ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆಗುರುತು ಮೂಡಿಸಿದ ಹಾದಿ

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಧರ್ಮಶಾಲಾ ಮೈದಾನದಲ್ಲಿ ಕಳೆದ ವಾರ ಪುಟ್ಟ ರಾಷ್ಟ್ರ ಒಮನ್‌ ಕ್ರಿಕೆಟ್ ತಂಡದ ದಿಟ್ಟ ಹೋರಾಟ ಗಮನ ಸೆಳೆಯಿತು. ಒಂದೆಡೆ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಕುರಿತ ಬಿಸಿಬಿಸಿ ಚರ್ಚೆ ತಾರಕಕ್ಕೇರಿದ್ದ ಸಂದರ್ಭದಲ್ಲಿ ಒಮನ್ ತಂಡದಲ್ಲಿರುವ ಭಾರತ ಮತ್ತು ಪಾಕ್ ಮೂಲದ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲುತ್ತಿದ್ದರು.

ವಿಶ್ವ ಟ್ವೆಂಟಿ–20 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಇದೇ ಮೊದಲ ಬಾರಿಗೆ ಆಡಲು ಅವಕಾಶ ಗಿಟ್ಟಿಸಿರುವ ಒಮನ್ ತಂಡವು ತನಗಿಂತಲೂ ತುಸು ಹೆಚ್ಚು ಅನುಭವಿ ಐರ್ಲೆಂಡ್ ಎದುರು ಜಯಿಸಿತ್ತು. ನೆದರ್ಲೆಂಡ್ ಎದುರಿನ ಇನ್ನೊಂದು ಪಂದ್ಯವು ಮಳೆಗೆ ಆಹುತಿಯಾಗಿತ್ತು.

ಇದರಿಂದ ಒಮನ್ ತಂಡವು ಒಟ್ಟು ಮೂರು ಅಂಕಗಳನ್ನು ಗಳಿಸಿಕೊಂಡಿದೆ. ‘ಎ’ ಗುಂಪಿನಿಂದ ಮುಖ್ಯಸುತ್ತಿಗೆ ಪ್ರವೇಶಿಸುವ ಅವಕಾಶವನ್ನು ಇನ್ನೂ ಉಳಿಸಿಕೊಂಡಿದೆ.  ಆದರೆ, ಒಮನ್ ಎಂಬ ಹೊಸ ಕುದುರೆಯು ಇವತ್ತಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ  ಎಷ್ಟು ದೂರ ಓಡಬಲ್ಲದು ಎಂಬ ಕುತೂಹಲಕ್ಕೂ ಕಾರಣವಾಗಿದೆ.

ಏಕೆಂದರೆ, ಟ್ವೆಂಟಿ–20 ಕ್ರಿಕೆಟ್‌ನ ಚುಟುಕು ಇತಿಹಾಸವನ್ನೇ ಅವಲೋಕಿಸಿದರೆ ಒಮನ್‌ನಂತೆ ಕಾಲೂರುವ ಪ್ರಯತ್ನವನ್ನು ಮಾಡಿದ ಹಲವು ದೇಶಗಳು ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಕೆಲವಂತೂ ಹೀಗೆ ಬಂದು ಹಾಗೆ ಹೋದವು. ಹೋಗುವ ಮುನ್ನ ದೊಡ್ಡ ಸದ್ದು ಮಾಡಿದ್ದನ್ನೂ ಮರೆಯುವಂತಿಲ್ಲ. ಅದರಿಂದಾಗಿ ಮೂಡಿದ್ದ ನಿರೀಕ್ಷೆಗಳನ್ನು ಅಲಕ್ಷಿಸುವಂತಿಲ್ಲ. ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆದಿದ್ದ ಕೀನ್ಯಾ, ನಮಿಬಿಯಾ, ನೇಪಾಳ, ಹಾಂಗ್‌ಕಾಂಗ್, ಯುಎಇ ತಂಡಗಳು ಈ ಸಾಲಿಗೆ ಸೇರುತ್ತವೆ.

‘ಫುಟ್‌ಬಾಲ್‌’ ಕ್ರೀಡೆಯ ಪ್ರಭಾವ ಹೆಚ್ಚಿರುವ ಈ ದೇಶಗಳಲ್ಲಿ ಇನ್ನೂ ಕ್ರಿಕೆಟ್‌ ಸಂಪೂರ್ಣವಾಗಿ ವ್ಯಾಪಿಸಲು ಹರಸಾಹಸ ಪಡುತ್ತಿದೆ.
1996ರ ಏಕದಿನ ವಿಶ್ವಕಪ್ ಟೂರ್ನಿಯನ್ನು ನೆನಪು ಮಾಡಿಕೊಳ್ಳುವ ಯಾರೇ ಆದರೂ ಕೀನ್ಯಾ ತಂಡದ ಕುರಿತು ಮಾತನಾಡದೇ ಇರುವುದಿಲ್ಲ. ಏಕೆಂದರೆ, ಆ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ಗೆ ಆಘಾತ ನೀಡಿದ್ದ ಕೀನ್ಯಾ ರಾತ್ರಿ ಬೆಳಗಾಗುವುದರಲ್ಲಿ ಮನೆ ಮಾತಾಗಿತ್ತು. ಅದೇ ಮೊದಲ ಬಾರಿಗೆ ವಿಶ್ವಕಪ್ ಪ್ರವೇಶಿಸಿದ್ದ ತಂಡವು ಮುಂದೊಂದು ದಿನ ಎತ್ತರಕ್ಕೆ ಏರುವ ಭರವಸೆ ಮೂಡಿಸಿತ್ತು.

ಕೀನ್ಯಾ 2003ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದ ವಿರುದ್ಧ ಜಯಭೇರಿ ಬಾರಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಭಾರತದ ಎದುರು ಸೋಲನುಭವಿಸಿತ್ತು. ಆ ನಂತರ ಕೀನ್ಯಾ ತಂಡದ ಇಳಿಮುಖ ಪ್ರಯಾಣ ಆರಂಭವಾಯಿತು.

ದೇಶದಲ್ಲಿ ಕ್ರಿಕೆಟ್‌ಗೆ ಸಿಗದ ಪ್ರೋತ್ಸಾಹ, ಆರ್ಥಿಕ ಬಿಕ್ಕಟ್ಟು. ಏಷ್ಯಾ ಮೂಲದ ಆಟಗಾರರಿಗೆ ಹಣಕೊಟ್ಟು ಆಡಿಸಲು ಶಕ್ತಿ ಇರದ ಕಾರಣ ಕೀನ್ಯಾ ಕ್ರಿಕೆಟ್ ಪಾತಾಳ ಕಂಡಿತು. 2007ರ ಟಿ20 ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿತ್ತು. ನಂತರದ ಯಾವುದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅರ್ಹತೆ ಪಡೆದಿಲ್ಲ.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೀನ್ಯಾ ಬೆಳೆಯುವ ಸಂದರ್ಭದಲ್ಲಿ, ದೇಶಿ ಕ್ರಿಕೆಟ್‌ ನಿರ್ಲಕ್ಷ್ಯಕ್ಕೆ ಒಳಗಾಯಿತು. ಇದು ಪ್ರತಿಭಾವಂತರನ್ನು ಬೆಳೆಸುವ ಪ್ರಕ್ರಿಯೆಗೆ ಮಾರಕವಾಯಿತು. ಜವಾಬ್ದಾರಿಯಿಲ್ಲದ ಆಡಳಿತ ಮಂಡಳಿಯ  ಕಾರ್ಯವೈಖರಿಯಿಂದ ಕೀನ್ಯಾ ಕ್ರಿಕೆಟ್ ಅವಸಾನವಾಗಿದೆ’ ಎಂದು ತಂಡದ ಮಾಜಿ ಆಟಗಾರ ಆಸೀಫ್ ಕರೀಮ್ ಹೇಳಿದ್ದ ಮಾತು ಇಲ್ಲಿ ಪ್ರಸ್ತುತ. ಈ ವರ್ಷವಂತೂ ಕೀನ್ಯಾ ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ. 2015ರಲ್ಲಿ ವಿಶ್ವ ಟಿ20 ಚಾಂಪಿಯನ್‌ಷಿಪ್‌ ಕ್ವಾಲಿಫೈಯರ್‌ಗೂ ಅದು ಅರ್ಹತೆ ಪಡೆದಿರಲಿಲ್ಲ.

ನೇಪಾಳದ ಹೋರಾಟ
ಭಾರತ ಪಕ್ಕದಲ್ಲಿಯೇ ಇರುವ ಪುಟ್ಟ ರಾಷ್ಟ್ರ ನೇಪಾಳಕ್ಕೆ 1920ರಲ್ಲಿಯೇ ಕ್ರಿಕೆಟ್‌ ಪರಿಚಯವಾಗಿದೆ. ಆದರೆ, ರಾಜಮನೆತನಗಳ ಹಿಡಿತದಿಂದ ಜನಸಾಮಾನ್ಯರ ಅಂಗಳಕ್ಕೆ ಬರಲು ಸುದೀರ್ಘ ಕಾಲ ಬೇಕಾಯಿತು. 1979ರಿಂದಲೂ ಏಕದಿನ ವಿಶ್ವಕಪ್ ಅರ್ಹತೆಗಾಗಿ ಮಾಡುತ್ತಿರುವ ಪ್ರಯತ್ನ ಇನ್ನೂ ಫಲ ನೀಡಿಲ್ಲ.  ಆದರೆ, 2014ರಲ್ಲಿ ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿತ್ತು. ಆ ಟೂರ್ನಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು.

ಸೂಪರ್ 10 ಹಂತದಲ್ಲಿ ಹಾಂಗ್‌ಕಾಂಗ್, ಆಫ್ಘಾನಿಸ್ತಾನದ ವಿರುದ್ಧ ಗೆದ್ದಿತ್ತು. ಹಾಂಕಾಂಗ್ ಮತ್ತು ಯುಎಇ ತಂಡಗಳೂ ಆ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡಿದ್ದವು. ಯುಎಇ ಈ ಸಲ ಅರ್ಹತೆ ಪಡೆದಿಲ್ಲ. ನೇಪಾಳವೂ ಪ್ರವೇಶಿಸಿಲ್ಲ. ಆದರೆ, ಹಾಂಕಾಂಗ್ ಅರ್ಹತಾ ಸುತ್ತಿನಲ್ಲಿ ಆಡುತ್ತಿದೆ.

2012ರಲ್ಲಿ ಮೊದಲ ಬಾರಿಗೆ ಆಡಿದ್ದ ಆಫ್ಘಾನಿಸ್ತಾನ, 2009ರಲ್ಲಿ ಆಡಿದ್ದ ಐರ್ಲೆಂಡ್, ನೆದರ್ಲೆಂಡ್ ತಂಡಗಳು ಇನ್ನೂ ತಮ್ಮ ಹೋರಾಟದಿಂದ ಹಿಂದೆ ಸರಿದಿಲ್ಲ. ಈ ಬಾರಿಯೂ ಅರ್ಹತಾ ಸುತ್ತಿನಲ್ಲಿ ಆಡುತ್ತಿವೆ. ಆದರೆ, ನೇಪಾಳ ಮಾತ್ರ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.

ಈ ತಂಡಕ್ಕೆ ಆಟಗಾರರ ಕೊರತೆ ಇಲ್ಲ. ಸ್ಥಳೀಯ ಜೂನಿಯರ್ ಟೂರ್ನಿಗಳಿಂದಲೇ ಸಾಕಷ್ಟು ಪ್ರತಿಭಾವಂತರು ಮುಂಚೂಣಿಗೆ ಬರುತ್ತಿದ್ದಾರೆ. ಆದರೆ, ಸಂಪನ್ಮೂಲಗಳ ಕೊರತೆ, ಭೌಗೋಳಿಕ ಪರಿಸ್ಥಿತಿಯ ಸವಾಲು, ಸಾರಿಗೆ ವ್ಯವಸ್ಥೆಯ ಸವಾಲುಗಳಿಂದಾಗಿ ಕ್ರಿಕೆಟ್‌ ಬೆಳವಣಿಗೆ ಕುಂಠಿತಗೊಂಡಿದೆ. ಫುಟ್‌ಬಾಲ್ ಪ್ರಿಯರು ಹೆಚ್ಚು ಇರುವ ಈ ದೇಶದಲ್ಲಿ ಕ್ರಿಕೆಟ್‌ ಇನ್ನೂ ಜನರ ಮನದಲ್ಲಿ ಇಳಿಯಲು ಸಮಯ ಬೇಕು.

ಒಮನ್ ಭವಿಷ್ಯದ ನಡೆ
ಭಾರತ ಮತ್ತು ಪಾಕಿಸ್ತಾನ ಮೂಲದ ಆಟಗಾರರು ತುಂಬಿರುವ ಒಮನ್ ಈ ಎಲ್ಲ ತಂಡಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಇರಾದೆಯಲ್ಲಿದೆ.  ಬಾಂಗ್ಲಾ, ಆಫ್ಘಾನಿಸ್ತಾನ ತಂಡಗಳಂತೆ ಪ್ರಗತಿ ಸಾಧಿಸುವ ಛಲದಲ್ಲಿದೆ.

ಏಷ್ಯಾ ದೇಶಗಳ ಮಾಜಿ ಆಟಗಾರರ ಮಾರ್ಗದರ್ಶನ ಪಡೆಯುವ ಸಾಮರ್ಥ್ಯ ಈ ತಂಡಕ್ಕೆ ಇದೆ. ಈ ತಂಡಕ್ಕೆ ಶ್ರೀಲಂಕಾದ ದುಲೀಪ್ ಮೆಂಡಿಸ್ ಮುಖ್ಯ ಕೋಚ್ ಮತ್ತು ಭಾರತದ ಸುನಿಲ್ ಜೋಶಿ ಸ್ಪಿನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್ಥಿಕ ಸಂಪನ್ಮೂಲವೂ ಸಾಕಷ್ಟಿದೆ. ಇಡೀ ದೇಶದಲ್ಲಿ ಇದ್ದ ಏಕೈಕ ಕಾಂಕ್ರಿಟ್ ಪಿಚ್‌ನಲ್ಲಿಯೇ ಅಭ್ಯಾಸ ಮಾಡಿ ಮೂರು ನಾಲ್ಕು ಬಾರಿ ವಿಶ್ವಕಪ್ ಅರ್ಹತೆಗಾಗಿ ಕದ ತಟ್ಟಿತ್ತು. ತೀರಾ ಇತ್ತೀಚೆಗಷ್ಟೇ ಒಮನ್‌ನಲ್ಲಿ ಟರ್ಫ್‌ ಪಿಚ್ ಮತ್ತು ಫ್ಲಡ್‌ಲೈಟ್ ವ್ಯವಸ್ಥೆ ಮಾಡಲಾಗಿದೆ. ಅದರ ಫಲವಾಗಿ 2015ರಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಗೆದ್ದು ವಿಶ್ವ ಚಾಂಪಿಯನ್‌ಷಿಪ್‌ನ ‘ಎ’ ಗುಂಪಿಗೆ ಪ್ರವೇಶಿಸಿದೆ. ತಂಡದ ಈ ಸಾಧನೆಯಿಂದಾಗಿ ಒಮನ್‌ನಲ್ಲಿ ಮಕ್ಕಳು ಬ್ಯಾಟ್, ಚೆಂಡು ಹಿಡಿದು ಮೈದಾನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕ್ರಿಕೆಟ್‌ ಬೆಳವಣಿಗೆಗೆ ಇಂಬು ದೊರೆತಿದೆ.

ತಂಡವು ಇನ್ನೊಂದು ಪಂದ್ಯ ಗೆದ್ದರೆ ಮುಖ್ಯಸುತ್ತಿಗೆ ಪ್ರವೇಶಿಸುವ ಸಾಧ್ಯತೆಯೂ ಇದೆ. ಹಾಗೊಮ್ಮೆ ಆಗಿಬಿಟ್ಟರೆ, ಇನ್ನಷ್ಟು ಹೊಸ ದೇಶಗಳು ಕ್ರಿಕೆಟ್ ಆಟವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. 

ಟ್ವೆಂಟಿ–20 ಕ್ರಿಕೆಟ್‌ನ್ನು ಒಲಿಂಪಿಕ್ಸ್‌ಗೆ ಸೇರ್ಪಡೆ ಮಾಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಹೆಚ್ಚು ದೇಶಗಳು ಆಟದ ಮುಖ್ಯವಾಹಿನಿಗೆ ಬಂದಷ್ಟು ಆಗ್ರಹಕ್ಕೆ ಬಲ ಬರುವುದು ಖಚಿತ. ಆದರೆ ಬಂದ ತಂಡಗಳು ನಿರಂತರವಾಗಿ ಕಣದಲ್ಲಿ ಉಳಿಯುವಂತೆ ಮಾಡುವತ್ತ ಐಸಿಸಿಯ ಯೋಚನಾಲಹರಿ ಹೊರಳಬೇಕಾದ ಅಗತ್ಯವೂ ಇದೆ.

*****
ನಮ್ಮ ತಂಡದ ಆಟಗಾರರಲ್ಲಿ ಉನ್ನತ ಸಾಧನೆಯ ಆಕಾಂಕ್ಷೆ ಬಲವಾಗಿದೆ. ವಿಶ್ವ ಟಿ20ಯಲ್ಲಿ ಸಾಮರ್ಥ್ಯ ಮೀರಿ ಹೋರಾಡುತ್ತಿದೆ. ಟೂರ್ನಿಯ ನಂತರ ಭಾರತ, ಬಾಂಗ್ಲಾ ಮತ್ತಿತರ ದೇಶಗಳಿಗೆ ಪ್ರವಾಸದ ಯೋಜನೆಯೂ ಇದೆ. ಅನುಭವ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಬೇರೆ ಬೇರೆ ಉದ್ಯೋಗ, ದೇಶಗಳ ಜನರು ಒಂದೆಡೆ ಕೂಡಿರುವ ತಂಡ ನಮ್ಮದು. ಎಲ್ಲರಿಗೂ ಸಾಧನೆಯ ಹಸಿವು ಇದೆ. ಅದು ನಮ್ಮ ಮುಖ್ಯ ಶಕ್ತಿ.
–ಸುನಿಲ್ ಜೋಶಿ
ಒಮನ್ ತಂಡದ ಸ್ಪಿನ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT