ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನಾಚರಣೆ ಮತ್ತು ವಸ್ತುಸ್ಥಿತಿ

ಸಾಧಕಿಯರಿಗಷ್ಟೇ ಅಲ್ಲ, ಸಾಮಾನ್ಯ ಮಹಿಳೆಯರಿಗೂ ಪ್ರೀತಿ, ಗೌರವ ಸಿಗಬೇಕು
Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಬೆಳಿಗ್ಗೆ 5 ಗಂಟೆ: ನಾನು ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದೆ. ನಮ್ಮ ಮನೆಯ ಹೆಣ್ಣು ಬೆಕ್ಕು ಮಿಂಟಿ ನನ್ನ ಕಿವಿಯಲ್ಲಿ ‘ಮಿಯಾಂವ್‌’ ಎಂದು ಪಿಸುಗುಟ್ಟಿತು. ಅದರ ನಾಕು ಹೆಣ್ಣು ಮರಿಗಳು ಮೀ ಮೀ ಎಂದು ರಾಗ ಎಳೆದವು. ತಾಯಿ ಮರಿಗಳಿಗೆ ಹಾಲೂಡಿ, ಹಸಿದು ನನ್ನ ಎಬ್ಬಿಸಿತ್ತು. ನನಗೆ ಏಳಲು ಇಷ್ಟವಿರಲಿಲ್ಲ. ಆದರೆ ಬಾಣಂತಿಯನ್ನು ಕಡೆಗಣಿಸುವಂತಿಲ್ಲ. ನಾನು ಎದ್ದು ಬಟ್ಟಲಿಗೆ ಹಾಲು ಸುರಿದು ಮತ್ತೆ ಮಲಗಿದೆ. ಇನ್ನೇನು ನಿದ್ದೆಗೆ ಜಾರಬೇಕು.

ಬೆಳಿಗ್ಗೆ 5.30: ಕಿಣಿ ಕಿಣಿ ನಾದಗೈಯುತ್ತಾ ಲಕ್ಷ್ಮಿ ಮನೆಬಾಗಿಲಲ್ಲಿ ನಿಂದು ‘ಅಮ್ಮಾ ಕಸ’ ಎಂದು ಕೂಗಿದಳು. ಜೋರಾಗಿ ಮತ್ತೊಮ್ಮೆ ಗಂಟೆ ಬಾರಿಸಿದಳು. ನಾನು ಕಸ ನೀಡುತ್ತ ‘ಛೆ ನಿದ್ದೆ ಮಾಡಲೂ ಬಿಡಲ್ಲವೇ ತಾಯಿ ನೀನು’ ಎಂದೆ. ಅದಕ್ಕವಳು ‘ಅಮ್ಮಾರೇ ನಾನು ನಾಕು ಗಂಟೆಗೇ ಎದ್ದು ಬಂದೀವ್ನಿ’ ಎಂದು ನನಗೆ ಇದಿರೇಟು ಕೊಟ್ಟಳು.

ಬೆಳಿಗ್ಗೆ 6.15: ಇನ್ನೇನು ಮಲಗುವುದು, ಬೆಳಗಾಯಿತು ಎಂದುಕೊಂಡು ಬಾಗಿಲಿಗೆ ನೀರು ಹಾಕಿ, ಗಿಡಮರಗಳ ಕಸ ತೆಗೆದು, ಹಾಲು ತರಲು ಹೊರಟೆ. ಅದಾಗಲೇ ಜಯಮ್ಮ ಭರದಿಂದ ಹಾಲು ವಿತರಿಸುತ್ತಿದ್ದಳು. ನಡುನಡುವೆ ಚಹಾ ಕುದಿಸಿ, ಬೀಡಿ, ಸಿಗರೇಟು, ಗುಟ್ಕಾವನ್ನು ಹೈಕಳಿಗೆ ನೀಡುತ್ತಿದ್ದಳು. ನಾನು ಹಾಲು ತೆಗೆದುಕೊಂಡು ವಾಪಸು ಬರುವಾಗ ಅಂಗಳದಲ್ಲಿ ‘ಪ್ರಜಾವಾಣಿ’ ಬಿದ್ದಿತ್ತು. ಬಿಸಿಬಿಸಿ ಕಾಫಿಯ ಜತೆ ಪೇಪರ್‌ ಓದೋಣ ಎಂದು ಅಂಗಳದಲ್ಲಿ ಕುರ್ಚಿ ಹಾಕಿದೆ. ಕಾಫಿ ಸೋಸುತ್ತ ಬೆಳಗಿನ ತಿಂಡಿ ಏನು ಎಂಬ ಆಲೋಚನೆಗೆ ಬಿದ್ದೆ.

ಬೆಳಿಗ್ಗೆ 7.15: ಕಾಫಿ ಕುಡಿಯುತ್ತ ಪೇಪರ್‌ ಮೇಲೆ ಕಣ್ಣಾಡಿಸಿದೆ. ಮುಖಪುಟದಲ್ಲೇ ಮಹಿಳಾ ದಿನಾಚರಣೆಯ ಸಂಭ್ರಮವಿತ್ತು. ‘ಓಹ್‌! ಇವತ್ತು ಮಹಿಳಾ ದಿನಾಚರಣೆ’ ಎಂದುಕೊಂಡು ಖುಷಿಯಿಂದ ಪುಟಗಳನ್ನು ಮಗುಚಿಹಾಕಿದೆ. ಎಲ್ಲೆಲ್ಲೂ ಮಹಿಳೆಯರ ಮುಖಗಳು. ನನ್ನ ಗೆಳತಿಯರು ಏನಾದರೂ ವಿಶೇಷವಾಗಿ ಹೇಳಿದ್ದಾರೆಯೇ? ನೋಡಿದೆ, ಮೊದಲಿಗೆ ಸೋನಿಯಾ ನಾರಂಗ್‌ ಸಂದರ್ಶನ ಓದಿದೆ. ನಂತರ ಶೌಚಾಲಯದ ಬಗ್ಗೆ ಇರುವ ಲೇಖನ, ಇನ್ನೊಂದರತ್ತ ಕಣ್ಣು ಹಾಯಿಸುವಷ್ಟರಲ್ಲಿ...

ಬೆಳಿಗ್ಗೆ 7.45: ಅಮ್ಮಾ ತರಕಾರಿ... ಅಂತ ಸಿದ್ಧಮ್ಮ ಕೂಗು ಹಾಕಿದಳು. ಅವಳು ಬೆಳಿಗ್ಗೆ 4.30ಕ್ಕೇ ಎದ್ದು ಎ.ಪಿ.ಎಂ.ಸಿ.ಗೆ ಹೋಗಿ ತರಕಾರಿ ಖರೀದಿಸಿ, ಹಾಗೇ ಮಾರಿಕೊಂಡು ನನ್ನ ಮನೆ ಬಾಗಿಲಿಗೆ ಬಂದಾಗ ಇಷ್ಟು ಹೊತ್ತಾಗಿತ್ತು. ‘ಅಬ್ಬಾ ಈಗಲೇ ಬಿಸಿಲು, ಸೆಕೆ, ಕುಡಿಯಲು ನೀರು ಕೊಡಿ’ ಎಂದು ಕೇಳಿ ಒಂದು ಚೊಂಬು ನೀರು ಕುಡಿದು ಸೊಪ್ಪು, ಬೆಂಡೆ ನೀಡಿ ಒಂದೆರಡು ಮಾತು ಆಡಿ ಹೊರಟಳು.

ಬೆಳಿಗ್ಗೆ 8.15: ತಾಯಿ ಹಂದಿ ತನ್ನ ಪರಿವಾರದೊಡನೆ ನಾನು ಏನಾದರೂ ನೀಡುವೆನೋ ಎಂದು ಮನೆ ಮುಂದೆ ಮುಸು ಮುಸು ಮಾಡುತ್ತಿತ್ತು. ಹಣ್ಣು– ತರಕಾರಿ ಸಿಪ್ಪೆ ಅವುಗಳಿಗೆ ನೀಡಿ ಮತ್ತೆ ಅವಸರದಿಂದ ಪತ್ರಿಕೆ ನೋಡಿದೆ. ಏನೆಲ್ಲ ಸಾಧನೆ ಮಾಡಿದ ಮಹಿಳೆಯರು. ಹೆಚ್ಚಿನವರು ವಿದ್ಯಾವಂತ ಸಾಧಕಿಯರು. ಸಾರಾ ಅಬೂಬಕ್ಕರ್‌ ಸರಿಯಾಗಿ ಹೇಳಿದ್ದಾರೆ ಎಂದು ಅನಿಸಿತು. ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿತ್ತು. ಎಷ್ಟಾದರೂ ನೊಂದು ಬೆಂದ ಮಾಗಿದ ಜೀವ. ತುಂಬ ದಿನವಾಯಿತು ಫೋನ್‌ ಮಾಡಬೇಕು ಅಂದುಕೊಂಡು ‘ಕರ್ನಾಟಕ ದರ್ಶನ’ ಎತ್ತಿಕೊಂಡೆ. ನಳದಲ್ಲಿ ನೀರು ಬರುವ ಸದ್ದು. ಪೇಪರು ಅಲ್ಲೇ ಬಿಸಾಕಿ ಹಿತ್ತಲಿಗೆ ಓಡಿದೆ.

ಬೆಳಿಗ್ಗೆ 9.00ರಿಂದ 11.30: ತಿಂಡಿ ತೀರ್ಥ, ಮಧ್ಯಾಹ್ನದ ಅಡುಗೆಗೆ ಸೊಪ್ಪು ಬಿಡಿಸತೊಡಗಿದೆ. ಮನೆವಾರ್ತೆಯಲ್ಲಿ ಮುಳುಗಿ ಹೋದವಳು ನೆನಪು ಮಾಡಿಕೊಂಡೆ ಅಂಚೆ ಕಚೇರಿಯಲ್ಲಿ ಕೆಲಸವಿತ್ತು.

ಮಧ್ಯಾಹ್ನ 12: ಬೇಗ ಬೇಗ ಬಟ್ಟೆ ಧರಿಸಿ, ತಲೆಕೆರೆದು, ಜೆರಾಕ್ಸ್ ಅಂಗಡಿಯತ್ತ ಸ್ಕೂಟಿ ಓಡಿಸಿದೆ. ಶಕುಂತಲಾ ಪೇಪರು ಜೋಡಿಸುತ್ತಿದ್ದಳು. ಸರದಿಯಲ್ಲಿ ನಾಕು ಜನ ಇದ್ದರು. ‘ಅರ್ಜೆಂಟ್‌ ಕಣ್ರೀ’ ಎಂದು ಮುಂದಾಗಿ ಜೆರಾಕ್ಸ್ ಮಾಡಿಸಿಕೊಂಡು ‘ಅಯ್ಯೋ ಹೆಲ್ಮೆಟ್‌’ ಅಂತ ನೆನಪಾಗಿ ಮತ್ತೆ ಮನೆಯತ್ತ ಗಾಡಿ ಓಡಿಸಿ, ಹೆಲ್ಮೆಟ್‌ ಸಿಕ್ಕಿಸಿಕೊಂಡು ಅಂಚೆ ಕಚೇರಿಗೆ ಧಾವಿಸಿದೆ.

ಮಧ್ಯಾಹ್ನ 12.30: ಅಂಚೆ ಕಚೇರಿಯಲ್ಲಿ ಸೇವಿಂಗ್ಸ್ ಬ್ಯಾಂಕ್‌ ಕೌಂಟರಿನ ಮಹಿಳೆ ‘ಇಷ್ಟು ತಡವಾಗಿ ಬಂದರೆ ಹೇಗೆ? ಸ್ವಲ್ಪ ಮುಂಚೆ ಬನ್ನಿ, ಹಣ ಅಡ್ಜಸ್ಟ್ ಮಾಡಲು ಕಷ್ಟ ಆಗುತ್ತೆ’ ಎಂದಳು. ‘ಮನೆಯಲ್ಲಿ ಸಾವಿರ ಕೆಲಸ ಇರುತ್ತೆ’ ಎಂದು ನಾನೂ ಗೊಣಗಿ, ಪತ್ರಗಳನ್ನು ಪೋಸ್ಟ್ ಮಾಡಿ ಸಮೀಪದಲ್ಲೇ ಇದ್ದ ಬ್ಯಾಂಕಿಗೆ ಹೋಗಿ ಒಂದು ಚೆಕ್‌ ಜಮಾ ಮಾಡಿದೆ. ಪರಿಚಿತ ಮಹಿಳಾ ಉದ್ಯೋಗಿ ‘ಊಟ ಆಯಿತೆ?’ ಅಂದಳು. ‘ಈಗ ಮನೆಗೆ ಹೋಗಿ ಅನ್ನಕ್ಕೆ ಇಡಬೇಕು’ ಎಂದು ನಕ್ಕೆ.

ಮಧ್ಯಾಹ್ನ 12.50: ಹಣ್ಣಿನಂಗಡಿಯ ಸುಮಿತ್ರಾ ನನಗಾಗಿಯೇ ಕಾದಿದ್ದವಳಂತೆ ಕೈಬೀಸಿದಳು. ‘ಕಲ್ಲಂಗಡಿ ಬಂದಿದೆ, ಸೂಪರ್‌ ಇದೆ’ ಎಂದು ಎರಡು ಹಣ್ಣು ದಾಟಿಸಿದಳು.

ಮಧ್ಯಾಹ್ನ 1: ಜೋನಿ ಬೆಲ್ಲ ಬೇಕಿತ್ತು. ಮಲೆನಾಡು ಮಳಿಗೆಗೆ ಹೋದೆ. ಅನ್ನಪೂರ್ಣ ಹಿಟ್ಟು ಪ್ಯಾಕ್‌ ಮಾಡುತ್ತಾ ಇದ್ದಳು. ‘ಏನು ಮೇಡಂ ವಾರ ಆಯಿತು ಬರಲೇ ಇಲ್ಲ. ಫ್ರೆಶ್‌ ಚಕ್ಕುಲಿ, ರಾಗಿ ದೋಸೆ ಮಿಕ್ಸ್ ಬಂದಿದೆ’ ಎಂದು ಮಾತಿಗೆ ಹಚ್ಚಿಕೊಂಡಳು. ಇನ್ನು ಸೀದಾ ಮನೆಗೆ ಎಂದು ಗಾಡಿ ಓಡಿಸಿದೆ.

ಓಹ್‌, ಮಜ್ಜಿಗೆ! ‘ತರಕಾರಿ, ಜ್ಯೂಸ್‌,  ಎಳನೀರು’ ಅಂಗಡಿಯ ಹತ್ತಿರ ಗಾಡಿ ತಾನೇ ನಿಂತಿತು. ‘ಮೇಡಮ್ಮೋರೇ ಕಬ್ಬಿನಾಲು ಐತೆ, ಕೊಡ್ಲಾ’ ಎಂದಳು ರಂಗಜ್ಜಿ. ‘ಕಬ್ಬಿನಾಲು ನಾಳೆ, ಬೇಗ ಮಜ್ಜಿಗೆ ಪ್ಯಾಕೆಟ್‌ ಎರಡು ಕೊಡು, ಅಡುಗೆ ಆಗಿಲ್ಲ’ ಎಂದು ಅವಸರಿಸಿದೆ.

ಮಧ್ಯಾಹ್ನ 1.30: ಮನೆಗೆ ಬಂದಾಗ ನನ್ನ ಮನೆಗೆಲಸದ ಸಹಾಯಕಿ ಪಾತ್ರೆ, ಬಟ್ಟೆ ಮುಗಿಸಿ ಹೊರಟು ನಿಂತಿದ್ದಳು. ಅವಳಿಗೆ ತಿಂಡಿ, ಮಜ್ಜಿಗೆ ಕೊಟ್ಟು ಕಳಿಸಿ, ಅನ್ನಕ್ಕಿಟ್ಟೆ. ಚಪಾತಿ ಬೇಯಿಸಿ, ಮನೆಮಂದಿಗೆ ಊಟಕ್ಕಿಟ್ಟು ಅಡುಗೆ ಮನೆ ಕ್ಲೀನ್‌ ಮಾಡಿ, ಟ್ಯಾಂಕಿಗೆ ನೀರು ಏರಿಸಿ, ಉಸ್ಸಪ್ಪಾ ಎಂದು ಒಂದು ಕ್ಷಣ ಕುಳಿತೆ.

ಮಧ್ಯಾಹ್ನ 3: ವಿಪರೀತ ಸೆಕೆ. ಒಂದು ಚೊಂಬು ತಣ್ಣೀರು ಹುಯ್ದುಕೊಂಡು ಊಟ ಮಾಡಿದರೆ ಚೆನ್ನ ಅನಿಸಿತು. ನೀರು ಬಿಟ್ಟುಕೊಂಡು, ಬಟ್ಟೆ ಜೋಡಿಸಿಕೊಂಡು ಸ್ನಾನಕ್ಕೆ ಹೊರಡಬೇಕು... ಫೋನ್‌ ರಿಂಗಾಯಿತು.  ಫೋನ್ ಕರೆಗೆ ಉತ್ತರಿಸಿದ ನಂತರ, ಬೇಗ ಸ್ನಾನ ಮುಗಿಸಿ, ಅನ್ನ ತಟ್ಟೆಗೆ ಸುರಿದುಕೊಂಡು ಮತ್ತೊಮ್ಮೆ ಪತ್ರಿಕೆಯ ಮೇಲೆ ಕಣ್ಣಾಡಿಸಿದೆ. ಸಂಪಾದಕೀಯ, ಕೌದಿಯ ಕುರಿತು ಲೇಖನ.

ಮಧ್ಯಾಹ್ನ 4.30:  ಸಂಚಿಕೆ ಮಹಿಳೆಯರಿಗೇ ಪೂರ್ಣ ಮೀಸಲಿತ್ತು. ‘ಪ್ರಜಾವಾಣಿ ಕಾಳಜಿಗೆ ಧನ್ಯವಾದ. ಆದರೆ ಸಾಧಕಿಯರಿಗಷ್ಟೇ ಅಲ್ಲ ಸಾಮಾನ್ಯ ಮಹಿಳೆಯರಿಗೂ ಪ್ರೀತಿ, ಗೌರವ ಸಿಗಬೇಕು’ ಎಂದುಕೊಂಡೆ.

ಬೆಳಿಗ್ಗೆ 5ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾನು ಒಡನಾಡಿದ ಒಬ್ಬೊಬ್ಬರೇ ಮಹಿಳೆಯರ ಮುಖಗಳು ನನ್ನ ಕಣ್ಣ ಮುಂದೆ ತೇಲಿ ಬಂದವು. ಇವರನ್ನೂ ಪತ್ರಿಕೆ ಒಳಗೊಳ್ಳಬೇಕು ಅನ್ನಿಸಿತು. ಹಾಗೆ ನೋಡಿದರೆ ನನಗೆ ಪತ್ರಿಕೆ ಪೂರ್ತಿ ಓದಲು ಆಗಿರಲಿಲ್ಲ. ‘ಕರ್ನಾಟಕ ದರ್ಶನ’ ಪುರವಣಿ ನೋಡಲೂ ಆಗಿರಲಿಲ್ಲ. ಪತ್ರಿಕೆ, ಟಿ.ವಿ., ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಮಹಿಳಾ ದಿನವನ್ನು  ಸಂಭ್ರಮದಿಂದ ಆಚರಿಸಿರಬಹುದು. ಸರ್ಕಾರಿ ಸಮಾರಂಭಗಳೂ ವಿಜೃಂಭಣೆಯಲ್ಲಿ ನಡೆದಿರಬಹುದು. ನಿಜ ಜೀವನದಲ್ಲಿ? ನಾನು ಪೂರಾ ಯೋಚನೆಯಲ್ಲಿ ಮುಳುಗಿದೆ. ಮೂಕಿಯಾದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT