ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪಾಲಿಕೆ ಸಭೆಯಲ್ಲಿ ಸದಸ್ಯರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ವರದಿ ಕುರಿತು ಚರ್ಚಿಸಲು ಬಿಬಿಎಂಪಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ಕೆ.ಗುಣಶೇಖರ್‌ ಮಾತನಾಡಿ, ‘ಅಧಿಕಾರಿಗಳಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದೆ. ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ಇಲ್ಲ. ಬಸವಣ್ಣ ಅವರು ಕಾಯಕವೇ ಕೈಲಾಸ ಎಂದಿದ್ದರು. ಅಧಿಕಾರಿಗಳು ಕಲೆಕ್ಷನ್‌ ಅನ್ನು ಕೈಲಾಸ ಮಾಡಿಕೊಂಡಿದ್ದಾರೆ’ ಎಂದು ಚುಚ್ಚಿದರು.

‘ಅಧಿಕಾರಿಗಳ ಕಾರ್ಯ ವೈಖರಿಯಿಂದ ಸದಸ್ಯರಿಗೆ ಕೆಟ್ಟ ಹೆಸರು ಬರುತ್ತಿದೆ. ಬಿಬಿಎಂಪಿಯ ಹಗರಣಗಳಿಗೆ ಅಧಿಕಾರಿಗಳೇ ಕಾರಣ’ ಎಂದು ಅವರು ಆರೋಪಿಸಿದರು.

‘ವಾರ್ಡ್‌ ಕೆಲಸದ ನಿಮಿತ್ತ ಅಧಿಕಾರಿಗಳ ಕಚೇರಿಗೆ ಹೋದರೆ ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯವೂ ಇಲ್ಲ. ನಮ್ಮನ್ನು ನೋಡಿ ಅವರ ಮುಖ ಹರಳೆಣ್ಣೆ ಕುಡಿದ ಹಾಗಾಗುತ್ತದೆ. ನಾವೇನು ನಮ್ಮ ಮನೆ ಕೆಲಸ ಮಾಡಿಕೊಡಿ ಎಂದು ಅವರಲ್ಲಿ ಹೋಗುತ್ತೇವಾ. ಸ್ವಯಂಸೇವಾ ಸಂಘಟನೆಗಳಿಗೆ ನೀಡುವ ಪ್ರಾಧಾನ್ಯವನ್ನು ಸದಸ್ಯರಿಗೆ ನೀಡುವುದಿಲ್ಲ’ ಎಂದು ಕಿಡಿಕಾರಿದರು.

‘ನಗರದ ಅಭಿವೃದ್ಧಿಗೆ ಅಧಿಕಾರಿಗಳು ಸಮಗ್ರ ಯೋಜನೆ ರೂಪಿಸುತ್ತಿಲ್ಲ. ಹಾಗಾಗಿ ನಗರ ಇಂದು ಕಾಂಕ್ರೀಟು ಕಾಡು ಆಗಿದೆ. ಇದು ಅಧಿಕಾರಿಗಳು ನಗರಕ್ಕೆ ಕೊಡುತ್ತಿರುವ ಉಡುಗೊರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ‘ಆಯುಕ್ತರು ಹಿಂಬಾಗಿಲ ಮೂಲಕ ಎಲ್ಲ ಅಧಿಕಾರಿಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ದೂರಿದರು.

ಬಿಜೆಪಿಯ ಡಾ.ರಾಜು ಮಾತನಾಡಿ, ‘ಅಭಿವೃದ್ಧಿ ಕಾಮಗಾರಿಗಳ ಕಡತ ಹಿಡಿದು ಅಧಿಕಾರಿಗಳ ಎದುರು ನಿಲ್ಲಬೇಕು. ಅವರು ಸೌಜನ್ಯ ತೋರುವುದಿಲ್ಲ. ಅಧಿಕಾರಿಗಳು ತಮ್ಮನ್ನು ದೇವರು ಎಂದು ತಿಳಿದುಕೊಂಡಿದ್ದಾರೆ’ ಎಂದರು. ‘ನಮ್ಮ ಎಲ್ಲ ಅಧಿಕಾರಗಳನ್ನು ಅಧಿಕಾರಿಗಳು ಕಿತ್ತುಕೊಂಡಿದ್ದಾರೆ. ನಮ್ಮ ಅಧಿಕಾರ ನಮಗೆ ಮರಳಿಸಿ’ ಎಂದು ಕಾಂಗ್ರೆಸ್‌ನ ರಿಜ್ವಾನ್‌ ಒತ್ತಾಯಿಸಿದರು.

ಕಾಂಗ್ರೆಸ್‌ನ ಪದ್ಮಾವತಿ ಮಾತನಾಡಿ, ‘ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಸ್ವೆಟರ್‌ ನೀಡಲಾಗುತ್ತಿದೆ. ಈ ವರ್ಷ ಸ್ವೆಟರ್‌ ನೀಡುವುದು ಬೇಡ ಎಂದು ಅಧಿಕಾರಿಗಳು ನಿರ್ಣಯ ಮಾಡಿದ್ದಾರೆ. ಹಾಗಿದ್ದರೆ ಶಿಕ್ಷಣ ಸ್ಥಾಯಿ ಸಮಿತಿಯ ಅಗತ್ಯ ಏನಿದೆ’ ಎಂದು ಪ್ರಶ್ನಿಸಿದರು.  ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ, ‘ಶ್ರೀರಾಮಪುರದ ಬಿಬಿಎಂಪಿ ಶಾಲೆಯ ಹೊಣೆಯನ್ನು ಕೆಲವು ವರ್ಷಗಳ ಹಿಂದೆ  ಭಾರತೀಯ ವಿದ್ಯಾಭವನಕ್ಕೆ ವಹಿಸಲಾಯಿತು. ಅದು ಈಗ ಅತ್ಯುತ್ತಮ ಶಾಲೆಯಾಗಿ ರೂಪುಗೊಂಡಿದೆ. ಉಳಿದ ಶಾಲೆಗಳನ್ನು ಸಹ ಇದೇ ರೀತಿಯಲ್ಲಿ ನಿರ್ವಹಣೆ ಮಾಡಬಹುದು. ಆದರೆ, ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಯಾವುದಕ್ಕೂ ಲಾಯಕ್‌ ಅಲ್ಲ’ ಎಂದು ಕಿಡಿಕಾರಿದರು.

ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ಮಾತನಾಡಿ, ‘ನಮ್ಮ ಬೆಂಗಳೂರು–ನನ್ನ ಕೊಡುಗೆ ಯೋಜನೆಯಲ್ಲಿ ಕಪ್ಪುಪಟ್ಟಿಗೆ ಸೇರಿಸಿರುವ ಜಾಹೀರಾತುದಾರರಿಗೆ ಅಧಿಕಾರಿಗಳು ಮಣೆ ಹಾಕಿದ್ದಾರೆ. ಉತ್ತಮ ಸಂಘ ಸಂಸ್ಥೆಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ’ ಎಂದರು.
ಬಿಜೆಪಿಯ ಉಮೇಶ್‌ ಶೆಟ್ಟಿ ಮಾತನಾಡಿ, ‘ನಾಗಪುರ ವಾರ್ಡ್‌ನಲ್ಲಿ ನಿವೃತ್ತ ವೈದ್ಯರೊಬ್ಬರು ತಮ್ಮ ಎಲ್ಲ ಆಸ್ತಿಗಳನ್ನು ಮಾರಿ ಡಯಾಲಿಸಿಸ್‌ ಕೇಂದ್ರ ತೆರೆಯಲು ಮೂರು ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿದರು. ಕೇಂದ್ರ ಸ್ಥಾಪನೆಗೆ ಗುತ್ತಿಗೆ ಆಧಾರದಲ್ಲಿ ಜಾಗ ನೀಡಿ ಎಂಬುದು ಅವರ ಬೇಡಿಕೆಯಾಗಿತ್ತು. ಅವರನ್ನು ಅಧಿಕಾರಿಗಳು ಮೂರು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಮುಂದಿನ ಸಭೆಯೊಳಗೆ ಈ ಕಡತಕ್ಕೆ ಒಪ್ಪಿಗೆ ನೀಡಬೇಕು ಎಂದು ಮೇಯರ್ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT