ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮಹಿಳೆ ಜತೆ ಮಾತನಾಡಿದ್ದಕ್ಕೆ ಆಕ್ಷೇಪ: ನಾಲ್ವರಿಗೆ ಹೈಕೋರ್ಟ್‌ ಜಾಮೀನು

Published 6 ಮೇ 2024, 15:51 IST
Last Updated 6 ಮೇ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಂ ಮಹಿಳೆ ಜೊತೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದೂ ಧರ್ಮದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ್ದ ಮತ್ತು ಆ ವ್ಯಕ್ತಿಗೆ ಸೇರಿದ ಚಿನ್ನಾಭರಣ ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ನಿವಾಸಿಗಳಾದ ಯೂನುಸ್‌ ಅಹ್ಮದ್‌ (36), ನವೀದ್‌ (34), ಸಾದತ್‌ ಅಲಿಯಾಸ್‌ ಸಯ್ಯದ್‌ ಸಾದತ್‌ (27) ಮತ್ತು ಜಾಫರ್‌ ಸಿದ್ದಿಕ್‌ (32) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರೆ ಕ್ಷುಲ್ಲಕ ವಿಚಾರಕ್ಕೆ ಘಟನೆ ನಡೆದಿರುವುದು ತಿಳಿದು ಬರುತ್ತದೆ. ಅಂತೆಯೇ, ಅರ್ಜಿದಾರರರು ಕ್ರಿಮಿನಲ್‌ ಹಿನ್ನೆಲೆ ಹೊಂದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?: ‘ನಾನು 2024ರ ಏಪ್ರಿಲ್‌ 2ರಂದು ಮಧ್ಯಾಹ್ನ 2.30ರಲ್ಲಿ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜೈ ಕನ್ನಡ ನಿವಾಸ ಸಂಸ್ಥೆಯ ಆವರಣದಲ್ಲಿ ಮುಸ್ಲಿಂ ಮಹಿಳೆ ಜೊತೆ ಮಾತನಾಡುತ್ತಾ ಕುಳಿತಿದ್ದೆ. ಇದನ್ನು ಆಕ್ಷೇಪಿಸಿ ಅರ್ಜಿದಾರರೂ ಸೇರಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ 18ರಿಂದ 20 ಜನ ಬಲವಂತವಾಗಿ ಸಂಸ್ಥೆಯ ಆವರಣಕ್ಕೆ ನುಗ್ಗಿದ್ದರು. ನನ್ನನ್ನು ಹಿಡಿದು ನೆಲಕ್ಕೆ ಬೀಳಿಸಿ, ಇಟ್ಟಿಗೆ, ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದರು. ಎಳೆದುಕೊಂಡು ಹೋಗಿ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಬಟ್ಟೆ ಹರಿದು, ನನ್ನ ಕೊರಳಿನಲ್ಲಿದ್ದ 55 ಗ್ರಾಂ ಚಿನ್ನದ ಸರ, ಕೈಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್‌ ಮತ್ತು 20 ಗ್ರಾಂ ತೂಕದ ಎರಡು ಉಂಗುರ ಹಾಗೂ ಜೇಬಿನಲ್ಲಿದ್ದ 40 ಸಾವಿರ ನಗದು ದೋಚಿದ್ದಾರೆ’ ಎಂದು ಆರೋಪಿಸಿ ಬಿ.ಎಚ್‌. ಗೌಡ್ರು ಎಂಬವರು ಚಿತ್ರದುರ್ಗ ಗ್ರಾಮೀಣಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ದೂರನ್ನು ಆಧರಿಸಿ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಜಾಮೀನು ಕೋರಿದ್ದ ಅರ್ಜಿಯನ್ನು ಚಿತ್ರದುರ್ಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್‌ (ಕಿರಿಯ ಶ್ರೇಣಿಯ) ಮತ್ತು ಜೆಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT