ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೇಪಾಳ ರಾಜಧಾನಿ ಕಠ್ಮಂಡುವಿನ ಲಾರ್ಡ್ ಆಫ್ ಡ್ರಿಂಕ್ಸ್ (ಎಲ್‌ಒಡಿ) ನೈಟ್ ಕ್ಲಬ್‌ನಲ್ಲಿ ಯುವತಿಯೊಬ್ಬರ ಜೊತೆಕಾಣಿಸಿಕೊಂಡಿದ್ದರು.
12 ಸೆಕೆಂಡ್‌ಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಜತೆಗೆ. ರಾಹುಲ್ ಜತೆ ಕಾಣಿಸಿಕೊಂಡ ಯುವತಿ ಯಾರಿರಬಹುದು ಎಂದು ಅನೇಕರು ತಲೆಬಿಸಿ ಮಾಡಿಕೊಂಡಿದ್ದರು.
ಸದ್ಯ ರಾಹುಲ್ ನೇಪಾಳದಿಂದ ಭಾರತಕ್ಕೆ ಹಿಂದಿರುಗಿದ್ದಾರೆ. ಆದರೆ, ಪಾರ್ಟಿಯಲ್ಲಿ ಅವರೊಂದಿಗಿದ್ದ ಯುವತಿ ಯಾರು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಿರುವ ನೆಟ್ಟಿಗರ ಸಂಖ್ಯೆ ಕಡಿಮೆಯಾಗಿಲ್ಲ.
ನೇಪಾಳದ ಕಾಂತಿಪುರ್ ನ್ಯಾಷನಲ್ ಡೈಲಿ ವರದಿ ಪ್ರಕಾರ, ‘ಯುವತಿ ಭಾರತೀಯ ಮೂಲದ ಪೋರ್ಚುಗೀಸ್‌ನವರಾಗಿದ್ದು, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಹೇಳಲಾಗಿದೆ.
‘ಚೀನಾದ ರಾಯಭಾರಿಯ ಜತೆ ನೇಪಾಳದ ಪಬ್‌ನಲ್ಲಿ ರಾಹುಲ್ ಕಾಣಿಸಿಕೊಂಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು. ‘ಕಾಂಗ್ರೆಸ್ ಬಿಕ್ಕಟ್ಟಿನಲ್ಲಿರುವಾಗ ರಾಹುಲ್ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ’ ಎಂದು ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಈ ವಿದ್ಯಮಾನ ಕಾಂಗ್ರೆಸ್–ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.
ರಾಹುಲ್ ಗಾಂಧಿ ಅವರ ಜೊತೆ ಕಾಣಿಸಿಕೊಂಡಿರುವ ಯುವತಿ ಚೀನಾದ ರಾಯಭಾರಿ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು. ‘ಸಿಎನ್‌ಎನ್ ಸುದ್ದಿಸಂಸ್ಥೆಯ ದೆಹಲಿ ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ರಾಹುಲ್ ನೇಪಾಳಕ್ಕೆ ಭೇಟಿ ನೀಡಿದ್ದರು. ಸುಮ್ನಿಮಾ ಅವರ ತಂದೆ ಬಿಮಾ ಉದಾಸ್ ಅವರು ಮ್ಯಾನ್ಮಾರ್‌ಗೆ ನೇಪಾಳದ ರಾಯಭಾರಿಯಾಗಿದ್ದರು.
ಚೀನಾದ ಯಾವ ರಾಯಭಾರಿಯೂ ರಾಹುಲ್ ಜೊತೆ ಇರಲಿಲ್ಲ ಎಂದು ಕ್ಲಬ್ ನಿರ್ವಾಹಕರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.