ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಾಸ್‌ಪೋರ್ಟ್‌: ಮೂವರು ನಿವೃತ್ತ ಅಧಿಕಾರಿಗಳಿಗೆ ಜಾಮೀನು

ಭೂಗತ ಪಾತಕಿ ಛೋಟಾ ರಾಜನ್‌ಗೆ ನೆರವು
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಭೂಗತ ಪಾತಕಿ ಛೋಟಾ ರಾಜನ್‌ ನಕಲಿ ಪಾಸ್‌ಪೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್‌ಪೋರ್ಟ್‌ ಬೆಂಗಳೂರು ಕಚೇರಿಯ ಮೂವರು ನಿವೃತ್ತ ಅಧಿಕಾರಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.

ನಕಲಿ ಪಾಸ್‌ಪೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನ್‌ ಮತ್ತು ಮೂವರು ನಿವೃತ್ತ ಅಧಿಕಾರಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ನಿವೃತ್ತ ಅಧಿಕಾರಿಗಳಾಗಿರುವ ಜೇ ಶ್ರೀ ರಹಾಥೆ, ದೀಪಕ್‌ ನಟವರ್‌ಲಾಲ್‌ ಷಾ ಮತ್ತು ಲಲಿತಾ ಲಕ್ಷಣನ್‌ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನೋದ ಕುಮಾರ್‌ ಜಾಮೀನು ನೀಡಿದ್ದಾರೆ.

ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಡಬಾರದು ಎಂದು ನ್ಯಾಯಾಧೀಶರು ಆರೋಪಿಗಳಿಗೆ ಸೂಚನೆ ನೀಡಿದ್ದಾರೆ. ಆರೋಪಿಗಳ ಆರೋಪಪಟ್ಟಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು  ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.

ವಿಚಾರಣೆಯನ್ನು ಮಾರ್ಚ್‌ 30ಕ್ಕೆ ಮುಂದೂಡಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ರಾಜನ್‌ 1998ರ ಜನವರಿ 1ರಂದು ಬೆಂಗಳೂರಿನಿಂದ ಮೋಹನ್‌ ಕುಮಾರ್‌ ಎನ್ನುವ ನಕಲಿ ಹೆಸರಿನಲ್ಲಿ ಮೊದಲ ಪಾಸ್‌ಪೋರ್ಟ್‌ ಪಡೆದಿದ್ದರು. ಇದಕ್ಕೆ ಪಾಸ್‌ಪೋರ್ಟ್‌ ಕಚೇರಿಯ ಮೂವರು ಅಧಿಕಾರಿಗಳು ಪರೋಕ್ಷ ಸಮ್ಮತಿವ್ಯಕ್ತಪಡಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಕಲಿ ಗುರುತಿನ ಚೀಟಿ ಮತ್ತು ವಿಳಾಸದ ಆಧಾರದ ಮೇಲೆ ಮೂವರು ಅಧಿಕಾರಿಗಳು ರಾಜನ್‌ ಪಾಸ್‌ಪೋರ್ಟ್‌ ಪಡೆಯಲು ಸಹಕಾರ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ.

ಮೋಹನ್‌ ಕುಮಾರ್‌  ಹೆಸರಿನಲ್ಲಿ ಪಡೆಯಲಾಗಿರುವ ಪಾಸ್‌ಪೋರ್ಟ್‌ನ ಆಧಾರದ ಮೇಲೆ ರಾಜನ್‌ 2003ರ ಡಿಸೆಂಬರ್‌ 19ರಂದು ಜಿಂಬಾಬ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮತ್ತೊಂದು ಪಾಸ್‌ಪೋರ್ಟ್‌ ಪಡೆದುಕೊಂಡಿದ್ದಾರೆ. ನಂತರ ಸಿಡ್ನಿಯಲ್ಲಿರುವ ಭಾರತದ ಕಾನ್ಸಲೇಟ್‌ ಕಚೇರಿಯಿಂದಲೂ ರಾಜನ್‌ ಇನ್ನೊಂದು ಪಾಸ್‌ಪೋರ್ಟ್‌ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT