ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಒತ್ತಡಕ್ಕೆ ಸಿಲುಕಿದರೇ ಪ್ರಧಾನಿ?

Published 9 ಮೇ 2024, 23:21 IST
Last Updated 9 ಮೇ 2024, 23:21 IST
ಅಕ್ಷರ ಗಾತ್ರ

ಅಪ್‌ಗ್ರೇಡೆಡ್‌ ಆ್ಯಪ್‌ ಬಿಡುಗಡೆಯಾಗಲಿ

ಅಂಚೆ ಇಲಾಖೆಯು ತನ್ನ ಗ್ರಾಹಕರು ತಮ್ಮ ಉಳಿತಾಯ ಖಾತೆಯ ವ್ಯವಹಾರಗಳನ್ನು ನಿಭಾಯಿಸಲು ಐಪಿಪಿಬಿ ಮೊಬೈಲ್‌ ಆ್ಯಪ್‌ ನೀಡಿತ್ತು. ನಾವು ಬಳಸುತ್ತಿದ್ದೆವು. ಈಗ ದಿಢೀರೆಂದು ಅದನ್ನು ಅಪ್‌ಗ್ರೇಡ್‌ ಮಾಡಿದೆ. ಅದು ನಮ್ಮ ಮೊಬೈಲುಗಳಲ್ಲಿ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ನಾವು ಹೊಸ ಮೊಬೈಲನ್ನು ಕೊಳ್ಳಬೇಕಂತೆ? ಇದೆಲ್ಲಿಯ ನ್ಯಾಯ? ದಯವಿಟ್ಟು ಇಲಾಖೆಯು ನಮ್ಮ ಈಗಿರುವ ಮೊಬೈಲುಗಳಲ್ಲೇ ಕೆಲಸ ಮಾಡುವಂತಹ ಅಪ್‌ಗ್ರೇಡೆಡ್‌ ಆ್ಯಪನ್ನು ಸಿದ್ಧಪಡಿಸಿಕೊಡಬೇಕೆಂದು ಗ್ರಾಹಕರೆಲ್ಲರ ಪರವಾಗಿ ಕೋರುತ್ತೇನೆ.

-ಬಿ.ಆರ್. ಲಕ್ಷ್ಮಣರಾವ್, ಬೆಂಗಳೂರು

****

ಬೌದ್ಧಿಕ ದಿವಾಳಿತನ, ಪುಕ್ಕಲುತನದ ಪ್ರದರ್ಶನ

ಭಾರತದ ವೈವಿಧ್ಯತೆ ಕುರಿತು ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಗೆ ಸಂಬಂಧಿಸಿದ ವಿಷಯದಲ್ಲಿನ ಕಾಂಗ್ರೆಸ್‌ ನಡೆಯು ಅದರ ಬೌದ್ಧಿಕ ದಿವಾಳಿತನವನ್ನು ಸೂಚಿಸುತ್ತದೆ. ಆದರೆ, ವಿವಾದ ಹುಟ್ಟಿದ ಕೂಡಲೇ ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಿತ್ರೋಡಾ ಅವರ ಪುಕ್ಕಲುತನ ಅಸಹನೀಯ ಎನಿಸುತ್ತದೆ. ರಾಜಕಾರಣಿಗಳನ್ನು ಎದುರಿಸುವ ಧೈರ್ಯ ಮತ್ತು ತಮ್ಮ ವಿಚಾರಗಳ ಬಗ್ಗೆ ದೃಢವಾದ ನಿಷ್ಠೆ ಇಲ್ಲದ ವಿಚಾರವಾದಿಗಳಿಂದ ಸಮಾಜಕ್ಕೆ ಯಾವ ಮಹತ್ವದ ಕೊಡುಗೆಗಳೂ ಸಿಗವು. ಅಲ್ಲದೆ ಪಿತ್ರೋಡಾ ಅವರ ವಿಚಾರಗಳನ್ನು ವಸ್ತುನಿಷ್ಠವಾಗಿ ಚರ್ಚಿಸುವುದನ್ನು ಬಿಟ್ಟು ಅವರು ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಸಿದ ಕಾಂಗ್ರೆಸ್ಸಿಗರ ಬೌದ್ಧಿಕ ದಿವಾಳಿತನ ಮತ್ತು ಅವರ ಅಭಿಪ್ರಾಯಗಳನ್ನು ರಾಜಕೀಯ ಲಾಭಕ್ಕಾಗಿ ವಿರೂಪಗೊಳಿಸಿ ಪ್ರಚಾರ ಮಾಡುತ್ತಿರುವ ಬಿಜೆಪಿಯವರ ಬೌದ್ಧಿಕ ಕಿಡಿಗೇಡಿತನಗಳು ನಿಜಕ್ಕೂ ಅಕ್ಷಮ್ಯ ಅಪರಾಧಗಳಾಗಿವೆ.

ಈ ರಾಜಕಾರಣಿಗಳು ಧರ್ಮವನ್ನು ರಾಜಕೀಯಕ್ಕೆಳೆದು ಅದನ್ನು ಸೂತಕಗೊಳಿಸಿದ್ದಾಯಿತು. ಈಗ ವ್ಯಕ್ತಿಗಳ ವೈಚಾರಿಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಹಾಗೂ ವಿರೂಪಗೊಳಿಸಿ ವ್ಯಾಖ್ಯಾನಿಸುವ ಮೂಲಕ ವೈಚಾರಿಕತೆಯನ್ನೂ ನಿರ್ವೀರ್ಯಗೊಳಿಸುವ ಹುನ್ನಾರ ಪ್ರಾರಂಭಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿದವರು ಬೌದ್ಧಿಕ ದಿವಾಳಿತನವನ್ನೂ ಅಧಿಕಾರವುಳ್ಳವರನ್ನು ತಿದ್ದಿ ಸರಿದಾರಿಯಲ್ಲಿ ನಡೆಸಬೇಕಾದ ಬುದ್ಧಿಜೀವಿಗಳು ಹೇಡಿತನವನ್ನೂ ಪ್ರದರ್ಶಿಸ
ಲಾರಂಭಿಸಿದರೆ ಅಂತಹ ದೇಶದಲ್ಲಿ ವೈಚಾರಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭವಿಷ್ಯ ಇರುವುದಿಲ್ಲ.

-ಟಿ.ಎನ್.ವಾಸುದೇವಮೂರ್ತಿ, ಬೆಂಗಳೂರು

**** 

ಸ್ವಚ್ಛಗೊಳ್ಳಬೇಕಿರುವುದು ದೇಗುಲವಲ್ಲ...

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣಾ ಪ್ರಚಾರದ ವೇಳೆ ಕನೌಜ್‌ನ ಸಿದ್ಧ ಬಾಬಾ ಗೌರಿಶಂಕರ ದೇವಾಲಯಕ್ಕೆ ಭೇಟಿ ನೀಡಿ ತೆರಳಿದ ನಂತರ, ಬಿಜೆಪಿ ಕಾರ್ಯಕರ್ತರು ಗಂಗಾಜಲ ಬಳಸಿ ದೇಗುಲವನ್ನು ಸ್ವಚ್ಛಗೊಳಿಸಿದ ಬಗ್ಗೆ ವರದಿಯಾಗಿದೆ. ಇದೆಂಥ ಮಾನವೀಯತೆ, ಮನುಷ್ಯತ್ವ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಾತೀಯತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇಕೆ? ಜಾತೀಯತೆಯ ವಿಷಬೀಜವನ್ನು ಇನ್ನೂ ಮುಂದುವರಿಸುತ್ತಿರುವ ವಿಕೃತ ಮನಸ್ಸುಗಳಿಗೆ ಏನೆನ್ನಬೇಕು? ಮೊದಲು ತಮ್ಮ ತಮ್ಮ ಮನಸ್ಸುಗಳನ್ನು ಶುದ್ಧೀಕರಿಸಿಕೊಂಡರೆ ಒಳ್ಳೆಯದು.     

-ಮಲ್ಲತಹಳ್ಳಿ ಎಚ್. ತುಕಾರಾಂ, ಬೆಂಗಳೂರು

****

ಒತ್ತಡಕ್ಕೆ ಸಿಲುಕಿದರೇ ಪ್ರಧಾನಿ?

‘ಐದು ವರ್ಷಗಳಿಂದ ಅದಾನಿ ಮತ್ತು ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ‘ಶಹಜಾದ’ ಈಗ ಈ ವಿಷಯವಾಗಿ ಮೌನ ತಾಳಿರುವುದೇಕೆ?’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಹಾಗೂ ಆ ಮೂಲಕ ಕಾಂಗ್ರೆಸ್ಸನ್ನು ತಿವಿದಿದ್ದಾರೆ (ಪ್ರ.ವಾ., ಮೇ 9). ಈ ಬಾರಿಯ ಲೋಕಸಭಾ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಪ್ರಕಟಗೊಂಡ ನಂತರ ಪ್ರಧಾನಿಯವರು ಜನರ ಮುಂದೆ ತಮ್ಮ ಆಳ್ವಿಕೆಯಲ್ಲಿನ ಜನಪರ ನೀತಿ ನಿರ್ಧಾರಗಳ ಬಗ್ಗೆ ಚರ್ಚಿಸಬೇಕಿತ್ತು. ಅಂತಹ ಕ್ರಮಗಳಿಂದ ಶ್ರೀಸಾಮಾನ್ಯರ ಜೀವನದಲ್ಲಾದ ಸುಖಕರ, ಸಹನೀಯ ಬದಲಾವಣೆಗಳೇನೆಂದು ಉಲ್ಲೇಖಿಸಬೇಕಿತ್ತು. ಆದರೆ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನೇ ಚುನಾವಣಾ ಭಾಷಣದ ಟೀಕೆ-ಟಿಪ್ಪಣಿಗೆ ಅಸ್ತ್ರವಾಗಿಸಿಕೊಂಡಿರುವುದನ್ನು ವಿಷಾದನೀಯ ಎನ್ನಬೇಕೊ, ಬೌದ್ಧಿಕ ದಿವಾಳಿತನ ಎನ್ನಬೇಕೊ?

ಮೊದಲನೇ ಹಂತದ ಚುನಾವಣೆಯವರೆಗೂ ಸ್ವಲ್ಪ ಸಮಚಿತ್ತದಿಂದ ಇದ್ದ ಪ್ರಧಾನಿಯವರ ಭಾಷಣದಲ್ಲಿ ಇದ್ದಕ್ಕಿದ್ದಂತೆ ಮಹಿಳೆಯರ ಮಾಂಗಲ್ಯಸೂತ್ರ ಕಂಡುಹಿಡಿಯುವ ಕ್ಷ-ಕಿರಣ ಯಂತ್ರ ತೂರಿ ಬಂತು, ರೈತರ ದನಕರುಗಳ ಹಿಂಡು ನುಗ್ಗಿ ಬಂತು. ಕೊನೆಗೆ ಈಗ ಅದಾನಿ, ಅಂಬಾನಿಯವರು ತಮ್ಮ ಕಪ್ಪುಹಣದ ರಾಶಿಯನ್ನು ಕಾಂಗ್ರೆಸ್ ಕಡೆ ಒಯ್ಯುತ್ತಿದ್ದಾರೆಂದೂ ಅದಾಗಿ ರಾಹುಲ್ ಅವರು ಅವರನ್ನು ನಿಂದಿಸುತ್ತಿಲ್ಲವೆಂದೂ ವಿಚಿತ್ರವಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅದಾನಿ, ಅಂಬಾನಿಯವರ ನಡುವಿನ ಗೆಳೆತನವನ್ನು ರಾಹುಲ್ ಅವರು ಸತತವಾಗಿ ಜನರೆದುರು ಮಂಡಿಸಿದ ಪರಿಣಾಮವಾಗಿ ಪ್ರಧಾನಿ ಒತ್ತಡಕ್ಕೆ ಸಿಲುಕಿ ಹೀಗೆ ಮಾತನಾಡುತ್ತಿರಬಹುದು.

-ಶ್ರೀಧರ್ ಗಾರೆಮನೆ, ಬೆಂಗಳೂರು

****

ಚುನಾವಣೆ: ಕಹಿ ಮರೆಸಿದ ವ್ಯವಸ್ಥೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ನಾನು, ಇದೇ ತಿಂಗಳ 6ರಂದು ತೀರ್ಥಹಳ್ಳಿ ತಾಲ್ಲೂಕಿನಿಂದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಹೊರಟೆ. ಈ ಮೊದಲಿನ ಚುನಾವಣೆಗಳಲ್ಲಿ ಹೀಗೆ ಕರ್ತವ್ಯಪಾಲನೆಗೆ ನಿಯೋಜನೆಗೊಂಡಿದ್ದಾಗ ಆಗಿದ್ದ ಕಹಿ ಅನುಭವಗಳ ಕಾರಣದಿಂದ, ಈ ಬಾರಿಯೂ ಎಂದಿನಂತೆ ಬೇಸರದಿಂದಲೇ ಸಹೋದ್ಯೋಗಿಗಳೊಂದಿಗೆ ತೆರಳಿದಾಗ ಅಲ್ಲಿ ಆಶ್ಚರ್ಯ ಕಾದಿತ್ತು. ಯಾವುದೋ ಮದುವೆ ಸಮಾರಂಭಕ್ಕೆ ಬಂದಂತೆ ಭಾಸವಾಯಿತು. ಕಾಲೇಜನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಬಿಸಿಲು ತಾಗದಂತೆ ಅಳವಡಿಸಿದ್ದ ಬೃಹತ್ ಶಾಮಿಯಾನದ ಅಡಿ ಅತ್ಯುತ್ತಮವಾದ ಆಸನದ ವ್ಯವಸ್ಥೆಯ ಜೊತೆಗೆ ಉತ್ತಮವಾದ ಊಟ, ತಿಂಡಿ, ಕುಡಿಯುವ ನೀರು, ಶೌಚಾಲಯದಂತಹ ವ್ಯವಸ್ಥೆ ಕಲ್ಪಿಸಿದ್ದನ್ನು ಕಂಡು ಎಲ್ಲಾ ಚುನಾವಣಾ ಸಿಬ್ಬಂದಿ ಸಂತಸಪಟ್ಟರು. ಚುನಾವಣೆಯ ಎರಡೂ ದಿನಗಳು ಚುನಾವಣಾ ಸಿಬ್ಬಂದಿಯೊಂದಿಗೆ ಚುನಾವಣಾ ಅಯೋಗ
ಕೈ ಜೋಡಿಸಿದ ರೀತಿ ಇತರ ಎಲ್ಲಾ ಚುನಾವಣೆಗಳಲ್ಲಾದ ಕಹಿ ನೆನಪುಗಳನ್ನು ಮರೆಸುವಂತಿತ್ತು.

-ಎಂ.ಜೆ.ಅಲ್ಫೋನ್ಸ್‌ ಪಿಂಟೋ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT