ADVERTISEMENT

ಅನಂತಕುಮಾರ್‌ ರಾಣೆಬೆನ್ನೂರಿಗೆ ಬಂದಿದ್ದ ಕ್ಷಣಗಳ ನೆನಪು

ಕೇಂದ್ರ ಸಚಿವರ ನಿಧನದಿಂದ ರಾಜ್ಯ ಬಡವಾಗಿದೆ ಎಂದ ಅವರ ಒಡನಾಡಿಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:12 IST
Last Updated 12 ನವೆಂಬರ್ 2018, 20:12 IST
ಕೇಂದ್ರ ಸಚಿವ ದಿ. ಎಚ್‌.ಎನ್‌. ಅನಂತಕುಮಾರ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರನಟ ಶ್ರೀನಾಥ ಅವರು ರಾಣೆಬೆನ್ನೂರಿನ ಕೆ.ಶಿವಲಿಂಗಪ್ಪ ಅವರ ಮನೆಯಲ್ಲಿ ನಡೆದ ಟಿಕೆಟ್ ಹಂಚಿಕೆ ಸಭೆಯಲ್ಲಿ ಆಗಿನ ಬಿಜೆಪಿ ನಗರದ ಘಟಕದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅವರೊಂದಿಗೆ ಚರ್ಚಿಸಿದರು
ಕೇಂದ್ರ ಸಚಿವ ದಿ. ಎಚ್‌.ಎನ್‌. ಅನಂತಕುಮಾರ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರನಟ ಶ್ರೀನಾಥ ಅವರು ರಾಣೆಬೆನ್ನೂರಿನ ಕೆ.ಶಿವಲಿಂಗಪ್ಪ ಅವರ ಮನೆಯಲ್ಲಿ ನಡೆದ ಟಿಕೆಟ್ ಹಂಚಿಕೆ ಸಭೆಯಲ್ಲಿ ಆಗಿನ ಬಿಜೆಪಿ ನಗರದ ಘಟಕದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅವರೊಂದಿಗೆ ಚರ್ಚಿಸಿದರು   

ರಾಣೆಬೆನ್ನೂರು: ಕೇಂದ್ರ ಸಚಿವ ಎಚ್‌.ಎನ್‌. ಅನಂತಕುಮಾರ್‌ ಅವರು ಎಬಿವಿಪಿಯಿಂದ 1980ರಿಂದ ರಾಣೆಬೆನ್ನೂರಿನ ನಿಕಟ ಸಂಪರ್ಕ ಹೊಂದಿದ್ದರು. ಅಖಂಡ ಧಾರವಾಡ ಜಿಲ್ಲೆಯ ಎಬಿವಿಪಿ ಸಂಘಟನಾ ಕಾರ್ಯದರ್ಶಿಯಾಗಿದ್ದಾಗ ಎಲ್ಲ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡಿದ್ದರು.

ಇಲ್ಲಿನ ಶಾಸ್ತ್ರಿ ಪಾರ್ಕ್‌ನಲ್ಲಿ ವಾಣಿಜ್ಯ ಮಳಿಗೆ ಕಟ್ಟಡ ಕಟ್ಟಿದ್ದನ್ನು ಬಿಜೆಪಿ ವಿರೋಧಿಸಿ ವಾಣಿಜ್ಯ ಮಳಿಗೆ ತೆರವು ಗೊಳಿಸಲು ಪ್ರತಿಭಟನೆ ನಡೆಸಿದಾಗ ಅನಂತಕುಮಾರ ಅವರು ಮುಂಚೂಣಿಯಲ್ಲಿದ್ದು ನಗರಸಭೆಗೆ ಮುತ್ತಿಗೆ ಹಾಕಿದಾಗ ನಮ್ಮ ಹೋರಾಟವನ್ನು ಬೆಂಬಲಿಸಿದ್ದರು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಹೇಳಿದರು.

ತಮ್ಮ ನಿವಾಸದಲ್ಲಿ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, 1996–97ರಲ್ಲಿ ಕೆ.ಶಿವಲಿಂಗಪ್ಪ ಅವರ ನಿವಾಸದಲ್ಲಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಬಗ್ಗೆ ಸಭೆ ನಡೆದಾಗ ಅನಂತಕುಮಾರ್‌ ಅವರು ಶ್ರೀನಾಥ್‌ ಅವರೊಂದಿಗೆ ಭಾಗವಹಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಉದ್ಯೋಗಿ ಸತೀಶ ಕುಲಕರ್ಣಿ ಅವರು ರಾಣೆಬೆನ್ನೂರಿನಲ್ಲಿ ನೌಕರಿ ಮಾಡುವಾಗ ಅವರ ಬಳಿ ಹೆಚ್ಚಿನ ಸಂಪರ್ಕದಲ್ಲಿದ್ದರು.

ADVERTISEMENT

ಅನಂತಕುಮಾರ್‌ ಅವರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದರು. ಕರ್ನಾಟಕ ಸಂಘದ ಕಚೇರಿಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಸಂಘದ ಸದಸ್ಯರ ಮನೆಯಲ್ಲಿ ಊಟ ಮಾಡುತ್ತಿದ್ದರು. ಸೈಕಲ್ ಮೇಲೆ ಪ್ರವಾಸ ಮಾಡುತ್ತಿದ್ದರು. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿದ್ದರೂ ಬಗೆ ಹರಿಸುವಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಎಫ್‌.ಕೆ. ಬಿದರಿ ಅವರು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದಾಗ 1985ರಲ್ಲಿ ನೆಹರು ಮಾರುಕಟ್ಟೆಯಲ್ಲಿರುವ ‘ಗಾಂಧಿ ಕಟ್ಟೆ ಉಳಿಸಿ’ ಹೋರಾಟದಲ್ಲಿ ಕೂಡ ಭಾಗವಹಿಸಿದ್ದರು.

ಬಿಜೆಪಿ ಹಿರಿಯ ಮುಖಂಡ ಕೆ. ಶಿವಲಿಂಗಪ್ಪ ಮಾತನಾಡಿ, ನಾನು ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದಾಗ ಅನಂತಕುಮಾರ್ ಜಿಲ್ಲೆಯ 7 ತಾಲ್ಲೂಕುಗಳ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದೆವು. ಅವರಿಗೆ ನೆನಪಿನ ಶಕ್ತಿ ಬಹಳ, ಎಲ್ಲರನ್ನೂ ಅವರ ಹೆಸರಿನಿಂದಲೇ ಕರೆಯುತ್ತಿದ್ದರು. ಶಿಸ್ತಿನ ಶಿಪಾಯಿಯಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ರಾಷ್ಟ್ರ ನಾಯಕರು ಮತ್ತು ವಿಶ್ವದ ಪ್ರಮುಖ ರಾಷ್ಟ್ರಗಳ ಮುಖಂಡರ ಸಂಪರ್ಕದಲ್ಲಿದ್ದರು. ಎಬಿವಿಪಿಯಿಂದಲೇ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಂಡಿದ್ದರು.
2004ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ರಾಜ್ಯಮಟ್ಟದ ರ್‍ಯಾಲಿ ನಡೆಸಿದ್ದರು. ಬೆಂಗಳೂರಿಗೆ ತೆರಳುವಾಗ ತಾಲ್ಲೂಕಿನ ನಲವಾಗಲ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಒತ್ತಾಯದಿಂದ ಭಾಗವಹಿಸಿದ್ದರು. ನೂರಾರು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಕುಂಭ ಮೇಳದೊಂದಿಗೆ ಸ್ವಾಗತಿಸಿದರು.

ಬಿ.ಎಸ್‌.ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಬೆಳಗಾವಿಯ ಶಂಕರಗೌಡ, ರಾಜ್ಯ ಖಜಾಂಚಿ ರಾಜೇಂದ್ರ ಗೋಖಲೆ ಭಾಗವಹಿಸಿದ್ದರು. ಅನಂತಕುಮಾರ್‌ ಅವರ ವಿವಿಧ ಕೈಗಾರಿಕೆಗಳ ಕೆಲ ಕೇಸುಗಳನ್ನು ನಾನು ನಡೆಸುತ್ತಿದ್ದೆ. ಅನಂತಕುಮಾರ ಕೂಡ ವಕೀಲರಾಗಿದ್ದರಿಂದ ನನಗೆ ಅವರು ಮಾರ್ಗದರ್ಶನ ಮಾಡಿದ್ದರು.ಅವರು ಇಲ್ಲಿಗೆ ಬಂದಾಗ ಸಂಜೆ ಹೊತ್ತು ಅಂಚೆ ಕಚೇರಿ ವೃತ್ತದಿಂದ ಟಾಂಗಾಕೂಟದವರೆಗೆ ನಡೆದುಕೊಂಡು ಹೋಗಿ ಅಲ್ಲಿ ಮಂಡಕ್ಕಿ ಮಿರ್ಚಿ ತಿನ್ನುತ್ತಿದ್ದೆವು.

ಇಲ್ಲಿನ ಸಿದ್ದೇಶ್ವರನಗರದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವಾಗ ಮಾಜಿ ಸ್ಪೀಕರ್ ದಿ. ಬಿ.ಜಿ.ಬಣಕಾರ, ದಿ.ಎಫ್‌.ಕೆ. ಬಿದರಿ, ಮುಖ್ಯಮಂತ್ರಿ ಚಂದ್ರು, ಪೃಥ್ವಿರಾಜ ಜೈನ, ವೆಂಕಟೇಶ ಏಕಬೋಟೆ, ದಿವಂಗತ ಬಿ.ಎಂ. ಜಯದೇವ, ಸತೀಶ ಹೊಳೆಬಾಗಿಲ, ಪ್ರಜಾವಾಣಿ ಪತ್ರಕರ್ತ ದಿ.ಎನ್‌. ಲೊಕೇಶ್ವರಪ್ಪ, ಸಂಕಪ್ಪ ಮಾರನಾಳ ಅವರೊಂದಿಗೆ ಭಾಗವಹಿಸಿದ್ದರು.

ಗಂಗಾಪುರ ಶಾಲೆಯ ಮುಖ್ಯಶಿಕ್ಷಕ ಶಂಭುಲಿಂಗ ಷಡಕ್ಷರಿಮಠ ಮಾತನಾಡಿ, ನಾನು 1982ರಲ್ಲಿ ಸುಣಕಲ್‌ಬಿದರಿ ಕಾಲೇಜಿನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ, ಆಗ ನನಗೆ ಶಂಭು ಅಂತಾನೆ ಕರೆಯುತ್ತಿದ್ದರು. ಅವರು ಎಬಿವಿಪಿ ಅಭ್ಯಾಸ ವರ್ಗದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಆರ್‌ಟಿಇಎಸ್‌ ಕಾಲೇಜಿನಲ್ಲಿ ಓದುವಾಗ ಎಬಿವಿಪಿ ನಗರಘಟಕದ ಕಾರ್ಯದರ್ಶಿಯಾಗಿದ್ದೆ. ಆಗ ಅವರು ನನಗೆ ಹುಬ್ಬಳ್ಳಿಯಲ್ಲಿ ನಡೆದ ಎಬಿವಿಪಿ ರಾಜ್ಯಮಟ್ಟದ ಅಭ್ಯಾಸ ವರ್ಗದಲ್ಲಿ ಭಾಗವಹಿಸಲು ಕರೆ ಕೊಟ್ಟು ತರಬೇತಿ ನೀಡಿದ್ದರು. ದಾವಣಗೆರೆಯಲ್ಲಿ ನಡೆದ ಎಬಿವಿಪಿ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯನನ್ನಾಗಿ ಘೋಷಣೆ ಮಾಡಿದ್ದರು. ಬಾಗಲಕೋಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಕಾಲೇಜು ಚುನಾಯಿತ ಸದಸ್ಯರ ಸಭಾ ಸಂಚಾಲಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿದ್ದರು.

1987ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. ನಾನು ಶಿಕ್ಷಕನಾಗಿ ಸರ್ಕಾರಿ ಸೇವೆಗೆ ಸೇರಿದೆ ಎಂದರು.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.