ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ₹600 ಕೋಟಿ ಮೌಲ್ಯದ ಭೂಕಬಳಿಕೆ

ಕೆಂಗೇರಿಯಲ್ಲಿ ಭೂಮಾಫಿಯಾದಿಂದ ನಕಲಿ ದಾಖಲೆ ಸೃಷ್ಟಿ; ಪ್ರಕರಣ ದಾಖಲು
Published 10 ಮೇ 2024, 0:05 IST
Last Updated 10 ಮೇ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಬೆಂಗಳೂರಿನ ಕೆಂಗೇರಿಯಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿರುವ ಭೂ ಮಾಫಿಯಾದವರು, ಸರ್ಕಾರದ ಸುಮಾರು ₹600 ಕೋಟಿ ಮೌಲ್ಯದ 40 ಎಕರೆ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ.

ಕೆಂಗೇರಿಯ ಸರ್ವೆ ನಂ.69ರಲ್ಲಿ 93 ಎಕರೆ ಮೂರು ಗುಂಟೆ ಭೂಮಿ ಇದ್ದು, ಗೋಮಾಳ ಎಂದು ದಾಖಲಾಗಿದೆ. ಇದರ ಒಂದು ಭಾಗವನ್ನು ಬಿಜಿಎಸ್‌ ಆಸ್ಪತ್ರೆಗೆ ಗುತ್ತಿಗೆಗೆ ನೀಡಲಾಗಿದ್ದು,  ಸುತ್ತಮುತ್ತಲಿನ ಪ್ರದೇಶದಲ್ಲಿ
ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಅತಿಯಾಗಿವೆ. ಇದರಲ್ಲಿ ಭೂಮೌಲ್ಯ ಅಧಿಕವಾಗಿದೆ.

ಎರಡು ದಶಕಗಳಲ್ಲಿ ಭೂಮಾಫಿಯಾ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ನಿರತವಾಗಿದೆ. ತಹಶೀಲ್ದಾರ್‌ ಅವರು ಐದು ಎಕರೆಗೆ ಹೊಸ ಸರ್ವೆ ನಂಬರ್‌ ಸೃಷ್ಟಿಸುವ ಆದೇಶವನ್ನು ಹೊರಡಿಸಿದ್ದು, ಅದನ್ನು 2022ರ ಮಾರ್ಚ್‌ 9ರಂದು ಕಂದಾಯ ಇಲಾಖೆಯ ಉಪ ನಿರ್ದೇಶಕರು ರದ್ದುಗೊಳಿಸುವ ಪ್ರಯತ್ನ ಮಾಡಿದ್ದರು.

ಭೂಮಿ ಕಬಳಿಸುವ ಬಗ್ಗೆ ಕಳೆದ ತಿಂಗಳು ದೂರು ಸ್ವೀಕರಿಸಿದ್ದ ಅಧಿಕಾರಿಗಳು, ಅದನ್ನು ಪರಿಶೀಲಸಲು ಹೋಗಿದ್ದಾಗ ಕೆಲವು ವ್ಯಕ್ತಿಗಳು ಭೂಮಿ ತಮ್ಮದೆಂದು ವಾದಿಸಿದ್ದರು. ಆದರೆ,  ಅವರು ದಾಖಲೆಗಳನ್ನು ತೋರಿಸಿರಲಿಲ್ಲ. ಆ ಭೂಮಿ ಬೆಟ್ಟಗುಡ್ಡಗಳಿಂದ ಕೂಡಿದ ಗೋಮಾಳವಾಗಿದೆ. ಈ ಭೂಮಿಗೆ 2023ರಲ್ಲಿ 25 ಪೋಡಿಗಳನ್ನು ಮಾಡಲಾಗಿದ್ದು, ತಲಾ 1.5 ಎಕರೆ ಭೂಮಿಯನ್ನು 25 ವ್ಯಕ್ತಿಗಳಿಗೆ ಹಂಚಲಾಗಿತ್ತು. ಪ್ರತಿ ಪೋಡಿಗೂ ಹೊಸ ಸರ್ವೆ ನಂಬರ್‌ ನೀಡಲಾಗಿತ್ತು. 

‘ದಾಖಲೆಗಳು ಇಲ್ಲದ್ದನ್ನು ಅಧಿಕಾರಿಗಳು ಹಾಗೂ ಭೂಮಾಫಿಯಾ ತಮ್ಮ ಪ್ರಯೋಜನಕ್ಕಾಗಿ ಬಳಸಿ
ಕೊಂಡಿದ್ದಾರೆ. ಪೌತಿ ಖಾತೆಗಳನ್ನು ಸೃಷ್ಟಿಸಲಾಗಿದೆ. 1980ರಲ್ಲಿ 25 ವ್ಯಕ್ತಿಗಳಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಎರಡು ವಾರಗಳವರೆಗೂ ಈ ಯಾವ ವ್ಯಕ್ತಿಗಳೂ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರಲಿಲ್ಲ. ಇದೀಗ ಈ ಭೂಮಿಯನ್ನು ಬಿಲ್ಡರ್‌ಗೆ ಮಾರಾಟ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಪೋಡಿ ಮಾಡಿಕೊಡುವ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪರಿಶೀಲಿಸಬೇಕು ಎಂದು ಉಪ ವಿಭಾಗಾಧಿಕಾರಿ ಹೇಳಿದ್ದರು. ಇದನ್ನು ಸಮಿತಿ ಮುಂದೆ ಪ್ರಸ್ತುತಪಡಿಸಿ, ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಸಮಿತಿ ಮುಂದೆ ಪ್ರಕರಣ ಹೋಗದೆ, ನೇರವಾಗಿ ಪೋಡಿ ಮಾಡಿಕೊಡಲಾಗಿದೆ’ ಎಂದು ಮಧ್ಯಂತರ ವರದಿಯಲ್ಲಿ ವಿವರಿಸಲಾಗಿದೆ.

‘ಏಪ‍್ರಿಲ್‌ 23ರಂದು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಮುಂದಿನ ಭೇಟಿ ಮೇ 7ರಂದು ನಿಗದಿಯಾಗಿತ್ತು. ಅಂದು ಅಧಿಕಾರಿಗಳು ಅಲ್ಲಿಗೆ ಹೋದ ಸಂದರ್ಭದಲ್ಲಿ 15 ಎಕ್ಸಾವೇಟರ್‌ ಗಳು ಕಾರ್ಯನಿರ್ವಹಿಸುತ್ತಿದ್ದವು. ಕೆಲಸ ನಿರ್ವಹಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ತರಲಾಯಿತು. ಅಲ್ಲಿದ್ದ ತಂಡ, ಸರ್ವೆ ಮಾಡಲು ಅನುವು ಮಾಡಿಕೊಡಲಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ತನಿಖೆಗೆ ಸಮಿತಿ ರಚನೆ

ಈ ಭೂ ಕಬಳಿಕೆಯ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ, ‘ಸರ್ಕಾರಿ ಜಮೀನನ್ನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು
ಹೇಳಲಾಗುತ್ತಿದ್ದರೂ ಅದು ಕಾನೂನು ಪ್ರಕಾರ ಇಲ್ಲ. ಈ ಪ್ರಕರಣವನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಲಾಗಿದೆ. ಕಳೆದ ತಿಂಗಳು ವ್ಯಕ್ತಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಅವರು ಒಂದು ವಾರ ಸಮಯ ಕೇಳಿದ್ದರು. ಹೀಗಿದ್ದರೂ, ಮೇ 7ರಂದು ನಮ್ಮ ಅಧಿಕಾರಿಗಳು ಸರ್ವೆ ಮಾಡುವುದನ್ನು ಕೆಲವು ವ್ಯಕ್ತಿಗಳು ತಡೆದಿದ್ದಾರೆ. ಸರ್ಕಾರಿ ಭೂ ಕಬಳಿಕೆಯ ಪ್ರಕರಣವನ್ನು ನೋಂದಾಯಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT