ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಪ್ರಧಾನಿ ಆರ್ಥಿಕ ಸಲಹೆಗಾರರ ವರದಿಯಲ್ಲಿ ಹಲವಾರು ದೋಷ

ಹಿಂದೂ–ಮುಸ್ಲಿಮರ ಜನಸಂಖ್ಯೆ ಪ್ರಮಾಣ
Published 10 ಮೇ 2024, 0:30 IST
Last Updated 10 ಮೇ 2024, 0:30 IST
ಅಕ್ಷರ ಗಾತ್ರ

‘ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 1950ರಿಂದ 2015ರ ನಡುವೆ ಶೇ 43ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ 7.8ರಷ್ಟು ಇಳಿಕೆಯಾಗಿದೆ’ ಎಂದು ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು ಸಿದ್ಧಪಡಿಸಿರುವ ವರದಿ ಹೇಳಿದೆ. ಪ್ರಧಾನಿಯ ಆರ್ಥಿಕ ಸಲಹಾ ಸಮಿತಿ ಬಿಡುಗಡೆ ಮಾಡಿರುವ ಈ ವರದಿಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಆದರೆ ಸಮಿತಿಯೇ, ‘ಈ ವರದಿಯಲ್ಲಿ ಇರುವ ವಿವರಗಳು, ದತ್ತಾಂಶಗಳು ಮತ್ತು ಅಭಿಪ್ರಾಯಗಳು ಲೇಖಕರಿಗೆ ಮಾತ್ರ ಸಂಬಂಧಿಸಿದ್ದು’ ಎಂದು ಹೇಳಿದೆ. ಈ ಮೂಲಕ ಸರ್ಕಾರಕ್ಕೂ ಈ ವರದಿಗೂ ಸಂಬಂಧವಿಲ್ಲ ಎಂದು ಹೇಳಿದೆ. ಚುನಾವಣೆಯ ಮಧ್ಯೆ ಈ ವರದಿ ಬಿಡುಗಡೆಯಾಗಿರುವುದಕ್ಕೆ ಆಕ್ಷೇಪಗಳೂ ವ್ಯಕ್ತವಾಗಿವೆ. ಇದಲ್ಲದೇ ವರದಿ ಸಿದ್ಧಪಡಿಸಲು ಬಳಸಿಕೊಂಡ ದತ್ತಾಂಶಗಳಲ್ಲಿ ಹಲವು ದೋಷಗಳಿವೆ

ವರದಿಯ ಮುಖ್ಯಾಂಶ:

1. ‘1950–2015ರ ಮಧ್ಯೆ ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ 9.8ರಿಂದ ಶೇ 14.09ಕ್ಕೆ ಏರಿಕೆಯಾಗಿದೆ. ಇದು ಶೇ 43ರಷ್ಟು ಏರಿಕೆ. ಇದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ 84.68ರಿಂದ ಶೇ 78.06ಕ್ಕೆ ಇಳಿಕೆಯಾಗಿದೆ. ಇದು ಶೇ 7.8ರಷ್ಟು ಇಳಿಕೆ. ಮುಸ್ಲಿಮರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಮತ್ತು ಹಿಂದೂಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ದೋಷ:

1. 1950ರಲ್ಲಿ ಜನಸಂಖ್ಯೆ ಎಷ್ಟು ಇತ್ತು ಎಂಬುದನ್ನು ವರದಿಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ವಾಸ್ತವದಲ್ಲಿ 1950ರಲ್ಲಿ ದೇಶದ ಜನಸಂಖ್ಯೆ ಎಷ್ಟಿತ್ತು ಮತ್ತು ಅದರಲ್ಲಿ ಹಿಂದೂ ಮತ್ತು ಮುಸ್ಲಿಮರ ಪ್ರಮಾಣ ಎಷ್ಟು ಇತ್ತು ಎಂಬ ದತ್ತಾಂಶ ಲಭ್ಯವೇ ಇಲ್ಲ. ಏಕೆಂದರೆ ಸ್ವತಂತ್ರ ಭಾರತದಲ್ಲಿ ಮೊದಲ ಜನಗಣತಿ ನಡೆದದ್ದು 1951ರಲ್ಲಿ. ಲಭ್ಯವೇ ಇಲ್ಲದ ಜನಸಂಖ್ಯೆಯ ಆಧಾರದಲ್ಲಿ ಈ ಏರಿಕೆ ಇಳಿಕೆ ಪ್ರಮಾಣವನ್ನು ಲೆಕ್ಕಾಚಾರ ಮಾಡಲಾಗಿದೆ.

2015ರಲ್ಲಿ ಜನಸಂಖ್ಯೆ ಇಂತಿಷ್ಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ 2015ರಲ್ಲಿ ಜನಸಂಖ್ಯೆ ಎಷ್ಟು ಎಂಬುದರ ಅಧಿಕೃತ ದತ್ತಾಂಶ ಲಭ್ಯವಿಲ್ಲ. ಏಕೆಂದರೆ ಈಚೆಗೆ ನಡೆದ ಜನಗಣತಿ ಎಂದರೆ 2011ರದ್ದು. 2011ರ ಜನಗಣತಿ ದತ್ತಾಂಶವನ್ನು ಗಣನೆಗೆ ತೆಗೆದುಕೊಳ್ಳದೆ, ಲಭ್ಯವೇ ಇಲ್ಲದ 2015ರ ಜನಸಂಖ್ಯಾ ಪ್ರಮಾಣವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

1951ರ ಜನಗಣತಿ ಪ್ರಕಾರ ದೇಶದಲ್ಲಿನ ಹಿಂದೂಗಳ ಪ್ರಮಾಣ ಶೇ 84.98ರಷ್ಟು. 2011ರ ಜನಗಣತಿ ಪ್ರಕಾರ ಹಿಂದೂಗಳ ಪ್ರಮಾಣ ಶೇ79.79ರಷ್ಟು. ಈ ಎರಡೂ ಸಂಖ್ಯೆಗಳನ್ನು ಈ ವರದಿಯಲ್ಲಿ, 1950ರಲ್ಲಿ ಶೇ 84.68 ಎಂದೂ, 2015ರಲ್ಲಿ ಶೇ78.06 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಮೂಲಕ ಇಳಿಕೆ ಪ್ರಮಾಣವು ತೀರಾ ಹೆಚ್ಚು ಎಂಬಂತೆ ಬಿಂಬಿಸಲಾಗಿದೆ.

1951ರ ಜನಗಣತಿಯ ಪ್ರಕಾರ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ 9.91ರಷ್ಟು ಇತ್ತು. 2011ರ ಜನಗಣತಿ ವೇಳೆಗೆ ಅದು ಶೇ 14.2ರಷ್ಟಾಗಿದೆ. ಆದರೆ ವರದಿಯಲ್ಲಿ ಇದನ್ನು ಶೇ 9.8ರಿಂದ ಶೇ14.09ಕ್ಕೆ ಏರಿಕೆ ಎಂದು ಉಲ್ಲೇಖಿಸಲಾಗಿದೆ. ವರದಿಯಲ್ಲಿರುವ ಈ ಅಂಕಿಅಂಶವೂ ತಪ್ಪಾಗಿದೆ.

ವರದಿಯ ಮುಖ್ಯಾಂಶ:

2. ‘ ಈ ದತ್ತಾಂಶಗಳನ್ನು ನಾವು ಅಸೋಸಿಯೇಶನ್‌ ಫಾರ್ ರಿಲೀಜಿಯನ್‌ ಡಾಟಾ ಅರ್ಕೈವ್‌ನ (ಎಆರ್‌ಡಿಆರ್‌) ವರದಿಗಳಿಂದ ತೆಗೆದುಕೊಂಡಿದ್ದೇವೆ. ಇದು ಜಗತ್ತಿನಲ್ಲಿ ಲಭ್ಯವಿರುವ ಧಾರ್ಮಿಕ ಜನಸಂಖ್ಯಾ ದತ್ತಾಂಶಗಳಲ್ಲೇ ಅತ್ಯಂತ ನಿಖರವಾದುದು. ವಿಶ್ವಸಂಸ್ಥೆಯ ಕೆಲವು ದತ್ತಾಂಶಗಳು ಇವೆಯಾದರೂ, ಅವುಗಳ ವ್ಯಾಪ್ತಿ ಕಡಿಮೆ. ಆದರೆ ಎಆರ್‌ಡಿಆರ್‌ ಕೆಲವು ದೇಶಗಳಿಗೆ ಸಂಬಂಧಿಸಿದಂತೆ 1800ರಿಂದಲೂ ಜನಸಂಖ್ಯಾ ದತ್ತಾಂಶ ಹೊಂದಿದೆ. ಆ ದತ್ತಾಂಶಗಳನ್ನೇ ಬಳಸಿಕೊಂಡಿದ್ದೇವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ದೋಷ:

2. ಭಾರತದ ಜನಸಂಖ್ಯೆಗೆ ಸಂಬಂಧಿಸಿದಂತೆ ಎಆರ್‌ಡಿಆರ್‌ ಉಲ್ಲೇಖಿಸಿರುವ ದತ್ತಾಂಶಗಳಲ್ಲಿ ಹಲವು ದೋಷಗಳಿವೆ. 1951ರ ಜನಗಣತಿ ಪ್ರಕಾರ ದೇಶದ ಹಿಂದೂಗಳ ಪ್ರಮಾಣ

ಶೇ 84.98ರಷ್ಟು. ಆದರೆ ಎಆರ್‌ಡಿಆರ್‌ ತನ್ನ ದತ್ತಾಂಶಗಳಲ್ಲಿ ಇದನ್ನು ಶೇ 80 ಎಂದು ಉಲ್ಲೇಖಿಸಿದೆ. 2001ರ ಜನಗಣತಿಯಲ್ಲಿ ಹಿಂದೂಗಳ ಪ್ರಮಾಣ ಶೇ 80.45 ಎಂದು ಇದ್ದು, ಎಆರ್‌ಡಿಆರ್‌ ತನ್ನ ದತ್ತಾಂಶದಲ್ಲಿ
ಶೇ 73.6 ಎಂದು ಉಲ್ಲೇಖಿಸಿದೆ. ಇಂತಹ ಹಲವು ದೋಷಗಳು ಎಆರ್‌ಡಿಆರ್‌ ದತ್ತಾಂಶಗಳಲ್ಲಿ ಇವೆ. ಭಾರತದ ಜನಗಣತಿ ವರದಿಗೂ, ಎಆರ್‌ಡಿಆರ್‌ ವರದಿಗೂ ಬಹಳ ವ್ಯತ್ಯಾಸವಿದೆ.

ಹೆಚ್ಚು ನಿಖರವಾದ ಭಾರತದ ಜನಗಣತಿ ದತ್ತಾಂಶಗಳು ಲಭ್ಯವಿದ್ದರೂ, ಪ್ರಧಾನಿ ಆರ್ಥಿಕ ಸಲಹಾ ಸಮಿತಿಯ ಸದಸ್ಯರು ತೀರಾ ದೋಷಗಳಿಂದ ಕೂಡಿರುವ ಎಆರ್‌ಡಿಆರ್‌ ವರದಿಗಳನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ.

ವರದಿಯ ಮುಖ್ಯಾಂಶ:

3. ‘ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸರ್ಕಾರಗಳು ವಿಶೇಷ ಹಕ್ಕುಗಳು ಮತ್ತು ವಿಶೇಷ ರಕ್ಷಣೆಯನ್ನು ಒದಗಿಸುತ್ತದೆ. ಈ ಕಾರಣದಿಂದಲೇ ಧಾರ್ಮಿಕ ಅಲ್ಪಸಂಖ್ಯಾತರ (ಮುಸ್ಲಿಮರ) ಜನಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಅವರ ಜನಸಂಖ್ಯೆ ಏರಿಕೆಯಾಗಲು ಫಲದಾಯಕ ಪರಿಸ್ಥಿತಿ ಇದೆ. ಇದೇ ನಮ್ಮ ಅಧ್ಯಯನದ ಕೇಂದ್ರ ವಿಷಯ’ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ದೋಷ:

3. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸರ್ಕಾರಗಳು ವಿಶೇಷ ಹಕ್ಕುಗಳು ಮತ್ತು ವಿಶೇಷ ರಕ್ಷಣೆಯನ್ನು ಒದಗಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಂತಹ ವಿಶೇಷ ಹಕ್ಕುಗಳು ಮತ್ತು ರಕ್ಷಣೆಗಳು ಯಾವುವು ಎಂಬುದನ್ನು ವರದಿಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಜತೆಗೆ, ಧಾರ್ಮಿಕ ಅಲ್ಪಸಂಖ್ಯಾತರ ಪ್ರಮಾಣ ಏರಿಕೆಯಾಗಲು ಅಂತಹ ವಿಶೇಷ ಹಕ್ಕು–ರಕ್ಷಣೆಗಳು ಹೇಗೆ ಕಾರಣವಾದವು ಎಂಬುದನ್ನೂ ವರದಿಯಲ್ಲಿ ವಿವರಿಸಿಲ್ಲ. 

ದೇಶದ ಎಲ್ಲಾ ಧರ್ಮಗಳ ಜನರೂ ವಿವಾಹ, ಸಂತಾನ, ವಿಚ್ಛೇದನ, ವಾರಸುದಾರಿಕೆಗೆ ಸಂಬಂಧಿಸಿದಂತೆ ತಮ್ಮ ವೈಯಕ್ತಿಕ ಕಾನೂನುಗಳನ್ನು ಅನುಸರಿಸುವ ಹಕ್ಕು ಹೊಂದಿದ್ದಾರೆ. ದಂಪತಿಯು ಎಷ್ಟು ಮಕ್ಕಳನ್ನು ಹೊಂದಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಹಿಂದೂಗಳೂ ಸೇರಿ ಯಾವ ಧರ್ಮದವರ ಮೇಲೂ ನಿರ್ಬಂಧವಿಲ್ಲ. ಹೀಗಾಗಿ ವಿಶೇಷ ಹಕ್ಕು–ರಕ್ಷಣೆಗಳು ಧಾರ್ಮಿಕ ಬಹುಸಂಖ್ಯಾತರ ಪ್ರಮಾಣ ಇಳಿಕೆಯಾಗಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪ್ರಮಾಣ ಏರಿಕೆಯಾಗಲು ಕಾರಣ ಎಂದು ಹೇಳುವುದರಲ್ಲಿ ತರ್ಕವಿಲ್ಲ.

ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೂ ನೀಡಲಾಗಿರುವ ಹಕ್ಕುಗಳು ಜೈನರು ಮತ್ತು ಪಾರ್ಸಿಗಳಿಗೂ ದೊರೆತಿವೆ. ಆದರೆ ಆ ಎರಡೂ ಧಾರ್ಮಿಕ ಸಮುದಾಯಗಳ ಪ್ರಮಾಣ ಈ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸುವ ಯತ್ನವನ್ನು ಸಂಶೋಧಕರು ಮಾಡಿಲ್ಲ. ಈ ಬಗ್ಗೆ ವರದಿಯಲ್ಲಿ ಎಲ್ಲೂ ಉಲ್ಲೇಖವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಈ ವರದಿಯಲ್ಲೇ, ‘ಧಾರ್ಮಿಕ ಅಲ್ಪಸಂಖ್ಯಾತರ ಪ್ರಮಾಣ ಏರಿಕೆಯಾಗಲು ಪಕ್ಕದ ದೇಶಗಳಿಂದ ವಲಸೆ, ಅಕ್ರಮ ವಲಸೆ, ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯ ಕಲ್ಪಿಸುವುದು ಮತ್ತು ಆಯಾ ಜನರ ಫಲವಂತಿಕೆಯ ಮಟ್ಟ ಪ್ರಮುಖ ಕಾರಣ. ಆದರೆ ನಮ್ಮ ಅಧ್ಯಯನದಲ್ಲಿ ನಾವು ಸರ್ಕಾರದ ವಿಶೇಷ ಹಕ್ಕು ಮತ್ತು ರಕ್ಷಣೆಗಳ ಬಗ್ಗೆ ಮಾತ್ರ ಗಮನಹರಿಸುತ್ತೇವೆ’ ಎಂದು ವಿವರಿಸಲಾಗಿದೆ. ‌ಅಂದರೆ ಯಾವುದೇ ಧರ್ಮ–ಸಮುದಾಯದ ಜನರ ಪ್ರಮಾಣ ಏರಿಕೆಯಾಗಲು ನೈಜ ಕಾರಣ ಏನು ಎಂಬುದು ಈ ಅಧ್ಯಯನ ನಡೆಸಿದವರಿಗೆ ಗೊತ್ತಿದ್ದೂ, ಆ ಬಗ್ಗೆ ನಾವು ಗಮನ ಹರಿಸುವುದಿಲ್ಲ ಎಂದು ಹೇಳಿದ್ದಾರೆ. ಜನಸಂಖ್ಯೆ ಏರಿಕೆ–ಇಳಿಕೆಯನ್ನು ಪ್ರಭಾವಿಸದೇ ಇರುವ ಅಂಶಗಳನ್ನೇ ಮುಂದು ಮಾಡಿಕೊಂಡು ಸತ್ಯವನ್ನು ಮರೆಮಾಚುವ ರೀತಿಯಲ್ಲಿ ವರದಿ ಸಿದ್ಧಪಡಿಸಲಾಗಿದೆ.

ವರದಿಯ ಮುಖ್ಯಾಂಶ:

4. ‘ಇದೇ ಅವಧಿಯಲ್ಲಿ ಸಿಖ್‌ ಧರ್ಮೀಯರ ಜನಸಂಖ್ಯೆ ಪ್ರಮಾಣ ಶೇ 6.58ರಷ್ಟು ಏರಿಕೆಯಾಗಿದೆ. ಭೌದ್ಧ ಧರ್ಮೀಯರ ಜನಸಂಖ್ಯೆ ಪ್ರಮಾಣ ಶೇ0.05ರಿಂದ ಶೇ 0.81ಕ್ಕೆ ಏರಿಕೆಯಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ದೋಷ:

4.ಈ ಅಂಶಗಳೂ ಬಹಳಷ್ಟು ದೋಷಗಳಿಂದ ಕೂಡಿವೆ. ವರದಿಯಲ್ಲೇ ನೀಡುವ ಜನಸಂಖ್ಯಾ ಪ್ರಮಾಣದ ಪ್ರಕಾರ 1950ರಿಂದ 2015ರ ಮಧ್ಯೆ ದೇಶದ ಜನಸಂಖ್ಯೆಯಲ್ಲಿ ಸಿಖ್‌ ಧರ್ಮೀಯರ ಪ್ರಮಾಣದಲ್ಲಿ ಶೇ 49.19ರಷ್ಟು ಏರಿಕೆಯಾಗಿದೆ. ಆದರೆ ಇದನ್ನು ಶೇ 6.58 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ ಬೌದ್ಧ ಧರ್ಮೀಯರ ಪ್ರಮಾಣ ಶೇ 1,520ರಷ್ಟು ಏರಿಕೆಯಾಗಿದೆ.  

ರಾಜಕೀಯ ಜಟಾಪಟಿ:

ಈ ವರದಿಯಲ್ಲಿನ ಅಂಶಗಳನ್ನು ಬಳಸಿಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್‌ ಮತ್ತು ಅದರ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಈ ವರದಿಯ ಸತ್ಯಾಸತ್ಯತೆಯನ್ನೇ ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಕಾಂಗ್ರೆಸ್‌ ಮಾತ್ರವಲ್ಲ, ಇತರ ವಿರೋಧ ಪಕ್ಷಗಳೂ ಈ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ

ಬಿಜೆಪಿಯಿಂದ ಕಾಂಗ್ರೆಸ್‌ ಟೀಕೆ

ಒಂದು ಸಮುದಾಯದ ಜನಸಂಖ್ಯೆ ಹೇಗೆ ಏರಿಕೆಯಾಗುತ್ತಿದೆ ಎಂದರೆ, ದೇಶದ ಜನಸಂಖ್ಯಾ ಚಿತ್ರಣವೇ ಬದಲಾಗಲಿದೆ. ಈ ಬಗ್ಗೆ ಒಂದು ಪ್ರಶ್ನೆಯನ್ನು ಎತ್ತಲೇಬೇಕು. ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಲು ಮತಾಂತರ ಮತ್ತು ಅಕ್ರಮ ವಲಸೆ ಎಷ್ಟರಮಟ್ಟಿಗೆ ಕಾರಣ ಎಂಬುದಕ್ಕೆ ಉತ್ತರ ಬೇಕು. ಮುಸ್ಲಿಮರ ಸಂಖ್ಯೆಯೇ ಏರಿಕೆಯಾಗುತ್ತಿದ್ದರೆ ಇತರ ಧಾರ್ಮಿಕ ಅಲ್ಪಸಂಖ್ಯಾತರಾದ ಜೈನರು, ಬೌದ್ಧರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಿಗೆ ಸಿಗಬೇಕಾದ ಅವಕಾಶಗಳ ಕತೆ ಏನಾಗಬೇಕು.

ಕಾಂಗ್ರೆಸ್‌ ಸಂವಿಧಾನವನ್ನು ನೆಲಕಚ್ಚಿಸಲು ಯತ್ನಿಸುತ್ತಿದೆ. ಧಾರ್ಮಿಕ ಮೀಸಲಾತಿ ಜಾರಿಗೆ ತಂದು ಮುಸ್ಲಿಮರಿಗೆ ಮೀಸಲಾತಿ ನೀಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ.

-ರಾಜೀವ್‌ ಚಂದ್ರಶೇಖರ್, ಕೇಂದ್ರ ಸಚಿವ

****

ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶವಿರುವುದರಿಂದಲೇ ಅವರ ಜನಸಂಖ್ಯೆ ವಿಪರೀತ ಏರಿಕೆಯಾಗುತ್ತಿರಬೇಕು. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರೆ, ಅವರು ಮೀಸಲಾತಿಯನ್ನು ಬದಲಿಸುತ್ತಲೇ ಇರುತ್ತಾರೆ.

-ಸುಧಾಂಶು ತ್ರಿವೇದಿ, ಬಿಜೆಪಿ ರಾಷ್ಟ್ರೀಯ ವಕ್ತಾರ

****

ವಿಪಕ್ಷಗಳ ತಿರುಗೇಟು

2021ಕ್ಕೆ ಜನಗಣತಿ ನಡೆಯಬೇಕಿತ್ತು, 2024 ಆದರೂ ಜನಗಣತಿ ನಡೆದಿಲ್ಲ. ಈ ದತ್ತಾಂಶಗಳು ಎಲ್ಲಿಂದ ಬಂದವು. ಜನಗಣತಿಯನ್ನೇ ನಡೆಸದೆ ಜನಸಂಖ್ಯೆಯ ಬಗ್ಗೆ ಮಾತನಾಡಲಾಗುತ್ತಿದೆ. ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿತ್ತು. ಆಗ ಜನರನ್ನು ಯಾಮಾರಿಸಿತು. ಈಗಲೂ ಅದನ್ನೇ ಮಾಡುತ್ತಿದೆ. ಬಿಜೆಪಿಯು ಜನರ ಮಧ್ಯೆ ದ್ವೇಷ ಹುಟ್ಟುಹಾಕಿ, ಒಡೆದಾಳಲು ಯತ್ನಿಸುತ್ತಿದೆ. ಪ್ರಧಾನಿ ಮೋದಿ ಅವರೇ ಈ ಹಿಂದೂ–ಮುಸ್ಲಿಂ ಜನಸಂಖ್ಯೆಯನ್ನು ಬಿಡಿ. ದೇಶದ ನಿಜವಾದ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ಮಾತನಾಡಿ

-ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ

****

ಮೋದಿ ಅವರ ಸರ್ಕಾರ ಬಂದದ್ದು 2014ರಲ್ಲಿ. ಈ ಅಧ್ಯಯನ ನಡೆಸಿದ್ದು 1950–2015ಕ್ಕೆ ಸಂಬಂಧಿಸಿದಂತೆ. ಈ ಸರ್ಕಾರ ಜನಗಣತಿ ನಡೆಸುತ್ತಿಲ್ಲ, ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ನೀಡುತ್ತಿಲ್ಲ, ವಲಸೆ ಕಾರ್ಮಿಕರ ಸಂಖ್ಯೆ ನೀಡುತ್ತಿಲ್ಲ, ಬಡತನದ ಬಗ್ಗೆಯೂ ಸರ್ಕಾರದ ಬಳಿ ದತ್ತಾಂಶಗಳು ಇಲ್ಲ. ಆದರೆ ಈ ವರದಿ ಸಿದ್ಧಪಡಿಸಲು ಸರ್ಕಾರಕ್ಕೆ ದತ್ತಾಂಶ ಎಲ್ಲಿ ದೊರೆಯಿತು?

 -ಡಿ.ರಾಜಾ, ಸಿಪಿಐ ಪ್ರಧಾನ ಕಾರ್ಯದರ್ಶಿ

****

ಮುಸ್ಲಿಮರ ಜನಸಂಖ್ಯೆ ಏರಿಕೆ ದರ ಭಾರಿ ಇಳಿಕೆ

‘ಮುಸ್ಲಿಮರ ಜನಸಂಖ್ಯೆ ಏರಿಕೆ ದರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮತ್ತು ದೇಶದ ಯಾವುದೇ ಧರ್ಮದ ಜನಸಂಖ್ಯೆ ದರ ಇಳಿಕೆಗಿಂತಲೂ ಮುಸ್ಲಿಮರ ಜನಸಂಖ್ಯೆ ಏರಿಕೆ ದರ ಕುಸಿತವೇ ಹೆಚ್ಚು’ ಎಂದು ಸ್ವಯಂಸೇವಾ ಸಂಸ್ಥೆ ಪಾಪುಲೇಷನ್‌ ಫೌಂಡೇಷನ್‌ ಆಫ್ ಇಂಡಿಯಾ ಹೇಳಿದೆ.

ಧಾರ್ಮಿಕ ಜನಸಂಖ್ಯಾ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ವರದಿಯಲ್ಲಿನ ಅಂಶಗಳಿಗೆ ಸಂಸ್ಥೆಯು ಈ ರೀತಿ ಪ್ರತಿಕ್ರಿಯೆ ನೀಡಿದೆ. ‘1981–1991ರ ದಶಕದಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆ ದರವು ಶೇ 32.9ರಷ್ಟು ಇತ್ತು. 2001–2011ರ ದಶಕದಲ್ಲಿ ಈ ದರವು ಶೇ 24.6ಕ್ಕೆ ಕುಸಿದಿತ್ತು. ಅಂದರೆ ಈ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆ ದರದಲ್ಲಿ 8.3 ಶೇಕಡಾವಾರು ಅಂಶಗಳಷ್ಟು ಕುಸಿದಿತ್ತು’ ಎಂದು ಸಂಸ್ಥೆಯು ಹೇಳಿದೆ.

‘1981–1991ರ ದಶಕದಲ್ಲಿ ಹಿಂದೂಗಳ ಜನಸಂಖ್ಯೆ ಏರಿಕೆ ದರವು ಶೇ 22.7ರಷ್ಟು ಇತ್ತು. 2001–2011ರ ದಶಕದಲ್ಲಿ ಆ ದರವು ಶೇ 16.8ಕ್ಕೆ ಕುಸಿದಿತ್ತು. ಅಂದರೆ ಈ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಏರಿಕೆ ದರವು 5.9 ಶೇಕಡಾವಾರು ಅಂಶಗಳಷ್ಟು ಇಳಿಕೆ ಕಂಡಿತ್ತು’ ಎಂದು ಜನಗಣತಿಯ ದತ್ತಾಂಶಗಳನ್ನು ಸಂಸ್ಥೆಯು ಉಲ್ಲೇಖಿಸಿದೆ.

ಆಧಾರ: ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಷೇರಿಂಗ್ ಆಫ್ ರಿಲೀಜಿಯಸ್ ಮೀನಾರಿಟೀಸ್: ಎ ಕ್ರಾಸ್ ಕಂಟ್ರಿ ಅನಾಲಿಸಿಸ್ (1950-2015) ವರದಿ, ದೇಶದ ಜನಗಣತಿ ವರದಿಗಳು, ಎಆರ್‌ಡಿಆರ್‌ನ ಧಾರ್ಮಿಕ ಜನಸಂಖ್ಯಾ ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT