ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೋಡಶ ಹರೀಶ

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಕಮಲ್ ಹಾಸನ್ ಅವರದು ‘ದಶಾವತಾರ’. ನಮ್ಮೂರು ಹುಡುಗ ಹರೀಶ್‌ ರಾಜ್‌ ಅವರದು 16 ಪಾತ್ರಗಳ ನಿರ್ವಹಣೆಯ ಸಾಹಸ. ಅವರ ಈ ದಾಖಲೆಗಾಥೆಯ ‘ಶ್ರೀ ಸತ್ಯನಾರಾಯಣ’ ಸಿನಿಮಾ ಈಗ ಪ್ರೇಕ್ಷಕರ ಮುಂದಿದೆ.

‘ಶ್ರೀಸತ್ಯನಾರಾಯಣ’ ಪೂಜೆಯ ಪ್ರತಿಫಲದ ನಿರೀಕ್ಷೆಯಲ್ಲಿದ್ದಾರೆ ನಟ, ನಿರ್ಮಾಪಕ, ನಿರ್ದೇಶಕ ಹರೀಶ್‌ ರಾಜ್‌. ಒಂದೇ ಸಿನಿಮಾದಲ್ಲಿ 16 ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿ ಲಿಮ್ಕಾ ದಾಖಲೆಯಲ್ಲಿ ಹೆಸರು ಅಚ್ಚೊತ್ತಿಸಿಕೊಂಡ ಸಂಭ್ರಮವಿದ್ದರೂ, ಆರೇಳು ಸಿನಿಮಾಗಳ ನಡುವೆ ಒಂದಾಗಿ ಚಿತ್ರ ಬಿಡುಗಡೆ ಮಾಡುವ ಅನಿವಾರ್ಯತೆಯ ಸಂಕಟವೂ ಅವರಲ್ಲಿದೆ.

‘ಶ್ರೀ ಸತ್ಯನಾರಾಯಣ’ ಪ್ರೇಮಕಥೆಯ ಸುತ್ತ ಸಾಗುವ ಭಕ್ತಿ ಪ್ರಧಾನ ಚಿತ್ರ. ಸತ್ಯನಾರಾಯಣ ದೇವರ ಕಥೆಗಳು ಸ್ಕಂದ ಪುರಾಣದಲ್ಲಿ ಪ್ರಸ್ತಾಪವಾದ ಅನೇಕ ಸಂಗತಿಗಳನ್ನು ಚಿತ್ರ ಒಳಗೊಂಡಿದೆ. ಬಂಡವಾಳ ಹೂಡುವ, ಆ್ಯಕ್ಷನ್‌ ಕಟ್‌ ಹೇಳುವ ಮತ್ತು ನಟಿಸುವ ತ್ರಿಪಾತ್ರ ಹೊಣೆಗಾರಿಕೆಯ ಜತೆಗೆ, ನಾಯಕ ಪಾತ್ರಧಾರಿಯ ಬದುಕು ಮತ್ತು ಕಥೆಯೊಳಗಿನ ಕಥೆಗಳಲ್ಲಿ ಬರುವ ಪ್ರಮುಖ ಪಾತ್ರಗಳನ್ನು ಸ್ವತಃ ಹರೀಶ್‌ ರಾಜ್ ನಿಭಾಯಿಸಿದ್ದಾರೆ. ಇದು ದಾಖಲೆಗೋಸ್ಕರವೇ ಮಾಡಿರುವ ಸಾಹಸವಲ್ಲ.

ತಮ್ಮೊಳಗಿನ ಕಲಾವಿದನನ್ನು ಅಭಿವ್ಯಕ್ತಗೊಳಿಸುವ ಅವಕಾಶಗಳನ್ನು ಬಳಸಿಕೊಳ್ಳುವ ಅಪರೂಪದ ಪ್ರಯತ್ನ ಎನ್ನುವುದು ಅವರ ವಿವರಣೆ. ಪುರೋಹಿತ, ನಾರಾಯಣ, ನಾರದ, ವ್ಯಾಸ ಮಹರ್ಷಿ, ಚಂದ್ರಕೇತು ರಾಜ, ಸುತ, ಶೌನಕ, ಚೋರ ಹೀಗೆ 16 ಪಾತ್ರವೂ ವಿಭಿನ್ನ ವೇಷ, ಹಾವಭಾವ ಹೊಂದಿರುವುದರಿಂದ ಆ ಪಾತ್ರಗಳ ಒಳಹೊಕ್ಕುವುದು ಅವರ ಪಾಲಿಗೆ ಸವಾಲೆನಿಸಿತ್ತು. ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಅವರದು.

ಇವು ನಾಟಕದ ಪ್ರಸಂಗದಲ್ಲಿ ಎದುರಾಗಲಿರುವ ಪಾತ್ರಗಳು. ನಾಯಕಿ ರಮ್ಯಾ ಬಾರ್ನಾ ಅವರೂ ಐದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಪ್ರೀತಿ ಪ್ರೇಮದ ಸಲ್ಲಾಪವಿದೆ. ಮನರಂಜನೆಯಿದೆ. ಭಕ್ತಿಯಿದೆ. ದೇವರನ್ನು ನಂಬಿದರೆ ಎಲ್ಲವೂ ಸಾಧ್ಯ ಎನ್ನುತ್ತಲೇ ತಮ್ಮ ಸಿನಿಮಾದ ಹಣೆಬರಹವನ್ನು ನಿರ್ಧರಿಸುವ ಕೆಲಸವನ್ನು ಅವರು ದೇವರಿಗೇ ಒಪ್ಪಿಸುತ್ತಾರೆ.

ಅವರ ದೈವಭಕ್ತಿಯ ತೀವ್ರತೆ ಎಷ್ಟೆಂದರೆ, ಪ್ರೇಕ್ಷಕನ ಸಂಕಷ್ಟಕ್ಕೆ ಸಿನಿಮಾವೇ ಪರಿಹಾರ ನೀಡಲಿದೆಯಂತೆ. ಸತ್ಯನಾರಾಯಣನ ಕುರಿತಾದ ಕಥೆಗಳು ಭಕ್ತಿಭಾವವನ್ನು ಉಕ್ಕಿಸಿದರೂ, ಅದರಲ್ಲಿಯೇ ಸಂಪೂರ್ಣವಾಗಿ ಮುಳುಗಿಸದೆಯೇ ಮನರಂಜನೆಯನ್ನೂ ನೀಡುವ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ ಎಂಬ ಭರವಸೆ ಅವರದು.

ಸತ್ಯನಾರಾಯಣ ಪೂಜೆಯ ಮಹತ್ವ, ನಾರಾಯಣನೆಡೆಗಿನ ಭಕ್ತಿ ನೀಡುವ ಅನುಗ್ರಹದ ಹೃದಯಸ್ಪರ್ಶಿ ಚಿತ್ರಣ ಚಿತ್ರದಲ್ಲಿ ದೊರಕಲಿದೆ ಎಂಬ ಭರವಸೆ ನೀಡುತ್ತಾರೆ. ದೇವರ ಕುರಿತ ನಂಬಿಕೆ–ಅಪನಂಬಿಕೆಯ ಸಂಘರ್ಷವನ್ನು ವ್ಯಾಪಾರಿ ಸಿನಿಮಾ ಶೈಲಿಯಲ್ಲಿ ಹೆಣೆದಿದ್ದಾರಂತೆ. ಮನರಂಜನೆಗಾಗಿ ಎರಡು ಭಕ್ತಿಗೀತೆಗಳಲ್ಲದೆ, ಇನ್ನೆರಡು ಪ್ರೇಮಗೀತೆಗಳೂ ಇವೆ. ಇದರಲ್ಲಿ ಒಂದು ಹಾಡಿಗೆ ಸ್ವತಃ ಹರೀಶ್‌ ರಾಜ್‌ ಧ್ವನಿ ನೀಡಿದ್ದಾರೆ.

‘ಗನ್’ ಮತ್ತು ‘ಕಲಾಕಾರ್‌’ಗಳಲ್ಲಿನ ಪ್ರೀತಿ ಮತ್ತು ಆ್ಯಕ್ಷನ್‌ ವಸ್ತುಗಳಿಂದ ಭಕ್ತಿಮಾರ್ಗದತ್ತ ಹೊರಳಿದ ಅವರನ್ನು ಈ ಚಿತ್ರಕ್ಕೆ ಬಂಡವಾಳ ಹೂಡಲು ದೈವವೇ ಪ್ರೇರೇಪಣೆಯಂತೆ.

‘ಬಾಹುಬಲಿ’ಯಂತಹ ಸಿನಿಮಾ ನೋಡಿದಾಗ ನಮ್ಮ ಸಿನಿಮಾವನ್ನೂ ಹಾಗೆಯೇ ಅದ್ದೂರಿಯಾಗಿ ಮಾಡಬೇಕೆಂದೆನಿಸುತ್ತದೆ. ಆದರೆ ನಮ್ಮ ಬಳಿಯಿರುವ ಬಜೆಟ್‌ನಿಂದ ಅದು ಸಾಧ್ಯವೇ? ಬಜೆಟ್‌ನ ಮಿತಿಯೊಳಗೆಯೇ ಸೃಜನಾತ್ಮಕವಾಗಿ ಸಿನಿಮಾ ಮಾಡುವುದೇ ನಮ್ಮ ಮುಂದಿರುವ ಸವಾಲು ಎನ್ನುತ್ತಾರೆ ಹರೀಶ್‌ ರಾಜ್‌.

ಇದು ತಮ್ಮ ಕಮ್‌ಬ್ಯಾಕ್‌ ಚಿತ್ರ ಎಂದು ಅವರು ಹೇಳುತ್ತಾರೆ. ಸಿನಿಮಾಗಳು ಸಿದ್ಧವಾಗುತ್ತಿದ್ದಂತೆಯೇ ಯಾವ ಪರಿಸ್ಥಿತಿಯಿದ್ದರೂ ತೆರೆಗೆ ತರಬೇಕು. ವರ್ಷದ ಆರಂಭದಲ್ಲಿ ಮೂರು ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಈಗ ಆರೇಳು ಚಿತ್ರಗಳು ಬಿಡುಗಡೆಯಾಗುತ್ತಿವೆ.

ಸ್ಟಾರ್‌ ನಟರ ಚಿತ್ರಗಳು, ಕ್ರಿಕೆಟ್‌, ಪರೀಕ್ಷೆ ಎಂದು ಬಿಡುಗಡೆ ಮುಂದೂಡುತ್ತಿದ್ದರೆ, ಅದಕ್ಕೆ ಕಾಲ ಕೂಡಿ ಬರುವುದೇ ಇಲ್ಲ. ಅವುಗಳನ್ನು ತಡೆಯುವುದು ಸಹ ಸಾಧ್ಯವಿಲ್ಲ. ಎನ್ನುವ ಅಭಿಪ್ರಾಯ ಅವರದು. ಈ ಕಾರಣಕ್ಕಾಗಿ ಸಿನಿಮಾ ಪೂರ್ಣಗೊಳ್ಳುತ್ತಿದ್ದಂತೆಯೇ ಆರು ಸಿನಿಮಾಗಳ ನಡುವೆ ತಮ್ಮ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT