ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತ ಚಾಂಚಲ್ಯಕ್ಕೆ ಹತ್ತು ಕಾರಣ

Last Updated 8 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮನಸ್ಸು ಸ್ಥಿರವಲ್ಲ, ಮರ್ಕಟದಂತೆ ಚಂಚಲ ಎಂಬುದು ನಿಜವಾದರೂ ಏಕಾಗ್ರತೆಗೆ ಭಂಗ ತರುವ ಹಲವು ಅಂಶಗಳು ಗೊತ್ತೇ ಇರುವುದಿಲ್ಲ.  ಸರಳವೆನಿಸುವ ಕಾರಣಗಳಿಂದ ಹಿಡಿದು ರೋಗಲಕ್ಷಣವೂ ಆಗಿರಬಹುದಾದ ಏಕಾಗ್ರತೆಯ ಕೊರತೆಯನ್ನು ನಿರ್ಲಕ್ಷಿಸಬಾರದು.

‘ಯಾಕೋ, ಕೆಲಸ ಮಾಡುವಾಗ ಗಮನ ಎಲ್ಲೆಲ್ಲೋ ಇರುತ್ತೆ. ಒಂದೇ ಮನಸ್ಸಿನಿಂದ ಮಾಡೋಕೆ ಆಗಲ್ಲ. ಇದರಿಂದಾಗಿ ಸಮಯನೂ ಹೆಚ್ಚು ಬೇಕಾಗುತ್ತೆ. ಮಾಡಿದ ಮೇಲೂ ಒಂಥರಾ ಅತೃಪ್ತಿ. ಯಾಕೆ ಹೀಗೆ ಕಾನ್ಸ್‌ಂಟ್ರೇಟ್ ಮಾಡಲಿಕ್ಕೆ ಆಗಲ್ಲ?’ ಇದು ಅತಿ ಸಾಮಾನ್ಯವಾಗಿ ಉದ್ಯೋಗಸ್ಥರಲ್ಲಿ ಕೇಳಿ ಬರುವ ಮಾತು.

ಮನಸ್ಸು ಎಂಬುದು ಸ್ಥಿರವಲ್ಲ, ಮರ್ಕಟದಂತೆ ಚಂಚಲ ಎಂಬುದು ನಿಜವಾದರೂ ಏಕಾಗ್ರತೆಗೆ ಭಂಗ ತರುವ ಹಲವು ಅಂಶಗಳು ಗೊತ್ತೇ ಇರುವುದಿಲ್ಲ. ಸರಳವೆನಿಸುವ ಕಾರಣಗಳಿಂದ ಹಿಡಿದು ರೋಗಲಕ್ಷಣವೂ ಆಗಿರಬಹುದಾದ ಏಕಾಗ್ರತೆಯ ಕೊರತೆಯನ್ನು ನಿರ್ಲಕ್ಷಿಸಬಾರದು.  ಸಾಮಾನ್ಯ ಕಾರಣಗಳು ಮತ್ತು ಅದಕ್ಕೆ ಪರಿಹಾರ ಹೀಗಿದೆ.

ಸಾಮಾಜಿಕ ಮಾಧ್ಯಮ
ಕಂಪ್ಯೂಟರ್ ಯುಗದಲ್ಲಿ ನಾವಿದ್ದೇವೆ.  ಕೇವಲ ಒಂದು ಕೀಲಿಕೈ ಒತ್ತುವ ಮೂಲಕ ಇಡೀ ಜಗತ್ತಿನೊಂದಿಗೆ ಕ್ಷಣದಲ್ಲಿ ಸಂಪರ್ಕ ಸಾಧಿಸಬಹುದು. ಹಾಗೆಯೇ ಕೆಲವು ಅಂತರ್ಜಾಲ ತಾಣಗಳು ಜನಪ್ರಿಯ ಮತ್ತು ಆಕರ್ಷಣೆಯ ಕೇಂದ್ರಗಳು.  ಮನರಂಜನೆ, ಸಂವಹನ,  ಸಂಪರ್ಕ ಇವೆಲ್ಲಕ್ಕೂ ಕಂಪ್ಯೂಟರ್ ಬಳಕೆಯಾದರೂ ಮಿತಿ ಇರದಿದ್ದಲ್ಲಿ, ಈ ವೀಕ್ಷಣೆ ಚಟವಾಗುವ ಸಾಧ್ಯತೆ ಇದೆ. 

ಪದೇ ಪದೇ ಲಾಗಿನ್ ಮಾಡಿ ಅಪ್‌ಡೇಟ್ ತಿಳಿವ ಪ್ರವೃತ್ತಿ ಅಪಾಯಕಾರಿ. ಇದರಿಂದ ಮಾಡುವ ಕೆಲಸದ ಕಡೆ ಗಮನ ಕಡಿಮೆಯಾಗುತ್ತದೆ. ಕಾರ್ಯ ನಿರ್ವಹಿಸುವಾಗ ಕಂಪ್ಯೂಟರ್, ಲ್ಯಾಪ್‌ಟಾಪ್ ಕೇವಲ ಅದಕ್ಕಷ್ಟೇ ಸೀಮಿತವಾಗಿರಲಿ. ವೈಯಕ್ತಿಕ ಖುಷಿಗಾಗಿ ಅದರ ಬಳಕೆ ಬೇಡ. ಸಾಮಾಜಿಕ ಮಾಧ್ಯಮಗಳಿಗೆ ದಿನಕ್ಕೆ ಇಂತಿಷ್ಟು ಸಮಯ ಎಂದು ನಿಗದಿಪಡಿಸಿ ಆ ಸಮಯದಲ್ಲಿ ಮಾತ್ರ ವೀಕ್ಷಿಸಬೇಕು.

ಫೋನ್
ದೂರದಲ್ಲಿರುವ ಆತ್ಮೀಯರೊಂದಿಗೆ, ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಫೋನ್ ಅತ್ಯುತ್ತಮ ಸಾಧನ.  ಆದರೆ ಗಂಭೀರವಾಗಿ ಕೆಲಸ ಮಾಡುವಾಗ ಪದೇ ಪದೇ ಫೋನಿನ ರಿಂಗಣ, ಬೇಡದ ಕರೆ, ಅನಗತ್ಯ ಹರಟೆಯಿಂದ ಸಮಯ ನಷ್ಟ ಮತ್ತು ಕೆಲಸದ ಓಟಕ್ಕೆ ಖಂಡಿತಾ ಭಂಗ ಬರುತ್ತದೆ. ಕೆಲಸದ ಸಮಯದಲ್ಲಿ ಫೋನ್ ರಿಂಗಣ ಕೇಳಿಸದಂತೆ ನಿಶ್ಯಬ್ದವಾಗಿಡಿ.  ವಿರಾಮದಲ್ಲಿ ಕರೆಗಳನ್ನು ಗಮನಿಸಿ ಮುಖ್ಯವಾದ ಕರೆಗಳಿದ್ದರೆ ಮಾತನಾಡಿ. ಯಂತ್ರಗಳು ಇರುವುದು ನಮ್ಮ ಅನುಕೂಲಕ್ಕೆ ಹೌದಾದರೂ ನಾವು ಅವುಗಳ ದಾಸರಲ್ಲ!  

ಬಹು ಕೆಲಸ ನಿರ್ವಹಣೆ
ಬೇರೆ ಬೇರೆ ಕೆಲಸಗಳನ್ನು ಸೇರಿಸಿ, ಎಲ್ಲವನ್ನೂ ಏಕಕಾಲಕ್ಕೆ ಮಾಡಲು ಪ್ರಯತ್ನಿಸುವುದರಿಂದ ಮನಸ್ಸು ಹತ್ತಾರು ಕಡೆ ಅಲೆದಾಡಿ ಏಕಾಗ್ರತೆ ಕಡಿಮೆಯಾಗುತ್ತದೆ. ಯಾವ ಕೆಲಸಕ್ಕೂ ನ್ಯಾಯ ಒದಗಿಸಲಾಗುವುದಿಲ್ಲ ಮತ್ತು ತಗಲುವ ಸಮಯವೂ ಹೆಚ್ಚು. ಹೆಚ್ಚಿನ ತಾಳ್ಮೆ, ಪರಿಶ್ರಮ ಬೇಡುವ ಕೆಲಸವನ್ನು ಪೂರ್ಣ ಮನಸ್ಸಿನಿಂದ ಒಂದೊಂದಾಗಿ ಮಾಡುವುದು ಒಳಿತು.  ಆದರೆ ವಿರಾಮದ ಸಮಯದಲ್ಲಿ ಫೋನಿನಲ್ಲಿ ಮಾತನಾಡುತ್ತಾ ಫೈಲ್ ಜೋಡಿಸುವುದು, ಕಸವನ್ನು ಎತ್ತಿ ಬುಟ್ಟಿಗೆ ಹಾಕುವುದು ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬಹುದು.

ಕಾಡುವ ಯೋಚನೆ/ಮೆಲುಕು ಹಾಕುವಿಕೆ
ಆಫೀಸಿನಲ್ಲಿ ಕೆಲಸ ಮಾಡುವಾಗ ಮನೆ/ಬ್ಯಾಂಕ್/ಶಾಲೆ/ಫೀಸು ಹೀಗೆ ಮಾಡಬೇಕಾದ ಇತರೆ ಕೆಲಸಗಳ ಬಗ್ಗೆ ಚಿಂತಿಸುತ್ತಿದ್ದರೆ ಏಕಾಗ್ರತೆ ಸಾಧ್ಯವಿಲ್ಲ. ಹಾಗೆಯೇ ಯಾರೋ ಹೇಳಿದ ಮಾತು, ನಡೆದ ಘಟನೆಯನ್ನು ಮರಳಿ ಮೆಲುಕು ಹಾಕುವುದೂ ಮನಸ್ಸನ್ನು ಕದಲಿಸುತ್ತದೆ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಬರೆದಿಟ್ಟರೆ ಆ ಪ್ರಕಾರ ಒಂದೊಂದಾಗಿ ಮಾಡಬಹುದು. ಅದೇ ರೀತಿ ನೋವು - ದುಃಖ - ಸಂಕಟದ ಭಾವನೆಗಳನ್ನು ಬರಹದ ರೂಪಕ್ಕಿಳಿಸಿದರೆ ಹೊರಹೋಗುವ ಮಾರ್ಗವಾಗುತ್ತದೆ; ಮನಸ್ಸು ಶಾಂತಿಯಿಂದಿರುತ್ತದೆ.

ನೀರಸ
ನಾವು ಮಾಡುವ ಕೆಲಸ ಬೋರಿಂಗ್ ಎನಿಸಿದಾಗ ಯಾವುದೇ ಆಸಕ್ತಿ ಇರುವುದಿಲ್ಲ. ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವಾಗ ಮನಸ್ಸು ಸುತ್ತ-ಮುತ್ತ ಅಲೆಯುತ್ತದೆ. ಕೆಲಸವನ್ನು ಆಸಕ್ತಿದಾಯಕವಾಗಿಸುವುದು ಸುಲಭವಲ್ಲ. ಹಾಗಿದ್ದೂ ನಿರ್ದಿಷ್ಟ ಅವಧಿಯ ತನಕ ಬೋರಿಂಗ್ ಕೆಲಸವನ್ನು ಗಮನವಿಟ್ಟು ಮಾಡಿದರೆ ಹತ್ತು ನಿಮಿಷದ ನಮಗಿಷ್ಟದ ಬ್ರೇಕ್ ಎಂದು ನಿರ್ಣಯಿಸಬೇಕು. ಒಂದು ಲೋಟ ಬಿಸಿ ಕಾಫಿ, ಚಿಕ್ಕ ವಾಕ್, ಹಳೆ ಹಾಡು ಹೀಗೆ ಬ್ರೇಕ್ ಏನೂ ಆಗಿರಬಹುದು. ಬ್ರೇಕ್ ಸಿಗುವ ಯೋಚನೆ ಬೋರಿಂಗ್ ಕೆಲಸವನ್ನು ಆಸಕ್ತಿದಾಯಕವಾಗಿಸುತ್ತದೆ.

ಒತ್ತಡ
ಜೀವನದಲ್ಲಿ ಯಶಸ್ಸು ಸಾಧಿಸಲು ಮನಸ್ಸಿಗೆ ಸಕಾರಾತ್ಮಕ ಒತ್ತಡ ಬೇಕು. ಆದರೆ ಅದು ಮಿತಿ ಮೀರಿದಾಗ ಮನಸ್ಸಿನ ಭಾರ ಹೆಚ್ಚುತ್ತದೆ.  ಮಾತ್ರವಲ್ಲ. ದೇಹದ ಮೇಲೂ ಪರಿಣಾಮ ಬೀರುತ್ತದೆ. ಭುಜಗಳಲ್ಲಿ ಬಿಗಿತ, ತಲೆನೋವು, ಎದೆ ಜೋರಾಗಿ ಹೊಡೆದುಕೊಳ್ಳುವುದು ಇವೆಲ್ಲಾ ಶುರುವಾಗಿ ಏಕಾಗ್ರತೆ ಅಸಾಧ್ಯವಾಗುತ್ತದೆ. ಒತ್ತಡ ಕಡಿಮೆ ಮಾಡಲು ಉತ್ತಮ ಹವ್ಯಾಸಗಳು, ಧ್ಯಾನ, ನಡಿಗೆ ರೂಢಿಸಿಕೊಳ್ಳಬೇಕು. ಸ್ವಸ್ಥ ದೇಹ- ಮನಸ್ಸಿದ್ದಾಗ ಏಕಾಗ್ರತೆ ಸುಲಭ.

ಸುಸ್ತು
ದಣಿವಾದಾಗ ಏಕಾಗ್ರತೆ ಸಾಧಿಸುವುದು ಕಠಿಣ. ನಿದ್ದೆಯ ಕೊರತೆ ದಣಿವಿಗೆ ಮುಖ್ಯ ಕಾರಣ. ತಡರಾತ್ರಿಯವರಿಗೆ ಟಿ.ವಿ. ವೀಕ್ಷಣೆ, ಅನಿಯಮಿತ ನಿದ್ರಾ ಸಮಯ ಇವುಗಳಿಂದ ನಿದ್ದೆ ಸರಿಯಾಗಿ ಆಗದಿದ್ದಾಗ ಕೆಲಸದ ಗುಣಮಟ್ಟ ಕಡಿಮೆಯಾಗುತ್ತದೆ. ದಿನವೊಂದಕ್ಕೆ ಏಳರಿಂದ ಒಂಭತ್ತು ಗಂಟೆಗಳ ನಿದ್ದೆ ವಯಸ್ಕರಿಗೆ ಬೇಕೇ ಬೇಕು. ದೇಹಕ್ಕೆ ಹೊಸ ಚೈತನ್ಯ, ಹುರುಪು ತುಂಬುವ ನಿದ್ದೆಯನ್ನು ನಿರ್ಲಕ್ಷಿಸಬಾರದು. ನಿಗದಿತ ಸಮಯಕ್ಕೆ ನಿದ್ದೆ ಮತ್ತು ಸರಿ ಪ್ರಮಾಣದ ನಿದ್ದೆ ದಿನಚರಿಯಾಗಬೇಕು.

ಹಸಿವು
ಮೆದುಳಿಗೆ ಆಹಾರ ಸಿಗದಿದ್ದರೆ ಅದು ಓಡಾಡುವುದಾದರೂ ಹೇಗೆ? ಅದರಲ್ಲೂ ಬೆಳಗಿನ ತಿಂಡಿ ಅತ್ಯಂತ ಮುಖ್ಯವಾದದ್ದು. ತಡವಾಗಿ ಎದ್ದ ಕಾರಣ, ಬೇಗ ಹೋಗಬೇಕು ಎಂಬ ನೆಪಗಳನ್ನು ನೀಡಿ ಬೆಳಗಿನ ತಿಂಡಿ ತಪ್ಪಿಸುವುದು ಒಳ್ಳೆಯದಲ್ಲ. ಬೆಳಗಿನ ತಿಂಡಿ ಕಡ್ಡಾಯವಾಗಿ ಸೇವಿಸಬೇಕು. ಪ್ರೋಟಿನ್ ಅಂಶ ಹೆಚ್ಚಿರುವ ಮೊಳಕೆ ಕಾಳು, ಒಣಹಣ್ಣುಗಳನ್ನು ಆಗಾಗ್ಗೆ ತಿನ್ನಬೇಕು. ಹೊತ್ತಿಗೆ ಸರಿಯಾಗಿ ತಿಂಡಿ-ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು.

ಖಿನ್ನತೆ
ಖಿನ್ನತೆಯಿಂದ ಬಳಲುವವರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ತೊಂದರೆ ಏಕಾಗ್ರತೆಯ ಕೊರತೆ. ಇದರೊಂದಿಗೆ ಖಾಲಿತನ, ನಿರಾಶೆ, ಏನೂ ಬೇಡ ಎಂಬ ಭಾವನೆ ಕಾಡುತ್ತಿದ್ದರೆ ಖಿನ್ನತೆಯ ಸಾಧ್ಯತೆ ಇರಬಹುದು.ಮನೋವೈದ್ಯರ ಬಳಿ ತಪಾಸಣೆ, ಸಲಹೆಯ ಮೇರೆಗೆ ಚಿಕಿತ್ಸೆ  ಪಡೆಯಬೇಕು.

ಗಮನ ಕೊರತೆ ಅತಿ ಚಟುವಟಿಕೆ ಸಮಸ್ಯೆ
ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ ಇದು ಕಂಡುಬರುತ್ತದೆ ಎಂದು ಭಾವಿಸಲಾಗಿದೆ. ಆದರೆ ಮಕ್ಕಳಿಂದ ವಯಸ್ಕರಲ್ಲೂ ಇದು ಮುಂದುವರಿಯಬಹುದು. ಲಕ್ಷಣಗಳು ಸ್ವಲ್ಪ ಬೇರೆಯಾದರೂ ಏಕಾಗ್ರತೆಯ ಕೊರತೆ ಇರುತ್ತದೆ. 

ವೈದ್ಯರಿಂದ ಔಷಧಿ, ಚಿಕಿತ್ಸೆ
ಯಾವಾಗಲೂ ‘ಮನಸ್ಸು ಸರಿಯಿಲ್ಲ, ಏಕಾಗ್ರತೆ ಸಾಧ್ಯವಿಲ್ಲ. ಏಕೆ ಹೀಗೆ?’ ಎಂದು ಗೊಣಗುವ ಬದಲು ಅದರ ಕಾರಣ ತಿಳಿದು ಪರಿಹಾರ ಕಂಡುಕೊಳ್ಳುವುದು ಸರಿಯಾದ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT