ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭದ ಕನಸಿನಲ್ಲಿವನಿತೆಯರು

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಸೆಮಿಫೈನಲ್‌ಗೆ ತಲುಪುವುದು ನಮ್ಮ ಮೊದಲ ಗುರಿ. ಅದಕ್ಕಾಗಿ ನಾವು ಎಲ್ಲ ಸವಾಲುಗಳನ್ನೂ ಎದುರಿಸಿ ಮುನ್ನುಗ್ಗುತ್ತೇವೆ’– ಭಾರತ ಮಹಿಳೆಯರ ಕ್ರಿಕೆಟ್ ತಂಡದ  ನಾಯಕಿ ಮಿಥಾಲಿರಾಜ್ ಅವರ ಆತ್ಮವಿಶ್ವಾಸದ ನುಡಿಗಳಿವು.

ಜನವರಿಯಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಎದುರು ಮತ್ತು ಹೋದ ತಿಂಗಳು ಶ್ರೀಲಂಕಾ ಎದುರಿನ ಸರಣಿಗಳಲ್ಲಿ ಗೆದ್ದು ತುಂಬು ಆತ್ಮವಿಶ್ವಾಸ ದಲ್ಲಿರುವ ತಂಡ ಇದು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್‌ ಟೂರ್ನಿಯ ಅಭಿಯಾನವನ್ನು ಮಂಗಳ ವಾರ ಬಾಂಗ್ಲಾದೇಶದ ವಿರುದ್ಧ ಆರಂಭಿಸಲಿದೆ.

ಜಹಾನಾರಾ ಆಲಂ ನಾಯಕತ್ವದ ತಂಡವು ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದೆ. ಮಿಥಾಲಿ ಬಳಗವು ಇಲ್ಲಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಅಭ್ಯಾಸದಲ್ಲಿ ನಿರತವಾಗಿದೆ. ಈ ಎರಡೂ ತಂಡಗಳು ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ವಿಶ್ವಕಪ್ ಇತಿಹಾಸದಲ್ಲಿ ತಂಡವು ಎರಡು ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಕಳೆದ ಎರಡೂ ವಿಶ್ವಕಪ್ ಟೂರ್ನಿಗಳಲ್ಲಿ ಲೀಗ್ ಹಂತದಲ್ಲಿಯೇ ಎಡವಿತ್ತು.

‘ಗತಿಸಿ ಹೋದ ಸೋಲು–ಗೆಲುವುಗಳ ಲೆಕ್ಕಾಚಾರಕ್ಕಿಂತ ಮುಂದಿರುವ ಭವಿಷ್ಯ ಮುಖ್ಯ ಎನ್ನುವ ಮಿಥಾಲಿ ಅವರು ಬಾಂಗ್ಲಾ ತಂಡದ ಎದುರು ಅಂತಿಮ ಹನ್ನೊಂದರ ತಂಡವನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಸ್ಮೃತಿ ಮಂದಾನಾ, ಅನುಭವಿ ಬೌಲರ್ ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್ ಮತ್ತು ಎಡಗೈ ಸ್ಪಿನ್ನರ್ ವಿಜಯಪುರದ ರಾಜೇಶ್ವರಿ ಗಾಯಕವಾಡ್ ಅವರು ತಂಡಕ್ಕೆ ಬಲ ತುಂಬುವ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಎದುರಿನ ಸರಣಿಗಳಲ್ಲಿ ಗೆಲುವಿಗೆ ಜೂಲನ್ ಮತ್ತು ಕೌರ್ ಅವರ ಉತ್ತಮ ಆಟವೇ ಮಹತ್ವದ್ದಾಗಿತ್ತು.
2014ರ ಟೂರ್ನಿಯಲ್ಲಿಯೂ ಈ ಇಬ್ಬರು ಆಟಗಾರ್ತಿಯರು ಮಿಂಚಿದ್ದರು. ಇವರು ಕಳೆದ ನಾಲ್ಕು ಟೂರ್ನಿಗಳ ಲ್ಲಿಯೂ ಆಡಿದ ಅನುಭವಿಗಳೂ ಹೌದು.

ನಾಯಕಿ ಮಿಥಾಲಿರಾಜ್ ಭಾರತ ತಂಡದಲ್ಲಿರುವ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ.  ಟಿ20 ಮಾದರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ವಿಶ್ವದ 13ನೇ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 183 ರನ್ ಪೇರಿಸಿದ್ದರು.

ಹರ್ಮನ್‌ಪ್ರೀತ್ ಕೌರ್ 164 ರನ್‌ಗಳನ್ನು ಗಳಿಸಿದ್ದರು. ಗಾಯದಿಂದ ಚೇತರಿಸಿಕೊಂಡಿರುವ  ಮಧ್ಯಮವೇಗಿ ಜೂಲನ್ ಗೋಸ್ವಾಮಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (44) ಎಂಬ ಶ್ರೇಯ ಅವರ ಪಾಲಿಗೆ ಇದೆ. ತಂಡದ ಇನ್ನಿಬ್ಬರು ಎಡಗೈ ಸ್ಪಿನ್ನರ್‌ಗಳಾದ ಏಕ್ತಾ ಬಿಷ್ತ್, ಅನುಜಾ ಪಾಟೀಲ ಅವರು ಎದುರಾಳಿಗಳಿಗೆ ಕಠಿಣ ಸವಾಲು ಒಡ್ಡಬಲ್ಲರು.  ಶ್ರೀಲಂಕಾ ಎದುರಿನ ಸರಣಿಯಲ್ಲಿ ಅನುಜಾ ಐದು ವಿಕೆಟ್ ಕಬಳಿಸಿ, 56 ರನ್ ಕೂಡ ಗಳಿಸಿದ್ದರು.

ಇನ್ನೊಂದೆಡೆ ಜಹಾನಾರಾ ಆಲಂ ಬಳಗವು ಆತಿಥೆಯರ ಸವಾಲನ್ನು ಎದುರಿಸಲು ಸಿದ್ಧತೆ ನಡೆಸಿದೆ. ಅಭ್ಯಾಸ ಪಂದ್ಯದಲ್ಲಿ ತಂಡವು ಐರ್ಲೆಂಡ್ ವಿರುದ್ಧ ಜಯಿಸಿತ್ತು. ಆದರೆ, ಬ್ಯಾಟಿಂಗ್ ಕ್ರಮಾಂಕವು ಅಷ್ಟೊಂದು ಬಲಿಷ್ಠವಾಗಿಲ್ಲ.  ಇದರಿಂದ ಭಾರತದ ಬೌಲರ್‌ಗಳಿಗೆ ಹೆಚ್ಚು ಶ್ರಮಪಡುವ ಅಗತ್ಯ ಬೀಳಲಿಕ್ಕಿಲ್ಲ.

ತಂಡಗಳು
ಭಾರತ:
ಮಿಥಾಲಿರಾಜ್ (ನಾಯಕಿ), ಜೂಲನ್ ಗೋಸ್ವಾಮಿ (ಉಪನಾಯಕಿ), ಏಕ್ತಾ ಬಿಸ್ತ್, ರಾಜೇಶ್ವರಿ ಗಾಯಕವಾಡ, ತಿರುಷ ಕಾಮಿನಿ, ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನಾ, ನಿರಂಜನಾ ನಾಗರಾಜ್, ಶಿಖಾ ಪಾಂಡೆ, ಅನುಜಾ ಪಾಟೀಲ, ದೀಪ್ತಿ ಶರ್ಮಾ, ವೆಲ್ಲಾಸ್ವಾಮಿ ವನಿತಾ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ಪೂನಮ್ ಯಾದವ್.

ಬಾಂಗ್ಲಾದೇಶ: ಜಹಾನಾರಾ ಆಲಂ (ನಾಯಕಿ), ಸಲ್ಮಾ ಕಾತೂನ್, ನಿಜಾರ್ ಸುಲ್ತಾನ್ ಜೋತಿ, ಪನ್ನಾ ಘೋಷ್, ರುಮಾನಾ ಅಹಮದ್, ಲತಾ ಮಂಡಲ್, ರಿತು ಮೋನಿ, ಅಯೇಷಾ ರೆಹಮಾನ್, ಫಾಹಿಮಾ ಕಾತೂನ್, ಶರ್ಮಿನ್ ಅಕ್ತರ್, ಫರ್ಗನಾ ಹಕ್, ಖಾದಿಜಾ ಉಲ್ ಕುಬ್ರಾ , ನಾಹಿದಾ ಅಕ್ತರ್, ಶೈಲಾ ಶರ್ಮಿನ್, ಸಂಜಿದಾ ಇಸ್ಲಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT