ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್‌ಡ್ರಾಪ್‌ ತಲೆನೋವಿಗೆ ಇಲ್ಲಿದೆ ಪರಿಹಾರ

ವಿಜ್ಞಾನ ಲೋಕದಿಂದ
Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಐಐಎಸ್ಸಿ ಮತ್ತು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕಾಲ್ ಡ್ರಾಪ್ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ಮೊಬೈಲ್ ಸೇವೆ ನೀಡುವ ಸಂಸ್ಥೆಗಳು ತರಂಗ ಗುಚ್ಛ ಮತ್ತು ಮೊಬೈಲ್ ಗೋಪುರಗಳನ್ನು ತಮ್ಮ ಪ್ರತಿಸ್ಪರ್ಧಿ ಸಂಸ್ಥೆಗಳೊಂದಿಗೆ ಹಂಚಿಕೊಂಡರೆ, ಗ್ರಾಹಕನಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂದಿದ್ದಾರೆ.

ಮೊಬೈಲ್‌ನಲ್ಲಿ ಮಾಡಿದ ಕರೆ ಅರ್ಧಕ್ಕೇ ನಿಂತುಹೋಗಿ, ಸ್ಥಿರ ದೂರವಾಣಿಯಿಂದ ಮತ್ತೆ ಕರೆ ಮಾಡಿ ಸಂಭಾಷಣೆ ಮುಂದುವರೆಸುವುದು ಸರ್ವೇ ಸಾಮಾನ್ಯ. ಇತ್ತೀಚಿಗೆ ಈ ‘ಕಾಲ್ ಡ್ರಾಪ್’ ಸಮಸ್ಯೆ ಎಷ್ಟು ಬಿಗಡಾಯಿಸಿದೆಯೆಂದರೆ, ಪ್ರತಿ ದಿನವೂ ಇದರ ಸುದ್ದಿ ಇದ್ದೇ ಇರುತ್ತದೆ. ಅದಿರಲಿ, ಪ್ರಧಾನಿ ಮಂತ್ರಿ ಅವರೂ ಈ ತಲೆನೋವಿಗೆ ಪರಿಹಾರ ಕಂಡುಹಿಡಿಯಲು ದೇಶದ ಶ್ರೇಷ್ಠ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನಿಯಮಗಳ ಪ್ರಕಾರ ನೂರಕ್ಕೆ ಎರಡಕ್ಕಿಂತ ಹೆಚ್ಚು ಕರೆಗಳು ಈ ರೀತಿ ಹಠಾತ್ತನೆನಿಲ್ಲುವಂತಿಲ್ಲ. ಆದರೆ, ನಮ್ಮ ಮಹಾನಗರಗಳಲ್ಲಿ ನೂರಕ್ಕೆ ಐದರಿಂದ ಹದಿನೈದು ಕರೆಗಳು ತಾಂತ್ರಿಕ ಸಮಸ್ಯೆಗಳಿಂದ ಮಧ್ಯ
ದಲ್ಲೇ ನಿಂತು ಹೋಗುತ್ತವೆ. ಮೊಬೈಲ್ ಸಂಪರ್ಕ ಜಾಲ ಚೆನ್ನಾಗಿರುವ ಮಹಾನಗರಗಳಲ್ಲೇ ಈ ಕಥೆಯಾದರೆ ಗ್ರಾಮೀಣ ಪ್ರದೇಶಗಳ ಬಗೆಗೆ ಕೇಳುವಂತೆಯೇ ಇಲ್ಲ. ಇದರಿಂದ ಎಚ್ಚೆತ್ತ ಟ್ರಾಯ್, ಮೊಬೈಲ್ ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳಿಗೆ ‘ಕಾಲ್‌ ಡ್ರಾಪ್‌’ ಆಗುವುದನ್ನು ತಡೆಗಟ್ಟಲು ತಾಕೀತು ಮಾಡಿದ್ದು, ಕಂಪೆನಿಗಳು ಟ್ರಾಯ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿವೆ. ಇದೆಲ್ಲದರ ಮಧ್ಯೆ ಇರುವ ಗ್ರಾಹಕನಿಗೆ ಸಮಸ್ಯೆಯಂತೂ ಪರಿಹಾರವಾಗಿಲ್ಲ.

ಬೆಂಗಳೂರಿನ ಐಐಎಸ್ಸಿ ಮತ್ತು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಸಮಸ್ಯೆಯನ್ನು ಆಳವಾಗಿ ಅಧ್ಯಯನ ಮಾಡಿ, ಒಂದು ಪರಿಹಾರವನ್ನೂ ಸೂಚಿಸಿದ್ದಾರೆ. ಅವರು ಹೇಳುವುದೇನಂದರೆ, ಮೊಬೈಲ್ ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ತಾಂತ್ರಿಕ ಸಂಪನ್ಮೂಲಗಳನ್ನು ತಮ್ಮ ತಮ್ಮಲ್ಲೇ ಹಂಚಿಕೊಂಡರೆ, ಕಾಲ್‌ ಡ್ರಾಪ್‌ ಸಮಸ್ಯೆಗೆ ಇತಿಶ್ರೀ ಹಾಡಬಹುದು ಎಂದು. ಇಲ್ಲಿ ತಾಂತ್ರಿಕ ಸಂಪನ್ಮೂಲಗಳೆಂದರೆ, ಎಲ್ಲೆಂದರಲ್ಲಿ ತಲೆಯೆತ್ತಿರುವ ಮೊಬೈಲ್ ಗೋಪುರಗಳು, ಮತ್ತು ತರಂಗ ಗುಚ್ಛ (ಸ್ಪೆಕ್ಟ್ರಂ). ತಾಂತ್ರಿಕ ಪರಿಭಾಷೆಯಲ್ಲಿ, ಸ್ಪೆಕ್ಟ್ರಂ ಅಂದರೆ ವಿವಿಧ ತರಂಗ ಗುಚ್ಛವಿರುವ ವಿದ್ಯುತ್ ಕಾಂತೀಯ ಅಲೆಗಳ ಶ್ರೇಣಿ. ಹರಾಜಿನ ಮೂಲಕ, ಸರ್ಕಾರ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಒಂದೊಂದು ತರಂಗ ಗುಚ್ಛ ಬಳಸಿಕೊಳ್ಳಲು ಪರವಾನಗಿ ನೀಡುತ್ತದೆ.

ಮೊಬೈಲ್ ಸೇವೆ ನೀಡುವ ಸಂಸ್ಥೆಗಳು ತರಂಗ ಗುಚ್ಛ ಮತ್ತು ಮೊಬೈಲ್ ಗೋಪುರಗಳನ್ನು ತಮ್ಮ ಪ್ರತಿಸ್ಪರ್ಧಿ ಸಂಸ್ಥೆಗಳೊಂದಿಗೆ ಹಂಚಿಕೊಂಡರೆ, ಗ್ರಾಹಕನಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎನ್ನುತ್ತದೆ ಅಧ್ಯಯನ. ಅಷ್ಟೇ ಅಲ್ಲ, ಈ ಹಂಚಿಕೆಯಿಂದ ಮೊಬೈಲ್ ಸಂಸ್ಥೆಗಳಿಗೂ ಹೆಚ್ಚಿನ ಲಾಭವಾಗುತ್ತದೆ. ಎರಡು ಕಾರಣಗಳಿರಬಹುದು:  ಒಂದು ಜಾಗದಲ್ಲಿ ನಮಗೆ ಮೊಬೈಲ್ ಸಂಪರ್ಕ ಸೇವೆ ಒದಗಿಸುವ ಸಂಸ್ಥೆಯ ಗೋಪುರ ಇಲ್ಲದಿರಬಹುದು. ಅಥವಾ, ಗೋಪುರವಿದ್ದೂ ಅದರ ಮೂಲಕ ಅತಿ ಹೆಚ್ಚಿನ ಕರೆಗಳು ಹೋಗುತ್ತಿದ್ದು ಗೋಪುರ ಆ ಹೊರೆಯನ್ನು ತಾಳಲಾರದೆ ತೃಪ್ತಿದಾಯಕ ಸೇವೆ ಒದಗಿಸಲು ಸಾಧ್ಯವಾಗದೆ ಇರದಿರಬಹುದು.

ಮೊಬೈಲ್ ಸಂಸ್ಥೆಗಳು ತಮ್ಮ ಗೋಪುರಗಳನ್ನು ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಹಂಚಿಕೊಂಡರೆ, ಸ್ವಾಭಾವಿಕವಾಗಿಯೇ ಸೇವೆಯ ಗುಣಮಟ್ಟ ಹೆಚ್ಚುತ್ತದೆ. ಉದಾಹರಣೆಗೆ, ಯಾವುದೋ ಸ್ಥಳದಲ್ಲಿ ಏರ್‌ಟೆಲ್‌ ಗೋಪುರ ಇಲ್ಲ, ಆದರೆ ಐಡಿಯಾದ ಗೋಪುರ ಇದೆ ಅಂದುಕೊಳ್ಳೋಣ. ಅಲ್ಲಿ ಐಡಿಯಾ ಸಂಸ್ಥೆಯವರು ತಮ್ಮ ಸೌಕರ್ಯವನ್ನು ಏರ್‌ಟೆಲ್‌ ಗ್ರಾಹಕರೂ ಬಳಸಿಕೊಳ್ಳಲು ಅನುವುಮಾಡಿಕೊಟ್ಟರೆ, ಗ್ರಾಹಕರಿಗೂ ಅನುಕೂಲ ಮತ್ತು ಅವರಿಗೆ ಸೇವೆ ಒದಗಿಸುವ ಸಂಸ್ಥೆಗೂ ಹೆಚ್ಚಿನ ಆದಾಯ.

ಅದೇ ರೀತಿ, ಮತ್ತೊಂದೆಡೆ ಐಡಿಯಾ ಗೋಪುರದ ಮೇಲಿನ ಹೊರೆ ಮಿತಿಮೀರಿದೆ, ಆದರೆ ಏರ್‌ಟೆಲ್‌ ಮೇಲೆ ಅಷ್ಟೇನೂ ಹೊರೆ ಇಲ್ಲ ಅಂದುಕೊಳ್ಳೋಣ. ಅಲ್ಲಿ ಐಡಿಯಾ ಸಂಸ್ಥೆಯು ಏರ್‌ಟೆಲ್‌ನ ಗೋಪುರವನ್ನು ಬಳಸಿಕಳ್ಳಲು ಅನುಮತಿ ಇದ್ದರೆ, ಗ್ರಾಹಕರಿಗೆ ಉತ್ತಮ ಸೇವೆ ಸಿಗುತ್ತದೆ. ಈ ರೀತಿಯ ಒಪ್ಪಂದದಿಂದ, ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ಸಂಸ್ಥೆಗಳಿಗೂ ಲಾಭ ಎನ್ನುತ್ತಾರೆ ವಿಜ್ಞಾನಿಗಳು. ಮುನ್ನೋಟಕ್ಕೆ ಇದು ಬಹಳ ಸರಳವೆನಿಸಬಹುದು. ಆದರೆ ಹೆಚ್ಚು ಹೆಚ್ಚು ಗ್ರಾಹಕರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ತೀವ್ರ ಸ್ಪರ್ಧೆಯಲ್ಲಿರುವ ಮೊಬೈಲ್ ಸಂಸ್ಥೆಗಳ ನಡುವೆ ಸಂಪನ್ಮೂಲ ಹಂಚಿಕೆ ಒಂದು ಸೂಕ್ಷ್ಮದ ವಿಚಾರವೇ ಸರಿ.

ಗೇಮ್‌ ಥಿಯರಿ: ಸಂಪನ್ಮೂಲ ಹಂಚಿಕೆಯಿಂದ ಬಂದ ಲಾಭವನ್ನು ಹಂಚಿಕೊಳ್ಳುವುದು ಹೇಗೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯಾದರೆ, ಮಧ್ಯದಲ್ಲೇ ಈ ಒಪ್ಪಂದದಿಂದ ಕೆಲವು ಸಂಸ್ಥೆಗಳು ಹಿಂದೆ ಸರಿಯಲು ನಿರ್ಧರಿಸಿದರೆ ಉಳಿದ ಸಂಸ್ಥೆಗಳ ಮೇಲೆ ಆರ್ಥಿಕ ಪರಿಣಾಮ ಏನು ಎಂಬುದೂ ಮುಖ್ಯ. ತಮ್ಮ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಎಲ್ಲಾ ಸಂದರ್ಭಗಳನ್ನೂ ವಿಶ್ಲೇಷಿಸಿದ್ದಾರೆ. ಎಲ್ಲ ಮೊಬೈಲ್ ಸಂಪರ್ಕ ಸೇವೆ ನೀಡುವ ಸಂಸ್ಥೆಗಳೂ ಸೇರಿ ಒಂದು ಒಕ್ಕೂಟ ಮಾಡಿಕೊಂಡು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಂಡರೆ, ಒಕ್ಕೂಟದಲ್ಲಿರುವ ಎಲ್ಲ ಸಂಸ್ಥೆಗಳಿಗೂ ಲಾಭ ಹೆಚ್ಚಾಗುತ್ತದೆ.

ಕೆಲವು ಸಂಸ್ಥೆಗಳು, ಒಕ್ಕೂಟದಿಂದ ಹೊರಬರಲು ನಿರ್ಧರಿಸಿದರೆ, ಹೊರ ನಡೆದ ಗುಂಪಿನಲ್ಲಿ ಕನಿಷ್ಠ ಒಂದು ಸಂಸ್ಥೆಯ ಲಾಭವು ಒಕ್ಕೂಟದಲ್ಲಿ ಗಳಿಸುತ್ತಿದ್ದ ಲಾಭಕ್ಕಿಂತ ಕಡಿಮೆಯಾಗುತ್ತದೆ. ಈ ರೀತಿಯ ಹತ್ತು ಹಲವು ಸೂಕ್ಷ್ಮ ವಿಚಾರಗಳನ್ನು ಅಧ್ಯಯನ ಮಾಡಲು, ಐಐಎಸ್ಸಿ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು 'ಗೇಮ್‌ ಥಿಯರಿ' ಎಂಬ ಗಣಿತ ತಂತ್ರವನ್ನು ಬಳಸಿಕೊಂಡಿತು. ಅಧ್ಯಯನದ ಫಲಿತಾಂಶಗಳು ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟವಾದವು.

ಒಳ್ಳೆಯ ಸುದ್ದಿಯೆಂದರೆ, ಇತ್ತೀಚಿಗೆ ಮೊಬೈಲ್ ಸಂಪರ್ಕ ಒದಗಿಸುವ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಟ್ರಾಯ್ ಒಪ್ಪಿಗೆ ಸೂಚಿಸಿದೆ. ಬಿಹಾರ, ರಾಜಸ್ತಾನ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್‌ ತಮ್ಮ ತರಂಗ ಗುಚ್ಛ ಹಂಚಿಕೊಳ್ಳುವ ಯೋಚನೆಯಲ್ಲಿವೆ. ಈ ರೀತಿಯ ಒಪ್ಪಂದಗಳು ದೇಶದೆಲ್ಲೆಡೆ ಆದಾಗ 'ಒಂದು ನಿಮಿಷ ತಾಳಿ. ಲ್ಯಾಂಡ್‌ಲೈನ್‌ನಿಂದ ಮಾಡುತ್ತೇನೆ' ಎಂದು ಹೇಳುವ ಸಂದರ್ಭ ಬರದೇ ಇರಬಹುದು! ಅಂದ ಹಾಗೆ, ವೈಜ್ಞಾನಿಕ ಸಂಶೋಧನೆಯಿಂದ ನಮ್ಮ ದಿನನಿತ್ಯದ ಸಮಸ್ಯೆಗಳೂ ಬಗೆಹರಿಯುತ್ತವೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನವಲ್ಲವೆ?

ಗುಬ್ಬಿ ಲ್ಯಾಬ್ಸ್
(ಸಂಶೋಧನಾ ಚಟುವಟಿಕೆಗಳ ಬಗ್ಗೆ ತೊಡಗಿಸಿಕೊಂಡಿರುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT