ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains | ಕೊಡಗಿನಲ್ಲಿ ಧಾರಾಕಾರ ಮಳೆ, ರಾಜ್ಯದಲ್ಲಿ ಮತ್ತೆರಡು ದಿನ ಮಳೆ

ಮೈಸೂರು, ಚಾಮರಾಜನಗರ, ಬೀದರ್‌ನಲ್ಲಿ ತಂಪಾದ ಇಳೆ
Published 9 ಮೇ 2024, 0:30 IST
Last Updated 9 ಮೇ 2024, 0:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಭಾಗದ ಕೊಡಗಿನಲ್ಲಿ ಬುಧವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಚಾಮರಾಜನಗರದ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಹದ ಮಳೆಯಾಯಿತು. ಮೈಸೂರು ಜಿಲ್ಲಾ ಕೇಂದ್ರ, ನಂಜನಗೂಡು, ಎಚ್‌.ಡಿ ಕೋಟೆ, ತಲಕಾಡು ಹಾಗೂ ಬಿಳಿಕೆರೆಯಲ್ಲಿ ಜೋರು ಮಳೆಯಾಯಿತು.  

ಮಡಿಕೇರಿ ಸಮೀಪದ ಕೆದಕಲ್ ಮತ್ತು ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು. ಸುಂಟಿಕೊಪ್ಪ ವ್ಯಾಪ್ತಿಯ ಏಳನೇ ಮೈಲು, ಬೋಯಿಕೇರಿ, ಕಿಬ್ಬೆಟ್ಟ, ಗರಗಂದೂರು, ಮಳೂರು, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಹರದೂರಿನಲ್ಲಿ ಉತ್ತಮ ಮಳೆಯಾಗಿದೆ. ಕೊಟ್ಟಮುಡಿ ಗ್ರಾಮದಲ್ಲಿ ಯುವಕರು ಮಳೆಯಲ್ಲಿ ಸಂಭ್ರಮಿಸಿದರು.

ಮಡಿಕೇರಿ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಗುಡುಗು, ಸಿಡಿಲಿನ ಆರ್ಭಟ ಹೆಚ್ಚಿತ್ತು. ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಅರಣ್ಯ ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ. ಸುಂಟಿಕೊಪ್ಪದ ಜನತಾ ಕಾಲೊನಿಯ ಮೆಟ್ಟಿಲು ರಸ್ತೆ ಜಲಾವೃತಗೊಂಡಿತ್ತು.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ, ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಹದ ಮಳೆಯಾಗಿದೆ.ಬೀದರ್‌ನಲ್ಲಿ ಮಳೆ: ಬೀದರ್‌, ಹುಲಸೂರ, ಕಮಲನಗರ, ತಾಲ್ಲೂಕಿನಲ್ಲಿ ಬುಧವಾರ ಗುಡುಗು–ಬಿರುಗಾಳಿ ಸಹಿತ ಕೆಲ ಕಾಲ ಉತ್ತಮವಾಗಿ ಮಳೆಯಾಗಿದೆ.

ಬೀದರ್‌, ಹುಲಸೂರ, ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನಲ್ಲಿ ಅರ್ಧಗಂಟೆ ಸಾಧಾರಣ ಮಳೆಯಾಗಿದೆ.

ಬೆಂಗಳೂರಿನಲ್ಲಿ ಕೆಲವೆಡೆ ವರ್ಷಧಾರೆ

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಬುಧವಾರ ಸಂಜೆ ಬಿರುಸಿನ ಮಳೆಯಾಗಿದ್ದು, ರಾಜರಾಜೇಶ್ವರಿ ನಗರ ವಲಯದ ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ 6.6 ಸೆಂ.ಮೀನಷ್ಟು ಮಳೆಯಾದ ವರದಿಯಾಗಿದೆ.

ನಗರದಾದ್ಯಂತ ಮಧ್ಯಾಹ್ನದವರೆಗೂ ಬಿರುಬಿಸಿಲಿತ್ತು. ನಾಲ್ಕೂವರೆ ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತು. ಸಂಜೆ 5.30 ರಿಂದ ಮಳೆ ಆರಂಭವಾಯಿತು. ಎಂ.ಜಿ.ರಸ್ತೆ, ರಾಜ್‌ಮಹಲ್ ಗುಟ್ಟಹಳ್ಳಿ, ಉತ್ತರಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಬಾಣಸವಾಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.ರಾಜರಾಜೇಶ್ವರಿ ನಗರ, ನಾಯಂಡಹಳ್ಳಿಯಲ್ಲಿ ತಲಾ 5.1 ಸೆಂ.ಮೀ, ಮಾರುತಿ ಮಂದಿರ 4.2 ಸೆಂ.ಮೀ ಮಳೆಯಾಗಿದೆ. ವಿದ್ಯಾಪೀಠ, ಪುಲಕೇಶಿನಗರ, ವಿಶ್ವನಾಥ ನಾಗೇನಹಳ್ಳಿ ವ್ಯಾಪ್ತಿಯಲ್ಲಿ 3 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ.

ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಮುಂದುವರಿಕೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಇದೇ ವಾತಾವರಣ ಮುಂದುವರಿಯಲಿದೆ. ಹಗಲು ಬಿಸಿಲು, ಮೋಡದ ವಾತಾವರಣ ಇರಲಿದ್ದು, ಸಂಜೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 9ರಂದು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಎರಡು ದಿನಗಳ ನಂತರ ರಾಜ್ಯದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.

ಮಳೆ ಪ್ರಮಾಣ: ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿಯಲ್ಲಿ 4 ಸೆಂಟಿ ಮೀಟರ್‌ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ, ಕೊಡಗು ಜಿಲ್ಲೆಯ ಹಾರಂಗಿಯಲ್ಲಿ 3 ಸೆಂ.ಮೀ., ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹಾಸನ ಜಿಲ್ಲೆಯ ಬೇಲೂರು, ತುಮಕೂರು ಜಿಲ್ಲೆಯ ವೈ.ಎನ್. ಹೊಸಕೋಟೆಗಳಲ್ಲಿ 2 ಸೆಂ.ಮೀ. ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT