ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ರೊಟ್ಟಿಯ ರುಚಿ ಗುಲ್ಕನ್‌ ಐಸ್‌ ಕ್ರೀಂ ಸವಿ

ಆಹಾರ ಬೀದಿ
Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ನಗರದ ಆಹಾರ ಸಂಸ್ಕೃತಿಯ ಕವಲುಗಳೇ ಆಸಕ್ತಿಕರ. ಈಗ ಎಲ್ಲೆಂದರೆ ಅಲ್ಲಿ ಆಹಾರ ಬೀದಿಗಳು ಹುಟ್ಟಿಕೊಂಡಿವೆ. ಹೊಸರುಚಿಯ ಕಥೆಗಳ ಜೊತೆಗೆ ಹಲವು ನೆನಪುಗಳನ್ನೂ ಅಡಗಿಸಿಕೊಂಡ ಇಂಥ ಬೀದಿಗಳನ್ನು ಪರಿಚಯ ಮಾಡಿಕೊಡುವ ಮಾಲಿಕೆ ಇದು.

ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ರುಚಿಕರವಾಗಿರುತ್ತೆ, ವಿಜಯನಗರದಲ್ಲಿ ಮಿರ್ಚಿ ಮಂಡಕ್ಕಿ ಸೂಪರ್‌,   ಜಯನಗರದಲ್ಲಿ ನೀರೂರಿಸುವ ಸ್ಯಾಂಡ್‌ವಿಚ್‌ ದೊರೆಯುತ್ತೆ... ಹೀಗೆ ಎಲ್ಲೆಲ್ಲಿ ರುಚಿ ಸಿಗುತ್ತದೆಯೋ ಅಲ್ಲಿಗೆ ಹುಡುಕಿ ಹೋಗಿ ತಿನ್ನುವಲ್ಲಿ  ಬೆಂಗಳೂರಿಗರು ನಿಸ್ಸೀಮರು. ಹಾಗಾಗಿಯೇ ಈ ನಗರದಲ್ಲಿ ಅನೇಕ ಫುಡ್‌ ಸ್ಟ್ರೀಟ್‌ಗಳು, ಈಟ್‌ ಔಟ್‌ಗಳು, ಸಣ್ಣ ಪುಟ್ಟ ಅಂಗಡಿಗಳು, ಚಾಟ್ಸ್‌ ಸೆಂಟರ್‌ಗಳು ಹೇರಳವಾಗಿವೆ. 

ಈ ರೀತಿ ಸಂಜೆಯಾಗುತ್ತಲೇ ಜನರಿಂದ ಗಿಜಿಗುಡುವ ರಸ್ತೆಗಳ ಸಾಲಿಗೆ ಸೇರುತ್ತದೆ ಸಜ್ಜನ ರಾವ್‌ ಸರ್ಕಲ್‌ ಬಳಿಯ ವಿ.ವಿ. ಪುರಂ ಫುಡ್‌ ಸ್ಟ್ರೀಟ್‌.  ಸುಮಾರು ಕಾಲು ಕಿಲೋಮೀಟರ್‌ ಇರುವ ಈ ರಸ್ತೆಯಲ್ಲಿ ತರಹೇವಾರಿ ತಿಂಡಿಗಳು ಸಿಗುತ್ತವೆ. ಸಾದಾ ಇಡ್ಲಿ-ವಡೆಯಿಂದ ಹಿಡಿದು ಬಾಂಬೆ ಚಾಟ್ಸ್‌, ಚೈನೀಸ್‌ ಎಲ್ಲಾ ರೀತಿಯ ತಿನಿಸುಗಳಿಗೂ ಇಲ್ಲಿ ತಾವಿದೆ.

ಇಲ್ಲಿ ವಿಧವಿಧದ ಆಹಾರಗಳನ್ನು ಸೇವಿಸಬಹುದು, ಬೇರೆ ಬೇರೆ ರುಚಿ ನೋಡಬಹುದು ಎಂದುಕೊಂಡು ಏನಾದರೂ ಬೆಳಿಗ್ಗೆ ಹೊರಟರೆ, ನಿಮಗೆ ನಿರಾಸೆಯೇ ಗತಿ. ಏಕೆಂದರೆ, ಈ ಫುಡ್‌ ಸ್ಟ್ರೀಟ್‌ ರಂಗೇರುವುದು ಸಾಯಂಕಾಲದ ನಂತರವೇ. ಅವರೆ ಮೇಳ ನಡೆಸುವ ವಾಸವಿ ಕಾಂಡಿಮೆಂಟ್ಸ್, ವಿ.ಬಿ ಬೇಕರಿ, ವಾಸವಿ ಮನೆ ಊಟ, ಮುಂಬೈ ಬಾದಾಮ್‌ ಮಿಲ್ಕ್, ಶಿವಣ್ಣ ಗುಲ್ಕನ್‌ ಸೆಂಟರ್‌, ಚಾಟ್ಸ್  ಸೆಂಟರ್‌ ಹೀಗೆ ಹಲವು ಜನಪ್ರಿಯ ಅಂಗಡಿಗಳು ಈ ರಸ್ತೆಯಲ್ಲಿವೆ. ಹಾಗಾಗಿ ಜಿಹ್ವಾ ಚಾಪಲ್ಯ ತಣಿಸಿಕೊಳ್ಳಲು ಇದು ಹೇಳಿ ಮಾಡಿಸಿದ ಜಾಗ.

ನಾನು ಈ ಆಹಾರ ಬೀದಿಗೆ ಕಾಲಿಟ್ಟಾಗ ಸಂಜೆ 5 ಗಂಟೆ. ನಿಧಾನಕ್ಕೆ ಜನ ಸೇರುತ್ತಿದ್ದರು. ರಸ್ತೆಯು ಜನರಿಂದ ತುಂಬಿಕೊಳ್ಳುವ ಮುನ್ನವೇ ಯಾವುದಾದರೊಂದು ಅಂಗಡಿಯಲ್ಲಿ ಆಹಾರ ಆರ್ಡರ್ ಮಾಡಿದರೆ ಒಳಿತು ಎಂದು ‘ವಾಸವಿ ಮನೆ’ಗೆ ಬಳಿ ಹೋದೆ. ಇಲ್ಲಿ ಮೊದಲಿಗೆ ಏನು ಬೇಕೋ ಅದನ್ನು ಹೇಳಿ ಬಿಲ್‌ ತೆಗೆದುಕೊಳ್ಳಬೇಕು.

ಕ್ಯಾಷಿಯರ್‌ ಬಳಿ ಹೋಗಿ ನಿಮ್ಮಲ್ಲಿ ಹೆಚ್ಚು ಜನಪ್ರಿಯ ಅಡುಗೆ ಯಾವುದು ಎಂದು ಕೇಳಿದ ತಕ್ಷಣವೇ ಅವರು ಕ್ಷಣವೂ ಯೋಚಿಸದೆ ‘ಅಕ್ಕಿ ರೊಟ್ಟಿ ತಗೊಳ್ಳಿ ಮೇಡಂ’ ಅಂದರು. ‘ಸರಿ’ ಎಂದು ಅಕ್ಕಿ ರೊಟ್ಟಿ ತರಿಸಿಕೊಂಡೆ. ‘ಒಮ್ಮೆ ಟೇಸ್ಟ್‌ ನೋಡಿ. ನೀವೇ ಮತ್ತೊಂದು ರೊಟ್ಟಿ ಕೇಳಿ ತಗೋತೀರಾ’ ಎಂದು ಬಿಸಿ ಬಿಸಿ ಅಕ್ಕಿ ರೊಟ್ಟಿ ಕೈಗಿಟ್ಟರು. ರೊಟ್ಟಿಯ ಘಮಕ್ಕೆ ಮೊದಲು ಮನಸೋತೆ. ಹದವಾಗಿ ಬೆಂದಿದ್ದ ರೊಟ್ಟಿಯ ಜತೆಗೆ ಕೆಂಪು ಚಟ್ನಿ ಮತ್ತು ಕಾಯಿ ಚಟ್ನಿ ಇತ್ತು. ಅಕ್ಕಿ ರೊಟ್ಟಿ ಕೆಂಪು ಚಟ್ನಿ ಕಾಂಬಿನೇಷನ್‌ ನಿಜಕ್ಕೂ ಅದ್ಭುತ.

ನನ್ನ ಪಕ್ಕದಲ್ಲಿ ನಿಂತು ಪಡ್ಡು ಸವಿಯುತ್ತಿದ್ದವರ ಕಂಡು ಮನಸ್ಸು ಅತ್ತ ಹೊರಳಿತು. ಮೊದಲೇ ಪಡ್ಡು ಪಂಚಪ್ರಾಣ. ಅದರಲ್ಲೂ ಗರಿಗರಿಯಾಗಿ ಬೆಂದ ಅದನ್ನು ನೋಡಿ ತಡೆಯಲಾಗದೆ ಆರ್ಡರ್‌ ಮಾಡಿದೆ. ಹೊರಗೆ ಗರಿಗರಿಯಾಗಿದ್ದ ಪಡ್ಡು ಒಳಗೆ ಅಷ್ಟೆ ಮೃದುವಾಗಿ ಪದರ ಪದರವಾಗಿತ್ತು.

ಇದಲ್ಲದೆ ಈ ಅಂಗಡಿಯಲ್ಲಿ ತಯಾರಿಸುವ ಮೊಸರು ಕೋಡುಬಳೆ, ಅವರೆ ಬೇಳೆ ದೋಸೆ, ರಾಗಿ ರೊಟ್ಟಿ, ಸಿಹಿ ಪ್ರಿಯರಿಗೆ ಒಬ್ಬಟ್ಟು, ಗೋಬಿ ಮಂಚೂರಿ, ಪೊಟಾಟೊ ಟ್ವಿಸ್ಟ್‌, ಅವರೆ ಮಸಾಲೆ ವಡೆ, ಒತ್ತು ಶಾವಿಗೆ, ವೆಜಿಟೇಬಲ್ ರೈಸ್‌ಭಾತ್‌ಗಳ ರುಚಿ ಸವಿಯಬಹುದು.

ಈ ಅಂಗಡಿಯ ಎದುರೇ ಇರುವ ಮುಂಬೈ ಬಾದಾಮ್ ಮಿಲ್ಕ್‌ನಲ್ಲಿ ಬಾದಾಮಿ ಹಾಲಿನ ರುಚಿ ನಾಲಿಗೆಯಲ್ಲಿ ಉಳಿಯುತ್ತದೆ. ನಾನಾ ಆಹಾರಗಳನ್ನೆಲ್ಲ ತಿಂದು, ಕೊನೆಯಲ್ಲಿ ಬಾದಾಮಿ ಹಾಲನ್ನು ಹೀರಿದರೆ ಮನೆ ತಲುಪುವವರೆಗೂ ಅದರ ರುಚಿ ನಾಲಿಗೆಯಲ್ಲಿರುತ್ತದೆ.

ಅವರೆ ಕಾಳಿನ ಕಾಲದಲ್ಲಿ ಈ ಫುಡ್‌ ಸ್ಟ್ರೀಟ್‌ನಲ್ಲಿ ಅವರೆ ಮೇಳವನ್ನು ಆಯೋಜಿಸುವ ವಾಸವಿ ಕಾಂಡಿಮೆಂಟ್ಸ್‌ನಲ್ಲಿ ಮಧ್ಯಾಹ್ನವೂ ಜನ ಗುಂಪುಗಟ್ಟಿರುತ್ತಾರೆ. ಇಲ್ಲಿ ಸಿಗುವ ಮುದ್ದೆ ಊಟಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಒಂದು ಮುದ್ದೆ, ಪಲ್ಯ, ಹಪ್ಪಳ, ಬಜ್ಜಿ, ಅರ್ಧ ರೈಸ್‌ ಇವಿಷ್ಟೂ ಮುದ್ದೆ ಊಟದಲ್ಲಿರುತ್ತದೆ. ಸೊಪ್ಪಿನ ಸಾಂಬಾರಿನೊಂದಿಗೆ ಮುದ್ದೆಯನ್ನು ಸವಿಯುವುದೇ ಒಂದು ಆನಂದ.

ಇನ್ನು ಫುಡ್‌ ಸ್ಟ್ರೀಟ್‌ಗೆ ಬಂದ ಮೇಲೆ ಶಿವಣ್ಣ ಗುಲ್ಕನ್‌ ಸೆಂಟರ್‌ಗೆ ಹೋಗದೆ ಇದ್ದರೆ ಏನೋ ಕಳೆದುಕೊಂಡಂತೆಯೇ ಸರಿ. ನೋಡಲು ಮಾಮೂಲಿ ಗೂಡಂಗಡಿ ಎನಿಸಿದರೂ ಇದರ ಹಿರಿಮೆ ದೊಡ್ಡದು. ಆಗಾಗ ಸ್ಟಾರ್‌ ನಟ ನಟಿಯರು, ಪ್ರತಿಷ್ಠಿತ ವ್ಯಕ್ತಿಗಳು ಈ ಪುಟ್ಟ ಅಂಗಡಿ ಎದುರು ನಿಂತು ಏನನ್ನೋ ತಿನ್ನುತ್ತಿರುವುದು ಕಣ್ಣಿಗೆ ಬೀಳುತ್ತದೆ.

ಬಾಯಲ್ಲಿ ಇಟ್ಟರೆ ಸಿಹಿಯಾಗಿ, ಕೊಂಚ ಒಗರಾಗಿ ಚಪ್ಪರಿಸಿಕೊಂಡು ತಿನ್ನುವಂಥ ಗುಲ್ಕನ್‌ಗಳು. ಮಾಮೂಲಿ ಗುಲ್ಕನ್‌ಗಳಿಗಿಂತ ಇವು ಹೇಗೆ ಡಿಫರೆಂಟ್‌ ಎಂದು ಅನುಮಾನ ಬರಬಹುದು. 80 ವರ್ಷಗಳ ಹಿಂದೆ ಯಾವ ರುಚಿ ಇತ್ತೋ ಅದೇ ಟೇಸ್ಟ್‌  ಈಗಲೂ ಸಿಗತ್ತೆ. ಶಿವಣ್ಣ ಕುಟುಂಬದವರೇ ಅಂದಿನಿಂದ ಇಂದಿನವರೆಗೂ ಗುಲ್ಕನ್‌ ತಯಾರಿಸುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲೂ ಸಿಗದಷ್ಟು ಬಗೆಯ ಗುಲ್ಕನ್‌ಗಳು ಇಲ್ಲಿ ಸಿಗುತ್ತವೆ.

ಗುಲ್ಕನ್‌ ಐಸ್‌ಕ್ರೀಂ, ಗುಲ್ಕನ್‌ ಫ್ರೂಟ್‌ ಸಲಾಡ್‌ ಕೂಡ ಇಲ್ಲಿನ ವಿಶೇಷಗಳೇ. ಗುಲ್ಕನ್‌ ಐಸ್‌ಕ್ರೀಂ ವೆರೈಟಿಗಳಲ್ಲಿ ಬಟರ್‌ಸ್ಕಾಚ್‌ ಗುಲ್ಕನ್‌ ಐಸ್‌ಕ್ರೀಂ ಭಲೇ ಫೇಮಸ್ಸು. ಇದಲ್ಲದೇ ರೋಸ್‌ ಗುಲ್ಕನ್‌, ಬಟರ್‌ ಗುಲ್ಕನ್‌, ನೆಲ್ಲಿಕಾಯಿಯಿಂದ ಮಾಡಿರೋ ಆಮ್ಲಾ ಗುಲ್ಕನ್‌, ಅಂಜೂರ ಗುಲ್ಕನ್‌, ಬನಾನಾ ಗುಲ್ಕನ್‌, ತರಹೇವಾರಿ ಹಣ್ಣುಗಳಿಂದ ತಯಾರಿಸಿರುವ ಗುಲ್ಕನ್‌ಗಳು... ಹೀಗೆ ನೀವು ಕಂಡರಿಯದ ಬಗೆಯ ಗುಲ್ಕನ್‌ಗಳು ಇಲ್ಲಿ ಸಾಮಾನ್ಯ ದರದಲ್ಲಿ ಸಿಗುತ್ತವೆ.

ಹೀಗೆ ಇಲ್ಲಿ ದೋಸೆ, ಇಡ್ಲಿ, ಚಿತ್ರಾನ್ನ, ಜೂಸ್‌, ಲಸ್ಸಿ, ಚೈನೀಸ್‌ ಆಹಾರ ಪದಾರ್ಥಗಳು, ಕಾಂಡಿಮೆಂಟ್ಸ್‌, ಬೇಕರಿ ತಿನಿಸುಗಳು, ಪಾವ್‌ಬಾಜಿ, ಕುಲ್ಫಿ, ಗೋಲ್‌ಗೊಪ್ಪಾ, ಮಿರ್ಚಿ ಬಜ್ಜಿ, ಪಾನೀಪುರಿ, ಮಸಾಲೆಪುರಿ, ಹೀಗೆ ಇಂತಹದ್ದು ತಿನ್ನಬೇಕು ಎನ್ನಿಸಿದರೆ ಅದಕ್ಕೆ ಸರಿಯಾದ ಸ್ಥಳ ವಿ.ವಿ. ಪುರಂ ಫುಡ್‌ ಸ್ಟ್ರೀಟ್‌.

* * *
ವಾರಾಂತ್ಯದಲ್ಲಿ ಜನಸಂದಣಿ

ವಾರದ ದಿನಗಳಲ್ಲಿ ಸುಮಾರು ಐದರಿಂದ ಏಳು ಸಾವಿರದಷ್ಟು ಜನರು ಇಲ್ಲಿ ಸೇರುತ್ತಾರೆ. ಇನ್ನು ವಾರಾಂತ್ಯ ಎಂದರೆ ಕೇಳಬೇಕೆ? ಕಾಲಿಡಲು ಸಾಧ್ಯವಿಲ್ಲದಷ್ಟು ಜನರು ಈ ಫುಡ್‌ ಸ್ಟ್ರೀಟ್‌ಗೆ ಲಗ್ಗೆ ಇಡುತ್ತಾರೆ. ಆ ಸಂಖ್ಯೆ 10 ಸಾವಿರವನ್ನೂ ದಾಟಬಹುದು. ಜ್ಯೂಸ್‌, ಚಾಟ್ಸ್‌, ದೋಸೆ ಹೀಗೆ ಎಲ್ಲಾ ಬಗೆಯ ಆಹಾರ ಪಾದಾರ್ಥಗಳು ಒಂದೆಡೆಯೇ ದೊರೆಯುವುದರಿಂದ ಈ ಮಟ್ಟದಲ್ಲಿ ಜನರು ಹುಡುಕಿಕೊಂಡು ಬರುತ್ತಾರೆ ಎನ್ನುವುದು ಅಂಗಡಿಯೊಂದರ ಮಾಲೀಕ ಸತೀಶ್‌ ಅಭಿಪ್ರಾಯ.

* * *
ನೆಚ್ಚಿನ ತಾಣ

ವಿ.ವಿ. ಪುರಂ ಫುಡ್ ಸ್ಟ್ರೀಟ್‌ನಲ್ಲಿ ಕಾಲಕಳೆಯುವುದೆಂದರೆ ನನಗೆ ತುಂಬಾನೆ ಇಷ್ಟ. ಇಲ್ಲಿ ಅಡುಗೆಗಳನ್ನು ಅಲ್ಲಿಯೇ ಸಿದ್ಧಪಡಿಸಿಕೊಡುತ್ತಾರೆ. ರುಚಿಕರವಾಗಿರುತ್ತೆ, ಆರೋಗ್ಯಕರವಾಗಿರುತ್ತೆ.. ಯಾವುದೋ ಹೋಟೆಲ್‌ನಲ್ಲಿ ಹೆಚ್ಚು ಹಣ ಕೊಟ್ಟು ಏನೇನೋ ತಿಂದು ಬರೋದಕ್ಕಿಂತ ಇಲ್ಲಿ ತಿನ್ನುವುದು ಒಳ್ಳೆಯದು... ಇಲ್ಲಿನ ಕಾಯಿ ಹೋಳಿಗೆ ತಿನ್ನುವುದಕ್ಕೆ ನಾನು ಯಶವಂತಪುರದಿಂದ ಬರುತ್ತೇನೆ. ಅಲ್ಲದೆ ಪಡ್ಡು, ದೋಸೆ ಸಹ ನನ್ನ ಫೇವರಿಟ್.
-ಅರ್ಚನಾ

* * *
ಮನೆಯಡುಗೆಯಂತಿದೆ

ಮೊದಲ ಬಾರಿಗೆ ವಾಸವಿ ಕಾಂಡಿಮೆಂಟ್ಸ್‌ನಲ್ಲಿ ಮುದ್ದೆ ಊಟ ಮಾಡುತ್ತಿದ್ದೇನೆ. ಮುದ್ದೆಯೊಟ್ಟಿಗೆ ನೀಡಿರುವ ಸೊಪ್ಪಿನ ಸಾಂಬಾರ್‌ ತುಂಬ ರುಚಿಯಾಗಿದೆ. ಮನೆಯಲ್ಲಿ ಮಾಡಿದ ಅಡುಗೆಯಂತಿದೆ. ನನಗೆ ಮುದ್ದೆ ಬಹಳ ಅಷ್ಟು ಹಾಗಾಗಿ ಸುಲಭಕ್ಕೆ ಚೆನ್ನಾಗಿದೆ ಎಂದು ಒಪ್ಪುವುದಿಲ್ಲ. ಆದರೆ ಇಲ್ಲಿಯ ಊಟ ರುಚಿಸಿದೆ.
-ಲಕ್ಷ್ಮಣ್‌, ಕೆನರಾ ಬ್ಯಾಂಕ್‌ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT