ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಮತಕ್ಕೆ ಕುಸಿದ ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಮನವಿ

ರಾಷ್ಟ್ರಪತಿ ಆಡಳಿತ ಹೇರಲು ರಾಜ್ಯಪಾಲರಿಗೆ ಕೋರಿಕೆ
Published 10 ಮೇ 2024, 15:40 IST
Last Updated 10 ಮೇ 2024, 15:40 IST
ಅಕ್ಷರ ಗಾತ್ರ

ಚಂಡೀಗಢ: ಹರಿಯಾಣದಲ್ಲಿ ಬಹುಮತ ಕಳೆದುಕೊಂಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌, ಶುಕ್ರವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಅಲ್ಪಮತಕ್ಕೆ ಕುಸಿದಿದೆ. ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಕಾಂಗ್ರೆಸ್ ಹೇಳಿದೆ. 

ಕಾಂಗ್ರೆಸ್‌ ಹಿರಿಯ ನಾಯಕ ಬಿ.ಬಿ. ಬಾತ್ರಾ, ವಿಧಾನಸಭೆಯಲ್ಲಿನ ಪಕ್ಷದ ಮುಖ್ಯ ಸಚೇತಕ, ಶಾಸಕಾಂಗ ಪಕ್ಷದ ಉಪನಾಯಕ ಅಫ್ತಾಬ್‌ ಅಹಮದ್‌ ಅವರು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತ ಮನವಿ ಸಲ್ಲಿಸಿದರು. 

ಮೂವರು ಪಕ್ಷೇತರ ಶಾಸಕರು ಹರಿಯಾಣದಲ್ಲಿನ ನಾಯಬ್ ಸಿಂಗ್ ಸೈನಿ ಅವರ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ಈ ವಾರದ ಆರಂಭದಲ್ಲಿ ಹಿಂಪಡೆದಿದ್ದಾರೆ. ಈ ಮೂವರು ಕಾಂಗ್ರೆಸ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಕಾರ್ಯ ನಿಮಿತ್ತ ತೆಲಂಗಾಣಕ್ಕೆ ತೆರಳಿರುವುದರಿಂದ ಅವರ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಬಿ.ಬಿ. ಬಾತ್ರಾ ಹೇಳಿದರು.

‘ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದು, ನಾಯಬ್‌ ಸಿಂಗ್‌ ಸೈನಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ಹಕ್ಕಿಲ್ಲ. ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬೇಕು. ಅದನ್ನು ಮಾಡದಿದ್ದರೆ, ವಿಧಾನಸಭೆ ಅಧಿವೇಶನ ಕರೆದು, ವಿಶ್ವಾಸ ಮತ ಯಾಚಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದೇವೆ’ ಎಂದು ಬಾತ್ರಾ ಹೇಳಿದರು.

ಐಎನ್‌ಎಲ್‌ಡಿ ಮತ್ತು ಹರಿಯಾಣ ಲೋಕಹಿತ ಪಕ್ಷ ತಲಾ ಒಬ್ಬ ಶಾಸಕರನ್ನು ಹೊಂದಿದೆ. ಪಕ್ಷೇತರ ಶಾಸಕರ ಸಂಖ್ಯೆ ಆರು. ಜೆಜೆಪಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಈಗಾಗಲೇ ಸದನದಲ್ಲಿ ವಿಶ್ವಾಸಮತಯಾಚನೆಗೆ ಒತ್ತಾಯಿಸಿವೆ.

ಈ ಬೆಳವಣಿಗೆಗಳ ಮಧ್ಯೆ, ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ಅವರು ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲವೆಂದು ಪದೇ ಪದೇ ಹೇಳುತ್ತಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯು ಪ್ರಸ್ತುತ 88 ಶಾಸಕರು ಇದ್ದಾರೆ. ಕರ್ನಾಲ್ ಮತ್ತು ರಾನಿಯಾ ವಿಧಾನಸಭಾ ಕ್ಷೇತ್ರಗಳು ಖಾಲಿ ಇವೆ. ಸದನದಲ್ಲಿ ಆಡಳಿತಾರೂಢ ಬಿಜೆಪಿ 40, ಕಾಂಗ್ರೆಸ್ 30 ಮತ್ತು ಜೆಜೆಪಿ 10 ಶಾಸಕರನ್ನು ಹೊಂದಿವೆ. ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರು ಹಾಗೂ ಎಚ್‌ಎಲ್‌ಪಿ ಶಾಸಕ ಗೋಪಾಲ್‌ ಕಾಂಡ ಅವರ ಬೆಂಬಲವಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಅಲ್ಪಮತಕ್ಕೆ ಕುಸಿದಿರುವುದರಿಂದ ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು
ಭೂಪಿಂದರ್ ಸಿಂಗ್ ಹೂಡಾ ಕಾಂಗ್ರೆಸ್ ನಾಯಕ 
ಬಹುಮತ ಕಳೆದುಕೊಂಡಿರುವ ಸೈನಿ ಅವರ ನೇತೃತ್ವದ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು. ಹೊಸದಾಗಿ ಚುನಾವಣೆ ನಡೆಸಬೇಕು
ಸುಶೀಲ್ ಗುಪ್ತಾ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT