ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ವಿಧಾನಕ್ಕೆ ಮಗುವೇ ಕೇಂದ್ರ

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ತರಗತಿಗಳ ಗಂಭೀರ ವಾತಾವರಣವನ್ನು ಬದಲಾಯಿಸಿ, ಮಕ್ಕಳಿಗೆ ಆಪ್ತವಾಗಿ  ಕಲಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ.

ಮಕ್ಕಳಿಗೆ ಕಲಿಸುವ ವಿಧಾನಗಳಿಗೂ ಮಕ್ಕಳನ್ನು ಕೇಂದ್ರವಾಗುಳ್ಳ ಚಿಂತನಾ ಕ್ರಮಕ್ಕೂ ನೇರ ಸಂಬಂಧವಿದೆ. ಮಕ್ಕಳನ್ನು ವಯಸ್ಕರ ಚಿಕ್ಕ ರೂಪವೆಂದೇ ಭಾವಿಸಲಾಗುತ್ತಿದ್ದ ದಿನಗಳಲ್ಲಿ ‘ಅವಕ್ಕೇನು ತಿಳಿಯುತ್ತೆ? ನಾವು ಬೆಳೆಸಿದ ಹಾಗೆ ಬೆಳೆಯುತ್ವೆ’ ಎಂಬ ಮನೋಭಾವವನ್ನು ಹಿರಿಯರು ಹೊಂದಿರುತ್ತಿದ್ದರು. ಮಕ್ಕಳಿಗೂ ಸ್ವತಂತ್ರವಾದ ಅಭಿಪ್ರಾಯ, ಆಸಕ್ತಿಗಳಿವೆ, ಅವರ ಬೇಕು ಬೇಡಗಳು ಹಿರಿಯರಿಗಿಂತ ಭಿನ್ನ, ಪ್ರತಿ ಮಗುವೂ ವಿಶಿಷ್ಟ ಹಾಗೂ ವಿಭಿನ್ನವೆಂಬ ಆಲೋಚನೆ ಫ್ರಾನ್ಸ್‌ನ ಕ್ರಾಂತಿಕಾರಿ ಶಿಕ್ಷಣ ತಜ್ಞ ರೂಸೋರವರಿಂದ ಪ್ರಾರಂಭವಾಯಿತು. ನಂತರ ಬಂದ ಫ್ರೋಬೆಲ್, ಪೆಸ್ಟಾಲಜಿ, ಮಾಂಟೆಸೋರಿ ಮುಂತಾದವರು ಮಕ್ಕಳ ಕೇಂದ್ರಿತ ಚಿಂತನೆಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು.

ರೂಸೋನ ಕಾಲದಲ್ಲಿ, ಮಕ್ಕಳ ಕೇಂದ್ರಿತವಾದ ಅವನ ಚಿಂತನೆಗಳನ್ನು ಅಂದಿನ ಸಮಾಜ ಮುಕ್ತವಾಗಿ ಸ್ವೀಕರಿಸಿರಲಿಲ್ಲ. ಆದರೆ ಇಂತಹ ತತ್ವಗಳನ್ನು ಒಪ್ಪಿಕೊಂಡಿರುವ ಈ ಕಾಲಘಟ್ಟದಲ್ಲಿಯೂ ಈ ಚಿಂತನೆಗಳು ಇನ್ನೂ ಪೂರ್ಣವಾಗಿ ಎಲ್ಲರ ಮನದಲ್ಲಿ ಬೇರೂರಿಲ್ಲವೆಂಬುದು ಸತ್ಯ. ಮಕ್ಕಳಿಗೆ ಕಲಿಸುವ ಪದ್ಧತಿ ಹಾಗೂ ಆಚರಣೆಗಳಲ್ಲಿ ಮಾರ್ಪಾಡುಗಳೇನೋ ಆಗಿವೆ. ಆದರೆ ಈ ಬದಲಾವಣೆಗಳು ಅವಶ್ಯವಿರುವಷ್ಟು ಪ್ರಮಾಣದಲ್ಲಿ ಆಗಿಲ್ಲವೆಂಬುದನ್ನು ನಾವೆಲ್ಲ ಒಪ್ಪಿಕೊಳ್ಳಬೇಕಿದೆ. ಮಕ್ಕಳ ಆಸಕ್ತಿ, ಮನೋಭಾವ, ಸಾಮರ್ಥ್ಯಗಳಿಗನುಗುಣವಾಗಿ ಚಟುವಟಿಕೆ ಹಾಗೂ ಸಂತಸದಾಯಕವಾಗಿ ಕಲಿಸುವ ರೀತಿಯ ಬೋಧನಾ- ಕಲಿಕಾ ಪದ್ಧತಿಗಳಿದ್ದಲ್ಲಿ ಪರಿಣಾಮಕಾರಿಯೆಂಬುದು ಎಲ್ಲರಿಗೂ ತಿಳಿದ ವಿಷಯ. ಇದರ ಜೊತೆಗೆ ಮಕ್ಕಳನ್ನು ತರಗತಿಗಳಲ್ಲಿ ಕೂರಿಸುವ ವಿಧಾನದಲ್ಲಿಯೂ ಮಾರ್ಪಾಡಿನ ಅಗತ್ಯವಿದೆ.

ಈಗಲೂ ಸಾಂಪ್ರದಾಯಿಕವಾದ ರೀತಿಯಲ್ಲಿ ಮಕ್ಕಳು ಒಂದೆಡೆ ಕುಳಿತುಕೊಳ್ಳುವಂತೆ ಮಾಡಿ, ಶಿಕ್ಷಕರು ಇನ್ನೊಂದು ಕಡೆ ನಿಂತು ಬೋಧಿಸುವ ಕ್ರಮ ಹೆಚ್ಚಿನ ಶಾಲೆಗಳಲ್ಲಿ ರೂಢಿಯಲ್ಲಿದೆ. ಈ ರೀತಿಯ ಸಾಂಪ್ರದಾಯಿಕ ಆಸನ ವ್ಯವಸ್ಥೆಯು ಶಿಕ್ಷಕರ ಏಕಮುಖ ಬೋಧನೆಗೆ ಅವಕಾಶ ನೀಡುತ್ತದೆ ಮತ್ತು ಮಕ್ಕಳು- ಶಿಕ್ಷಕರ ನಡುವೆ ಸಂವಹನ, ಅಂತರ್ ಕ್ರಿಯೆಗಳು ಹೆಚ್ಚಿನ ಪ್ರಮಾಣದಲ್ಲಿ ಜರುಗಲು ಅಡ್ಡಿಯಾಗುತ್ತದೆ. ಅಧ್ಯಯನಗಳ ಪ್ರಕಾರ ವೃತ್ತಾಕಾರ, ಅರ್ಧ ವೃತ್ತಾಕಾರ ಅಥವಾ ಸಮೂಹದ ರೀತಿಯಲ್ಲಿ ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಿದಲ್ಲಿ ಮಕ್ಕಳು- ಶಿಕ್ಷಕರ ನಡುವೆ ಹೆಚ್ಚಿನ ಸಂವಹನಕ್ಕೆ ಅವಕಾಶ ಕಲ್ಪಿಸಿದಂತಾಗಿ ಕಲಿಕೆ ಪರಿಣಾಮಕಾರಿಯಾಗುತ್ತದೆ.

ಜೊತೆಗೆ ಎಲ್ಲ ಮಕ್ಕಳನ್ನೂ ಶಿಕ್ಷಕರು ಹತ್ತಿರದಿಂದ ಗಮನಿಸಲು ನೆರವಾಗುತ್ತದೆ. ದೇಶದ ಲಕ್ಷಾಂತರ ಶಾಲೆಗಳಲ್ಲಿ ರೂಢಿಯಲ್ಲಿರುವ ಪರಂಪರಾಗತ ಆಸನದ ವ್ಯವಸ್ಥೆಯಲ್ಲಿ ಚಿಕ್ಕ ಮಾರ್ಪಾಡು ಮಾಡಿದಲ್ಲಿ ಶಿಕ್ಷಕರ ಬೋಧನೆ- ಕಲಿಕೆಯ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಗರಿಷ್ಠ ಸಂವಹನ, ಸಾಮರಸ್ಯ ಹಾಗೂ ಸಾಮಾಜಿಕ ಬೆಳವಣಿಗೆಗಳಿಗೆ ಅನುಕೂಲ ಆಗುತ್ತದೆ. ಮಕ್ಕಳು ತಮ್ಮ ಸಹಜ ಕುತೂಹಲ, ಆಸಕ್ತಿಯಿಂದ ಯಾವುದೇ ಭಯ, ಆತಂಕವಿಲ್ಲದೆ ಪ್ರಶ್ನೆಗಳನ್ನು ಶಿಕ್ಷಕರಿಗೆ ಕೇಳುವಂತಹ ವಾತಾವರಣವನ್ನು ತರಗತಿಯಲ್ಲಿ ಕಲ್ಪಿಸುವುದು ಅಗತ್ಯ.

ಈ ಅಂಶಕ್ಕೆ ಬಹು ಮುಖ್ಯವಾಗಿ ಶಿಕ್ಷಕರ ಮನೋಭಾವವು ಮಕ್ಕಳ ಕೇಂದ್ರಿತ ತತ್ವಗಳಿಗೆ ಪೂರಕವಾಗಿರುವುದು ಅಗತ್ಯ. ಮಕ್ಕಳ ಹೆಚ್ಚಿನ ಪ್ರಮಾಣದ ಕಲಿಕೆಯು ತರಗತಿಯ ಗೋಡೆಗಳ ಮಧ್ಯೆ ಮಾತ್ರ ಜರುಗುವಂತಾಗಿರುವುದು ಒಂದು ದೊಡ್ಡ ಮಿತಿಯಾಗಿದೆ. ತರಗತಿಯ ವಾತಾವರಣದಾಚೆಗಿನ ನೈಸರ್ಗಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ಸಹಜವಾಗಿ ಕಲಿಸುವ ನಿಟ್ಟಿನಲ್ಲಿ ಬದಲಾವಣೆಗಳನ್ನು ತರಲು ಹೆಚ್ಚಿನ ಶಾಲೆಗಳಿಗೆ ಸಾಧ್ಯವಾಗಿಲ್ಲ. ಪ್ರಸಿದ್ಧ ಶಿಕ್ಷಣ ತಜ್ಞ ಜಾನ್ ಡ್ಯೂಯಿ ಅವರು ‘ಅನುಭವಗಳ ಪುನರ್‌ರಚನೆಯೇ ಶಿಕ್ಷಣ’ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ನೇರ ಅನುಭವಗಳನ್ನು ಪಡೆದುಕೊಳ್ಳುವ ರೀತಿಯ ಕಲಿಕಾ ಕ್ರಮಗಳನ್ನು ಶಿಕ್ಷಕರು ಹೆಚ್ಚಾಗಿ ಬಳಸುವ ರೀತಿಯಲ್ಲಿ ಬದಲಾವಣೆಗಳಾಗಬೇಕಿದೆ. ಶಿಕ್ಷಕರೇ ರೂಪಿಸಿರುವ ಆನಂದದಾಯಕ ಚಟುವಟಿಕೆಯಾಧಾರಿತ ಕಲಿಕಾ ಕ್ರಮ ‘ನಲಿ-ಕಲಿ’ಯು ಎಲ್ಲ ಸರ್ಕಾರಿ ಶಾಲೆಗಳ 1ರಿಂದ 3ನೇ ತರಗತಿಯವರೆಗೆ ಜಾರಿಯಲ್ಲಿದೆ. ನಲಿ-ಕಲಿಯು ಜಾರಿಯಲ್ಲಿರುವ ಯಾವುದೇ ತರಗತಿಗೆ ನೀವು ಭೇಟಿ ನೀಡಿದರೆ, ಮಕ್ಕಳು ನೀವು ಅವರನ್ನು ವೀಕ್ಷಿಸುತ್ತಿರುವ ಅಂಶವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮಷ್ಟಕ್ಕೆ ತಾವು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಲಿಂಗ ಭೇದ, ಜಾತಿ ತಾರತಮ್ಯ ಹಾಗೂ ಜಾಣ, ದಡ್ಡ ಎಂಬ ಭೇದ ಭಾವ ಸಹಜವಾಗಿ ಮಾಯವಾಗಿ ಎಲ್ಲ ಮಕ್ಕಳೂ ಜೊತೆಗೂಡಿ ಸಂತಸದಾಯಕವಾಗಿ ಕಲಿಯುವ ವ್ಯವಸ್ಥೆ ಈ ಪದ್ಧತಿಯಲ್ಲಿದೆ.

ಆದರೆ ಶಿಕ್ಷಕರ ಅಪಾರ ಪರಿಶ್ರಮ ನಿರೀಕ್ಷಿಸುವುದೂ ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದ ಕೆಲವರು ಈ ಪದ್ಧತಿಯ ರದ್ದತಿಗೆ ವಿರೋಧಿಸುತ್ತಿರುವುದು ಮಕ್ಕಳ ಕೇಂದ್ರಿತ ಕಲಿಕಾ ಕ್ರಮಕ್ಕಾಗುವ ಹಿನ್ನಡೆಯೆಂದೇ ಭಾವಿಸಬೇಕಾಗುತ್ತದೆ. ನಲಿ-ಕಲಿಯನ್ನು ಹಿಂತೆಗೆದುಕೊಂಡದ್ದೇ ಆದಲ್ಲಿ ಅದಕ್ಕೆ ಪರ್ಯಾಯವೇನು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಬಗೆಯ ಮಕ್ಕಳ ಕೇಂದ್ರಿತ ತತ್ವಗಳ ರೀತಿಯ ಮತ್ತೊಂದು ಉಪಯುಕ್ತ ಪದ್ಧತಿಯನ್ನು ಜಾರಿಗೆ ತರುವವರೆಗೆ ನಲಿ-ಕಲಿಯನ್ನು ಶಿಕ್ಷಕರ ಸಲಹೆಯ ಆಧಾರದ ಮೇಲೆ ಪರಿಷ್ಕರಿಸಿ ಮುಂದುವರಿಸುವ ಅವಶ್ಯಕತೆಯಿದೆ. 3ನೇ ತರಗತಿಯ ನಂತರವೂ ಈ ತತ್ವಗಳನ್ನೇ ಆಧರಿಸಿದ ಕಲಿಕಾ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಮಕ್ಕಳ ಕೇಂದ್ರಿತ ಬೋಧನಾ- ಕಲಿಕಾ ಕ್ರಮಗಳ ಬಗ್ಗೆ ಚರ್ಚಿಸುವುದಾದರೆ, ಮಕ್ಕಳ ಕಲಿಕೆಯು ಸಕ್ರಿಯವಾಗಿರಬೇಕು.

ಮಕ್ಕಳು ತಮ್ಮದೇ ಆದ ಗೆಳೆಯರ ಚಿಕ್ಕ ಚಿಕ್ಕ ಗುಂಪುಗಳಲ್ಲಿ  ಸಹಯೋಗದ ಕಲಿಕೆಗೆ ಅವಕಾಶ ಕಲ್ಪಿಸುವ ವಿಧಾನಗಳನ್ನು ಅಳವಡಿಸಬೇಕು. ಪ್ರಸ್ತುತ ಜಾರಿಯಲ್ಲಿರುವ ಸಿ.ಸಿ.ಇ. (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ಪದ್ಧತಿಯಲ್ಲಿ ಪ್ರಾಜೆಕ್ಟ್‌ಗಳನ್ನು ಮಕ್ಕಳು ಗುಂಪುಗಳಲ್ಲಿ ನಿರ್ವಹಿಸುವಂತೆ ಸೂಚನೆಯಿದ್ದರೂ, ಪ್ರಾಜೆಕ್ಟ್‌ಗಳೆಂದರೆ ಅಂಗಡಿಗಳಲ್ಲಿ ದೊರೆಯುವ ಚಿತ್ರಗಳನ್ನು ಸಂಗ್ರಹಿಸಿ, ಚಾರ್ಟ್‌ಗಳಲ್ಲಿ ಅಂಟಿಸುವ ವಿಧಾನಗಳಿಗಷ್ಟೇ ಸೀಮಿತವಾಗಿರುವುದು ವಿಪರ್ಯಾಸವಾಗಿದೆ. ಶಿಕ್ಷಕರು ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸಿ, ಮಕ್ಕಳಿಂದಲೇ ಕೆಲವು ಸರಳ ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಿಸಬಹುದು.

ನೀರಸ, ನಿಷ್ಕ್ರಿಯ, ಏಕಾತನತೆ, ಅತಿ ಶಿಸ್ತು ಜೊತೆಗೂಡಿದ ತರಗತಿಯ ಗಂಭೀರ ವಾತಾವರಣವನ್ನು ಬದಲಾಯಿಸಿ, ಮಕ್ಕಳಿಗೆ ಬೆಂಬಲ ನೀಡುವ, ಆಪ್ತ, ಆಹ್ಲಾದಕರ ರೀತಿಯಲ್ಲಿ ಮಾರ್ಪಡಿಸಿ ಕಲಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಭವಿಷ್ಯದ ಶಕ್ತಿಶಾಲಿ ಪ್ರಜೆಗಳನ್ನು ರೂಪಿಸಬೇಕಾಗಿರುವ ಹೊಣೆ ಹೊತ್ತಿರುವ ಶಿಕ್ಷಕ ಸಮುದಾಯಕ್ಕೆ (ಖಾಸಗಿ ಶಾಲೆಗಳ ಶಿಕ್ಷಕರೂ ಸೇರಿದಂತೆ) ಪರಿಣಾಮಕಾರಿ ಮಕ್ಕಳ ಕೇಂದ್ರಿತ ಕಲಿಕಾ ಕ್ರಮಗಳ ಕುರಿತಂತೆ ಹೆಚ್ಚಿನ ಮಾಹಿತಿ, ತರಬೇತಿಗಳನ್ನು ನೀಡಿ ಸಶಕ್ತಗೊಳಿಸಬೇಕಿದೆ. ಇಲ್ಲದಿದ್ದಲ್ಲಿ ಮಕ್ಕಳ ಭವಿಷ್ಯ ಮಂಕಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಒಂದು ಸಮಗ್ರ ಕಾರ್ಯನೀತಿಯನ್ನು ಜಾರಿಗೊಳಿಸಿ ಮುಂದುವರಿದಲ್ಲಿ ಪರಿಣಾಮಕಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT