ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

Published 10 ಮೇ 2024, 14:35 IST
Last Updated 10 ಮೇ 2024, 14:35 IST
ಅಕ್ಷರ ಗಾತ್ರ

ನವದೆಹಲಿ: ‘ಸೋನಿಪತ್‌ನಲ್ಲಿ ಮಾರ್ಚ್‌ನಲ್ಲಿ ಆಯ್ಕೆ ಟ್ರಯಲ್ಸ್‌ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾದ ಕಾರಣ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ’ ಎಂದು ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಹೇಳಿದ್ದಾರೆ.

‘ಈ ಹಿಂದೆ ಎರಡು ಸಂದರ್ಭಗಳಲ್ಲಿ ಒಮ್ಮೆ ಅವರು (ನಾಡಾ ಅಧಿಕಾರಿಗಳು) ಅವಧಿ ಮುಗಿದ ಕಿಟ್‌ಗಳೊಡನೆ ಮಾದರಿ ಪಡೆಯಲು ಬಂದಿದ್ದರು. ಮತ್ತೊಂದು ಸಂದರ್ಭದಲ್ಲಿ ನಿಯಮಗಳ ಪ್ರಕಾರ ಮೂರು ಕಿಟ್‌ ತರದೇ, ಒಂದು ಕಿಟ್‌ನೊಡನೆ ಬಂದಿದ್ದರು. ಹೀಗಾಗಿ ಕಿಟ್‌ಗೆ ಸಂಬಂಧಿಸಿ ಅಧಿಕಾರಿಗಳಿಂದ ವಿವರಣೆ ಬಯಸಿದ್ದೆ’ ಎಂದು ಟೋಕಿಯೊ ಗೇಮ್ಸ್‌ನ ಕಂಚಿನ ಪದಕ ವಿಜೇತ ಪೈಲ್ವಾನ್ ವಿವರಿಸಿದರು.

ಮದ್ದು ಪರೀಕ್ಷೆ ಅಧಿಕಾರಿಗಳಿಗೆ ವಾಸ್ತವ್ಯದ ಮಾಹಿತಿ ನೀಡಲು ನಿರಾಕರಿಸಿದ ಕಾರಣಕ್ಕೆ ಏಪ್ರಿಲ್‌ 18ರಂದು ಬಜರಂಗ್ ಅವರಿಗೆ ನೋಟಿಸ್‌ ನೀಡಿದ್ದ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ), ಐದು ದಿನಗಳ ಬಳಿಕ (ಏಪ್ರಿಲ್ 23ರಂದು) ಅವರನ್ನು ಅಮಾನತು ಮಾಡಿತ್ತು.

ನಾಡಾ ನಿರ್ಧಾರ ಅನುಸರಿಸಿ, ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಗುರುವಾರ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಅವರು 65 ಕೆ.ಜಿ. ವಿಭಾಗದ ಸ್ಪರ್ಧಿಯಾಗಿದ್ದಾರೆ.

‘ಉದ್ದೀಪನ ಮದ್ದು ಪರೀಕ್ಷೆಗೆ ಯಾವುದೇ ಹಂತದಲ್ಲಿ ಸ್ಯಾಂಪಲ್‌ ನೀಡಲು ನಾನು ನಿರಾಕರಿಸಿಲ್ಲ ಎಂದು ಸ್ಪಷ್ಟಪಡಿಸುವೆ. ಹೋದ ಮಾರ್ಚ್‌ 10ರಂದು ಅಧಿಕಾರಿಗಳು ಮಾದರಿ ಸಂಗ್ರಹಿಸಲು ಬಂದಿದ್ದರು. ಈ ಹಿಂದೆ ಎರಡು ಬಾರಿ ಅವರು ನನ್ನ ಮಾದರಿ ಪಡೆಯಲು ಬಂದಾಗ ಅವರು ಅವಧಿ ಮುಗಿದ ಕಿಟ್‌ಗಳೊಡನೆ ಬಂದಿದ್ದನ್ನು ಜ್ಞಾಪಿಸಿದ್ದೆ’ ಎಂದು ಅವರು ಶುಕ್ರವಾರ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

‘... ಮತ್ತೊಂದು ಸಂದರ್ಭದಲ್ಲಿ ಅವರು ಕಡ್ಡಾಯವಾಗಿ ತರಬೇಕಾದ ಮೂರು ಕಿಟ್‌ಗಳ ಬದಲು ಒಂದನ್ನಷ್ಟೇ ತಂದು ನನ್ನನ್ನು ಮಾದರಿಗಾಗಿ ಸಂಪರ್ಕಿಸಿದ್ದರು’ ಎಂದು ಬಜರಂಗ್ ಬರೆದಿದ್ದಾರೆ. ದೆಹಲಿಯಲ್ಲಿ ಭಾರತ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಧರಣಿಯ ವೇಳೆ ಬಜರಂಗ್ ಮುಂಚೂಣಿಯಲ್ಲಿದ್ದರು.ಕ

‘ನಾನು ಸ್ಥಳದಿಂದ ಬೇಗ ನಿರ್ಗಮಿಸಿದ್ದೆ ಎಂದು ವರದಿಯಾಗಿತ್ತು. ಆದರೆ ಅಧಿಕಾರಿಗಳು ತಮ್ಮ ಬಳಿ ಬಂದುಹೋದ ಬಳಿಕ ಒಂದು ಗಂಟೆ ನಾನು ಸ್ಥಳದಲ್ಲೇ ಇದ್ದೆ’ ಎಂದು ಅವರು ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ ಆಗ ಮೊಣಕಾಲಿನ ಗಾಯಕ್ಕೆ ಕ್ರೀಡಾ ಪ್ರಾಧಿಕಾರದ ವೈದ್ಯರನ್ನೂ ಭೇಟಿಯಾಗಿದ್ದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT