ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತ್ವದ ಅಲೆಯೊಳು ಅಡಗಿದೆ ವಿಶ್ವದ ಲೀಲೆ!

ವಾರದ ಸಂದರ್ಶನ-ಸಿ.ವಿ.ವಿಶ್ವೇಶ್ವರ ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್‌) ವಿಜ್ಞಾನಿ
Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ಕಪ್ಪು ರಂಧ್ರಗಳ ಕುರಿತ ಸಂಶೋಧನೆ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಬೀಜಾಂಕುರ ಮಾಡಿದವರಲ್ಲಿ ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್‌) ವಿಜ್ಞಾನಿ, ಕನ್ನಡದ ಸಿ.ವಿ.ವಿಶ್ವೇಶ್ವರ ಪ್ರಮುಖರು. ಗುರುತ್ವ ಅಲೆಗಳು ಪತ್ತೆಯಾದ ಈ ಸಂದರ್ಭದಲ್ಲಿ ವಿಶ್ವೇಶ್ವರ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ:

ಏನಿದು ಗುರುತ್ವದ ಅಲೆ? ಅದು ಪತ್ತೆಯಾದ ಮಾತ್ರಕ್ಕೆ ಯಾಕೆ ಅಷ್ಟೊಂದು ಸಂಭ್ರಮ?
ಪ್ರಪಂಚದ ಸರ್ವಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಆಲ್ಬರ್ಟ್‌ ಐನ್‌ಸ್ಟೀನ್‌ ಅವರು 1915ರಲ್ಲಿ ಸಾಮಾನ್ಯ ಸಾಪೇಕ್ಷ ವಾದ ಮಂಡಿಸಿದರು. ಅದರ ಮರುವರ್ಷವೇ ಗುರುತ್ವ ಅಲೆಗಳ ಅಸ್ತಿತ್ವದ ಕುರಿತು ಪ್ರಸ್ತಾಪಿಸಿದರು. ಆ ಅಲೆಗಳು ಹೇಗೆ ಉತ್ಪನ್ನವಾಗುತ್ತವೆ ಎಂಬುದನ್ನು ಐನ್‌ಸ್ಟೀನ್‌ ಅವರು ಸೈದ್ಧಾಂತಿಕವಾಗಿ ಸಂಶೋಧಿಸಿ ಸರಿಯಾಗಿ ನೂರು ವರ್ಷಗಳು ತುಂಬಿದ ಸಂದರ್ಭದಲ್ಲೇ ಅವು ಪತ್ತೆ ಆಗಿರುವುದು ವಿಜ್ಞಾನ ಲೋಕಕ್ಕೆ ಮಹದಾನಂದ ಉಂಟುಮಾಡಿದೆ.

ಕಪ್ಪು ರಂಧ್ರಗಳ ಅಸ್ತಿತ್ವ, ಚಲನವಲನಗಳನ್ನು ಗುರುತ್ವದ ಅಲೆಗಳ ಮೂಲಕ ಪ್ರತ್ಯಕ್ಷವಾಗಿ ಕಂಡು ಹಿಡಿದಿರುವುದು ಅತ್ಯಂತ ಮಹತ್ವದ ವಿದ್ಯಮಾನ. 13.8 ಶತಕೋಟಿ ವರ್ಷಗಳಷ್ಟು ಹಿಂದೆ ವಿಶ್ವದ ಸೃಷ್ಟಿಯಾಗಿದೆ. ಆಗ ಅದು ಪ್ಲಾಸ್ಮಾ (ಅಯಾನೀಕೃತ ಅನಿಲ) ಸ್ಥಿತಿಯಲ್ಲಿತ್ತು. ಬೆಳಕು ಆ ಪ್ಲಾಸ್ಮಾದಲ್ಲಿ ಬಂದಿಯಾಯಿತು. ಅಪಾರದರ್ಶಕ ವಸ್ತುವಿನ ಒಡಲಾಳವನ್ನು ಬೆಳಕಿನ ಮೂಲಕ ಬಯಲಿಗೆ ಎಳೆಯುವುದು ಅಸಾಧ್ಯ. ಆದ್ದರಿಂದ ವಿಶ್ವದ ಉಗಮದ ಸಂದರ್ಭವನ್ನು ತಿಳಿದುಕೊಳ್ಳಲು ಗುರುತ್ವದ ಅಲೆಗಳಿಂದ ಮಾತ್ರ ಸಾಧ್ಯ. ಸಂಭ್ರಮದ ಅಲೆಗೆ ಇದೇ ಕಾರಣ.

ಆಕಾಶ ಕಾಯಗಳಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ಕಣ್ಣಿಡಲು ಇದುವರೆಗೆ ನಡೆದ ಪ್ರಯತ್ನಗಳು ಯಾವುವು?
ನೂರಾರು ವರ್ಷಗಳ ಹಿಂದೆಯೇ ಗೆಲಿಲಿಯೊ ದೂರದರ್ಶಕವನ್ನು ಖಗೋಳ ವೀಕ್ಷಣೆಗೆ ಅಳವಡಿಸಿಕೊಂಡರು. ಆಕಾಶ ಕಾಯಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳ ಬಳಕೆಗೆ ಅದು ನಾಂದಿಯಾಯಿತು. ತಂತ್ರಜ್ಞಾನ ಮುಂದುವರಿದಂತೆ ಇತರ ಎಲೆಕ್ಟ್ರೊಮ್ಯಾಗ್ನೆಟಿಕ್‌ ಅಲೆಗಳ ಮೂಲಕ ಆಕಾಶದತ್ತ ಕಣ್ಣಿಡಲು ಶುರು ಮಾಡಲಾಯಿತು. ನಂತರದ ಅವಧಿಯಲ್ಲಿ ರೇಡಿಯೊ ತರಂಗಗಳು ಹಾಗೂ ಕ್ಷ–ಕಿರಣಗಳ ಬಳಕೆಯಾಯಿತು. ಹೀಗೆ ಸಂಶೋಧನಾ ತಂತ್ರಜ್ಞಾನದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬರಲಾಗಿದೆ. ವಿಶ್ವದ ರಹಸ್ಯವನ್ನು ಭೇದಿಸಲು, ಅದರ ಉಗಮದ ಕುರಿತು ತಿಳಿದುಕೊಳ್ಳಲು ಗುರುತ್ವದ ಅಲೆಗಳು ಈಗ ಖಭೌತ ವಿಜ್ಞಾನಿಗಳಿಗೆ ಹೊಸ ದ್ವಾರವನ್ನು ತೆರೆದಿವೆ.

ಹೌದು, ಈ ಕಪ್ಪು ರಂಧ್ರ ಎಂದರೇನು? ಗುರುತ್ವದ ಅಲೆಗೂ ಅದಕ್ಕೂ ಏನು ಸಂಬಂಧ?
ನಕ್ಷತ್ರ ವಿಕಾಸವಾಗುತ್ತಾ ಹೋದಾಗ ವಿಕಾಸದ ಕೊನೆಯಲ್ಲಿ ಅದು ತನ್ನ ಅಣು ಇಂಧನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದು. ಆಗ ತನ್ನದೇ ಗುರುತ್ವಾಕರ್ಷಣೆಯಿಂದ ಸಂಕುಚಿತವಾಗುತ್ತಾ ಹೋಗುವುದು. ಅದರ ತೂಕ ಸೂರ್ಯನ ತೂಕಕ್ಕಿಂತ ಬಹುಮಟ್ಟಿಗೆ ಹೆಚ್ಚಾಗಿದ್ದಲ್ಲಿ ಅದರ ಸಂಕುಚನವನ್ನು ಯಾವ ಶಕ್ತಿಗೂ ತಡೆಯಲು ಸಾಧ್ಯವಿಲ್ಲ. ನಕ್ಷತ್ರದ ಸಂಪೂರ್ಣ ದ್ರವ್ಯರಾಶಿಯೂ ಸಂಕುಚಿಸುತ್ತಾ ಹೋಗಿ ಅದರ ತೂಕಕ್ಕೆ ಅನುಗುಣವಾದ ನಿರ್ದಿಷ್ಟ ತ್ರಿಜ್ಯದ ಗೋಲದೊಳಗೆ ಹೊಕ್ಕಾಗ ಆ ಗೋಲವೇ ಕಪ್ಪು ರಂಧ್ರ ಎನಿಸುವುದು. ಉದಾಹರಣೆಗೆ, ಸೂರ್ಯನ ತೂಕದ ಕಪ್ಪು ರಂಧ್ರದ ತ್ರಿಜ್ಯ ಕೇವಲ ಮೂರು ಕಿಲೊ ಮೀಟರ್‌ಗಳು!

ಈ ಗೋಲವು ದ್ರವ್ಯರಾಶಿಯಿಂದ ನಿರ್ಮಿತವಾಗಿರುವುದಿಲ್ಲ. ಕೇವಲ ಕಾಲ್ಪನಿಕ ಜ್ಯಾಮಿತಿಯ ಗೋಲ. ಅದರಲ್ಲಿ ಬೆಳಕೇ ಆಗಲಿ, ಬೇರೆ ಯಾವ ವಸ್ತುವೇ ಆಗಲಿ ಒಳಹೊಕ್ಕರೆ ಹೊರಬರುವುದು ಸಾಧ್ಯವಿಲ್ಲ. ಹೀಗಾಗಿ ಆ ಕಪ್ಪು ರಂಧ್ರದ ಒಳಗೆ ನಡೆಯುವ ಚಟುವಟಿಕೆಗಳ ಮಾಹಿತಿ ಸಿಗುವುದಿಲ್ಲ.

ಇನ್ನು ಗುರುತ್ವದ ಅಲೆಗಳ ವಿಷಯ. ಐನ್‌ಸ್ಟೀನ್‌ ಅವರ ಸಾಮಾನ್ಯ ಸಾಪೇಕ್ಷ ವಾದದ ಪ್ರಕಾರ ಯಾವುದೇ ವಸ್ತುಗಳು ಚಲನ ಸ್ಥಿತಿಯಲ್ಲಿದ್ದರೂ ಅವುಗಳಿಂದ ಗುರುತ್ವದ ಅಲೆಗಳು ಹೊರಹೊಮ್ಮುತ್ತಲೇ ಇರುತ್ತವೆ. ಗುರುತ್ವವು ಪ್ರಕೃತಿಯಲ್ಲೇ ಅತ್ಯಂತ ದುರ್ಬಲವಾದ ಶಕ್ತಿಯಾದ್ದರಿಂದ ಅದರ ಅಲೆಗಳು ಅಷ್ಟೇ ದುರ್ಬಲವಾಗಿರುತ್ತವೆ. ಆದ್ದರಿಂದ ಅವುಗಳನ್ನು ಭೂಮಿಯಿಂದ ವೀಕ್ಷಿಸಬೇಕಾದರೆ ಆಕಾಶ ಕಾಯಗಳತ್ತ ಸೂಕ್ಷ್ಮವಾದ ದೃಷ್ಟಿ ಹರಿಸಬೇಕು. ಕಪ್ಪು ರಂಧ್ರಗಳು ಸಹ ಆಕಾಶ ಕಾಯಗಳಲ್ಲವೆ? ಆದ್ದರಿಂದ ಇವುಗಳ ಚಲನೆಯಿಂದ ಸಹ ಗುರುತ್ವದ ಅಲೆಗಳು ಉತ್ಪನ್ನವಾಗುತ್ತವೆ.

ನಿಮ್ಮ ಸಂಶೋಧನೆ ಸಹ ಸಂಪೂರ್ಣವಾಗಿ ಕಪ್ಪು ರಂಧ್ರಗಳ ಮೇಲೇ ಕೇಂದ್ರೀಕೃತವಾಗಿತ್ತು. ಆ ಕುರಿತು ವಿಸ್ತರಿಸಿ ಹೇಳುವಿರಾ?
ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ನಾನು ಪಿಎಚ್‌.ಡಿ ಸಂಶೋಧನೆ ನಡೆಸಿದೆ. ನನ್ನ ಮಾರ್ಗದರ್ಶಕರಾಗಿದ್ದ ಪ್ರೊ. ಚಾರ್ಲ್ಸ್‌ ಮಿಸ್ನರ್‌ ಅವರು ಕಪ್ಪು ರಂಧ್ರಗಳ ಮೇಲೆ ಸಂಶೋಧನೆ ಮಾಡುವಂತೆ ನನಗೆ ಸೂಚಿಸಿದರು. ನನ್ನ ಸಂಶೋಧನೆಯಿಂದ ಮೊದಲಿಗೆ ಎರಡು ಪ್ರಬಂಧಗಳು ಪ್ರಕಟವಾದವು. ಮೊದಲನೆ ಪ್ರಬಂಧದಲ್ಲಿ ಇದುವರೆಗೆ ನಾನು ಹೇಳಿದ ಕಪ್ಪು ರಂಧ್ರದ ಲಕ್ಷಣಗಳ ವಿಶ್ಲೇಷಣೆ ಇತ್ತು.

ಎರಡನೇ ಪ್ರಬಂಧದಲ್ಲಿ ಕಪ್ಪು ರಂಧ್ರದ ಸ್ಥಿರತೆಯನ್ನು ಖಚಿತಪಡಿಸಲು ಸಾಧ್ಯವಾಯಿತು.  ವಿಶ್ವದಲ್ಲಿ ಸ್ಥಿರತೆ ಇಲ್ಲದೆ ಯಾವ ಅಸ್ತಿತ್ವವೂ ಇಲ್ಲ. ಉದಾಹರಣೆಗೆ ಪೆನ್ಸಿಲ್‌ ಅನ್ನು ಅದರ ತುದಿಯ ಮೇಲೆ ಅರೆಕ್ಷಣವಷ್ಟೇ ನಿಲ್ಲಿಸಬಹುದು. ಹೀಗಾಗಿ ಅದಕ್ಕೆ ಸ್ಥಿರತೆ ಇಲ್ಲ. ಸ್ಥಿರತೆ ಇಲ್ಲದ ಕಾರಣ ಆ ಸ್ಥಿತಿಗೆ ಅಸ್ತಿತ್ವ ಇಲ್ಲ. ಅದೇ ಕಪ್ಪು ರಂಧ್ರಗಳ ಸ್ಥಿತಿಗೆ ಸ್ಥಿರತೆ, ಅಸ್ತಿತ್ವ ಎರಡೂ ಇವೆ. ಇದೇ ನನ್ನ ಎರಡನೇ ಪ್ರಬಂಧದ ತಿರುಳು.

ಈ ಎರಡೂ ಪ್ರಬಂಧಗಳನ್ನು ಮಂಡಿಸಿದ ಬಳಿಕ ಕಪ್ಪು ರಂಧ್ರಗಳ ಕುರಿತಾದ ನಿಮ್ಮ ಸಂಶೋಧನೆ ಯಾವ ದಿಕ್ಕು ಪಡೆಯಿತು?
ಕಪ್ಪು ರಂಧ್ರದ ಅಸ್ತಿತ್ವ ಸೈದ್ಧಾಂತಿಕವಾಗಿ ನಿರೂಪಿತವಾದ ಮೇಲೆ ಮುಂದಿದ್ದ ಪ್ರಶ್ನೆ  ‘ಅದನ್ನು ಗುರುತಿಸುವುದು ಹೇಗೆ’ ಎಂಬುದಾಗಿತ್ತು. ನನ್ನ ಮುಂದಿನ ಸಂಶೋಧನೆ ಈ ಪ್ರಶ್ನೆಗೆ ಉತ್ತರವನ್ನು ನೀಡಿತು. ಗುರುತ್ವದ ಅಲೆಗಳನ್ನು ಕಪ್ಪು ರಂಧ್ರವೊಂದರ ಕಡೆಗೆ ಕಳುಹಿಸಿದಾಗ ಅದರಲ್ಲಿ ಸಾಕಷ್ಟು ಭಾಗ ರಂಧ್ರದ ಒಳಗೆ ಹೋಗುತ್ತದೆ. ಆದರೆ, ಹೊರಗೆ ಬರುವುದಿಲ್ಲ. ಉಳಿದ ಭಾಗ ನಮ್ಮ ವೀಕ್ಷಣೆಗೆ ಲಭ್ಯವಾಗುತ್ತದೆ.

ನನ್ನ ತಾತ್ವಿಕ ಸಂಶೋಧನೆ ದೃಢಮಾಡಿದ ವಿಷಯ ಏನೆಂದರೆ: ನಮಗೆ ದೊರಕುವ, ಕಪ್ಪು ರಂಧ್ರದ ಕಡೆಯಿಂದ ಬರುತ್ತಿರುವ ಅಲೆಗಳು ಸ್ಥಿರ ಕಂಪನಾಂಕವನ್ನು ಹೊಂದಿದ್ದು, ಅವುಗಳ ಪಾರ (ಆ್ಯಂಪ್ಲಿಟ್ಯೂಡ್‌) ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ. ಅದಕ್ಕೆ ‘ಕ್ವಾಸಿ ನಾರ್ಮಲ್‌ ಮೋಡ್ಸ್‌’ ಎಂದು ಹೆಸರು.

ಗಂಟೆಯನ್ನು ಒಂದು ಸಲ ಬಾರಿಸಿದಾಗ ಅದರಿಂದ ಹೊರಹೊಮ್ಮುವ ಶಬ್ದ ತರಂಗಗಳು ನಿರ್ದಿಷ್ಟ ತರಂಗಾಂತರ ಹೊಂದಿದ್ದು, ಪಾರ ಕಡಿಮೆ ಆಗುತ್ತಾ ಹೋಗುತ್ತದೆ, ಅಲ್ಲವೆ? ಆದ್ದರಿಂದ ಕ್ವಾಸಿ ನಾರ್ಮಲ್‌ ಮೋಡ್‌ಗಳಿಗೆ ‘ಕಪ್ಪು ರಂಧ್ರಗಳ ಹೊಡೆತದ ಶಬ್ದ’ ಎಂದು ಹೋಲಿಕೆ ಮಾಡಲಾಗುತ್ತದೆ.

ಎರಡು ಕಪ್ಪು ರಂಧ್ರಗಳು ಬಾಹ್ಯಾಕಾಶದಲ್ಲಿ ಒಂದಾದ ವಿದ್ಯಮಾನದ ಕುರಿತು ಹೇಳಿ...
ಈ ಎರಡು ಕಪ್ಪು ರಂಧ್ರಗಳ ಸೃಷ್ಟಿ 1.3 ಶತಕೋಟಿ ವರ್ಷಗಳಷ್ಟು ಹಿಂದೆ ನಡೆದ ಅದ್ಭುತ ಘಟನೆ. ಅವು ಒಂದರ ಸುತ್ತ ಮತ್ತೊಂದು, ಬೆಳಕಿನ ವೇಗದ ಅರ್ಧದಷ್ಟು ವೇಗದಲ್ಲಿ ಪರಿಭ್ರಮಣ ಮಾಡುತ್ತಿದ್ದವು. ಪರಸ್ಪರ ದೂರ ಕಡಿಮೆ ಆಗುತ್ತಾ ಬಂತು. ಕೊನೆಯಲ್ಲಿ ಒಂದಕ್ಕೊಂದು ಸೇರಿಕೊಂಡು ಏಕತ್ರವಾಗಿ ಹೊಸ ಕಪ್ಪು ರಂಧ್ರ ಉದ್ಭವವಾಯಿತು.

ಮೊದಲೆರಡು ಕಪ್ಪು ರಂಧ್ರಗಳ ತೂಕ ಸೂರ್ಯನ ತೂಕಕ್ಕಿಂತ 36 ಹಾಗೂ 29 ಪಟ್ಟು ಅಧಿಕವಾಗಿತ್ತು. ಒಕ್ಕೂಟದಿಂದ ಉತ್ಪನ್ನವಾದ ಹೊಸ ಕಪ್ಪು ರಂಧ್ರದ ತೂಕ ಸೂರ್ಯನ ತೂಕಕ್ಕಿಂತ 62 ಪಟ್ಟು ಹೆಚ್ಚಿತ್ತು. ಮೊದಲೆರಡು ಕಪ್ಪು ರಂಧ್ರಗಳ ಒಟ್ಟು ತೂಕ ಕಡೆಗೆ ಉಳಿಯುವ ಕಪ್ಪು ರಂಧ್ರದ ತೂಕಕ್ಕಿಂತ ಮೂರು ಸೂರ್ಯಗಳ ತೂಕದಷ್ಟು ಹೆಚ್ಚಾಗಿತ್ತು. ಈ ವ್ಯತ್ಯಾಸದ ದ್ರವ್ಯರಾಶಿ ಗುರುತ್ವದ ಅಲೆಗಳಾಗಿ ಮಾರ್ಪಟ್ಟು ಹೊರಹೊಮ್ಮಿತು.

ಈ ಕಪ್ಪು ರಂಧ್ರವು ಜನನವಾದ ಕ್ಷಣದಲ್ಲಿ ಹೊರಹೊಮ್ಮಿದ ಗುರುತ್ವದ ಅಲೆಗಳು ‘ಕ್ವಾಸಿ ನಾರ್ಮಲ್‌ ಮೋಡ್‌’ ಸ್ವರೂಪದಲ್ಲಿದ್ದವು. ಆ ಕಂಪನವನ್ನು ಆಗಷ್ಟೇ ಹುಟ್ಟಿದ ಮಗುವಿನ ಮೊದಲ ಧ್ವನಿ ಎಂದು ಕರೆಯಬಹುದು. ಈ ಧ್ವನಿಯಿಂದಲೇ ಹೊಸ ಕಪ್ಪು ರಂಧ್ರ ಉದ್ಭವವಾಯಿತು ಎನ್ನುವ ವಿಷಯವಲ್ಲದೆ, ಅದರ ಲಕ್ಷಣ ಸಹ ತಿಳಿದುಬಂತು. ಈ ಎಲ್ಲ ವೀಕ್ಷಣೆ, 30 ವರ್ಷಗಳಿಗೂ ಮೀರಿದ ಸಮಯದಲ್ಲಿ ನಡೆದ ತಂತ್ರಜ್ಞಾನದ ಮುನ್ನಡೆ ಫಲವಾಗಿ ನಿರ್ಮಿತವಾದ ಲೇಸರ್ ಇಂಟರ್​ಫೆರೋಮೀಟರ್ ಗ್ರಾವಿಟೇಷನಲ್- ವೇವ್ ಅಬ್ಸರ್ವೇಟರಿಯಿಂದ (ಲೈಗೊ) ಸಾಧ್ಯವಾಯಿತು.

ಬಹು ಹಿಂದೆಯೇ ಸೈದ್ಧಾಂತಿಕವಾಗಿ ನಿರೂಪಿತವಾದ ಸಂಗತಿಗೆ ಪ್ರಾಯೋಗಿಕವಾದ ಪುರಾವೆ ಸಿಕ್ಕ ಈ ಕ್ಷಣದಲ್ಲಿ ಕಾಲ ಹಿಂದಕ್ಕೆ ಪಯಣಿಸಿದಂತೆ ಭಾಸವಾಗುತ್ತಿದೆ. ನಲವತ್ತೈದು ವರ್ಷಗಳ ಹಿಂದೆ ಉಂಟಾದ ಉಲ್ಲಾಸ ಮತ್ತೊಮ್ಮೆ ಮೂಡಿ ಬರುತ್ತಿದೆ.

ಗುರುತ್ವದ ಅಲೆಗಳ ಪತ್ತೆಯಲ್ಲಿ ಎಷ್ಟು ಜನ ಭಾರತೀಯರ ಪಾತ್ರವಿದೆ?
ಲೈಗೊದಿಂದ ಬಿಡುಗಡೆ ಮಾಡಿರುವ ಸಂಶೋಧಕರ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಭಾರತೀಯರ ಪಾತ್ರ ಎಂಥದ್ದು ಎಂಬುದು ಮನದಟ್ಟಾಗುತ್ತದೆ. ಲೈಗೊ ಸಾಧನೆಯಲ್ಲಿ  ಪ್ರಪಂಚದ ಸುಮಾರು ಸಾವಿರ ವಿಜ್ಞಾನಿಗಳ ಶ್ರಮವಿದೆ. 35  ಭಾರತೀಯರು ಆ ತಂಡದಲ್ಲಿದ್ದರು ಎನ್ನುವುದು ದೇಶಕ್ಕೆ ಹೆಮ್ಮೆ ತರುವ ಸಂಗತಿ. ಅದರಲ್ಲಿ ಬಾಲಾ ಆರ್‌.ಅಯ್ಯರ್‌ ಒಬ್ಬರು. ನಾನು ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ನನ್ನ ಯುವ ಸಹೋದ್ಯೋಗಿ ಆಗಿದ್ದರು.

ನಾವಿಬ್ಬರೂ ಒಡಗೂಡಿ ಅನೇಕ ವಿಧವಾದ ಸಂಶೋಧನೆ ನಡೆಸಿದ್ದೆವು. 13 ಪ್ರಬಂಧಗಳನ್ನು ಒಟ್ಟಿಗೆ ಬರೆದೆವು. ಅವರು ಈಗ ನೆಹರೂ ತಾರಾಲಯದ ಆಡಳಿತ ಮಂಡಳಿ ಸದಸ್ಯರು. ತಾರಾಲಯದ ವಿದ್ಯಾರ್ಥಿಗಳಿಗೆ ಅವರ ಪಾಠ ಕೇಳುವ ಅವಕಾಶ ಸತತವಾಗಿ ಸಿಗುತ್ತದೆ. ಬೆಂಗಳೂರಿನವರೇ ಆಗಿರುವ ನಮ್ಮ ಚಿರಪರಿಚಿತ ಮಿತ್ರರ ಸಾಧನೆ ನಮಗೆಲ್ಲ ಸಂತಸ ಉಂಟುಮಾಡಿದೆ.

ಭಾರತದಲ್ಲೂ ಲೈಗೊ ಮಾದರಿ ಕೇಂದ್ರದ ಅಗತ್ಯವಿದೆಯೇ?
ಭಾರತದಲ್ಲಿ ಲೈಗೊ ಮಾದರಿ ಕೇಂದ್ರದ ಸ್ಥಾಪನೆಯ ಪ್ರಸ್ತಾವ ನಾಲ್ಕು ವರ್ಷಗಳ ಹಿಂದಿನಿಂದಲೂ ಇದೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು ಕೇಂದ್ರದ ಸ್ಥಾಪನೆಗೆ ಅಗತ್ಯವಾದ ತಂತ್ರಜ್ಞಾನ–ಸಲಕರಣೆ ನೀಡಲು ಮುಂದೆ ಬಂದಿದೆ. ಮುಂಬರುವ ಪೀಳಿಗೆಗೆ ದೇಶದಲ್ಲೇ ಖಗೋಳಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಲು ಅಂತಹ ಕೇಂದ್ರದ ಸ್ಥಾಪನೆ ಮಹತ್ವದ ಮೈಲಿಗಲ್ಲು ಎನಿಸಲಿದೆ.

***
ನ್ಯಾಷನಲ್‌ ಕಾಲೇಜಿನಿಂದ ಮೇರಿಲ್ಯಾಂಡ್‌ ವಿ.ವಿ.ವರೆಗೆ

ಬೆಂಗಳೂರಿನ ನ್ಯಾಷನಲ್‌ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಸಿ.ವಿ.ವಿಶ್ವೇಶ್ವರ ಅವರು, ತಮ್ಮ ಮೇಷ್ಟ್ರು ಎಚ್‌.ನರಸಿಂಹಯ್ಯ ಅವರೊಂದಿಗೆ ಬಳಿಕ ಸಹೋದ್ಯೋಗಿಯೂ ಆಗಿದ್ದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ ಅವರು, ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪೂರೈಸಿದರು.

ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು, ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವ ಧಾರೆ ಎರೆದವರು. ಜವಾಹರಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ದುಡಿದವರು.

ವಿಶ್ವೇಶ್ವರ ಅವರ ತಂದೆ ಸಿ.ಕೆ.ವೆಂಕಟರಾಮಯ್ಯ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಮೈಸೂರು ಸಂಸ್ಥಾನದಲ್ಲಿ ಅವರು ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾಷಣವನ್ನು ಅನುವಾದಿಸಿ ಓದುತ್ತಿದ್ದುದರಿಂದ ಜನ ಅವರನ್ನು ‘ಕನ್ನಡದ ದಿವಾನ’ರು ಎಂದು ಕರೆಯುತ್ತಿದ್ದರು. ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾದವರು. ವಿಶ್ವೇಶ್ವರ ಅವರ ಪತ್ನಿ ಪ್ರೊ. ಸರಸ್ವತಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೆ, ಅವರ ಪುತ್ರಿಯರಾದ ಸ್ಮಿತಾ ಮತ್ತು ನಮಿತಾ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಹೀಗಾಗಿ ಅವರದೊಂದು ವಿಜ್ಞಾನದ ಕುಟುಂಬ.ಬೆಂಗಳೂರಿನ ನ್ಯಾಷನಲ್‌ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಸಿ.ವಿ.ವಿಶ್ವೇಶ್ವರ ಅವರು, ತಮ್ಮ ಮೇಷ್ಟ್ರು ಎಚ್‌.ನರಸಿಂಹಯ್ಯ ಅವರೊಂದಿಗೆ ಬಳಿಕ ಸಹೋದ್ಯೋಗಿಯೂ ಆಗಿದ್ದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ ಅವರು, ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪೂರೈಸಿದರು.

ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು, ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವ ಧಾರೆ ಎರೆದವರು. ಜವಾಹರಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ದುಡಿದವರು.

ವಿಶ್ವೇಶ್ವರ ಅವರ ತಂದೆ ಸಿ.ಕೆ.ವೆಂಕಟರಾಮಯ್ಯ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಮೈಸೂರು ಸಂಸ್ಥಾನದಲ್ಲಿ ಅವರು ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾಷಣವನ್ನು ಅನುವಾದಿಸಿ ಓದುತ್ತಿದ್ದುದರಿಂದ ಜನ ಅವರನ್ನು ‘ಕನ್ನಡದ ದಿವಾನ’ರು ಎಂದು ಕರೆಯುತ್ತಿದ್ದರು. ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾದವರು. ವಿಶ್ವೇಶ್ವರ ಅವರ ಪತ್ನಿ ಪ್ರೊ. ಸರಸ್ವತಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೆ, ಅವರ ಪುತ್ರಿಯರಾದ ಸ್ಮಿತಾ ಮತ್ತು ನಮಿತಾ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಹೀಗಾಗಿ ಅವರದೊಂದು ವಿಜ್ಞಾನದ ಕುಟುಂಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT