ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಜನರ ವಿಶ್ವಾಸ ಉಳಿಸಿಕೊಳ್ಳಲಿ

Published 9 ಮೇ 2024, 0:30 IST
Last Updated 9 ಮೇ 2024, 0:30 IST
ಅಕ್ಷರ ಗಾತ್ರ

ಜನರ ವಿಶ್ವಾಸ ಉಳಿಸಿಕೊಳ್ಳಲಿ

‘ಮತದ ಮೌಲ್ಯ ಹೆಚ್ಚಿಸಿದ ನಡೆ’ (ದಿನದ ಟ್ವೀಟ್‌, ಪ್ರ.ವಾ., ಮೇ 8) ಓದಿದ ಬಳಿಕ ನಮ್ಮ ಮಹಿಳಾ ಮತದಾರರ ಬದ್ಧತೆ ಬಗ್ಗೆ ಹೆಮ್ಮೆಯೆನಿಸಿತು. ಪತಿ ತೀರಿಕೊಂಡಿದ್ದಾರೆ. ಅಂತ್ಯಕ್ರಿಯೆ ನೆರವೇರಿಸಬೇಕಾಗಿದೆ. ಇಂತಹ ದುಃಖದ ಸಂದರ್ಭದಲ್ಲಿಯೂ ಕಲಾವತಿ ಅವರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಜಾಪ್ರಭುತ್ವದ ಉಳಿವು ಇಂತಹ ಮತದಾರರಿಂದಲೇ ಸಾಧ್ಯ. ಹೀಗೆಯೇ ಅನೇಕರು ಅನಾರೋಗ್ಯದ ನಡುವೆಯೂ ಬಹುದೂರದಿಂದ ಬಂದು ಮತದಾನ ಮಾಡಿದ್ದಾರೆ. ಚುನಾವಣೆಯಲ್ಲಿ ಆಯ್ಕೆಯಾಗುವವರು, ಇಂತಹ ಮತಗಳ ಮೌಲ್ಯ ಹೆಚ್ಚಿಸುವಂತಹ ಕೆಲಸ ಮಾಡಬೇಕು. ಜನರ ನಂಬಿಕೆಗೆ ಭಂಗ ಬರದಂತೆ ನಡೆದುಕೊಳ್ಳಬೇಕು. ಒಳ್ಳೆಯ ಆಡಳಿತ ನೀಡಲು ಸಹಕರಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಹೆಗಲು ಕೊಡಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು.

- ವೀಣಾ ಎಸ್.ಗೌಡರ, ಗದಗ

ಲಿಂಗಸೂಕ್ಷ್ಮತೆ ರೂಢಿಸಿಕೊಳ್ಳಬೇಕು 

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಕುರಿತ ಕೆಲವು ವರದಿಗಳಲ್ಲಿ ಅಶ್ಲೀಲ ಪೆನ್‌ಡ್ರೈವ್, ಅಶ್ಲೀಲ ವಿಡಿಯೊ ಪ್ರಕರಣ ಎಂಬಂಥ ಪದಗಳ ಬಳಕೆಯಾಗಿದೆ. ಇದರಲ್ಲಿ ಅಶ್ಲೀಲ ಯಾವುದು? ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೊಗಳಿವೆಯೋ ಅಥವಾ ಲೈಂಗಿಕ ಶೋಷಣೆಯ ವಿಡಿಯೊಗಳಿವೆಯೋ? ಅಶ್ಲೀಲ ಎಂದು ಯಾವ ಮಾನದಂಡದಿಂದ ಪರಿಗಣಿಸಲಾಗಿದೆ? ‘ಅಶ್ಲೀಲ’ ಎಂಬ ಪದ ಬಳಸಿ ಸಂತ್ರಸ್ತ ಹೆಣ್ಣು ಮಕ್ಕಳ ಆತ್ಮಗೌರವಕ್ಕೆ, ಘನತೆಗೆ ಧಕ್ಕೆ ತರಲಾಗಿದೆ. ಸಮಾಜದ ಬಲಿಪಶುವನ್ನು ಅವಮಾನಿಸುವ ಗಂಡು ಮನಃಸ್ಥಿತಿಯ ದ್ಯೋತಕ ಇದು. ಕೆಲವು ರಾಜಕಾರಣಿಗಳೂ ಅಶ್ಲೀಲ ಎಂಬ ಪದವನ್ನು ಬಳಸುತ್ತಿದ್ದಾರೆ. ಲಿಂಗಸೂಕ್ಷ್ಮತೆ ಇಲ್ಲದ ಇಂತಹ ನಡೆ ಸರಿಯಲ್ಲ. ಶೋಷಣೆಗೆ ಒಳಗಾದ ಹೆಣ್ಣೇ ತಲೆತಗ್ಗಿಸಿ ಬಾಳುವಂತಹ ಸ್ಥಿತಿ ಬದಲಾಗಬೇಕು. 

-ಸಬೀನಾ ಎ., ಮೈಸೂರು 

ಬರ ಪರಿಹಾರ ಕೆಲಸಕ್ಕೆ ವೇಗ ತುಂಬಿ

ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತಗಳಲ್ಲಿ ಪೂರ್ಣಗೊಂಡಿದೆ. ರಾಜಕಾರಣದ ಕೆಸರೆರಚಾಟದಲ್ಲೇ ಮುಳುಗಿದ್ದ ಜನಪ್ರತಿನಿಧಿಗಳು ಇನ್ನಾದರೂ ಜನರ ಬವಣೆ ನಿವಾರಣೆಯತ್ತ ದೃಷ್ಟಿ ಹಾಯಿಸಬೇಕು. ರಾಜ್ಯದಲ್ಲಿ ಬರ ತೀವ್ರವಾಗಿದೆ. ಸುಡುವ ಬಿಸಿಲು, ಅಸಹನೀಯ ಸೆಕೆ ಜನರನ್ನು ಹೈರಾಣಾಗಿಸಿದೆ. ವಾರದಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾದ ಕಾರಣ ವಾತಾವರಣ ತುಸು ತಂಪಾಗಿದೆ. ಕುಡಿಯುವ ನೀರಿನ ಕೊರತೆ ಎಲ್ಲೆಡೆಯೂ ತೀವ್ರ ಸ್ವರೂಪ ಪಡೆದಿದೆ. ಜಾನುವಾರುಗಳಿಗೆ ನೀರಿನ ಕೊರತೆ ಜೊತೆ ಮೇವಿನ ಅಲಭ್ಯತೆಯೂ ಸಂಕಟ ತಂದೊಡ್ಡಿದೆ.

ಆಡಳಿತಕ್ಕೆ ಚುರುಕು ಮುಟ್ಟಿಸಲು ಕೆಲಸ ತುರ್ತಾಗಿ ಆಗಬೇಕಿದೆ. ಇಲ್ಲಿಯವರೆಗೂ ಚುನಾವಣಾ ಕೆಲಸದಲ್ಲಿ ತೊಡಗಿದ್ದ ಅಧಿಕಾರಿಗಳು ಜನರ ಸಮಸ್ಯೆಗಳ ನಿವಾರಣೆಗೆ ಆಸ್ಥೆ ವಹಿಸಬೇಕು. ಶಾಸಕರು ಸ್ಥಳಕ್ಕೆ ಭೇಟಿ ಕೊಟ್ಟು ವಸ್ತುಸ್ಥಿತಿ ಅರಿಯಬೇಕು. ತೀವ್ರತೆಗೆ ತಕ್ಕಂತೆ ಸರ್ಕಾರದಿಂದ ಸ್ಪಂದನ ದೊರೆಯಬೇಕು. ಬರ ಪರಿಹಾರ ಕೆಲಸಗಳಿಗೆ ವೇಗ ತುಂಬಬೇಕು. 

-ಶಿವಪ್ರಸಾದ ಅರಳಿಕಟ್ಟೆ, ಕಲಬುರಗಿ

ಪಿತ್ರೋಡಾ ಮಾತು ಮತ್ತು ಕಾಂಗ್ರೆಸ್ಸಿನ ಪುಕ್ಕಲುತನ

ಭಾರತದ ಟೆಲಿಕಾಂ ಕ್ರಾಂತಿಯ ರೂವಾರಿ, ತಂತ್ರಜ್ಞಾನ ದಾರ್ಶನಿಕ ಮತ್ತು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ (ಸತ್ಯನಾರಾಯಣ ಗಂಗಾರಾಂ ಪಿತ್ರೋಡಾ) ಅವರು ಭಾರತದಲ್ಲಿ ಇರುವ ವೈವಿಧ್ಯತೆ ಕುರಿತು ಕೆಲವು ಮಾತುಗಳನ್ನು ಆಡಿದ್ದಾರಷ್ಟೆ. ದುರಂತವೆಂದರೆ, ಬಹುಮಟ್ಟಿಗೆ ಸತ್ಯವೂ ವಸ್ತುನಿಷ್ಠವೂ ಆಗಿರುವ ಈ ಮಾತುಗಳಿಗೆ ವಿವಾದದ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಜೊತೆಗೆ, ಕಾಂಗ್ರೆಸ್ ಪಕ್ಷವು ಈ ಹೇಳಿಕೆಯಿಂದ ತರಾತುರಿಯಲ್ಲಿ ಅಂತರ ಕಾಯ್ದುಕೊಂಡಿದೆ. ಇದು ನಿಜಕ್ಕೂ ಆ ಪಕ್ಷದ ಪುಕ್ಕಲುತನವಲ್ಲದೆ ಬೇರೇನಲ್ಲ! ಅದರಲ್ಲೂ ಟೆಲಿಕಾಂ ಕ್ರಾಂತಿಯ ದಿನಗಳಲ್ಲಿ ಪಿತ್ರೋಡಾ ಅವರ ನಂಬಿಕಸ್ಥ ಬಂಟನಾಗಿ ಅವರೊಂದಿಗೆ ದುಡಿದ ಜಯರಾಂ ರಮೇಶ್ ಅವರೇ ಇಂತಹ ನಿಲುವನ್ನು ‘ಎಕ್ಸ್’ ವೇದಿಕೆಯಲ್ಲಿ ಹಂಚಿಕೊಂಡಿರುವುದು ವ್ಯಂಗ್ಯವೇ ಸೈ! 

ಪಿತ್ರೋಡಾ ಅವರ ರಾಜಕೀಯ ನಿಲುವುಗಳೇನೇ ಇರಲಿ, ಅವರೊಬ್ಬ ನಿರ್ಭೀತ ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ವಾಸ್ತವವಾಗಿ ಡಿಜಿಟಲ್ ಇಂಡಿಯಾ ತರಹದ ಉಪಕ್ರಮಗಳೆಲ್ಲ ಮೂಲತಃ ಅವರ ಚಿಂತನೆಗಳೇ ಆಗಿವೆ. ಕೆಲದಿನಗಳ ಹಿಂದೆ ಅವರು ಉತ್ತರಾಧಿಕಾರ ತೆರಿಗೆ ಕುರಿತು ಆಡಿದ ಮಾತುಗಳೂ ವಾಸ್ತವ ನೆಲೆಗಟ್ಟಿನಲ್ಲೇ ಇದ್ದವು. ಹಂತಹಂತವಾಗಿ ಕ್ಯಾಪಿಟಲಿಸ್ಟ್ ದೇಶವಾಗುತ್ತಿರುವ ಭಾರತದಲ್ಲಿ, ಈ ತರಹದ ತೆರಿಗೆ ಇಂದಲ್ಲದಿದ್ದರೆ ನಾಳೆಯಾದರೂ ನಿಜವಾಗುತ್ತದೆ. ಹೀಗೆ ಧೈರ್ಯವಾಗಿ ಮಾತನಾಡುವವರು ನಿಜಕ್ಕೂ ನಮ್ಮ ಸಾರ್ವಜನಿಕ ವ್ಯವಸ್ಥೆಯಲ್ಲಿ ಇರಬೇಕು. ಇಂಥವರು ಆಡುವ ಮಾತುಗಳ ಬಗ್ಗೆ ರಾಜಕೀಯ, ವೋಟು ಇವುಗಳನ್ನೆಲ್ಲ ಮೀರಿದ ಚರ್ಚೆ ನಡೆಯಬೇಕು. ಆದರೆ, ಅವರು ಪ್ರತಿನಿಧಿಸುವ ಪಕ್ಷವೇ ಹೆದರುತ್ತಿರುವುದು ವಿಪರ್ಯಾಸ. ಹೀಗಾದರೆ, ನಮ್ಮದು ಬರೀ ಆಷಾಢಭೂತಿಗಳ ದೇಶವಾಗುತ್ತದಷ್ಟೆ. 

-ಬಿ.ಎಸ್. ಜಯಪ್ರಕಾಶ ನಾರಾಯಣ, ಬೆಂಗಳೂರು

ಹೊಣೆ ಅರಿತು ವರ್ತಿಸಬೇಕು

ಗ್ರಾಹಕ ಉತ್ಪನ್ನಗಳಿಗೆ ತಮ್ಮ ಅನುಮೋದನೆ ನೀಡುವಾಗ ಜನಪ್ರಿಯ ವ್ಯಕ್ತಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸರಿಯಾಗಿದೆ.  ವರ್ಚಸ್ಸುಳ್ಳ ವ್ಯಕ್ತಿಗಳು ಜಾಹೀರಾತಿನಲ್ಲಿ ಯಾವುದೇ ಉತ್ಪನ್ನವನ್ನು ಅನುಮೋದಿಸಿದರೆ ಅದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಮುಗ್ಧ ಗ್ರಾಹಕರು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ, ಜಾಹೀರಾತಿನ ಸೆಳೆತಕ್ಕೆ ಒಳಗಾಗಿ ಖರೀದಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನಪ್ರಿಯ ವ್ಯಕ್ತಿಗಳು ಈ ವಿಚಾರದಲ್ಲಿ ಹೆಚ್ಚಿನ ಹೊಣೆಗಾರಿಕೆಯಿಂದ ವರ್ತಿಸಬೇಕಾದುದು ಅಗತ್ಯ. ತಪ್ಪುದಾರಿಗೆ ಎಳೆಯುವ ಜಾಹೀರಾತುಗಳಿಗೆ ಕಡಿವಾಣ ಹಾಕುವ ಕೆಲಸ ತ್ವರಿತವಾಗಿ ಆಗಬೇಕು. ಇಲ್ಲವಾದಲ್ಲಿ ಅಮಾಯಕ ಗ್ರಾಹಕರು ವಂಚನೆಗೆ ಒಳಗಾಗುತ್ತಲೇ ಇರುತ್ತಾರೆ.

-ಅಂಬಿಕಾ ಕೆ.ಬಿ., ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT