ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್ ವಶಕ್ಕಾಗಿ ‘ಅನಂತ’ ಯತ್ನ

ರಾಜಕೀಯ ಪ್ರಯೋಗ ನಡೆಸಿ ಯಾದಗಿರಿಯಲ್ಲಿ ಬಿಜೆಪಿ ಅರಳಿಸಲು ಕಾರಣರಾದ ಅನಂತಕುಮಾರ್
Last Updated 12 ನವೆಂಬರ್ 2018, 15:48 IST
ಅಕ್ಷರ ಗಾತ್ರ

ಯಾದಗಿರಿ: ನಿಪುಣ ರಾಜಕಾರಣಿ ಎಂದೇ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿವ ಅನಂತಕುಮಾರ್ ‘ಯಾದಗಿರಿ’ ಜಿಲ್ಲೆಯ ರಾಜಕೀಯ ಬೆಳವಣಿಗೆಯತ್ತ ವಿಶೇಷ ಆಸಕ್ತಿ ಹೊಂದಿದ್ದರು ಎಂಬುದಾಗಿ ಬಿಜೆಪಿ ನಾಯಕರಲ್ಲಿ ಚರ್ಚೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂ ಸಂಘ ಸಕ್ರಿಯವಾಗಿಸುವಲ್ಲಿ ಸಚಿವ ಅನಂತಕುಮಾರ್ ವಿಶೇಷ ಆಸಕ್ತಿ ಕೂಡ ಕಾರಣವಾಗಿದೆ. ಯಾದಗಿರಿ ರಾಜಕೀಯ ಚರ್ಚೆಗೆ ಬರುತ್ತಿದ್ದಂತೆ ಅವರು ಸದಾ ಕಾಂಗ್ರೆಸ್‌ ಹಿಡಿತದಲ್ಲಿರುವ ‘ಯಾದಗಿರಿ’ ಮತ್ತು ‘ಗುರುಮಠಕಲ್’ ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿಸುವಂತೆ ಸ್ಥಳೀಯ ನಾಯಕರ ಮೇಲೆ ಒತ್ತಡ ಹೇರುತ್ತಾ ಬಂದಿದ್ದರು.

48 ವರ್ಷ ಗುರುಮಠಕಲ್‌ ಆಳಿದ ಕಾಂಗ್ರೆಸ್‌ ಧುರೀಣ ಮಲ್ಲಿಕಾರ್ಜುನ ಖರ್ಗೆ ಹಾಗೂ ಯಾದಗಿರಿಯಲ್ಲಿ 36 ವರ್ಷ ಅಧಿಕಾರ ಅನುಭವಿಸಿದ ಡಾ.ಎ.ಬಿ.ಮಾಲಕರಡ್ಡಿ ಅವರಿಂದ ಈ ಕ್ಷೇತ್ರಗಳ ಅಭಿವೃದ್ಧಿ ಹಿನ್ನಡೆ ಕುರಿತು ಅವರು ಬಹಿರಂಗ ವೇದಿಕೆಗಳಲ್ಲಿ ಚರ್ಚಿಸುತ್ತಿದ್ದರು. ಖರ್ಗೆ ಹಾಗೂ ಡಾ.ಎ.ಬಿ.ಮಾಲಕರಡ್ಡಿ ಅವರಂಥ ನಾಯಕರುಗಳ ಆಡಳಿತ ವೈಫಲ್ಯದ ವಿರುದ್ಧ ನಿಷ್ಠುರವಾಗಿ ಮಾತನಾಡುತ್ತಿದ್ದರು.

ಕ್ಷೇತ್ರ ಬದಲಿಸಿ ಯಶಸ್ವಿಗೊಂಡ ದೂರದೃಷ್ಟಿ:ಅನಂತಕುಮಾರ್ ರಾಜ್ಯದ ಪ್ರತಿಯೊಂದು ಕ್ಷೇತ್ರಗಳ ಸಮಸ್ತ ರಾಜಕೀಯ ಸ್ಥಿತಿಗತಿ ಅರಿತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್‌ ಕ್ಷೇತ್ರಗಳ ರಾಜಕೀಯ ಸ್ಥಿತಿಗತಿಗಳ ಆಳ ಅಧ್ಯಯನ ಅವರು ನಡೆಸಿದ್ದರು. ಹಾಗಾಗಿ, ಗುರುಮಠಕಲ್‌ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧಗೊಂಡಿದ್ದ ವೆಂಕಟರೆಡ್ಡಿ ಮುದ್ನಾಳ ಅವರನ್ನು ದಿಢೀರ್ ಅಂತ ಕ್ಷೇತ್ರ ಬದಲಿಸುವಲ್ಲಿ ಅನಂತಕುಮಾರ್ ದೂರದೃಷ್ಟಿ ಕಾರಣ ಎಂಬುದಾಗಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಒಪ್ಪಿಕೊಳ್ಳುತ್ತಾರೆ.

‘ಗುರುಮಠಕಲ್‌ನಲ್ಲಿ ದಶಕದಿಂದ ರಾಜಕೀಯವಾಗಿ ಸಂಘಟನೆಗೊಳಿಸಿ ಚುನಾವಣೆಗೆ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ದಿಢೀರ್‌ ಅಂತ ಕ್ಷೇತ್ರ ಬದಲಿಸಲು ಪಕ್ಷದ ವರಿಷ್ಠರು ನಿರ್ಣಯಿಸಿದರೆ ಸ್ಥಳೀಯ ಅಭ್ಯರ್ಥಿಯ ಪರಿಸ್ಥಿತಿ ಹೇಗಾಗಿರಬೇಡ? ಅಂಥಾ ನಿರ್ಧಾರದಿಂದ ನಾನೂ ಕುಸಿದು ಹೋಗಿದ್ದೆ. ಇದು ಅನಂತಕುಮಾರ್ ಅವರ ಕೆಟ್ಟ ನಿರ್ಧಾರ ಅಂತಲೂ ಮನಸ್ಸಿನಲ್ಲೇ ಬೇಸರಗೊಂಡಿದೆ.‘ನಿಮ್ಮ ತಂದೆ ಪ್ರತಿನಿಧಿಸಿರುವ ಕ್ಷೇತ್ರ. ಧೈರ್ಯ ಮಾಡಿ ಮುನ್ನುಗ್ಗಿ, ನಿಮಗೆ ಒಳ್ಳೆಯದಾಗುತ್ತದೆ’ ಎಂಬುದಾಗಿ ಅನಂತ ಕುಮಾರ್ ಆಗ ನನಗೆ ಆತ್ಮಸ್ಥೈರ್ಯ ತುಂಬಿದ್ದರು. ನಂತರ ಫಲಿತಾಂಶ ಬಂದ ನಂತರ ಅನಂತಕುಮಾರ್ ಅವರ ರಾಜಕೀಯ ನಿಪುಣತೆ, ದೂರದೃಷ್ಟಿ ಕಂಡು ಬೆರಗಾದೆ’ ಎನ್ನುತ್ತಾರೆ ಅವರು.

‘ಚುನಾವಣೆ ಸಂದರ್ಭದಲ್ಲಿ ಹೈದರಾಬಾದ್‌ ಕರ್ನಾಟಕದ ಭಾಗದ ಮತಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಅಂತಿಮಗೊಳಿಸುವಲ್ಲಿ ಅನಂತಕುಮಾರ್‌ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೆರವಾಗುತ್ತಿದ್ದರು. ಕೆಲವೊಂದು ಕ್ಷೇತ್ರಗಳಲ್ಲಿ ಅನಂತಕುಮಾರ್‌ ಆಯ್ಕೆಗೊಳಿಸಿದ ಅಭ್ಯರ್ಥಿಗಳೇ ಹೆಚ್ಚು ಗೆಲುವು ಪಡೆದಿದ್ದಾರೆ. ಅದೇ ರೀತಿಯಲ್ಲಿ ಕಳೆದ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಟಿಕೆಟ್ ಹಂಚಿಕೆ ಮಾಡಿ ರಾಜಕೀಯ ಪ್ರಯೋಗ ನಡೆಸಿದ್ದರು. ಅವರ ಈ ಪ್ರಯೋಗದಲ್ಲಿ ಯಾದಗಿರಿ ಮತಕ್ಷೇತ್ರ ಬಿಜೆಪಿ ಪಾಲಾಯಿತು’ ಎಂಬುದಾಗಿ ಬಿಜೆಪಿ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಶರಣಭೂಪಾಲ ರೆಡ್ಡಿ ನಾಯ್ಕಲ್‌ ಸ್ಮರಿಸುತ್ತಾರೆ.

‘ಬೆಂಗಳೂರಿನಲ್ಲೇ ಕುಳಿತು ಜಿಲ್ಲೆಯ ರಾಜಕೀಯ ರೂಪುರೇಷೆ ಹೆಣೆಯುತ್ತೀರಿ. ಜಿಲ್ಲೆಗೆ ಬನ್ನಿ ಎಂಬುದು ಅನಂತಕುಮಾರ್ ಅವರಿಗೆ ಜಿಲ್ಲೆಯ ಬಿಜೆಪಿ ನಾಯಕರ ಆಗ್ರಹ ಇತ್ತು. ಹಾಗಾಗಿ, ಪರಿವರ್ತನಾ ಯಾತ್ರೆ ಸಂದರ್ಭದಲಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಜತೆಗೂಡಿ ಬಂದಿದ್ದರು. ಜಿಲ್ಲೆಯ ಸಮಗ್ರ ಸ್ಥಿತಿಗತಿ ಅಂಕಿಅಂಶಗಳ ಸಹಿತ ಅವರು ಮಾಡಿದ ಭಾಷಣ ಕೇಳಿ ಅವಕ್ಕಾದೆವು’ ಎಂಬುದಾಗಿ ಬಿಜೆಪಿಯ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರ್‌ಗೌಡ ಮಾಗನೂರ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT