ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಷ್ಟು ಹೆಚ್ಚುತ್ತಿದೆ ಎಸ್‌ಯುವಿ ನಿರೀಕ್ಷೆ

Last Updated 9 ಮಾರ್ಚ್ 2016, 19:35 IST
ಅಕ್ಷರ ಗಾತ್ರ

ಧಾರವಾಡದವರಾದ ಅಶೋಕ ಮನಸೂರ ಛಾಯಾಗ್ರಹಣದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ವರ್ಷದ ಬಹುಪಾಲು ಹಿಮಾಲಯದ ಹಿಮಪರ್ವತ, ರಾಜಸ್ಥಾನದ ಮರುಭೂಮಿ, ಪಶ್ಚಿಮ ಘಟ್ಟದ ಅರಣ್ಯ, ಕರಾವಳಿ ಎಂದು ಸುತ್ತುತ್ತಲೇ ಇರುತ್ತಾರೆ. ಛಾಯಾಗ್ರಹಣದಲ್ಲಿ ಇವರಿಗೆ ತೃಪ್ತಿ ಇದೆಯಾದರೂ, ಕಡಿದಾದ ಪ್ರದೇಶದಲ್ಲಿ ಹೋಗಬಹುದಾದ ಒಂದು ವಾಹನ ಭಾರತದಲ್ಲಿ ಲಭ್ಯವಿಲ್ಲ ಎಂಬ ಬೇಸರದೊಂದಿಗೆ ಅಪ್ಪಟ ಎಸ್‌ಯುವಿ ನಿರೀಕ್ಷೆಯಲ್ಲಿ ಇಂದಿಗೂ ವಾಹನ ಪ್ರಪಂಚದಲ್ಲಿ ಸುತ್ತಾಟ ನಡೆಸುತ್ತಲೇ ಇದ್ದಾರೆ.

ಜೆಎಲ್‌ಆರ್‌ ಡಿಫೆಂಡರ್‌, ಜೀಪ್‌ ರ್‍್ಯಾಂಗ್ಲರ್‌ ಹಾಗೂ ಮಾರುತಿ ಜಿಮನಿ ಎಂಬ ಮೂರು ಎಸ್‌ಯುವಿಗಳು ಧಾರವಾಡದ ಮನಸೂರು ಮಾತ್ರವಲ್ಲ ದೇಶದ ಬಹಳಷ್ಟು ಸಾಹಸಪ್ರಿಯರು ಇಂದಿಗೂ ನಿರೀಕ್ಷಿಸುತ್ತಿರುವ ವಾಹನಗಳಾಗಿವೆ.

ಭಾರತದಲ್ಲಿ ಯುವ ಸಮೂಹ ಹೆಚ್ಚಾದಂತೆ ಹಾಗೂ ಬಹಳಷ್ಟು ಅವಕಾಶಗಳು ತೆರೆದುಕೊಳ್ಳುತ್ತಿದ್ದಂತೆ ಸಾಹಸಮಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಇಂಥವುಗಳಲ್ಲಿ ಕಡಿದಾದ ಪ್ರದೇಶಗಳಲ್ಲೂ ಸಾಗಬಹುದಾದ ಎಸ್‌ಯುವಿಗಳನ್ನು ಬಳಸಿ ಹೊಸ ತಾಣಗಳ ಸುತ್ತಾಟವೂ ಸೇರಿವೆ.

ಬಹಳಷ್ಟು ವರ್ಷಗಳಿಂದ ಯುರೋಪ್‌ ಹಾಗೂ ಇತರ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ ಜಾಗ್ವಾರ್‌ ಲ್ಯಾಂಡ್‌ರೋವರ್‌ ಡಿಫೆಂಡರ್‌. ವಾಹನ ಅರ್ಧದಷ್ಟು ಕೆಸರಿನಲ್ಲೇ ಮುಳುಗಿರಲಿ ಅಥವಾ ಎಂಥದ್ದೇ ಕಡಿದಾದ ಬೆಟ್ಟವಿರಲಿ, ಡಿಫೆಂಡರ್‌ ಎಂಥದ್ದೇ ಪರಿಸ್ಥಿತಿಯಲ್ಲೂ ದಿಟ್ಟವಾಗಿ ಮುಂದೆ ಸಾಗುವ ಸಾಮರ್ಥ್ಯವುಳ್ಳ ಎಸ್‌ಯುವಿ. 1948ರಲ್ಲಿ ಯುರೋಪ್‌ನ ಸೊಲಿಹುಲ್‌ನಲ್ಲಿರುವ ವಿಮಾನ ತಯಾರಿಕಾ ಕಾರ್ಖಾನೆಯಲ್ಲಿ ಡಿಫೆಂಡರ್‌ನ ತಯಾರಿಕೆ ಆರಂಭವಾಯಿತು. ಡಿಫೆಂಡರ್‌ ಹುಟ್ಟಲು ಅದರ ಎಂಜಿನಿಯರ್‌ ಮೌರಿಸ್‌ ವಿಕ್ಸ್‌ ಅವರಿಗೆ ಜೀಪ್‌ ಮೇಲಿನ ಅತಿಯಾದ ಸೆಳೆತವೇ ಕಾರಣ ಎಂದು ಇತಿಹಾಸ ಹೇಳುತ್ತದೆ.

ಆದು ಏನೇ ಇರಲಿ, ಅಂದು ತಯಾರಾದ ಡಿಫೆಂಡರ್‌ಗಳಲ್ಲಿಶೇ 66ರಷ್ಟು ಇಂದಿಗೂ ರಸ್ತೆಯ ಮೇಲಿವೆ. ಜಾಗ್ವಾರ್‌ ಲ್ಯಾಂಡ್‌ರೋವರ್‌ ಕಂಪೆನಿಯನ್ನು 2008ರಲ್ಲಿ ಫೋರ್ಡ್‌ನಿಂದ ಖರೀದಿಸಿದ ಟಾಟಾ ಇದೀಗ ಡಿಫೆಂಡರ್‌ ತಯಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿರುವ ಕುರಿತು ಪುಕಾರು ಎದ್ದಿದೆ. ಆದರೆ ಟಾಟಾದ ಮೂಲ ಸ್ಥಾನ ಭಾರತದಲ್ಲಿನ ವಾಹನ ಪ್ರಿಯರು ಇಂದೂ ಚಾತಕಪಕ್ಷಿಯಂತೆಯೇ ಇದನ್ನು ಕಾಯುತ್ತಿದ್ದಾರೆ.

ಈ ವರ್ಷವಾದರೂ ಬರಬಹುದೇಜೀಪ್‌ ರ್‍್ಯಾಂಗ್ಲರ್‌
ಹೀಗೆ ನಿರೀಕ್ಷೆ ಹುಟ್ಟಿರುವ ಎಸ್‌ಯುವಿಗಳಲ್ಲಿ ಮತ್ತೊಂದು ಜೀಪ್‌ನ ರ್‍್ಯಾಂಗ್ಲರ್. ಜೀಪ್‌ ಕಂಪೆನಿಯನ್ನು ಫಿಯೆಟ್ ಕ್ರಿಸ್ಲರ್‌ ಕಂಪೆನಿ ಖರೀದಿಸಿದ ನಂತರ ಭಾರತಕ್ಕೆ ಜೀಪ್‌ನ ರ್‍್ಯಾಂಗ್ಲರ್‌ ಪರಿಚಯಿಸುವುದಾಗಿ ಹೇಳಿ ಎರಡು ವರ್ಷ ಮೀರಿತು. ಆದರೆ ಇಂದಿಗೂ ಜೀಪ್‌ ಇಲ್ಲಿ ಪರಿಚಯವಾಗಿಲ್ಲ. ಆದರೆ ಕಳೆದ ಕೆಲವು ತಿಂಗಳ ಹಿಂದೆ ರ್‍್ಯಾಂಗ್ಲರ್‌ನ ಅಂತರಜಾಲ ಪುಟ ತೆರೆದಿರುವುದು ಜೀಪ್‌ ಪ್ರಿಯರ ನಿರೀಕ್ಷೆಯನ್ನು ಕಾಪಿಟ್ಟಿಕೊಳ್ಳುವಂತೆ ಮಾಡಿದೆ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಮೆರಿಕದ ಮಿಲಿಟರಿಗೆ ಅಗತ್ಯವಿರುವ ವಾಹನವನ್ನು ಜೀಪ್‌ ಕಂಪೆನಿ ತಯಾರಿಸಿತ್ತು. ಇದೀಗ 75ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಜೀಪ್‌ ಎಂಥದ್ದೇ ಕಡಿದಾದ ರಸ್ತೆಯಲ್ಲೂ ಸಾಗಬಹುದಾದ ಸಾಮರ್ಥ್ಯವುಳ್ಳದ್ದು. ಆರಂಭದ ದಿನದಿಂದಲೂ 4*4 ಸೌಲಭ್ಯ ಹೊಂದಿದ ರ್‍್ಯಾಂಗ್ಲರ್‌ ಆರಂಭವಾಗಿದ್ದು 1941ರಲ್ಲಿ ವಿಲ್ಲಿಸ್‌ ಅವರಿಂದ.  ಅಂದಿನಿಂದಲೂ ತನ್ನ ಮೂಲ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳದೆ ಬಂದಿರುವ ಎಸ್‌ಯುವಿ ಇದು.

 ಎಂದು ಬಿಡುಗಡೆಯಾಗುವುದೋ ಮಾರುತಿ ಜಿಮಿನಿ 
2004ರಲ್ಲಿ ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಜಿಮಿನಿ ಇಂದಿಗೂ ಮಾರುಕಟ್ಟೆಗೆ ಬಿಡುಗಡೆಗೊಂಡಿಲ್ಲ. ಜಿಪ್ಸಿ ಹಾಗೂ ಗ್ರ್ಯಾಂಡ್‌ ವಿಟಾರಾ ಮಾದರಿ ನಡುವಿನ ಮಾದರಿಯಂತಿರುವ ಜಿಮಿನಿ 4*4 ಡ್ರೈವ್ ಹೊಂದಿದೆ.

ಜಿಪ್ಸಿಯನ್ನೇ ಅತಿಯಾಗಿ ಮೆಚ್ಚಿರುವ ಭಾರತೀಯರು, ಜಿಮಿನಿ ರೂಪ ಹಾಗೂ ಸಾಮರ್ಥ್ಯಕ್ಕೆ ಮನಸೋತಿದ್ದಾರೆ. ಆದರೆ ಆರು ತಿಂಗಳಿಗೊಂದು ಹೊಸ ಮಾದರಿಯ ಕಾರನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿ, ಜಿಮಿನಿ ಮಾದರಿ ಬಿಡುಗಡೆಗೆ ಏಕೆ ಮನಸ್ಸು ಮಾಡುತ್ತಿಲ್ಲ ಎಂಬುದು ನಿರೀಕ್ಷೆಯಲ್ಲಿರುವವರ ವ್ಯಥೆ.

ಜೀಪ್‌ ಹಾಗೂ ಡಿಫೆಂಡರ್‌ ₹25ಲಕ್ಷದ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಜೀಪ್‌ ಹಾಗೂ ಡಿಫೆಂಡರ್‌ ಖರೀದಿಸುವಷ್ಟು ಹಣವಿಲ್ಲದವರು ₹7ಲಕ್ಷ ಆಸುಪಾಸಿನಲ್ಲಿರುವ ಜಿಮಿನಿಗಾಗಿ ಕಾಯುತ್ತಿದ್ದಾರೆ.

ಹಲವು ಬಗೆಯ ಸಾಹಸಗಳಲ್ಲಿ ತೊಡಗಿಸಿಕೊಳ್ಳಲು ಹಾತೊರೆಯುತ್ತಿರುವ ಇಂದಿನ ಯುವಪಡೆ, ತಮ್ಮ ಪ್ರವಾಸಕ್ಕೆ ಅನುಕೂಲವಾಗಬಲ್ಲ ವಾಹನದ ನಿರೀಕ್ಷೆಯಲ್ಲಿದ್ದಾರೆ. ಅಂಥವುಗಳಲ್ಲಿ ಈ ಮೂರು ಎಸ್‌ಯುವಿಗಳು ಅಗ್ರಪಟ್ಟಿಯಲ್ಲಿವೆ. ಇವರ ನಿರೀಕ್ಷೆಗೆ ಎಂದು ತೆರೆ ಬೀಳುವುದೋ ಅದು ಈ ಕಂಪೆನಿಯ ನಿರ್ಧಾರವನ್ನು ಅವಲಂಬಿಸಿದೆ. ಅಲ್ಲಿಯವರೆಗೂ ಯೂಟ್ಯೂಬ್‌ನಲ್ಲಿರುವ ಈ ಮೂರು ಎಸ್‌ಯುವಿಗಳ ಸಾಹಸಮಯ ವಿಡಿಯೊ ನೋಡುವುದರಲ್ಲಿ ತಲ್ಲೀನವಾಗಿದೆ ಭಾರತದ ಯುವಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT