ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | RCB vs GT Highlights: ಜ್ಯಾಕ್ಸ್‌ ಸಿಕ್ಸರ್‌ಗಳಿಗೆ ಬೆಚ್ಚಿದ ಟೈಟನ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಒಲಿದ ಜಯ; ವಿಲ್ ಚೊಚ್ಚಲ ಶತಕ, ಕೊಹ್ಲಿ ಅರ್ಧಶತಕ
Published 28 ಏಪ್ರಿಲ್ 2024, 15:30 IST
Last Updated 28 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಅಹಮದಾಬಾದ್: ತಮ್ಮ ವೃತ್ತಿಜೀವನದ ಚೊಚ್ಚಲ ಶತಕ ಗಳಿಸಿದ ವಿಲ್ ಜ್ಯಾಕ್ಸ್ ಮತ್ತು ವಿರಾಟ್ ಕೊಹ್ಲಿ ಅವರ ಸುಂದರ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಸತತ ಎರಡನೇ ಜಯ ಸಾಧಿಸಿತು. 

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  201 ರನ್‌ ಗೆಲುವಿನ ಗುರಿಯನ್ನು ಇನಿಂಗ್ಸ್‌ನಲ್ಲಿ 24 ಎಸೆತಗಳು ಬಾಕಿಯಿದ್ದಾಗಲೇ ಆರ್‌ಸಿಬಿ ಮುಟ್ಟಿತು. 16 ಓವರ್‌ಗಳಲ್ಲಿ 1 ವಿಕೆಟ್‌ಗೆ 206 ರನ್‌ ಗಳಿಸಿ,  9 ವಿಕೆಟ್‌ಗಳಿಂದ ಜಯಿಸಿತು.  ಟೂರ್ನಿಯಲ್ಲಿ ತಂಡಕ್ಕೆ ಒಟ್ಟಾರೆ ಇದು ಮೂರನೇ ಜಯ. 

ಬರೋಬ್ಬರಿ ಹತ್ತು ಸಿಕ್ಸರ್ ಹೊಡೆದ ಜ್ಯಾಕ್ಸ್ (ಅಜೇಯ 100; 41ಎಸೆತ) ಮಿಂಚಿದರು. ಟೂರ್ನಿಯಲ್ಲಿ  ನಾಲ್ಕನೇ ಅರ್ಧಶತಕ ಗಳಿಸಿದ ವಿರಾಟ್ (ಅಜೇಯ 70; 44ಎ) ಇನಿಂಗ್ಸ್‌ ಮಧ್ಯದ ಓವರ್‌ಗಳಲ್ಲಿ ತುಸು ವೇಗವಾಗಿ ಆಡಿದರು. ಕಳೆದ ಪಂದ್ಯಗಳಲ್ಲಿ ಅವರ ನಿಧಾನ ಶೈಲಿಯು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. 

ಈ ಪಂದ್ಯದಲ್ಲಿ ಇಂಗ್ಲೆಂಡ್  ಆಲ್‌ರೌಂಡರ್ ಜ್ಯಾಕ್ಸ್‌ ಆಟ ಕಣ್ಣಿಗೆ ಕಟ್ಟುವಂತಿತ್ತು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಫಫ್ ಡುಪ್ಲೆಸಿ (24;12ಎ) ಔಟಾದರು. ಇನ್ನೊಂದು ಬದಿಯಲ್ಲಿದ್ದ ವಿರಾಟ್ ಕೊಹ್ಲಿ 11 ಎಸೆತ ಎದುರಿಸಿ 10 ರನ್ ಗಳಿಸಿದ್ದರು. ಅವರೊಂದಿಗೆ ಸೇರಿಕೊಂಡ ಜಾಕ್ಸ್‌ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು. ಕೊಹ್ಲಿಗಿಂತಲೂ ವೇಗವಾಗಿ ರನ್‌ ಗಳಿಸಿದರು. 

ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ, ಜ್ಯಾಕ್ಸ್‌ 50ರ ಗಡಿ ದಾಟಲು ಕೊಹ್ಲಿಗಿಂತಲೂ ಒಂದು ಎಸೆತ ಕಡಿಮೆ ತೆಗೆದುಕೊಂಡರು. ಅದರಲ್ಲಿ ನಾಲ್ಕು ಸಿಕ್ಸರ್‌ಗಳಿದ್ದವು. ಆದರೆ ಅದರ ನಂತರದ 10 ಎಸೆತಗಳಲ್ಲಿಯೇ 100ರ ಗಡಿ ಮುಟ್ಟಿದರು.  ರಶೀದ್ ಖಾನ್ ಹಾಕಿದ 16ನೇ ಓವರ್‌ನಲ್ಲಿಯೇ ಅವರು 26 ರನ್‌ ಸೂರೆ ಮಾಡಿದರು. ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ತಮ್ಮ ಶತಕ ಹಾಗೂ ವಿಜಯಕ್ಕೆ ಬೇಕಿದ್ದ ರನ್‌ ದಾಖಲಿಸಿದರು. ಇದೊಂದೇ ಓವರ್‌ನಲ್ಲಿ ಅವರು  ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದರು.  243.90ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದರು. 

ಜ್ಯಾಕ್ಸ್‌ ಪ್ರತಿಯೊಂದು ಸಿಕ್ಸರ್ ಬಾರಿಸಿದಾಗಲೂ ಇನ್ನೊಂದು ತುದಿಯಲ್ಲಿದ್ದ ಕೊಹ್ಲಿ ಸಂಭ್ರಮಿಸಿದರು, ಅಚ್ಚರಿಯಿಂದ ಕಣ್ಣರಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಯಾಕ್ಸ್‌ಗೆ ಟೂರ್ನಿಯಲ್ಲಿ ಇದು ಐದನೇ ಪಂದ್ಯ. ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ್ದರು.

ಇಲ್ಲಿ ಅವರು ಮತ್ತು ಕೊಹ್ಲಿ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ  166 ರನ್‌ ಸೇರಿಸಿದರು.  ಕೊಹ್ಲಿ ಟೂರ್ನಿಯಲ್ಲಿ 500 ರನ್ ಸೇರಿಸಿದರು. ಇದರೊಂದಿಗೆ  ಐಪಿಎಲ್‌ನಲ್ಲಿ ಏಳನೇ ಸಲ ಈ ಸಾಧನೆ ಮಾಡಿ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದರು.

ಸಾಯಿ–ಶಾರೂಕ್ ಮಿಂಚು: ಮಧ್ಯಾಹ್ನ ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 

ಸ್ವಪ್ನಿಲ್‌ ಸಿಂಗ್ (23ಕ್ಕೆ1) ಮತ್ತು ವಿಶ್ರಾಂತಿ ಮುಗಿಸಿ ಮರಳಿದ ಗ್ಲೆನ್ ಮ್ಯಾಕ್ಸ್‌ವೆಲ್ (28ಕ್ಕೆ1) ಅವರ ಉತ್ತಮ ಬೌಲಿಂಗ್‌ನಿಂದಾಗಿ ಆತಿಥೇಯ ತಂಡವು 45 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. 

ಈ ಸಂದರ್ಭದಲ್ಲಿ ಜೊತೆಗೂಡಿದ ಸಾಯಿ ಸುದರ್ಶನ್ (ಔಟಾಗದೆ 84; 49ಎ, 4X8, 6X4) ಹಾಗೂ ಶಾರೂಕ್ ಖಾನ್ (58; 30ಎ, 4X3, 6X5) ಮೂರನೇ ವಿಕೆಟ್ ಜೊತೆಯಾಟದಲ್ಲಿ 86 ರನ್‌ ಸೇರಿಸಿದರು. ಸಿರಾಜ್ ಬೌಲಿಂಗ್‌ನಲ್ಲಿ ಖಾನ್ ಔಟಾದ ನಂತರ ಕ್ರೀಸ್‌ಗೆ ಬಂದ ಡೇವಿಡ್ ಮಿಲ್ಲರ್ (ಅಜೇಯ 26) ಉತ್ತಮ ಕಾಣಿಕೆ ನೀಡಿ ತಂಡವು ದ್ವಿಶತಕದ ಮೊತ್ತ ಗಳಿಸಲು ಕಾರಣರಾದರು. 

ವಿರಾಟ್ ಕೊಹ್ಲಿ 
ವಿರಾಟ್ ಕೊಹ್ಲಿ 

ಸ್ಕೋರ್ ಕಾರ್ಡ್

ಗುಜರಾತ್ ಟೈಟನ್ಸ್ 3 ವಿಕೆಟ್‌ಗೆ 200 (20 ಓವರ್‌ಗಳಲ್ಲಿ)

ವೃದ್ಧಿಮಾನ್ ಸಿ ಶರ್ಮಾ ಬಿ ಸಿಂಗ್ 5 (4ಎ, 4X1)

ಗಿಲ್ ಸಿ ಗ್ರೀನ್ ಬಿ ಮ್ಯಾಕ್ಸ್‌ವೆಲ್ 16 (19ಎ, 4X1)

ಸುದರ್ಶನ್ ಔಟಾಗದೇ 84 (49ಎ, 4X8, 6X4)

ಶಾರುಖ್ ಬಿ ಸಿರಾಜ್ 58 (30ಎ, 4X3, 6X5)

ಮಿಲ್ಲರ್ ಔಟಾಗದೇ 26 (19ಎ, 4X2, 6X1)

ಇತರೆ: 11 (ಲೆಗ್ ಬೈ 1, ನೋಬಾಲ್ 1, ವೈಡ್ 9)

ವಿಕೆಟ್ ಪತನ: 1–6 (ವೃದ್ಧಿಮಾನ್ ಸಹಾ 0.6), 2–45 (ಶುಭಮನ್ ಗಿಲ್ 6.4), 3–131 (ಎಂ.ಶಾರುಖ್ ಖಾನ್ 14.1)

ಬೌಲಿಂಗ್‌: ಸ್ವಪ್ನಿಲ್ ಸಿಂಗ್ 3–0–23–1, ಮೊಹಮದ್‌ ಸಿರಾಜ್ 4–0–34–1, ಯಶ್‌ ದಯಾಳ್ 4–0–34–0, ಗ್ಲೆನ್ ಮ್ಯಾಕ್ಸ್‌ವೆಲ್ 3–0–28–1, ಕರ್ಣ ಶರ್ಮಾ 3–0–38–0, ಕ್ಯಾಮರಾನ್ ಗ್ರೀನ್ 3–0–42–0

ರಾಯಲ್ ಚಾಲೆಂಜರ್ಸ್‌ ಬೆಂಗಳೂರು 1 ವಿಕೆಟ್‌ಗೆ 206 (16 ಓವರ್‌ಗಳಲ್ಲಿ)

ಕೊಹ್ಲಿ ಔಟಾಗದೇ 70 (44ಎ, 4X6, 6X3)

ಡುಪ್ಲೆಸಿ ಸಿ ಸಬ್ (ವಿ ಶಂಕರ್) ಬಿ ಸಾಯಿ 24 (12ಎ, 4X1, 6X3)

ಜ್ಯಾಕ್ಸ್ ಔಟಾಗದೇ 100 (41ಎ, 4X5, 6X10)

ಇತರೆ: 12 (ಬೈ4, ಲೆಗ್‌ಬೈ4, ನೋಬಾಲ್1, ವೈಡ್‌ 3)

ವಿಕೆಟ್ ಪತನ: 1–40(ಫಫ್‌ ಡುಪ್ಲೆಸಿ 3.5)

ಬೌಲಿಂಗ್‌: ಅಜ್ಮತುಲ್ಲಾ  ಒಮರ್ಜಾಯ್ 2–0–18–0, ಸಂದೀಪ್ ವಾರಿಯರ್‌ 1–0–15–0, ಸಾಯಿ ಕಿಶೋರ್ 3–0–30–1, ರಶೀದ್ ಖಾನ್ 4–0–51–0, ನೂರ್ ಅಹಮದ್ 4–0–23–0, ಮೋಹಿತ್ ಶರ್ಮಾ 2–0–41–0

ಪಂದ್ಯದ ಆಟಗಾರ: ವಿಲ್ ಜ್ಯಾಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT