ವಿಜಯಪುರ: ಲಿಂಗಾಯತರು, ಬ್ರಾಹ್ಮಣರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಸಮ್ಮಿಳಿತಗೊಂಡರೇ ಮಾತ್ರ ದಕ್ಷಿಣ ಭಾರತದಲ್ಲಿ ಕಮಲ ಅರಳಲು ಸಾಧ್ಯ ಎಂಬುದನ್ನು ಅನಂತಕುಮಾರ್ ಮನಗಂಡಿದ್ದವರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಿದ್ದ ಸಂದರ್ಭ. 2004ರಲ್ಲಿ ಲೋಕಸಭೆ– ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದಿತ್ತು. ಇದೇ ವೇಳೆ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರು ಶೂನ್ಯ ಭಾವದಲ್ಲಿದ್ದರು. ಈ ಸಂದರ್ಭ ತಮ್ಮ ರಾಜಕೀಯ ಚಾಣಾಕ್ಷ ನಡೆ ಅನುಸರಿಸಿ, ದೊಡ್ಡ ಪಡೆಯನ್ನೇ ಬಿಜೆಪಿಗೆ ಕರೆ ತಂದು ಪಕ್ಷದ ಬಲ ಹೆಚ್ಚಿಸಿದ ಚತುರಮತಿಯಾಗಿದ್ದರು.
‘ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮುಧೋಳ ಶಾಸಕ ಗೋವಿಂದ ಕಾರಜೋಳ, ಮಾಜಿ ಸಂಸದ ಕೆ.ಬಿ.ಶಾಣಪ್ಪ ಅವರು ಉತ್ತರ ಕರ್ನಾಟಕ ದಲಿತ (ಎಡಗೈ) ಸಮುದಾಯದ ಪ್ರಮುಖ ನಾಯಕರು. ಈ ತ್ರಿಮೂರ್ತಿಗಳನ್ನು ಒಟ್ಟಿಗೆ ಬಿಜೆಪಿಗೆ ಕರೆ ತಂದು ದಲಿತ ಬಲ ತುಂಬಿದವರು ಅನಂತಕುಮಾರ್’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ಇದೇ ರೀತಿ ಜನತಾ ಪರಿವಾರದಲ್ಲೇ ಗುರುತಿಸಿಕೊಂಡಿದ್ದ ಲಿಂಗಾಯತ ಪ್ರಮುಖರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ಇನ್ನಿತರರ ತಂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅನಂತಕುಮಾರ್ ಬಿಜೆಪಿ ಅಧ್ಯಕ್ಷರಿದ್ದಾಗಲೇ ಎಂಬುದನ್ನು ಅವರು ನೆನಪಿಸಿಕೊಂಡರು.
ಅನಂತ್ ಅತ್ಯಾಪ್ತ: ‘1998ರಲ್ಲಿ ರಾಮಕೃಷ್ಣ ಹೆಗಡೆ ಸೂಚನೆಯಂತೆ ಲೋಕಶಕ್ತಿ ಪಕ್ಷದಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹುರಿಯಾಳಾಗಿದ್ದೆ. ಈ ಚುನಾವಣೆಯಲ್ಲಿ ಹೆಗಡೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರು. ಇಲ್ಲಿಂದ ನನ್ನ ಬಿಜೆಪಿ ನಂಟು ಆರಂಭವಾಗಿತ್ತು’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.
‘1999ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಮತ್ತೊಮ್ಮೆ ಗೆದ್ದೆ. 2004ರ ಚುನಾವಣೆ ವೇಳೆಗೆ ಜನತಾ ಪರಿವಾರ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆಗಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಅನಂತಕುಮಾರ್, ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಜತೆ ಚರ್ಚಿಸಿ, ನಮ್ಮ ದೊಡ್ಡ ತಂಡವನ್ನೇ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು. ಬಿಜೆಪಿಗೆ ದಲಿತ ಎಡಗೈ ಸಮುದಾಯದವರನ್ನು ಕರೆ ತರುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು’ ಎಂಬುದನ್ನು ಜಿಗಜಿಣಗಿ ಸ್ಮರಿಸಿದರು.
‘ನಮ್ಮಿಬ್ಬರ ನಡುವೆ ಅತ್ಯಾಪ್ತತೆಯಿತ್ತು. ಹೆಗಡೆ ಅವರಿಲ್ಲದ ಶೂನ್ಯಭಾವವನ್ನು ಅನಂತ್ ನನ್ನಿಂದ ದೂರಾಗಿಸಿದ್ದರು. ನನ್ನ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದರು. ಅನೇಕ ಬಾರಿ ನಮ್ಮಿಬ್ಬರ ನಡುವೆ ವಾದ–ವಿವಾದ ನಡೆದಿದೆ. ಪಕ್ಷದಲ್ಲಿನ ವಿದ್ಯಮಾನಗಳನ್ನು ಅವರೊಟ್ಟಿಗೆ ನೇರವಾಗಿ ಹಂಚಿಕೊಳ್ಳುತ್ತಿದ್ದೆ’ ಎಂದು ಅವರ ಜತೆಗಿನ ಒಡನಾಟವನ್ನು ಜಿಗಜಿಣಗಿ ಹೇಳಿದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.