ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌: ಖಾಸಗಿ ಮಾಹಿತಿ ರಕ್ಷಣೆ ಸುಲಭ, ಸರಳ

Last Updated 4 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಡಿಜಿಟಲ್ ಕ್ರಾಂತಿಯಾಗಿದೆ. ಆದರೂ ಅದರ ಬೆನ್ನಿಗೇ ಬಂದಿರುವ ಆತಂಕಗಳ ಬಗ್ಗೆ ಅರಿವು ಕಡಿಮೆ. ಫೇಸ್‌ಬುಕ್‌ನಲ್ಲಿ ಹಲವು ಹಂತಗಳಲ್ಲಿ ನಮ್ಮ ಫೋನ್‌ ನಂಬರ್, ಜನ್ಮದಿನಾಂಕ, ಊರು, ಇಮೇಲ್ ಐಡಿ..ಯಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಇವೆಲ್ಲ ನಮ್ಮ ಬ್ಯಾಂಕ್ ಖಾತೆ ಅಥವಾ ಫೇಸ್‌ಬುಕ್ ಖಾತೆ ಹ್ಯಾಕ್ ಆಗುವುದಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರೈವೆಸಿ ಬಗ್ಗೆ ಸುಶಿಕ್ಷಿತರು ಆತಂಕ ವ್ಯಕ್ತಪಡಿಸುವುದು.

ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸರಳ ಉಪಾಯವಿದೆ. ಅದಕ್ಕೂ ಮೊದಲು, ’ಕೆಲವು ಮಾಹಿತಿಯನ್ನು ನಾವು ಇಷ್ಟವಿಲ್ಲದಿದ್ದರೂ ಬಚ್ಚಿಡಬೇಕಾಗುತ್ತದೆ’ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಹೆಚ್ಚಾಗಿ ಹಂಚಿಕೊಳ್ಳುವ ಅತ್ಯಂತ ಪ್ರಮುಖವಾದ ಖಾಸಗಿ ವಿಚಾರಗಳೆಂದರೆ, ನಮ್ಮ ಊರು, ನಮ್ಮ ಜನ್ಮ ದಿನಾಂಕ, ಇಮೇಲ್ ಐಡಿ ಹಾಗೂ ನಮ್ಮ ಫೋನ್ ನಂಬರ್. ಇವುಗಳನ್ನಿಟ್ಟು ಕೊಂಡೇ ಸೈಬರ್ ವಂಚಕರು ತಮ್ಮ ಕಾರ್ಯ ಸಾಧಿಸಬಲ್ಲರು.

ಇಂಥವಕ್ಕೆ ಕಡಿವಾಣ ಹಾಕುವುದಕ್ಕಾಗಿಫೇಸ್‌ಬುಕ್, ತನ್ನ ಬಳಕೆದಾರರಿಗಾಗಿಯೇ ಸರಳವಾದ ವಿಧಾನವೊಂದನ್ನು ಒದಗಿಸಿದೆ. ಇದು ತೀರಾ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಇದರ ಇಂಟರ್ಫೇಸ್ ಇರುವುದರಿಂದ ಯಾರು ಬೇಕಾದರೂ ತಾವಾಗಿ ಈ ಪರೀಕ್ಷೆ ಮಾಡಿಕೊಳ್ಳಬಹುದು. ಇದರ ಹೆಸರು ’ಪ್ರೈವೆಸಿ ಚೆಕಪ್’. ಅಂದರೆ, ನಮ್ಮ ಖಾಸಗಿತನ/ಖಾಸಗಿ ಮಾಹಿತಿಗಳು ಎಷ್ಟು ಸುರಕ್ಷಿತವಾ ಗಿವೆ ಎಂಬುದನ್ನು ತಿಳಿದುಕೊಳ್ಳಲು ಇರುವ ಟೂಲ್ ಇದು. ನೀವು ಮಾಡಬೇಕಾದುದಿಷ್ಟೇ. ಕಂಪ್ಯೂಟರಿನಲ್ಲಿ ಫೇಸ್‌ಬುಕ್‌ಗೆ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ (ನೋಟಿಫಿಕೇಶನ್ ಕೆಂಪು ಚುಕ್ಕಿಗಳು ಕಾಣಿಸುವ ಸಮೀಪ) ಪ್ರಶ್ನಾರ್ಥಕ ಚಿಹ್ನೆಯ ಐಕಾನ್ ಒಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಸ್ವಲ್ಪವೇ ಕೆಳಗೆ ನೋಡಿದಾಗ, ಪ್ರೈವೆಸಿ ಚೆಕಪ್ ಎಂಬ ಪಠ್ಯ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

ಇಲ್ಲಿ ನಾಲ್ಕು ಕಾರ್ಡ್‌ಗಳು ಗೋಚರಿಸುತ್ತವೆ. ಮೊದಲನೆಯದು, ನೀವು ಹಂಚಿಕೊಂಡ ಪೋಸ್ಟ್‌ಗಳನ್ನು ಯಾರೆಲ್ಲ ನೋಡಬಹುದು ಅಂತ ಹೊಂದಿಸುವ/ಬದಲಾಯಿಸುವ ಟೂಲ್. ಇಲ್ಲೇ ನಿಮ್ಮ ಇಮೇಲ್, ಜನ್ಮದಿನಾಂಕವನ್ನು ಬೇಕಾದವರಿಗಷ್ಟೇ ಗೋಚರಿಸುವಂತೆ ಮಾಡಬಹುದು ಅಥವಾ ನಿಮಗೆ ಮಾತ್ರ ಕಾಣಿಸುವಂತೆಯೂ ಹೊಂದಿಸಿಕೊಳ್ಳಬಹುದು. ಎರಡನೆಯದರಲ್ಲಿ, ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸ ಬಹುದು ಎಂದು ಸಲಹೆ ನೀಡುವ ಮತ್ತು ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುವು ಮಾಡುವ ವ್ಯವಸ್ಥೆಯಿದೆ.

ಮೂರನೇ ಕಾರ್ಡ್ ಕ್ಲಿಕ್ ಮಾಡಿದರೆ, ಫೇಸ್‌ಬುಕ್‌ನಲ್ಲಿ ಜನರು ನಿಮ್ಮನ್ನು ಹುಡುಕುವುದಾದರೆ ಹೇಗೆ ಅಂತ ನಿರ್ಣಯಿಸುವ ವ್ಯವಸ್ಥೆ. ಇಲ್ಲೇ ಫೋನ್ ನಂಬರ್ ಮತ್ತು ಇಮೇಲ್ ಐಡಿ ಗೋಚರವಾಗುವುದನ್ನು ನಿಯಂತ್ರಿಸಬಹುದು. ನಾಲ್ಕನೇ ಕಾರ್ಡ್ ಕ್ಲಿಕ್ ಮಾಡಿದರೆ, ಫೇಸ್‌ಬುಕ್ ಖಾತೆಯನ್ನು ಬೇರೆ ಆ್ಯಪ್ ಅಥವಾ ಬೇರೆ ವೆಬ್‌ಸೈಟ್‌ಗಳ ಜೊತೆಗೆ ಸಂಯೋಜಿಸಿದ್ದೀರಾ? ಅದು ಅಗತ್ಯವೇ? ಎಂದು ತಿಳಿದು, ಅನಗತ್ಯ ಎಂದಾದರೆ ಅದನ್ನು ಸಂಪರ್ಕ ತೆಗೆಯುವ ವ್ಯವಸ್ಥೆ ಇದೆ. ಈ ಟೂಲ್ ಅನ್ನು ಒಂದು ಸಲ ಬಳಸಿ, ಫೇಸ್‌ಬುಕ್‌ನಲ್ಲಿ ಸುರಕ್ಷಿತವಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT