ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ: ಸೆಮಿಫೈನಲ್‌ಗೆ ನಿಶಾ ದಹಿಯಾ

Published 10 ಮೇ 2024, 16:04 IST
Last Updated 10 ಮೇ 2024, 16:04 IST
ಅಕ್ಷರ ಗಾತ್ರ

ಇಸ್ತಾಂಬುಲ್: ವಿಶ್ವ ಒಲಿಂಪಿಕ್‌ ಗೇಮ್ಸ್‌ ಕ್ವಾಲಿಫೈಯರ್‌ನ ಮೊದಲ ದಿನ ಭಾರತದ ಎಲ್ಲ ಆರು ಮಂದಿ ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಶೆ ಮೂಡಿಸಿದ ಬಳಿಕ, ಶುಕ್ರವಾರ ನಿಶಾ ದಹಿಯಾ ಮಹಿಳೆಯರ ಫ್ರೀಸ್ಟೈಲ್ 68 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು.

ವಿಶ್ವ 23 ವರ್ಷದೊಳಗಿನವರ ಕಂಚಿನ ಪದಕ ವಿಜೇತೆಯಾಗಿರುವ ನಿಶಾ ಒಲಿಂಪಿಕ್ಸ್‌ಗೆ ಐದನೇ ಕೋಟಾ ಪಡೆಯುವ ಅವಕಾಶವನ್ನೂ ಹಸಿರಾಗಿಟ್ಟುಕೊಂಡರು. ತಟಸ್ಥ ಸ್ಪರ್ಧಿಯಾಗಿ ಕಣದಲ್ಲಿದ್ದ ಬೆಲಾರೂಸ್‌ನ ಹದಿವಯಸ್ಸಿನ ಅಲಿನಾ ಶಾವುಚುಕ್ ಅವರನ್ನು ನಿಶಾ 3–0 ಯಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ‍ಪ್ರವೇಶಿಸಿದರು.

25 ವರ್ಷದ ನಿಶಾ, ಕ್ವಾರ್ಟರ್‌ಫೈನಲ್‌ನಲ್ಲಿ ಝೆಕ್‌ ರಿಪಬ್ಲಿಕ್‌ನ ಅಡೆಲಾ ಹಂಝ್ಲಿಕೋವಾ ಅವರನ್ನು 7–4 ರಿಂದ ಪಾಯಿಂಟ್‌ ಆಧಾರದಲ್ಲಿ ಮಣಿಸಿದರು. ಅಡೆಲಾ ಒಂಬತ್ತನೇ ಕ್ರಮಾಂಕ ಹೊಂದಿದ್ದಾರೆ.

ಸೆಮಿಫೈನಲ್‌ನಲ್ಲಿ ಅವರ ಎದುರಾಳಿ ರುಮೇನಿಯಾದ ಅಲೆಕ್ಸಾಂಡ್ರಾ ಆಂಘೆಲ್. ನಿಶಾ ಈ ಸೆಣಸಾಟವನ್ನೂ ಗೆದ್ದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಐದನೇ ಮಹಿಳಾ ಕುಸ್ತಿಪಟು ಎನಿಸಲಿದ್ದಾರೆ. ಒಂದೊಮ್ಮೆ ಸೋತರೂ, ಕಂಚಿನ ಪದಕ ವಿಜೇತರ ಸೆಣಸಾಟದಲ್ಲಿ ಜಯಶಾಲಿ ಆದರೆ (ಒಂದೇ ಸ್ಪರ್ಧೆಯಲ್ಲಿ) ಮೂರನೇ ಕೋಟಾ ಪಡೆಯಲು ಅವಕಾಶವಿದೆ.

62 ಕೆ.ಜಿ. ವಿಭಾಗದಲ್ಲಿ ಮಾನಸಾ ಉತ್ತಮ ಪ್ರದರ್ಶನ ನೀಡಿದರೂ, ಎಂಟನೇ ಕ್ರಮಾಂಕದ ಬೆಲಾರೂಸ್‌ನ ಸ್ಪರ್ಧಿ ವೆರಾನಿಕಾ ಇವಾನೋವಾ ಅವರಿಗೆ ಮಣಿಯಬೇಕಾಯಿತು. ಈ ಪ್ರಿಕ್ವಾರ್ಟರ್‌ಫೈನಲ್‌ ಸೆಣಸಾಟ ಮುಗಿಯಲು 25 ಸೆಕೆಂಡುಗಳಿದ್ದಾಗ ಇವಾನೋವಾ ಎದುರಾಳಿಯನ್ನು ಕೆಡವಿಹಾಕಿದರು.

ಒಲಿಂಪಿಕ್ಸ್‌ಗೆ ಪ್ರವೇಶ ಖಚಿತಪಡಿಸಿಕೊಂಡಿರುವ ಭಾರತದ ನಾಲ್ವರು ಮಹಿಳಾ ಪೈಲ್ವಾನರು– ಅಂತಿಮ್ ಪಂಘಲ್‌ (53 ಕೆ.ಜಿ ವಿಭಾಗ), ವಿನೇಶಾ ಫೋಗಟ್‌ (50 ಕೆ.ಜಿ), ಅನ್ಶು ಮಲಿಕ್ (57 ಕೆ.ಜಿ) ಮತ್ತು ರೀತಿಕಾ ಹೂಡಾ (76 ಕೆ.ಜಿ). ಮಾರ್ಚ್‌ನಲ್ಲಿ ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ನಡೆದ ಕ್ವಾಲಿಫೈಯರ್‌ನಲ್ಲಿ ಅವರು ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಪುರುಷರ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಗಳು ಶನಿವಾರ ನಡೆಯಲಿವೆ. ಭಾರತದ ಗ್ರೀಕೊ ರೋಮನ್‌ ಸ್ಪರ್ಧಿಗಳು ನಿರಾಶೆ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT