ADVERTISEMENT

ಯಲಹಂಕ: ಪ್ರವಾಹದ ಭೀತಿ...ಎಚ್ಚರಿಕೆ ನಿರ್ಲಕ್ಷ್ಯ

ರಾಜಕಾಲುವೆ ಒತ್ತುವರಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಜಲಾವೃತದ ಭೀತಿ

Published 6 ಅಕ್ಟೋಬರ್ 2022, 15:58 IST
Last Updated 6 ಅಕ್ಟೋಬರ್ 2022, 15:58 IST
   

ಬೆಂಗಳೂರು: ಬಿಬಿಎಂಪಿಯ ಯಲಹಂಕ ವಲಯದಲ್ಲಿ ರಾಜಕಾಲುವೆಗಳ ಒತ್ತುವರಿಯಿಂದ ಪ್ರವಾಹ ಉಂಟಾಗಬಹುದು. ಈ ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತುರ್ತಾಗಿ ತೆಗೆದುಕೊಳ್ಳಬೇಕು...

ಹೀಗೆಂದು ಬಿಬಿಎಂಪಿಯ ಯಲಹಂಕ ವಲಯದ ಎಂಜಿನಿಯರ್‌ಗಳೇ ವರದಿ ನೀಡಿದ್ದಾರೆ. ಈ ಮಾಹಿತಿಯನ್ನು ಒತ್ತುವರಿಯ ವಿವರಗಳೊಂದಿಗೆ ನೀಡಿ ತಿಂಗಳುಗಳೇ ಕಳೆದರೂ ಯಾವ ಕ್ರಮವನ್ನೂ ಸಂಬಂಧಪಟ್ಟ ಇಲಾಖೆ ಕೈಗೊಂಡಿಲ್ಲ. ಮುಖ್ಯ ಆಯುಕ್ತರಿಗೆ ಈ ವರದಿಯನ್ನು ಸಲ್ಲಿಸಲಾಗಿದ್ದರೂ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಗೆ ಇನ್ನೂ ಆದೇಶ ನೀಡಿಲ್ಲ. ತುರ್ತಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗೂ ಇಂತಹ ವಿಳಂಬ ಅಥವಾ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನೀರೆಲ್ಲ ಬಡಾವಣೆಗಳಿಗೆ ಹರಿದು, ಜನ ಸಂಕಷ್ಟಕ್ಕೆ ಒಳಗಾದಾಗ ಮಾತ್ರ ಇವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಆಕ್ರೋಶಪಟ್ಟರು.

ಬಿಬಿಎಂಪಿ ವರದಿಯಲ್ಲಿ 96 ಪ್ರಕರಣಗಳಲ್ಲಿ ಮಾತ್ರ ರಾಜಕಾಲುವೆ ಒತ್ತುವರಿ ತೆರವಾಗಿಲ್ಲ ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ಒತ್ತುವರಿ ಅತಿ ಹೆಚ್ಚಾಗಿರುವುದು ಯಲಹಂಕ ವಲಯದಲ್ಲೇ. ಕೃಷಿ ಭೂಮಿಗಳಲ್ಲಿ ಸೂಚಿಸಲಾಗಿರುವ ಖರಾಬು ಜಾಗ ಸಂಪೂರ್ಣ ಒತ್ತುವರಿಯಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ಆಗಲೇಬೇಕಿದೆ. ಯಲಹ‌ಂಕ ವಲಯದಲ್ಲೂ ಕ್ಷಿಪ್ರಗತಿಯ ಅಭಿವೃದ್ಧಿ ಕಾಮಗಾರಿಗಳು, ಬೃಹತ್‌ ಕಟ್ಟಡಗಳು ಬರುತ್ತಿವೆ. ಒತ್ತುವರಿಯಲ್ಲಿ ಯಾರೂ ಹಿಂದೆ ಉಳಿದಿಲ್ಲ. ಮುಂದೆ ಸಮಸ್ಯೆ ಉಂಟಾಗಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕಷ್ಟವಾದಾಗ ವಾಸ್ತವ ಬೆಳಕಿಗೆ ಬರುತ್ತದೆ ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.

