ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಾಸ್ಕ್‌ ಇಲ್ಲದ ಬದುಕು...

Last Updated 5 ಸೆಪ್ಟೆಂಬರ್ 2020, 1:27 IST
ಅಕ್ಷರ ಗಾತ್ರ

ಆಕೆ ಆರು ತಿಂಗಳಿನಿಂದ ಅದೇ ಒಂದು ಕಟ್ಟಡದ ಕಟ್ಟೆಯ ಮೇಲೆ ಮಲಗುತ್ತಿದ್ದಾಳೆ. ಬೆಳಿಗ್ಗೆ ನೋಡಿದರೆ ಅವಳ ಹಣೆಯ ಮೇಲೆ ವಿಭೂತಿ ಇರುತ್ತದೆ. ಯಾರೊಂದಿಗೂ ಮಾತನಾಡುವುದಿಲ್ಲ. ಹಾಗೆಂದು ಮೂಕಿಯೂ ಅಲ್ಲ. ಅವಳ ದನಿಗೆ ಬೆಚ್ಚಿಯೇ ಆಕೆಯನ್ನು ಮಾತನಾಡಿಸುವ ಗೋಜಿಗೆ ಯಾರೂ ಹೋಗುವುದಿಲ್ಲ.

ಬೆಳಗಾಗುತ್ತಿದ್ದಂತೆಯೇ ಅದೆಲ್ಲಿಂದಲೋ ಒಂದಿಷ್ಟು ಹಣ್ಣು ಹೊತ್ತು ತರುತ್ತಾಳೆ. ಬಾಳೆ, ಪೇರು, ಕಲ್ಲಂಗಡಿ, ಕರಬೂಜ, ಮೋಸಂಬಿ, ದಾಳಿಂಬೆ ಎಲ್ಲ ತೆರನಾದ ಹಣ್ಣುಗಳೂ ಅವಳು ಹೊತ್ತು ತರುವ ಗೋಣಿ ಚೀಲದಲ್ಲಿರುತ್ತವೆ. ಅವಳ ಮಾತು–ಮೌನ ಎರಡನ್ನೂ ಅರ್ಥ ಮಾಡಿಕೊಂಡಂತೆ ಕಾಣುವ ಕಟ್ಟಡದ ಮುಂದಿನ ಸಾಲುಮರದಲ್ಲಿನ ಅಳಿಲುಗಳು, ಹಕ್ಕಿಗಳು, ಮಂಗಗಳು, ಬೀದಿನಾಯಿಗಳು, ಓಡಾಡುವ ಹಸುಗಳು ಆಕೆಯೊಂದಿಗೆ ಸಂವಾದ ನಡೆಸುತ್ತವೆ. ಗಬ್ಬಾದ ಹಸುವೊಂದು ಸುಸ್ತಾಗಿ ಮರದ ನೆರಳಿಗೆ ಬಂದು ನಿಂತಾಗ ಆಕೆ ಕಲ್ಲಂಗಡಿ ಬಿಡಿಸಿ ಅದರ ಮುಂದಿಟ್ಟಿದ್ದಿದೆ. ಎಲ್ಲಿಯೋ ತಂದ ತಿಂಡಿಯಲ್ಲಿ ಹಲವಾರು ಬಾರಿ ನಾಯಿಗೂ ಪಾಲು ಕೊಟ್ಟರೆ, ಯಾರಿಗೆ ಯಾವುದೋ ಬೇಕೋ ತಿಂದುಕೊಳ್ಳಿ ಎಂದುಪ್ರಾಣಿ–ಪಕ್ಷಿಗಳಿಗಾಗಿ ಕಟ್ಟೆಯ ಮೇಲೆ ಹಣ್ಣು ಹರಡಿಡುತ್ತಾಳೆ. ಆಕೆ ಎದುರಿಗಿದ್ದಾಗ ಧಿಮಾಕು ತೋರುವ ಅಳಿಲುಗಳು, ಅವಳು ತುಸು ಹೊತ್ತು ಮರೆಯಾಗಿದ್ದೇ ತಡ, ಮರದಿಂದ ಟಣ್‌ ಟಣ್‌ ಎನ್ನುತ್ತ ಇಳಿದು ಬಂದು, ಕಟ್ಟೆಯ ಮೇಲೆ ಆಕೆಯೇ ಸುಲಿದಿಟ್ಟ ದಾಳಿಂಬೆಗೆ ಬಾಯಿ ಹಾಕುತ್ತವೆ.

ಅವಳೋ, ಮಧ್ಯಾಹ್ನ ಗಿಡಮರದ ನೆರಳಿಗೆ ಕುಂತು–ನಿಂತು ಹೊತ್ತುಗಳೆಯುತ್ತಾಳೆ. ಮತ್ತೆ ಒಂಚೂರು ಹೊತ್ತು ಊರ ಸವಾರಿ. ಕೊರೊನಾ ಹೊಡೆತಕ್ಕೆ ಊರವರೆಲ್ಲ ಬಾಗಿಲು ಹಾಕಿಕೊಂಡು ಮನೆಯಲ್ಲಿ ಬಂಧಿಯಾಗಿದ್ದರೆ, ಈಕೆ ಊರು ಕಾಯುವ ಹೊಣೆ ಹೊತ್ತ ದುರ್ಗೆಯಂತೆ ಸಂಚಾರ ಹೊರಡುವವಳು. ಆಗಲೇ ಅವಳಿಗೆ ಈ ಎಲ್ಲ ಗೆಳೆಯರು ಸಿಕ್ಕಿದ್ದು; ಅವಳನ್ನೂ ಗೆಲುವಾಗಿಸಿದ್ದು. ಮಂಗಗಳೋ ಆಕೆಯ ಖಾಸಾ ದೋಸ್ತಿ. ಅವಳಾಗಿ ಹಣ್ಣು ಕೊಡುವ ತನಕ ಕಾದಿದ್ದೇ ಇಲ್ಲ. ಅವಳ ಬಳಿ ಹಿಂಡು ಹಿಂಡಾಗಿ ಬಂದು ಸುಮ್ಮನೇ ಚೀಲಕ್ಕೆ ಕೈಹಾಕಿ, ಬೇಕಾದ ಹಣ್ಣು ತಿಂದು ಸಿಪ್ಪೆಯನ್ನು ಸಾಗಹಾಕುವ ಕೆಲಸವನ್ನೂ ಆಕೆಗೇ ಬಿಡುತ್ತಿದ್ದವು. ಲಾಕ್‌ಡೌನ್‌ ತೆರವಾದ ಮೇಲೆ ಆ ಹಿಂಡು ಕಾಣಿಸಿಕೊಂಡಿದ್ದು ಅಪರೂಪ.ಮಳೆ ಶುರುವಾದ ಮೇಲೆ ಗೆಳೆಯರ ಓಡಾಟ, ಒಡನಾಟವೂ ಕಡಿಮೆಯಾಗಿದೆ. ರಸ್ತೆಗಳಲ್ಲಿ ಮತ್ತೆ ಸರ್ರ್ ಬರ್ರ್ ವಾಹನಗಳ ಸದ್ದು.

ಲಾಕ್‌ಡೌನ್‌ ಧಡಕಿಗೆ ಇಡೀ ದೇಶವೇ ಥಂಡು ಹೊಡೆದಾಗ, ದುಡಿಯಲೆಂದು ಅಲ್ಲಲ್ಲಿ ಚದುರಿ ಹೋಗಿದ್ದ ಜೀವಗಳು ಗೂಡಿಗೆ ಸೇರಲು ತವಕಿಸುತ್ತಿದ್ದಾಗ, ದಾನಿಗಳು ನೀಡುವ ಅನ್ನದ ಪೊಟ್ಟಣಕ್ಕೆ ಕಾರ್ಮಿಕರು ಕಾದು ಕುಳಿತಿದ್ದಾಗ, ಊರು ಸೇರಲು ಬಸ್‌, ರೈಲಿನ ವ್ಯವಸ್ಥೆ ಆದಾಗಲೂ ಅವಳು ಹೀಗೆಯೇ ಇದ್ದಳು. ಹೋಟೆಲ್ಲೊಂದರಲ್ಲಿ ದುಡಿಯುತ್ತಿದ್ದವಳು ಕೆಲಸ ಕಳೆದುಕೊಳ್ಳುತ್ತಲೇ ರಸ್ತೆಯ ಬದಿಯ ಕಟ್ಟೆಗೆ ಬಂದಳೆಂದು ಸುತ್ತಲಿನವರು ಹೇಳುತ್ತಾರೆ.

ಬಯಲು ಆಲಯವಾದಾಕೆಗೆ ಆ ಕಟ್ಟಡದ ಮೂಲೆಯಲ್ಲಿ ಶೌಚಾಲಯವೊಂದಿಲ್ಲದಿದ್ದರೆ ಏನು ಮಾಡುತ್ತಿದ್ದಳು? ಎಲ್ಲಿಗೆ ಹೋಗುತ್ತಿದ್ದಳು? ಅವಳ ಊರು ಆಕೆಯನ್ನು ಏಕೆ ಸೆಳೆಯಲಿಲ್ಲ? ಅವಳೇ ಹೇಳಬೇಕು.

‘ಸ್ಟೇ ಹೋಮ್‌ ಸ್ಟೇ ಸೇಫ್‌’ ಎನ್ನುವ ಮಾತನ್ನು ಅಣಕಿಸುವಂತೆ ಮಾಸ್ಕ್‌ ಇಲ್ಲದೇ, ಮನೆಯೂ ಇಲ್ಲದೇ ಇಡೀ ಊರು ಅಡ್ಡಾಡಿದ ಏಕಮಾತ್ರಳು ಅವಳೇ ಇರಬೇಕು. ಬಾಗಿಲು ತೆಗೆಯದೇ, ಮನೆಯಲ್ಲಿಯೇ ಬಂಧಿಯಾಗಿ ಭಯಕ್ಕೆ ಬಿದ್ದವರ ನಡುವೆ ನನಗೋಆಕೆಯೊಂದು ದೊಡ್ಡ ಅಚ್ಚರಿ. ಉರಿಬಿಸಿಲ ಕಾಲವನ್ನು ರಸ್ತೆಯಲ್ಲೇ ಕಳೆದು, ಮಳೆ ಶುರುವಾದಾಗ ಕಟ್ಟೆಯ ಆಸರೆ ಹಿಡಿದ ಅವಳ ಮುಖ–ಕಂಗಳಲ್ಲಿ ಭಯ ಕಂಡೇ ಇಲ್ಲ. ಮಾತೂ ನಿಚ್ಚಳ. ಸುಮ್ಮನೇ ಎದುರಾದ ಯಾರಾದರೂ ಆಕಸ್ಮಾತ್‌ ಆಕೆಯನ್ನು ಮಾತನಾಡಿಸಿದರೆ, ಅವಳದು ತಹಕೀಕತ್‌ ನಡೆಸುವ ಮರುಪ್ರಶ್ನೆ; ಎದುರಿಗಿದ್ದವರು ನಿರುತ್ತರ.

ಅವಳ ದಿನಚರಿ ಕಂಡು ದಿಗಿಲುಕೊಂಡ ನಾನೊಮ್ಮೆ ‘ಯಾವೂರಮ್ಮಾ?’ ಎಂದು ಕೇಳಿದ್ದಕ್ಕೆ ‘ನಿಂದ್ಯಾವೂರು?’ ಎಂದು ಬಿರುಸಾಗಿ ಪ್ರಶ್ನೆ ಹಾಕಿದಳು. ಆ ಧ್ವನಿಗೆ ನಡುಗಿ ಹೋಗಿದ್ದೆ. ಮತ್ತೆಂದೋ ಧೈರ್ಯ ಮಾಡಿ ಬಿಸ್ಕತ್ತು ಕೊಡಲು ಮುಂದಾದರೆ ‘ಬ್ಯಾಡ’ ಎಂದು ನೇರವಾಗಿಯೇ ಹೇಳಿದಳು. ಆಕೆಯನ್ನು ತಡುವುದೇ ಬೇಡ ಅಂದುಕೊಂಡಿದ್ದವಳು, ಮತ್ತೆ ತಡೆಯಲಾಗಲಿಲ್ಲ. ಕೆಲಸ ಮುಗಿಸಿ ರಾತ್ರಿ ಕಚೇರಿಯಿಂದ ಹೊರಟಾಗ, ‘ಊಟ ಆಯ್ತೇನಮ್ಮಾ?’ ಎಂದೆ. ‘ಹೊಟ್ಟೆ ಐತೆಲ್ಲವ್ವಾ...!’ ಎಂದಳು. ನಾಲ್ಕು ತಿಂಗಳಲ್ಲಿ ಆಕೆಯ ನಡಿಗೆ, ನೋಟದಲ್ಲಿ ಯಾವ ಬದಲಾವಣೆ ಕಾಣದಿದ್ದರೂ ಇದೇ ಮೊದಲ ಬಾರಿಗೆ ದನಿ ಬದಲಾಗಿತ್ತು. ಊಟ ಮಾಡಿಲ್ಲ ಎಂದು ಆಕೆ ಹೇಳಿದ್ದರೆ, ಆ ಹೊತ್ತಿನಲ್ಲಿ ನಾನು ಊಟ ತಂದುಕೊಡುತ್ತಿದ್ದೆನೇ? ಸುಮ್ಮನೇ ಗಾಡಿ ಶುರು ಮಾಡಿಕೊಂಡು ಮನೆ ಮುಟ್ಟಿದೆ. ಹಬೆಯಾಡುವ ಉಪ್ಪಿಟ್ಟು ತಿನ್ನುವಾಗ ಮತ್ತೆ ಆಕೆಯದೇ ಮಾತು, ‘ಹೊಟ್ಟೆ ಐತಲ್ಲವ್ವಾ...!’

ಇರುವ ಎರಡು ಸೀರೆಯನ್ನು ತೊಳೆದು ಉಡುತ್ತಿದ್ದಳಿಗೆ ಮೊನ್ನೆ ಮೊನ್ನೆ ಯಾರೋ ಸೀರೆಯೊಂದನ್ನು ಕೊಟ್ಟಿರಬೇಕು. ಈಗ ಅದನ್ನೂ ಉಡುತ್ತಿದ್ದಾಳೆ. ಜೋರಾಗಿ ಸುರಿಯುತ್ತಿರುವ ಮಳೆಗೆ ಕೃಶ ಶರೀರ ಥಂಡು ಹೊಡೆದಿದೆ. ಕಿವಿ ಬೆಚ್ಚಗಿಡಲು ಬಟ್ಟೆ ಕಟ್ಟಿಕೊಂಡು, ಸ್ವೆಟರ್‌ ಹಾಕಿಕೊಂಡಿರುತ್ತಾಳೆ. ಕಟ್ಟೆಯ ಮೇಲೆ, ಬೆಂಕಿಪೊಟ್ಟಣದ ಗೀರಿದ ಕಡ್ಡಿಗಳ ರಾಶಿ. ಆಕೆಯ ತುಟಿಗಳೂ ಕಪ್ಪಾಗಿವೆ. ಎಂಥ ಮಳೆ, ಚಳಿ ಇದ್ದರೂ ಸೂರ್ಯ ಕಣ್ಣುಬಿಟ್ಟ ಮೇಲೆ ಅವಳು ಮಲಗಿಲ್ಲ. ಕೊರೊನಾ ಆಕೆಯ ಮುಂದೆ ಮಂಡಿಯೂರಿದ್ದೇ ಖರೆ ಎನ್ನಿಸುತ್ತದೆ.

ಹೋಟೆಲ್‌ ಶುರುವಾದ ಮೇಲೆ ಸಣ್ಣಪುಟ್ಟ ತಿಂಡಿಯ ಪೊಟ್ಟಣಗಳನ್ನು ತರುತ್ತಾಳೆ. ಸೀರೆ ಸೆರಗಿನ ಅಂಚಿಗೆ ಕಟ್ಟಿದ ಪುಟ್ಟ ಗಂಟಿನಲ್ಲಿ ಪುಡಿಗಾಸು ಇದ್ದಂತಿದೆ. ಅದನ್ನು ಕಾಯಲೋ, ತನ್ನ ರಕ್ಷಣೆಗೋ ಎಂಬಂತೆ ಆಕೆಯ ದನಿ ರಾತ್ರಿ ಹೊತ್ತು ಜೋರಾಗುತ್ತದೆ. ‘ಯಾವನ್ಲಾ ಅವ್ನು....? ಧೈರ್ಯ ಇದ್ದರೆ ಮುಂದೆ ಬಾ...’ ಎನ್ನುವಾಗ ಹಾದಿಬೀದಿಯಲ್ಲಿ ಹೊರಟವರ ನಡಿಗೆ ಜೋರಾಗುತ್ತದೆ. ಆ ಮಾರ್ಗವಾಗಿ ಹೊರಟ ಗಾಡಿಗಳು ವೇಗವಾಗಿ ಚಲಿಸುತ್ತವೆ. ಆಕೆ ಹಾಗೇಕೆ? ಅವಳ ಮುಂದೊಮ್ಮೆ ಕುಳಿತು ಕೇಳಬೇಕು ಎಂದುಕೊಳ್ಳುತ್ತೇನೆ. ಧೈರ್ಯ ಸಾಲುತ್ತಿಲ್ಲ.

ಮನೆಗೆ ಹೊರಡುವಾಗ ಅವಳನ್ನು ನೋಡದೇ ಹೋಗಲೂ ಆಗುವುದಿಲ್ಲ. ಹವಾಮಾನ ಮುನ್ಸೂಚನೆ ನಿಜವಾಗಿ, ಮೊನ್ನೆ ರಾತ್ರಿ ಜೋರಾಗಿ ಮಳೆ ಶುರುವಾಗಿಯೇ ಬಿಟ್ಟಿತು. ಅವಳು ಎಂದಿನಂತೆಯೇ ಕಟ್ಟೆಯ ಮೇಲೆ ಮುದುಡಿಕೊಂಡು ಮಲಗಿದ್ದಳು. ಎಚ್ಚರವಾಗಿಯೇ ಇದ್ದ ಆಕೆಯನ್ನು ‘ಉಂಡೆಯೇನವ್ವಾ?’ ಎಂದು ಕೇಳಿದರೆ ಸುಮ್ಮನೇ ಇದ್ದಳು. ಸ್ಟಾರ್ಟ್‌ ಆಗಿದ್ದ ಗಾಡಿಯನ್ನು ಮತ್ತೆ ಬಂದ್‌ ಮಾಡಿ, ತುಸು ಧೈರ್ಯ ಮಾಡಿ ಕೇಳಿದೆ. ‘ಈ ಮಳೆಯಲ್ಲಿ ಇನ್ನೂ ಎಷ್ಟು ದಿನಾ ಅಂತ ಇರ್ತೀಯವ್ವಾ? ಯಾವುದಾದರೂ ಆಶ್ರಮದಲ್ಲಿ ಇರ್ತೀಯಾ? ಎಂದು.

ಆಕೆಯದು ಎಂದಿನಂತೆಯೇ ದಿಟ್ಟ ಪ್ರಶ್ನೆಯ ಉತ್ತರ ‘ಎಲ್ಲಿ ಕಟ್ಸಿದ್ದೀಯಾ ಆಶ್ರಮ?’

ಪತರುಗುಟ್ಟಿ ಹೋದೆ. ಅಪರಾಧಿ ಭಾವದಿಂದ ಮೈಯಲ್ಲಿನ ಕಸುವೆಲ್ಲ ಬಸಿದಂತಾಯಿತು. ಮುಖಕ್ಕೆ ಹಾಕಿಕೊಂಡ ಮಾಸ್ಕ್‌ನಡಿ ನಕ್ಕೆನೋ ಭಯ ಬಿದ್ದೆನೋ ಗೊತ್ತಿಲ್ಲ. ಮತ್ತೆ ತುಸು ಧೈರ್ಯ ತಂದುಕೊಂಡು, ‘ಅಲ್ಲ... ನೀ ಹೂಂ ಅಂದ್ರೆ ಯಾವುದಾದ್ರೂ..’ ಎನ್ನುತ್ತಿದ್ದಾಗಲೇ ನನ್ನ ಮಾತು ತುಂಡರಿಸಿ, ‘ಈ ಕಟ್ಟೇನೇ ಸಾಕ್ಬಿಡು’ ಎಂದವಳೇ ಮುಸುಕೆಳೆದುಕೊಂಡಳು. ಅದರುತ್ತಿದ್ದ ಕೈಯಲ್ಲಿಯೇ ಗಾಡಿ ಸ್ಟಾರ್ಟ್‌ ಮಾಡಿ, ಮನೆಗೆ ಹೊರಟಾಗ ಧೋ ಎಂದು ಮಳೆ. ಮನೆ ಮುಟ್ಟಿದ ಮೇಲೂ ನಿತ್ಯದಂತೆ, ಕಿವಿಯಲ್ಲಿ ಆಕೆಯದೇ ಮಾತು ‘ಎಲ್ಲಿ ಕಟ್ಸಿದ್ದೀಯಾ ಆಶ್ರಮ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT