ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜಲಿ ಕೊಲೆಗೆ ಪೊಲೀಸರೇ ಪರೋಕ್ಷ ಕಾರಣ: ಬೊಮ್ಮಾಯಿ ಆರೋಪ

Published 16 ಮೇ 2024, 16:15 IST
Last Updated 16 ಮೇ 2024, 16:15 IST
ಅಕ್ಷರ ಗಾತ್ರ

ಗದಗ: ‘ಅಂಜಲಿ ಕೊಲೆ ಬೆದರಿಕೆ ಸಂಬಂಧ ಕುಟುಂಬದವರು ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ’ ಎಂದು  ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಒಂದು ಕಡೆ ಸಾವಿರ ವಿದ್ಯಾರ್ಥಿಗಳ ಮಧ್ಯೆ ನೇಹಾ ಕೊಲೆ ಆಗುತ್ತಾಳೆ. ಮತ್ತೊಂದು ಕಡೆ ಅಂಜಲಿ ಮನೆ ಹೊಕ್ಕು ಕೊಲೆ ಮಾಡುತ್ತಾರೆ. ಅಂದರೆ, ಇದು ಗೂಂಡಾ ರಾಜ್ಯ ಅಲ್ಲದೆ ಇನ್ನೇನು? ಇಷ್ಟೆಲ್ಲಾ ಆದರೂ ಸಿಎಂ ಹಾಗೂ ಗೃಹ ಸಚಿವರು ಏನೂ ಆಗಿಯೇ ಇಲ್ಲ ಅನ್ನುವ ರೀತಿಯಲ್ಲಿದ್ದಾರೆ. ಇದರ ಬಗ್ಗೆ ಸಣ್ಣ ಪರಿಶೀಲನೆ ಸಹ ಮಾಡುತ್ತಿಲ್ಲ’ ಎಂದು ಅವರು ಹರಿಹಾಯ್ದರು.

‘ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾ ತರನಾಗಿ‌ ಕೊಲೆ ಮಾಡುವುದಾಗಿ ಆರೋಪಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರು ಸಹ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಈ ಕೊಲೆ ತಪ್ಪಿಸಬಹುದಿತ್ತು. ಕೊಲೆಯನ್ನು ತಡೆಯದೇ ಕೊಲೆಗೆ ಪರೋಕ್ಷವಾಗಿ ಪೊಲೀಸರೇ ಕಾರಣರಾಗಿದ್ದಾರೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಕೆ ಮಾಡಲಾಗುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ಹಾಕಲು ಪೊಲೀಸರು ನಿರತರಾಗಿದ್ದಾರೆ. ಅಧಿಕಾರಿಗಳು ಹಾಗೂ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಇಡೀ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣ ಕಾಂಗ್ರೆಸ್ ಸರ್ಕಾರವೇ ಕಾರಣ’ ಎಂದು ಗಂಭೀರ ಆರೋಪ ಮಾಡಿದರು‌.

‘ರಾಜ್ಯದಲ್ಲಿ ಗೂಂಡಾಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನರ, ಹೆಣ್ಣುಮಕ್ಕಳ ಪ್ರಾಣಕ್ಕೆ ಸುರಕ್ಷತೆ ಇಲ್ಲ. ನೇಹಾ ಪ್ರಕರಣದಲ್ಲಿ ನಾವು ರಾಜಕೀಯ ಮಾಡಿಲ್ಲ. ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ‌ ಕೊಲೆಯಾದರೆ, ಸುಮ್ಮನೆ ಕುಳಿತುಕೊಳ್ಳಬೇಕಾ? ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂರುತ್ತಿದ್ದರಾ? ಅಂಜಲಿ ಮನೆಗೆ ಹೊಕ್ಕು ಕೊಲೆ ಮಾಡುತ್ತಾರೆ ಅಂದರೆ ಪರಸ್ಥಿತಿ ಎಲ್ಲಿಗೆ ಬಂತು? ಎಲ್ಲಿದೆ ಕಾನೂನು? ಎಲ್ಲಿದೆ ಪೊಲೀಸರ ಭಯ’ ಎಂದು ಪ್ರಶ್ನಿಸಿದರು.

‘ನೇಹಾ ಕೊಲೆ ಆದಾಗ ಬರಲಿಲ್ಲ, ತನಿಖೆ ಚುರುಕುಗೊಳಿಸಲಿಲ್ಲ. ಅಂಜಲಿ‌ ಕೊಲೆ ಆದಾಗಲೂ ಉದಾಸೀನ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ರೇಪ್ ಆದರೂ ತಿರುಗಿ ನೋಡಲಿಲ್ಲ? ಕಾಂಗ್ರೆಸ್ ಯಾರ ಪರವಾಗಿದೆ? ರಾಜ್ಯದಲ್ಲಿ ಏನು ನಡೆಯುತ್ತಿದೆ’ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT