ಮಂಗಳೂರು: ನಿಧನರಾಗಿರುವ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿದ್ದ 'ಮಂಗಳೂರು ಮುಸ್ಲಿಮ್ಸ್' ಫೇಸ್ಬುಕ್ ಪೇಜ್ ಅಡ್ಮಿನ್ ವಿರುದ್ಧ ನಗರದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಲಾಗಿದೆ.
ಸೋಮವಾರ ಬೆಳಿಗ್ಗೆ ಅನಂತಕುಮಾರ್ ನಿಧನರಾಗಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಂಗಳೂರು ಮುಸ್ಲಿಮ್ಸ್ ಫೇಸ್ಬುಕ್ ಪೇಜ್ ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪಾಂಡೇಶ್ವರ ಠಾಣೆಯ ಸಬ್ಇನ್ಸ್ಪೆಕ್ಟರ್ ನೀಡಿರುವ ದೂರನ್ನು ಆಧರಿಸಿ ಫೇಸ್ಬುಕ್ ಪುಟದ ಅಡ್ಮಿನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.
ಅಡ್ಮಿನ್ ವಿರುದ್ಧ ದೂರು
ಮಂಡ್ಯ: ಇದೇ ಫೇಸ್‌ಬುಕ್ ಪ್ರಕಟಣೆಗೆ ಸಂಬಂಧಿಸಿದಂತೆನರೇಂದ್ರ ಮೋದಿ ವಿಚಾರ ವೇದಿಕೆ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್‌ಬುಕ್‌ಪುಟದಲ್ಲಿ ಕೇಂದ್ರ ಸಚಿವರ ಸಾವನ್ನು ಸಂಭ್ರಮಿಸಿ ಸಂದೇಶ ಪ್ರಕಟಿಸಲಾಗಿದೆ. ಜಾತಿ ನಿಂದನೆ, ಕೋಮುಭಾವ ಕೆರಳಿಸುವ ರೀತಿಯಲ್ಲಿ ಬರೆಯಲಾಗಿದೆ. ಸಾವಿನಲ್ಲೂ ವಿಕೃತಿ ತೋರಿರುವ ವ್ಯಕ್ತಿಗಳನ್ನು ಕೂಡಲೇ ಪತ್ತೆಹಚ್ಚಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಸಾವಿನ ಸಂದರ್ಭದಲ್ಲಿ ಈ ರೀತಿ ವರ್ತಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಆನ್‌ಲೈನ್ ಪೋರ್ಟಲ್ ಮೂಲಕ ದೂರು ಸಲ್ಲಿಸಿರುವುದಾಗಿ ಮಂಜುನಾಥ್ ತಿಳಿಸಿದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.