ADVERTISEMENT

ಯಲಹಂಕ ವಲಯಲ್ಲಿ ಯಲಹಂಕ ಸೇರಿ ಜಕ್ಕೂರು, ಅಲ್ಲಾಳಸಂದ್ರ, ಕೋಗಿಲು, ಅಟ್ಟೂರು, ಸಿಂಗಾಪುರ, ದೊಡ್ಡಬೊಮ್ಮಸಂದ್ರ, ಹೆಬ್ಬಾಳ, ನವನಗರ, ರಾಚೇನಹಳ್ಳಿ ಎಂಬ ದೊಡ್ಡ ಕೆರೆಗಳು ಸೇರಿ 30 ಕೆರೆಗಳಿವೆ. ಬಿಬಿಎಂಪಿ ಪಟ್ಟಿ ಮಾಡಿರುವಂತೆಯೇ ಈ ವಲಯದಲ್ಲಿ ಆದರೆ ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಇಲ್ಲಿ ಮಾಯವಾಗಿವೆ ಎಂಬುದು ಸಿದ್ಧಪಡಿಸಿರುವ ನಕ್ಷೆಯಿಂದ ಸಾಬೀತಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಎಚ್ಚರಿಕೆಯನ್ನೂ ನಿರ್ಲಕ್ಷಿಸಲಾಗಿದೆ.

‘ಬಿಬಿಎಂಪಿಯ ರಾಜಕಾಲುವೆ ವಿಭಾಗಕ್ಕೆ ಕೋಟ್ಯಂತರ ಹಣ ನೀಡಲಾಗಿದ್ದರೂ ಕೆಲಸ ಮಾತ್ರ ಎಲ್ಲೂ ಆಗಿಲ್ಲ, ಬಿಲ್‌ ಅಷ್ಟೆ ಆಗಿದೆ. ರಾಜಕಾಲುವೆ ಒತ್ತುವರಿ ತೆರವಾಗಿಲ್ಲದ ಮೇಲೆ ಹಣ ಹೇಗೆ ಬಿಡುಗಡೆ ಮಾಡಲಾಯಿತು ಎಂಬುದಕ್ಕೆ ಜನಪ್ರತಿನಿಧಿಗಳು ಸೇರಿ ಅಧಿಕಾರಿಗಳು ಉತ್ತರ ನೀಡಬೇಕಿದೆ. ಇನ್ನು ಕೆರೆಗಳ ಒತ್ತುವರಿಯಂತೂ ಈಗಲೂ ಆಗುತ್ತಿದೆ. ಕೇಳುವವರೇ ಇಲ್ಲದಂತಾಗಿದೆ. ತುರ್ತು ಕ್ರಮ ಅಗತ್ಯ’ ಎಂದು ಯಲಹಂಕ ನಿವಾಸಿ ವಿಶ್ವನಾಥ್‌ ಆಗ್ರಹಿಸಿದರು.

ಕಾಲುವೆಗಳಿಗೆ ಸಿಮೆಂಟ್‌

ಯಲಹಂಕ ವಲಯದಲ್ಲಿ ಕೆರೆ ಒತ್ತುವರಿಯೂ ನಡೆದಿದೆ. 20 ವರ್ಷಗಳ ಹಿಂದೆ ಇದ್ದ ಕೆರೆಗಳ ಒಟ್ಟಾರೆ ವಿಸ್ತೀರ್ಣ ಕಡಿಮೆಯಾಗಿದೆ. ಭೂಮಾಲೀಕರು ಮತ್ತು ರಾಜಕಾರಣಿಗಳು ಕಂದಾಯ ಇಲಾಖೆ ನೆರವಿನಿಂದ ಕೆರೆಗಳನ್ನು ನುಂಗುತ್ತಾ ಬಂದಿದ್ದಾರೆ. ಕೆಲವು ಸ್ವಘೋಷಿತ ನಾಯಕರು ಕೆರೆ ಅಂಗಳದಲ್ಲಿ ಪೂಜಾ ಮಂದಿರ ನಿರ್ಮಿಸಿದ್ದಾರೆ. ನಿವೇಶನ ನೀಡಲು ಕಾಯ್ದೆಬದ್ಧವಾಗಿ ಸ್ಥಾಪಿತವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂಗಳ್ಳರಿಗೆ ಹಾಗೂ ರಾಜಕಾರಣಿಗಳಿಗೆ ಯೋಜನಾರಹಿತ ಬಡಾವಣೆ ನಿರ್ಮಿಸಲು ನೆರವಾಗಿದೆ. ಮಳೆನೀರು ಹರಿದುಹೋಗಲು ಇದ್ದ ಕಾಲುವೆಗಳು ಅದೃಶ್ಯವಾಗಿವೆ. ಅದರ ಮೇಲೆ ಕಟ್ಟಡ ಇದ್ದರೆ, ಕೆಲವೆಡೆ ಅದರ ಮೇಲೆ ಚಪ್ಪಡಿ ಹಾಸಿ ಸಿಮೆಂಟಿನಿಂದ ಮುಚ್ಚಲಾಗಿದೆ. ಮಹಮದ್ ಸಾಬ್ ಪಾಳ್ಯದಲ್ಲಿ ಎಲ್ಲಾ ರೀತಿಯ ನೀರು (ಸ್ನಾನ, ಅಡಿಗೆ) ಮಳೆನೀರಿನ ಕಾಲುವೆಗೆ ಸೇರುತ್ತದೆ. ಅದು ನೇರವಾಗಿ ವಿದ್ಯಾರಣ್ಯಪುರದ ನರಸೀಪುರ ಕೆರೆಗೆ ಬಂದು ಸೇರಿ, ಕೆರೆ ಯಾವಾಗಲೂ ಕೊಚ್ಚೆ ನೀರಿನಿಂದ ಕೂಡಿರುತ್ತದೆ. ಮಹಮದ್ ಸಾಬ್ ಪಾಳ್ಯದಿಂದ ಹರಿವ ಕೊಳಚೆ ನೀರಿನಲ್ಲಿ ಕೆಲವು ಸಲ ಪ್ರಾಣಿಗಳ ರಕ್ತ, ಮಾಂಸ, ಮೂಳೆಗಳನ್ನೂ ಕಾಣಬಹುದು ಎಂದು ವಿದ್ಯಾರಣ್ಯಪುರದ ಎಚ್‌.ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕೆರೆ–ರಾಜಕಾಲುವೆಗಳಿಗೆ ಸಂಪರ್ಕವಿಲ್ಲ

ಇತ್ತೀಚಿನ ದಿನಗಳಲ್ಲಿ ರಾಜಕಾಲುವೆಗಳ ಒತ್ತುವರಿ ಜೊತೆಗೆ ಅದರ ಅಗಲವನ್ನೇ ಕಡಿಮೆ ಮಾಡಲಾಗಿದೆ. ನಗರದಲ್ಲಿ ಮೂಲಸೌಕರ್ಯದ ಕೊರತೆ ಇರುವ ಸಮಯದಲ್ಲಿ ಮಳೆ ನೀರು ಹಾಗೂ ಒಳಚರಂಡಿ ನೀರು ಸೇರಿಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಗತ್ಯ ನಿಯಮಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುವಲ್ಲಿಯೂ ಆಡಳಿತ ವಿಫಲವಾಗಿದೆ. ರಾಜಕಾಲುವೆಗಳ ಒತ್ತುವರಿಯನ್ನು ಗುರುತಿಸಿದ್ದರೂ ಬಿಬಿಎಂಪಿ ಕೆಲವನ್ನು ಮಾತ್ರ ತೆರವು ಮಾಡಿದೆ. ಹೀಗಾಗಿ ರಾಜಕಾಲುವೆಗಳ ಒತ್ತುವರಿಯಿಂದ ಮಳೆನೀರು ಹರಿಯಲು ಸ್ಥಳವಿಲ್ಲದಂತಾಗಿದೆ. ಕೆರೆಯಿಂದ ಕೆರೆಗೆ ಸಂಪರ್ಕ ಕಡಿತವಾಗಿದೆ ಎಂದು ಜಲಮಿತ್ರದ ಟ್ರಸ್ಟಿ ಹಾಗೂ ಪರಿಸರ ವಿಜ್ಞಾನಿ ಡಾ. ಶೋಭಾ ಆನಂದರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.