಮಲಾರ್ಮೆಯ ಕಾವ್ಯದಿಂದ ಶುದ್ಧಕಾವ್ಯದ ಹಲವು ವರಸೆಗಳನ್ನು ಕಲಿತ. ಪ್ಯಾರಿಸ್ ಹಲವು ಲೇಖಕರನ್ನು ತುಂಬು ಪ್ರೀತಿಯಿಂದ ಸ್ವಾಗತಿಸಿದೆ. ತನ್ನ ನೆಲದಲ್ಲಿ ತಿರಸ್ಕಾರಕ್ಕೊಳಗಾದ, ಹಿಂಸೆಗೊಳಗಾದ ಬರಹಗಾರರು ಇಲ್ಲಿಗೆ ತಮ್ಮ ನೆಮ್ಮದಿಯನ್ನು ಹುಡುಕಿಕೊಂಡು ಬಂದರು. ಮಿಲನ್ಕುಂದೇರಾ ಜೆಕ್ ರಾಜ್ಯದ ಕಾದಂಬರಿಕಾರ. ಈಗ ಅವನ ವಯಸ್ಸು ಎಂಬತ್ತೆಂಟು. ಪ್ಯಾರಿಸ್ನ ಪೌರತ್ವ ಪಡೆದು ಇಲ್ಲಿಯೇ ನೆಲೆಸಿದ್ದಾನೆ. ತನ್ನನ್ನು ಫ್ರೆಂಚ್ ಲೇಖಕನೆಂದು ಕರೆದುಕೊಳ್ಳುವುದು ಅವನಿಗಿಷ್ಟ. ತನ್ನ ದೇಶದ ಕಮ್ಯುನಿಸಂನ ಟೀಕಾಕಾರನಾಗಿರುವ ಈತನ ಕೃತಿಗಳನ್ನು ಜೆಕ್ ರಾಜ್ಯ ನಿಷೇಧಿಸಿದೆ. ಮಿಲನ್ ಕುಂದೇರಾ ಒಬ್ಬ ಅಂತರರಾಷ್ಟ್ರೀಯ ಗೂಢಚಾರನೆಂದು ಹಲವು ವಿಮರ್ಶಕವರೇಣ್ಯರು ಆರೋಪಿಸಿದ್ದಾರೆ. ಈಗ ಪ್ಯಾರಿಸ್ಸಿನ ಹಲವು ಲಿಟರರಿ ಕ್ಲಬ್ಗಳ ಚರ್ಚಾಪಟ್ಟಿಯಲ್ಲಿ ಈತನ ಕಾದಂಬರಿಗಳ ಹೆಸರು ಮೊದಲ ಸಾಲಿನಲ್ಲಿದೆ. ಮಾರ್ಕ್ಸ್ವಾದದ ಪ್ರಖರ ಚಿಂತಕ ಜೀನ್ಪಾಲ್ ಸಾರ್ತ್ರೆ ಮತ್ತು ಮಾರ್ಕ್ಸ್ವಾದದ ಕಟು ವಿಮರ್ಶಕ ಮಿಲನ್ ಕುಂದೇರಾನನ್ನು ಪ್ಯಾರಿಸ್ ಸಮಾನವಾಗಿ ಪ್ರೀತಿಸಿದೆ.

ಜಗತ್ತಿನ ಹಲವು ಆಧುನಿಕ ಲೇಖಕರು ಫ್ರೆಂಚ್ ಸಾಹಿತಿಗಳಂತೆ ಆಲೋಚಿಸಲು, ಬರೆಯಲು ಹಂಬಲಿಸಿದರು. ತನ್ನ ತುರ್ಕಿ ದೇಶದ ಲೇಖಕರನ್ನು ನೆನಪಿಸಿಕೊಳ್ಳುವ ಓರಾನ್ ಪಾಮುಕ್ ಅಲ್ಲಿನ ಲೇಖಕರು ಹೇಗೆ ಫ್ರೆಂಚ್ ಬರಹಗಾರರಿಂದ ನೈಜತೆಗೆ ಹತ್ತಿರವಾದ, ಖಚಿತ ನುಡಿಗಟ್ಟುಗಳುಳ್ಳ, ತೀವ್ರ ಹುಡುಕಾಟದ ಪ್ರಯತ್ನಗಳನ್ನು ಮಾಡಿದರು ಎಂಬುದನ್ನು ವಿವರಿಸಿದ್ದಾನೆ. ಕನ್ನಡದ ಹೊಸ ತಲೆಮಾರಿನ ಕವಿ ವಿ.ಎಂ. ಮಂಜುನಾಥನ ಕಾವ್ಯ ನನಗೆ ನೆನಪಾಯಿತು.

ಕಾರ್ಲೋಸ್ ಫಿಯಾಂಟಿಸ್ ಮೆಕ್ಸಿಕನ್ ಕಾದಂಬರಿಕಾರ. 1970ರ ದಶಕದಲ್ಲಿ ಈತ ಮೆಕ್ಸಿಕೊದ ರಾಯಭಾರಿಯಾಗಿ ಪ್ಯಾರಿಸ್ಸಿನಲ್ಲಿದ್ದ. ಫ್ರೆಂಚ್ ಸರ್ಕಾರ ಈತನಿಗೆ ‘ದಿ ಲಿಜನ್ ಆಫ್ ಆನರ್’ ಗೌರವವನ್ನೂ ನೀಡಿತು. ಪ್ಯಾರಿಸ್ ಮಣ್ಣಿನಲ್ಲಿರುವ ಸೃಜನಶೀಲ ಪ್ರೇರಣೆಗಳನ್ನು ಈತ ಅಪಾರ ಗೌರವದಿಂದ ಸ್ಮರಿಸಿಕೊಂಡಿದ್ದಾನೆ. ಈತನ ನೆನಪಿನ ರಸ್ತೆ ಪ್ಯಾರಿಸ್ಸಿನ ದಕ್ಷಿಣಕ್ಕೆ ನಿಮ್ಮನ್ನು ಎದುರುಗೊಳ್ಳುತ್ತದೆ. ಈತನ ಇಡೀ ಕುಟುಂಬದ ಸಮಾಧಿಗಳು ಪ್ಯಾರಿಸ್ನ ಸಿಮೆಟ್ರಿಯಲ್ಲಿವೆ.

ನನ್ನನ್ನು ಅಚ್ಚರಿಗೊಳಿಸಿದ್ದು ಇಲ್ಲಿನ ಸಿಮೆಟ್ರಿಗಳು. ಅಂದರೆ ಸಮಾಧಿ ಸ್ಥಳಗಳು. ಐದು ಪ್ರಸಿದ್ಧ ಸಿಮೆಟ್ರಿಗಳಿದ್ದು ಸಾಹಿತ್ಯಾಸಕ್ತರ ಭೇಟಿಯಿಂದಾಗಿ ಸದಾ ಗಿಜಿಗುಡುತ್ತವೆ. ಪ್ರವೇಶದ್ವಾರದಲ್ಲೆ ನಿಮ್ಮ ಕೈಗೆ ನಕಾಶೆಯೊಂದು ಸಿಕ್ಕು ಯಾರ್ಯಾರ ಸಮಾಧಿಗಳು ಎಲ್ಲಿವೆ ಎಂಬ ಮಾಹಿತಿ ದಕ್ಕುತ್ತದೆ. ಸ್ಯಾಮುವೆಲ್ ಬೆಕೆಟ್ ಸಮಾಧಿಯೆದುರು ಅವನ ನಾಟಕದ ಏಕವ್ಯಕ್ತಿ ಪ್ರದರ್ಶನ ನಡೆದಿತ್ತು. ಸಿಮೋನ್ದ ಬೊವಾ ಸಮಾಧಿಯೆದುರು ಯಾವುದೊ ವಿಶ್ವವಿದ್ಯಾಲಯದಿಂದ ಬಂದ ವಿದ್ಯಾರ್ಥಿನಿಯರಿಗೆ ಪುಟ್ಟದೊಂದು ಉಪನ್ಯಾಸ ಏರ್ಪಟ್ಟಿತ್ತು. ಸಮಾಧಿಗಳನ್ನೂ ವಿಚಾರ ಕೇಂದ್ರಗಳನ್ನಾಗಿ ಪ್ಯಾರಿಸ್ ನಿರ್ಮಿಸಿದೆ. ಅಸಂಖ್ಯಾತ ಅಭಿಮಾನಿಗಳಿಂದ ತುಂಬಿ ಹೋಗಿದ್ದ ಬೊದಿಲೇರ್ನ ಸಮಾಧಿ ಸ್ಥಳದಲ್ಲಿ ಮೊದಲು ಹೀಗೆ ಬರೆದಿತ್ತಂತೆ: ‘ಭೂಮಿಯ ಶಾಪಗ್ರಸ್ತ ಮನುಷ್ಯ ನಾನು, ಚಂದ್ರನ ಶಾಪಕ್ಕೆ ಒಳಗಾದ ಸಮಾಧಿ ನಾನು’.

ಪ್ಯಾರಿಸ್ಗೆ ಬರುವ ಸಾಹಿತ್ಯಾಸಕ್ತರೆಲ್ಲ ತಪ್ಪದೆ ಭೇಟಿ ಕೊಡುವ ಸ್ಥಳವೆಂದರೆ ಶೇಕ್ಸ್ಪಿಯರ್ ಅಂಡ್ ಕಂಪನಿ. ಇದನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದವಳು ಸಿಲ್ವಿಯಾ ಬೆಕ್. ಅವಳ ನೆನಪು ಕೂಡ ಪ್ಯಾರಿಸ್ ಸಾಹಿತ್ಯ ಪರಿಸರದಲ್ಲಿ ಮಲ್ಲಿಗೆಯ ಬಳ್ಳಿಯಂತೆ ಹಬ್ಬಿದೆ. ಪುಸ್ತಕದಂಗಡಿ ಮತ್ತು ಗ್ರಂಥಾಲಯ ಹಾಗೂ ಕೆಫೆ ಎಲ್ಲ ಒಟ್ಟಿಗೆ ಇರುವ ಸ್ಥಳವಿದು. ದಕ್ಷಿಣ ಸಮುದ್ರ ಸಿಯಾನ್ನ ಲೆಫ್ಟ್ಬ್ಯಾಂಕ್ ಪಕ್ಕದಲ್ಲಿ ಈ ಪುಸ್ತಕದಂಗಡಿ ಇದೆ. ಶುರುವಾದದ್ದು 1919ರಲ್ಲಿ. ಇದು ಇರುವ ರಸ್ತೆ 37 ರಿಯೊ ಡಿ ಲಾ ಬುಚೆರೊ. ಅದರೆದುರು ಹರಿಯುವ ಹೊಳೆಯಗುಂಟ ನೂರಾರು ಹಳೆಯ ಪುಸ್ತಕದಂಗಡಿಗಳಿವೆ.

ಪ್ಯಾರಿಸ್ನ ಸಾಹಿತ್ಯದ ಕೇಂದ್ರದಂತೆ ಇದ್ದ ಇದು ಈಗ ಪ್ರವಾಸಿಗರ ಕೇಂದ್ರವಾಗಿದೆ. ಈ ಹಿಂದೆ ಹಲವು ಲೇಖಕರ ಇಷ್ಟದ ತಾಣವಾಗಿತ್ತು. ಬರ್ಟೊಲ್ಟ್ ಬ್ರೆಕ್ಟ್ಗೂ ಇದು ಪ್ರಿಯವಾದ ಸ್ಥಳ. 1922ರಲ್ಲಿ ಹೆಮಿಂಗ್ವೆ ಎಜ್ರಾಪೌಂಡ್ನನ್ನು ಭೇಟಿಯಾದದ್ದು ಇದೇ ಪುಸ್ತಕದಂಗಡಿಯಲ್ಲಿ. ನಂತರ ಇಬ್ಬರೂ ಒಂದೇ ರಸ್ತೆಯಲ್ಲಿ ಮನೆ ಹಿಡಿದು ವಾಸಿಸತೊಡಗಿದರು. ಎಜ್ರಾಪೌಂಡ್ನು ಹೆಮಿಂಗ್ವೆಯನ್ನು ಜೇಮ್ಸ್ಜಾಯ್ಸ್ಗೆ ಪರಿಚಯಿಸಿದ್ದು ಇಲ್ಲಿಯೆ. ಇಲ್ಲಿನ ಸಾಹಿತ್ಯದ ಚರ್ಚೆಗಳ ಪ್ರಭಾವವನ್ನು ಹೆಮಿಂಗ್ವೆ ತನ್ನ ಬರಹಗಳಲ್ಲಿ ಸ್ಮರಿಸಿಕೊಂಡಿದ್ದಾನೆ.

ಮುಂದೆ ಎಜ್ರಾಪೌಂಡ್ನ ಬರಹದ ಸಂಪುಟಗಳು ಬಂದಾಗ ಅದಕ್ಕೆ ಹಗಲು, ರಾತ್ರಿ ಇದೇ ಅಂಗಡಿಯಲ್ಲಿ ಹೆಮಿಂಗ್ವೆ ದುಡಿದನು. ಇಲ್ಲಿಯೇ ತನ್ನ ಇನ್ನೊಬ್ಬ ಪ್ರೀತಿಯ ಗೆಳೆಯ ಸ್ಕಾಟ್ಫಿಟ್ ಜೆರಾಲ್ಡ್ನನ್ನು ಹೆಮಿಂಗ್ವೆ ಭೇಟಿಯಾದ. ಹೆನ್ರಿಮಿಲ್ಲರ್ ಇದನ್ನು ಎ ವಂಡರ್ಲ್ಯಾಂಡ್ ಆಫ್ ಬುಕ್ಸ್ ಅಂತ ಕರೆದಿದ್ದಾನೆ. ಅಲೆನ್ ಗಿನ್ಸ್ಬರ್ಗ್ನ ವಿಶೇಷ ಉಪನ್ಯಾಸಗಳು ತಿಂಗಳುಗಟ್ಟಲೆ ಏರ್ಪಟ್ಟಿದ್ದು ಇಲ್ಲಿಯೆ. ಹಲವರ ಸ್ಮೃತಿಗಳಲ್ಲಿ ಈ ಪುಸ್ತಕದಂಗಡಿ ಹಿತವಾದ ನೆನಪುಗಳೊಂದಿಗೆ ನೆಲೆಯೂರಿದೆ.

ನಾವು ಅಲ್ಲಿನ ಲೇಖಕ ಫಿಲಿಪ್ ಹೋರೆಯ ಓದಿನ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಈತ ಸೃಜನಶೀಲ ಬರವಣಿಗೆಯ ಕ್ರಮಗಳನ್ನು ಕಲಿಸುವ ಅಧ್ಯಾಪಕ. ನನಗೆ ಸತ್ಯವೆನಿಸುವ, ನಿಜವೆನ್ನಿಸುವ ಮೊದಲ ಸಾಲು ಹೊಳೆದರೆ ಸಾಕು ಮುಂದಿನ ಸಾಲುಗಳು ತಾನಾಗಿಯೇ ಮೂಡುತ್ತವೆ. ನನ್ನ ಆರಂಭದ ಸಾಲನ್ನು ಸೃಷ್ಟಿಸಿದ ಮನಸ್ಥಿತಿ ಒಟ್ಟು ಕೃತಿಯ ಧ್ವನಿಪೂರ್ಣತೆಗೆ ಕಾರಣವಾಗುತ್ತದೆ. ಒಂದು ವೇಳೆ ಬೆಪ್ಪುತನ, ಹುಸಿತನದಲ್ಲಿ ಮೊದಲ ಸಾಲು ಸೃಷ್ಟಿಯಾದರೆ ಅದು ಒಟ್ಟು ಕೃತಿಯ ಜೀವಂತಿಕೆಯನ್ನು ನಾಶಮಾಡುತ್ತದೆ ಎಂದ. ಚಪ್ಪಾಳೆಯ ಗದ್ದಲವಿಲ್ಲದೆ ಸಾಹಿತ್ಯಾಸಕ್ತರು ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು. ಧ್ವನಿಪೂರ್ಣವಾಗಿ ಕವಿತೆಗಳನ್ನು ಓದಿದ. ಅವನ ನಾಟಕೀಯ ಓದು ಪ್ಯಾರಿಸ್ಸಿನ ಬೆಳಕನ್ನು ಮೀರಿ ಮುನ್ನುಗ್ಗುತ್ತಿರುವಂತೆ ಕಾಣುತಿತ್ತು. ಅಲ್ಲಿನ ಪುಸ್ತಕದಂಗಡಿಗಳು ಬರೀ ಮಾರಾಟದ ಕೇಂದ್ರಗಳಲ್ಲ, ಸಾಹಿತ್ಯದ ಅಡ್ಡೆಗಳು ಕೂಡ. ಹಲವು ಪುಸ್ತಕದಂಗಡಿಗಳ ಮುಂದೆ ತಿಂಗಳಪೂರಾ ನಡೆಯುವ ಕಾರ್ಯಕ್ರಮಗಳ ಪಟ್ಟಿ ಕೊಡಲಾಗಿತ್ತು. ಕಾವ್ಯದ ಓದು, ಕಾದಂಬರಿಯ ಓದು, ನಾಟಕದ ಓದು, ವಿಶೇಷ ಉಪನ್ಯಾಸ, ಸಂವಾದ ಹೀಗೆ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಬರುವಂತೆ ಈ ಅಂಗಡಿಗಳು ವ್ಯವಸ್ಥೆ ಮಾಡಿಕೊಂಡಿದ್ದವು.

ಪ್ಯಾರಿಸ್ನಲ್ಲಿರುವ ಸ್ಮಾರಕವೊಂದರ ನೋಟ

ಆದರೆ, ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಮಾತನಾಡಿಸುವುದು ಬಲುಕಷ್ಟ. ಎಲ್ಲ ದೇಶಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರದೂ ಇದೇ ಕಥೆ ಎಂಬುದು ಹಲವರ ಅನಿಸಿಕೆ. ಪ್ಯಾರಿಸ್ನಲ್ಲಿ ಅವರನ್ನು ಮಾತನಾಡಿಸಲು ಮುಂಚಿತವಾಗಿ ಒಪ್ಪಿಗೆ ಪಡೆದಿರಬೇಕು. ನಮ್ಮ ಅಧ್ಯಯನ ಕ್ಷೇತ್ರಗಳ ವಿವರ ಕೊಡಬೇಕು. ನಾವೇನು ಚರ್ಚಿಸಬಯಸಿದ್ದೇವೆಂಬುದರ ಪುಟ್ಟ ಬರಹ ಒಪ್ಪಿಸಬೇಕು. ಇದೆಲ್ಲ ಚರ್ಚೆಗಳಿಂದ ನಮ್ಮ ಅಧ್ಯಯನ ಕ್ಷೇತ್ರಗಳಿಗಾಗುವ ಉಪಯೋಗವನ್ನು ನಿವೇದಿಸಬೇಕು. ಇಷ್ಟಾದ ಮೇಲೆ ಒಪ್ಪಿಗೆ ಸಿಕ್ಕರೆ ನಮ್ಮ ಪುಣ್ಯ. ಇಂಥದ್ದೆಲ್ಲ ಶಿಸ್ತು ಅನಿವಾರ್ಯವೂ ಆಗಿರಬಹುದು. ಪ್ಯಾರಿಸ್ನಲ್ಲಿ ಇನಾಲ್ಕೊ ಎಂಬ ಹಲವು ಭಾಷೆಗಳ ಅಧ್ಯಯನ ಸಂಸ್ಥೆಯಿದೆ. ಸರಿಸುಮಾರು ನೂರು ಭಾಷೆಗಳ ವಿಭಾಗಗಳಿವೆ. ಎಲ್ಲ ಭಾಷೆಗಳ ಕೃತಿಗಳನ್ನೊಳಗೊಂಡ ಬೃಹತ್ ಗ್ರಂಥಾಲಯವಿದೆ. ಇದು ಜಗತ್ತಿನ ಅತ್ಯಂತ ಸುಂದರ ಗ್ರಂಥಾಲಯಗಳಲ್ಲಿ ಒಂದಂತೆ.

ಇಲ್ಲಿ ಐದುನೂರಕ್ಕೂ ಹೆಚ್ಚು ವಿಷಯ ತಜ್ಞರಿದ್ದಾರೆ. ಭಾರತದಿಂದ ಹಿಂದಿ, ತಮಿಳು, ಉರ್ದು, ಮರಾಠಿ, ಪಂಜಾಬಿ ವಿಭಾಗಗಳಿದ್ದವು. ಕನ್ನಡ ವಿಭಾಗ ಇಲ್ಲದಿರುವುದು ಬೇಸರ ತರಿಸಿತು. ಅಲ್ಲಿನ ಹಿಂದಿ ವಿಭಾಗದಲ್ಲಿ ಭಾರತದ ಪ್ರೊ.ಘನಶ್ಯಾಮ್ ಶರ್ಮಾ, ಸ್ವಾತಿ ಜೋಶಿ ಮತ್ತಿಬ್ಬರು ಫ್ರೆಂಚ್ನವರಿದ್ದರು. ನೇಪಾಳಿ ಭಾಷೆಯ ಪ್ರಾಧ್ಯಾಪಕ ಪ್ರೊ.ರಾಮ್ಪಾಂಡೆ ಮೂವತ್ತು ವರ್ಷಗಳಿಂದ ಅಲ್ಲಿಯೇ ಇದ್ದಾರೆ. ಹಿಂದಿ-ಫ್ರೆಂಚ್, ನೇಪಾಳಿ-ಫ್ರೆಂಚ್ ನಿಘಂಟುಗಳ ಪರಿಷ್ಕರಣೆ, ವ್ಯಾಕರಣ ಕೃತಿಗಳು, ಭಾಷಾಶಾಸ್ತ್ರದ ಕೃತಿಗಳಲ್ಲಿ ತುಂಬು ಲವಲವಿಕೆಯಿಂದ ತೊಡಗಿಸಿಕೊಂಡಿದ್ದರು. ನಾವು ಕಾವ್ಯ, ನಾಟಕ, ಕಾದಂಬರಿ ಎಂದಾಗ ಅವರ ತುಟಿಗಳು ಬಿಗಿಗೊಂಡು ಹುಬ್ಬುಗಳು ಗಂಟಿಕ್ಕಿದವು. ಅದನ್ನು ಸಡಿಲಿಸಲೆಂದೆ ನಾವು ಊರಿನಿಂದ ಒಯ್ದಿದ್ದ ತಿಂಡಿ ತಿನಿಸುಗಳನ್ನು ಕೊಟ್ಟೆವು. ಅವರು ಮಕ್ಕಳಂತೆ ಮುಗಿಬಿದ್ದು ತಿನ್ನುವುದನ್ನು ನೋಡಿ ನಿಜಕ್ಕೂ ಸಂತೋಷವಾಯಿತು. ನಮ್ಮ ಭಾರವೂ ಕಡಿಮೆಯಾಯಿತು.

ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ನಿಂತಿದ್ದ ತರುಣ, ತರುಣಿಯರು ಸಹಿ ಸಂಗ್ರಹದಲ್ಲಿ ತೊಡಗಿದ್ದರು. ಅವರೆಲ್ಲ ಮಾನವ ಹಕ್ಕುಗಳ ಹೋರಾಟಗಾರರು. ಜಗತ್ತಿನೆಲ್ಲೆಡೆ ಬಂಧನಕ್ಕೆ, ಹಿಂಸೆಗೆ ಒಳಗಾದ ಬರಹಗಾರರು, ಹೋರಾಟಗಾರರನ್ನು ರಕ್ಷಿಸುವುದು ಇವರ ಉದ್ದೇಶವಾಗಿತ್ತು. ಈ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ದೇಶಗಳ ಮೇಲೆ ಒಂದು ಅಂತರರಾಷ್ಟ್ರೀಯ ಒತ್ತಡ ಹೇರುವ ಕೆಲಸ ಮಾಡುತ್ತಿತ್ತು. ಕತ್ತಲೆಯನ್ನು ದೂಷಿಸುವುದಕ್ಕಿಂತ ಬೆಳಕಿನ ದೀಪವೊಂದನ್ನು ಹಚ್ಚು ಎಂಬುದು ಇದರ ಧ್ಯೇಯವಾಕ್ಯ.

ಎಲ್ಲಿ ಮರಣದಂಡನೆಯ ಶಿಕ್ಷೆ ಕೊನೆಗೊಳ್ಳುವುದೊ, ಎಲ್ಲಿ ಹಿಂಸೆಯ ಕೋಣೆಗಳು ಬಾಗಿಲು ಹಾಕಿಕೊಳ್ಳುವುವೊ, ಎಲ್ಲಿ ಬಂದೂಕಿನ ಸದ್ದು ಅಡುಗುತ್ತದೊ ಅಲ್ಲಿ ನಮ್ಮ ಪಯಣ ಕೊನೆಗೊಳ್ಳುತ್ತದೆ. ಇಂಥ ಫಲಕ ಹಿಡಿದುಕೊಂಡು ಸುಂದರ ತರುಣಿಯೊಬ್ಬಳು ನಿಂತಿದ್ದಳು. ಆ ಸಾಲುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.ಅದನ್ನು ಸುಂದರ ತರುಣಿಯೊಬ್ಬಳು ಹಿಡಿದಿದ್ದರಿಂದ ನೆನಪಾಗುತ್ತಿದೆಯೊ ಅಥವಾ ಅಂಥ ಸಾಲುಗಳ ಫಲಕ ಹಿಡಿದಿದ್ದರಿಂದ ಆಕೆ ಇನ್ನೂ ಸುಂದರವಾಗಿ ಕಾಣತೊಡಗಿದಳೊ ಗೊತ್ತಿಲ್ಲ. ಮೆಟ್ರೊದಲ್ಲಿ ಕೂತು ವಾಪಸ್ ಪ್ಯಾರಿಸ್ಸಿನ ನನ್ನ ಕೋಣೆಗೆ ಬರುವಾಗ ಇಡೀ ಮೆಟ್ರೊ ಇವೇ ಸಾಲುಗಳನ್ನು ಉಲಿಯುತ್ತಿರುವಂತೆ ಭಾಸವಾಗುತಿತ್ತು. ಪ್ಯಾರಿಸ್ಸನ್ನು ಸಿಟಿ ಆಫ್ ಲೈಟ್ ಅಂತ ಕರೆಯುತ್ತಾರೆ. ನಿಜಕ್ಕೂ ಪ್ಯಾರಿಸ್ ಸಾಹಿತ್ಯದ ಬೆಳಕಿನ ನಗರ. ಮೊನಾಲಿಸಾಳ ನೈಜ ಪೇಂಟಿಂಗ್ ಪ್ಯಾರಿಸ್ಸಿನಲ್ಲಿದೆ. ಅವಳ ನಗುವಿನಂತೆ ಈ ಸಾಹಿತ್ಯ ನಗರಿ ಪ್ಯಾರಿಸ್ ಸುಂದರವಾದದ್ದು ಮತ್ತು ಅಷ್ಟೇ ನಿಗೂಢವಾದದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.