ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಆರು ಕತೆಗಳು, ನೂರಾರು ಎಳೆಗಳು. ಒಂದನ್ನು ಓದಿದ ನಂತರ ನಮ್ಮಲ್ಲಿಯೇ ಕಳೆದುಹೋಗುವಂತೆ ಮಾಡುವ ವಿಷಯ ವಸ್ತು. ಮೊದಲ ಕತೆಯ ಕೆಂಪು ಉಂಗುರದಿಂದ, ಕೊನೆಯ ಕತೆಯ ಮಂದಾರಳ ಗರ್ಭಾವಸ್ಥೆಯವರೆಗೂ ಪುಸ್ತಕ ಅದೇ ಆಗ ಹುಟ್ಟಿದ ಪ್ರೀತಿಯಂತೆ ಹಿಡಿದಿರಿಸಿಕೊಳ್ಳುತ್ತದೆ. ಓದುವಾಗಲೂ, ಓದಿದ ನಂತರವೂ ಗುಂಗು ಹಿಡಿಸುವಂಥ ಕತೆಗಳು.

ಕಾಗೆ ಕಂಡರೆ ಮೇಷ್ಟ್ರು ನೆನಪಾಗ್ತಾರೆ, ಮಗನ ನಿರಂತರ ಶೋಕದಲ್ಲಿ ತಮ್ಮ ಬದುಕನ್ನು ಹದಗೊಳಿಸುತ್ತಲೇ ಒಂಟಿಯಾಗಿ ಎಲ್ಲೆಲ್ಲಿಯೂ ಕಳೆದುಹೋಗುವ ಮೇಷ್ಟ್ರು, ನಮ್ಮೊಳಗೆ ಮಡುಗಟ್ಟಿದ ದುಃಖದ ಸರೋವರಕ್ಕೆ ಒಂದು ಕಲ್ಲೆಸೆದು ಹೋಗುತ್ತಾರೆ. ರಸ್ತೆಯಲ್ಲಿ ಪಾರ್ಕು ಮಾಡಿದ ಕಾರು ನೋಡಿದಾಗ ಮುನಿರಾಜು, ಮಗುವಿಗಾಗಿ ಹಂಬಲಿಸುವ ಸರಿತಾ ಆಗಿರಬಹುದು, ಪಾತ್ರಗಳು ಕಾಡತೊಡಗುತ್ತವೆ. ನಮ್ಮ ಸುತ್ತಲೂ ಪಾತ್ರವಾಡತೊಡಗುತ್ತವೆ. 

ಸಾವಿನ ಮನೆಯ ಮಾತುಗಳಲ್ಲಿಯಂತೂ ನಮ್ಮೊಳಗನ್ನ ನಾವೇ ಇಣುಕಿ ನೋಡಿದಂತೆ. ಸ್ಮಶಾನ ವೈರಾಗ್ಯ ತಾಳಿದಾಗಲೂ ಬದುಕಿನ ಲೆಕ್ಕಾಚಾರದತ್ತ ಹೊರಳುವ ಚಿತ್ತ, ಸಾವಿನ ಭೀತಿಯನ್ನು ಮೂಡಿಸುತ್ತಲೇ ಬದುಕಿನತ್ತ ವಾಲುವ ಸಹಜ ಜೀವನಕ್ರಮ, ಇವೆಲ್ಲ ನಮ್ಮನೆ, ನಿಮ್ಮನೆಯಲ್ಲಿ ಆದ ಮಾತುಗಳಂತೆಯೇ ಮನಸಿನೊಳಗೆ ಚಡಪಡಿಕೆ ಹುಟ್ಟಿಸುತ್ತವೆ. ಆ ತಳಮಳಕ್ಕೆ ಸಣ್ಣದೊಂದು ವಿರಾಮವೇ ಔಷಧಿಯಾಗಬಲ್ಲದು. ಆದರೆ... ಆ ವಿರಾಮವೂ ಓದುಗರು ಅದೇ ಕತೆಯಲ್ಲಿ ಉಳಿಯುವಂತೆ, ಆ ಪಾತ್ರಗಳು ಎಲ್ಲಿಯೂ ಅಳಿಯದಂತೆ ಮಾಡಿಡುತ್ತವೆ. ಕತೆಗಳಿಗೆ ಚಿತ್ರಕಶಕ್ತಿಯಷ್ಟೇ ಸಬಲವಾಗಿಲ್ಲ, ಅದರೊಳಗಿನ ಆಲೋಚನಾ ಕ್ರಮ ಓದುಗನೊಳಗೂ ಗುಂಗಿಹುಳ ಬಿಡುತ್ತದೆ.

ನಮ್ಮೊಳಗಿನ ಸಣ್ಣತನಗಳು, ಮೋಹ, ನಾಗರಿಕ ಬದುಕಿನಲ್ಲಿ ಮನಸಿನೊಂದಿಗೆ ಸೆಣಸುತ್ತಲೇ ದೇಹದ ಅಗತ್ಯಗಳಿಗೆ ಬಾಗುವ ನಮ್ಮೊಳಗಿನ ವಾಂಛೆ, ನಾವು ಶಾಶ್ವತವೆಂದು ಭಾವಿಸುತ್ತಲೇ ನಶ್ವರತೆಯ ಬಗ್ಗೆ ಚರ್ಚಿಸುವ ನಮ್ಮ ಮನ, ಜನರ ಒಳಹೊರಗಿನ ಸುಳಿಯೊಳಗಿನ ಸಂಘರ್ಷವನ್ನು ಕತೆಗಳು ಎತ್ತಿಹಿಡಿಯುತ್ತವೆ. ಪ್ರತಿಕತೆಯಲ್ಲಿಯೂ ದಟ್ಟವಾದ ವಿಷಾದ, ಸಣ್ಣದೊಂದು ಆಶಾಕಿರಣ ಒಟ್ಟೊಟ್ಟಿಗೆ ಸಾಗುತ್ತವೆ. ಅಭಿಮಾನ ಮತ್ತು ಅಹಂಕಾರ; ಪ್ರೀತಿ ಮತ್ತು ಮೋಹ ಎಲ್ಲವೂ ಓದುವ ಕ್ಷಣಕ್ಕೆ ಹೃದಯಕ್ಕಿಳಿಯುತ್ತವೆ. ನಂತರ ಆವರಿಸಿಕೊಳ್ಳುತ್ತವೆ. ಭಾವಕೋಶದಿಂದ ಬೌದ್ಧಿಕ ಕೋಶದವರೆಗೂ ಈ ಕತೆಗಳ ಯಾನ ಸಾಗುತ್ತದೆ.  ⇒v

ಕಾಗೆ ಮೇಷ್ಟ್ರು

ಲೇ: ವಿಕ್ರಮ್ ಹತ್ವಾರ

ಪ್ರ: ವೀರಲೋಕ

ಸಂ: 7022122121

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT