ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲ ಮಗು ರಸಿಕರ ಮಡಿಲಿಗೆ...

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕನ್ನಡದ ಅತ್ಯುತ್ತಮ ಕಥೆಗಳಲ್ಲೊಂದು. ಈ ಕಥನ ಆಧರಿಸಿದ ಸಿನಿಮಾ, ಸೆನ್ಸಾರ್‌ ಮಂಡಳಿ ಜೊತೆ ಗುದ್ದಾಡಿದ ನಂತರ ಇಂದು (ಮಾ.11) ತೆರೆಗೆ ಬರುತ್ತಿದೆ. ‘ನೆಲದ ಸಂಸ್ಕೃತಿ ಅರಿವಿರುವ ಸೂಕ್ಷ್ಮಮತಿಗಳು ಸೆನ್ಸಾರ್ ಮಂಡಳಿಯಲ್ಲಿ ಇಲ್ಲ’ ಎನ್ನುವುದು ನಿರ್ದೇಶಕಿ ಸುಮನ್ ಕಿತ್ತೂರು ದೂರು.

* ‘ಕಿರಗೂರಿನ ಗಯ್ಯಾಳಿಗಳು’ ಕಳೆದ ವಾರವೇ ಬಿಡುಗಡೆಯಾಗಬೇಕಿತ್ತು ಅಲ್ಲವೇ?
ಸೆನ್ಸಾರ್‌ಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿಂದಾಗಿ ಚಿತ್ರ ಬಿಡುಗಡೆ ಒಂದು ವಾರ ತಡವಾಯಿತು. ಮೂಲ ಕಥೆಯಲ್ಲಿರುವಂತೆ, ಹಳ್ಳಿಗಳಲ್ಲಿ ಸಾಮಾನ್ಯವಾಗಿ ಜನರ ಬಾಯಲ್ಲಿ ಇರುವ ‘ರಂಡೆ’, ‘ಮುಂಡೆ’, ‘ಗಾಂಚಾಲಿ’– ಹೀಗೆ ಒಂದಷ್ಟು ಶಬ್ದಗಳನ್ನು ಸಿನಿಮಾದಲ್ಲೂ ಬಳಸಿಕೊಂಡಿದ್ದೆವು. ಅವುಗಳನ್ನೆಲ್ಲ ‘ಮ್ಯೂಟ್’ ಮಾಡುವಂತೆ ಸೆನ್ಸಾರ್ ಮಂಡಳಿ ಹೇಳಿತು. ಮ್ಯೂಟ್ ಮಾಡಿದ್ದರೂ ‘ಎ’ ಸರ್ಟಿಫಿಕೇಟ್ ಕೊಟ್ಟಿತು. ಹಾಗಾಗಿ, ‘ಎ’ ಕೊಡುವುದಾದರೆ ಮ್ಯೂಟ್ ಮಾಡುವ ಅವಶ್ಯಕತೆಯಿಲ್ಲ. ಮ್ಯೂಟ್ ಮಾಡಲೇ ಬೇಕು ಎಂದಾದರೆ ‘ಯು/ಎ’ ಪ್ರಮಾಣಪತ್ರ ಕೊಡಿ ಎಂದು ತಕರಾರು ತೆಗೆದೆ.

‘ರೀವೈಸಿಂಗ್ ಕಮಿಟಿಗೆ ಹೋಗಿ’ ಎಂದರು. ಆದರೆ, ಮೇಲ್ಮನವಿ ಮಾಡುತ್ತ ಕೂತರೆ ಸಿನಿಮಾ ಸಾಯುತ್ತದೆ. ತೇಜಸ್ವಿ ಕೃತಿಯಲ್ಲಿ ಹಳ್ಳಿಯ ಬೈಗುಳಗಳು ಕಥೆಯೊಂದಿಗೆ ಮಿಳಿತವಾಗಿವೆ. ಗ್ರಾಮೀಣ ಸೊಗಡು ಕಟ್ಟಿಕೊಡುವಾಗ ಗ್ರಾಮ್ಯ ಭಾಷೆಯನ್ನೇ ಬಳಸಬೇಕು. ಇಲ್ಲವಾದರೆ ಅದರ ಗಟ್ಟಿತನ ಹೋಗಿಬಿಡುತ್ತದೆ. ಈಗ ಮ್ಯೂಟ್ ಮಾಡಿದ್ದಕ್ಕೆ ‘ಯು/ಎ’ ಪ್ರಮಾಣಪತ್ರ ಕೊಟ್ಟಿದ್ದಾರೆ. ಆದರೆ ತೇಜಸ್ವಿ ಅವರ ಮೂಲ ಸಂಭಾಷಣೆಗಳೇ ಸಿನಿಮಾದಲ್ಲಿ ಇಲ್ಲದಿದ್ದಾಗ ಪ್ರೇಕ್ಷಕ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಸೆನ್ಸಾರ್ ಮಂಡಳಿಯೇ ಉತ್ತರಿಸಬೇಕು.

* ಅಂದರೆ, ಸೆನ್ಸಾರ್‌ ಮಂಡಳಿ ಬಗ್ಗೆ ನಿಮಗೆ ಸಿಟ್ಟಿದೆ ಎಂದಾಯ್ತು?
ಪುಟ್ಟ ಮಕ್ಕಳು ಚಡ್ಡಿ ಬಿಚ್ಚಿಕೊಂಡು ಕ್ಯಾಮೆರಾ ಮುಂದೆ ಓಡಿ ಬರುವ ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ. ಇವೆಲ್ಲ ನಾವು ದೈನಂದಿನ ಜೀವನದಲ್ಲಿ ಹಳ್ಳಿಗಳಲ್ಲಿ ಕಾಣುವ ಸಾಮಾನ್ಯ ಸಂಗತಿ. ಅಶ್ಲೀಲ, ಕ್ರೌರ್ಯ ದೃಶ್ಯಗಳಿರುವ ಚಿತ್ರಗಳಿಗೂ ‘ಎ’ ಪ್ರಮಾಣಪತ್ರ ಕೊಡುತ್ತಾರೆ, ಸಾಹಿತ್ಯ ಕೃತಿ ಆಧರಿತ ಚಿತ್ರವನ್ನೂ ಅದೇ ಮಾನದಂಡದಲ್ಲಿ ನೋಡುತ್ತಾರೆ.

ಇದಕ್ಕೆ ಯಾರನ್ನು ದೂಷಿಸಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಸದ್ಯ ನನಗೆ ಒಡಲಲ್ಲಿ ಮಗು ಇಟ್ಟುಕೊಂಡ ಪರಿಸ್ಥಿತಿ. ದಿನ ತುಂಬಿದ ನಂತರವೂ ಹೇಗೆ ಮಗುವನ್ನು ಹೊಟ್ಟೆಯೊಳಗೇ ಇಟ್ಟುಕೊಳ್ಳಲು ಸಾಧ್ಯವಿಲ್ಲವೋ ಅದೇ ರೀತಿ ಸಿನಿಮಾ! ಸೆನ್ಸಾರ್ ಮಂಡಳಿಯ ಮಾನದಂಡದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಕನ್ನಡದ ಬಗ್ಗೆ ಗೊತ್ತಿರುವವರು, ನಮ್ಮ ನೆಲದ ಸಂಸ್ಕೃತಿ ಅರಿವಿರುವ ಸೂಕ್ಷ್ಮಮತಿಗಳು ಸೆನ್ಸಾರ್ ಮಂಡಳಿಯಲ್ಲಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ.


* ಮೂಲ ಕಥೆ ಸಿನಿಮಾದಲ್ಲಿ ಎಷ್ಟು ಬದಲಾವಣೆ ಆಗಿದೆ?
ಮೂಲ ಕಥೆ ಬರೀ 25 ನಿಮಿಷಗಳ ಸಿನಿಮಾ ಆಗಬಹುದಿತ್ತು. ಎರಡು ರಾತ್ರಿ ಮೂರು ಹಗಲಲ್ಲಿ ಆ ಕಥೆ ಮುಗಿಯುತ್ತದೆ. ಅಷ್ಟು ಚಿಕ್ಕ ಕಥೆ ಸಿನಿಮಾ ಮಾಡುವುದು ಕಷ್ಟವಿತ್ತು. ಆದರೆ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ನನ್ನೊಳಗೆ ಗೊಂದಲವಿತ್ತು. ನನ್ನ ಒದ್ದಾಟವನ್ನು ನೋಡಿದ ರಾಜೇಶ್ವರಿ ಮೇಡಂ (ತೇಜಸ್ವಿ ಅವರ ಪತ್ನಿ) ಅವರು ಒಂದು ಹಳೆಯ ಪತ್ರವನ್ನು ತಂದು ನನ್ನ ಕೈಗಿತ್ತರು. ಅದು ತೇಜಸ್ವಿ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಬರೆದ ಪತ್ರ.

‘ನನ್ನ ಕಥೆಗೆ ಜೋತು ಬೀಳದೆ ಮೂಲ ಆಶಯವನ್ನಷ್ಟೇ ಇಟ್ಟುಕೊಂಡು ಸಿನಿಮಾ ಮಾಡಿ. ಕೆಲ ದೃಶ್ಯಗಳನ್ನು ತೆರೆಯ ಮೇಲೆ ಕಟ್ಟಿಕೊಡಲು ಸಾಧ್ಯವಾಗದೇ ಇರಬಹುದು. ದೃಶ್ಯ ಮಾಧ್ಯಮಕ್ಕೆ ಬೇಕಾದ ಬದಲಾವಣೆ ಮಾಡಿಕೊಳ್ಳಿ. ಮುಖ್ಯವಾಗಿ ಹಣ ತೊಡಗಿಸಿದ ನಿರ್ಮಾಪಕರಿಗೂ ನಾಲ್ಕು ಕಾಸು, ಸಿನಿಮಾ ಮಾಡಿದ ನಿಮಗೂ ನಾಲ್ಕು ಕಾಸು ಬರುವಂತಿದ್ದರೆ ಮಾತ್ರ ಸಿನಿಮಾ ಮಾಡಿ’ ಎಂದು ಬರೆದಿದ್ದರು. ಇದು ನನಗೆ ದೊಡ್ಡ ಸಮಾಧಾನ ತಂದಿತು.

* ಚಿತ್ರಕಥೆ ಮಾಡಿಕೊಡಿ ಎಂದಾಗ ಅಗ್ನಿ ಶ್ರೀಧರ್ ಅವರ ಪ್ರತಿಕ್ರಿಯೆ ಹೇಗಿತ್ತು?
ಮೊದಲು ‘ಈ ಕಥೆ ಮುಟ್ಟೋಕೆ ಹೋಗಬೇಡ’ ಎಂದಿದ್ದರು. ‘ಎದೆಗಾರಿಕೆ’ ಮಾಡಿ ಒಂದು ವಿಭಾಗದಲ್ಲಿ ಗುರ್ತಿಸಿಕೊಂಡಿದ್ದೀಯ. ಅದೇ ಜೋನರ್‌ನ ಕಥೆ ಇದೆ, ನಿರ್ಮಾಪಕರಿದ್ದಾರೆ. ಈ ಕಥೆ ಬೇಡ ಎಂದಿದ್ದರು. ಆದರೆ ಕಿರಗೂರಿಗೂ ನನ್ನ ಕಿತ್ತೂರಿಗೂ ವ್ಯತ್ಯಾಸವಿರಲಿಲ್ಲ. ಅದೂ ಅಲ್ಲದೆ ಕಥೆಯಲ್ಲಿರುವಂತೆ, ಸಮಾಜಕ್ಕೆ ಅಂಟಿರುವ ಎಲ್ಲ ಕಾಯಿಲೆ ವಾಸಿ ಮಾಡಲು ಸಾಧ್ಯವಿರುವುದು ಹೆಂಗಸರಿಗಷ್ಟೇ ಸಾಧ್ಯ ಎಂಬ ಅಂಶ ನನಗೆ ನಿಜ ಅನ್ನಿಸಿತು.

ಹಾಗಾಗಿ ಈ ಸಿನಿಮಾ ಮಾಡಲೇ ಬೇಕು ಎಂದುಕೊಂಡೆ. ಶ್ರೀಧರ್ ಅವರ ಕೈಗೆ ಕಥೆ ಇಡುತ್ತ, ‘ಸಣ್ಣ ಕಥೆ. ಸಣ್ಣ ಸಿನಿಮಾ ಆಗುವಷ್ಟೇ ಇದೆ’ ಎಂದಿದ್ದೆ. ಒಮ್ಮೆ ಕಥೆ ಓದಿದ ಅವರು, ‘ತೇಜಸ್ವಿ ಅವರು ಏನು ಹೇಳಿದ್ದಾರೆ ಎಂದು ನನಗೆ ಗೊತ್ತಾಯಿತು. ಕಿರಗೂರು ಬಿಟ್ಟುಬಿಡು. ನಾನು ನನ್ನ ಹಳ್ಳಿಯನ್ನೊಮ್ಮೆ ತಲೆಯಲ್ಲಿ ತಂದುಕೊಳ್ಳಬೇಕು. ನಂತರ ಚಿತ್ರಕಥೆ ಬರೆದುಕೊಡುತ್ತೇನೆ’ ಎಂದರು. ಕೆಲ ದಿನಗಳ ನಂತರ ಇಬ್ಬರೂ ಕೂತು ಚಿತ್ರಕಥೆ ಶುರು ಮಾಡಿದ್ವಿ.

* ಸಿನಿಮಾ ಸ್ಟಿಲ್‌ಗಳಲ್ಲಿ ಬಣ್ಣಗಳ ಬಳಕೆಯಲ್ಲಿ ವಿಶೇಷವಿದ್ದಂತಿದೆ...
ಏನೂ ವಿಶೇಷವಿಲ್ಲ. ಡಿಜಿಟಲ್ ಸೌಲಭ್ಯ ಬಂದ ನಂತರ ನಾವು ಬಣ್ಣಗಳ ಹಿಂದೆ ಬಿದ್ದಿದ್ದೇವೆ. ಇಡೀ ಸಿನಿಮಾ ಒಂದು ಟೋನ್‌ನಲ್ಲಿ ಇರಬೇಕು ಎಂದು ಪ್ರಯತ್ನಿಸುತ್ತೀವಿ. ಅದು ಕೆಲವು ಚಿತ್ರಗಳಿಗೆ ಪ್ರಯೋಜನವೂ ಆಗುತ್ತದೆ. ನಮ್ಮ ಚಿತ್ರದಲ್ಲಿ ಹಳ್ಳಿಯ ಪ್ರತಿಯೊಂದು ವಿವರವೂ ಗೊತ್ತಾಗಬೇಕು, ಸಹಜವಾಗಿ ಇರಬೇಕು ಎಂದುಕೊಂಡೆ. ಚಿತ್ರೀಕರಣ ಮಾಡುವಾಗಿನ ಮೂಲ ಬಣ್ಣದ ಹೊರತಾಗಿ ಯಾವ ಗ್ರೇಡಿಯಂಟ್ ಕೂಡ ನೀಡಲು ಹೋಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT