ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪೆನ್‍ಡ್ರೈವ್ ಪ್ರಮಾದ

Published 7 ಮೇ 2024, 23:59 IST
Last Updated 7 ಮೇ 2024, 23:59 IST
ಅಕ್ಷರ ಗಾತ್ರ

ಆಫೀಸಿನಿಂದ ಬಂದ ಶಂಕ್ರಿ ಅಪ್‍ಸೆಟ್ ಆಗಿದ್ದ. ‘ಯಾಕ್ರೀ, ಏನಾಯ್ತು?’ ಸುಮಿ ಕಾಫಿ ಕೊಟ್ಟು ಕೇಳಿದಳು.

‘ನಮ್ಮ ಬಾಸ್‍ದು ಪೆನ್‍ಡ್ರೈವ್ ಕಳೆದುಹೋಗಿದೆ. ಕಳ್ಳತನದ ಆರೋಪ ನನ್ನ ಮೇಲೆ ಬಂದಿದೆ’ ಅಂದ.

‘ನೀವು ಪೆನ್‍ಡ್ರೈವ್ ಕದ್ದಿದ್ದೀರಾ?’

‘ಆಫೀಸಿನಲ್ಲಿ ಆಗಾಗ ಪೆನ್ ಕದಿಯುತ್ತಿದ್ದೆ ಹೊರತು ಪೆನ್‍ಡ್ರೈವ್ ಕದಿಯುವ ಕೀಳುಮಟ್ಟಕ್ಕೆ ಇಳಿದಿಲ್ಲ’.

‘ಪೆನ್‍ಡ್ರೈವ್ ಕೇಸ್‍ನಲ್ಲಿ ಎಷ್ಟೋ ಜನ ಜೈಲಿಗೆ ಹೋಗಿದ್ದಾರೆ, ನೀವೂ ಜೈಲಿಗೆ ಹೋಗೋ ಪರಿಸ್ಥಿತಿ ಬಂದರೆ ಗತಿಯೇನ್ರೀ?!’ ಸುಮಿಗೆ ಆತಂಕ.

‘ಪೊಲೀಸರಿಗೆ ಕಂಪ್ಲೇಂಟ್ ಕೊಡಲ್ಲ ಅಂದ್ರು ಬಾಸ್’.

‘ಹಾಗಾದ್ರೆ ಪೆನ್‍ಡ್ರೈವ್‍ನಲ್ಲಿ ಮಾನಹಾನಿಕರವಾದ ಸೀಕ್ರೆಟ್ ಇರಬಹುದು. ಅದು ಮೀಡಿಯಾಗೆ ತಲುಪಿ ಮಾನಮರ್ಯಾದೆ ಹರಾಜಾಗುತ್ತೆ ಅಂತ ಬಾಸ್‍ಗೆ ಭಯ ಆಗಿರಬಹುದು...’

ಅಷ್ಟರಲ್ಲಿ ಬಾಸ್ ಫೋನ್ ಮಾಡಿದ್ರು. ‘ಪೆನ್‍ಡ್ರೈವ್ ಸಿಕ್ಕಿತು ಕಣಯ್ಯ ಶಂಕ್ರಿ, ನನ್ನ ಹೆಂಡತಿ ಎತ್ತಿಕೊಂಡಿದ್ದಳು’.

‘ನನ್ನ ಮೇಲೆ ಅನುಮಾನಪಟ್ಟಿರಲ್ಲಾ ಸಾರ್’.

‘ಸಾರಿ ಕಣಯ್ಯ, ಪೆನ್‍ಡ್ರೈವ್‍ನಲ್ಲಿ ಏನೋ ಸೀಕ್ರೆಟ್ ಇದೆ ಅಂದುಕೊಂಡು ಹೆಂಡ್ತಿ ತೆಗೆದುಕೊಂಡಿದ್ದಳು. ಚೆಕ್ ಮಾಡಿ, ಆಫೀಸ್ ಡಾಕ್ಯುಮೆಂಟ್ಸ್ ಬಿಟ್ಟರೆ ಬೇರೇನೂ ಇಲ್ಲ ಅಂತ ವಾಪಸ್ ಕೊಟ್ಟಳು’.

‘ನಿಮ್ಮ ಹೆಂಡ್ತಿಗೆ ನಿಮ್ಮ ಬಗ್ಗೆಯೂ ಅನುಮಾನವಿದೆಯಾ ಸಾರ್?’

‘ನೆತ್ತಿವರೆಗೆ ಪ್ರೀತಿ ತೋರಿಸಿದರೂ ಹೆಂಡ್ತಿಗೆ ಗಂಡನ ಮೇಲೆ ಅನುಮಾನ ಇದ್ದೇ ಇರುತ್ತೆ ಕಣಯ್ಯ’ ಎಂದು ಫೋನ್ ಕಟ್ ಮಾಡಿದರು.

‘ಬ್ಲ್ಯಾಕ್‌ಮೇಲ್, ಫೀಮೇಲ್ ವಿಚಾರಗಳಿಗೆ ಬಳಕೆಯಾಗಿ ಪೆನ್‍ಡ್ರೈವ್‍ಗಳ ಪಾವಿತ್ರ್ಯ ಹಾಳಾಗುತ್ತಿದೆ. ಪೆನ್‍ಡ್ರೈವ್‍ಗಳು ಮಾನಹಾನಿ ಉಂಟುಮಾಡುವ ಮಾರಕಾಸ್ತ್ರಗಳಾಗುತ್ತಿವೆ’ ಅಂದಳು ಸುಮಿ.

‘ಖಡ್ಗಕ್ಕಿಂತ ಪೆನ್ ಹರಿತ, ಪೆನ್‍ಗಿಂತ ಪೆನ್‍ಡ್ರೈವ್ ಹರಿತ... ಪೆನ್‍ಡ್ರೈವ್ ಅನ್ನು ಸದ್ಬಳಕೆ ಮಾಡಿಕೊಂಡರೆ ಪೂರಕ, ಕದ್ಬಳಕೆ ಮಾಡಿಕೊಂಡರೆ ಮಾರಕ...’ ಎಂದು ನಕ್ಕ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT