ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಚರ್ಚಿಸುವ ಸಭೆಗಳಲ್ಲಿ ಕೂತು ಎಲ್ಲವನ್ನೂ ಕೇಳಿಸಿಕೊಳ್ಳುವ ಸಭಿಕರ ಮನಸ್ಥಿತಿ ಬದಲಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಮೊನ್ನೆ ಧಾರವಾಡದ ‘ಸಾಹಿತ್ಯ ಸಂಭ್ರಮ’ದಲ್ಲಿ ಈ ಕಾಲದಲ್ಲಿ ಹಬ್ಬಿರುವ ಅಸಹನೆಯ ಸಮಸ್ಯೆಯನ್ನು ಚರ್ಚಿಸುತ್ತಿದ್ದ ಚಿಂತಕರನ್ನು ‘ಸಮಸ್ಯೆಗೆ ಪರಿಹಾರ ಹೇಳಿ’ ಎಂದು ಸಭಿಕರು ಕೇಳುತ್ತಿದ್ದರು. ಅವತ್ತಿನ ಭಾಷಣಕಾರರ ಕಾಳಜಿಗಳನ್ನು ಹಂಚಿಕೊಂಡಿದ್ದ ಸಭಿಕರು ಸಮಸ್ಯೆಯ ಪರಿಹಾರದ ಬಗ್ಗೆ ಗಂಭೀರವಾಗಿ ಯೋಚಿಸಬಲ್ಲವರಾಗಿದ್ದರು.

ಅವತ್ತು ಆ ಸಭಿಕರ ಪ್ರಶ್ನೆಗಳಿಗೆ ಕೆಲವು ಉತ್ತರಗಳನ್ನು ಕೊಡಲೆತ್ನಿಸಿದೆ. ಅದರಲ್ಲಿ ಒಂದು: ‘ಇವತ್ತು ಸಂಘಟಿತ ಅಸಹನೆಯ ಮೂಲ ಕೇಂದ್ರವಾಗಿರುವ ಹಿಂದೂರಾಷ್ಟ್ರ ಹಾಗೂ ಇಸ್ಲಾಮಿಕ್ ರಾಷ್ಟ್ರದ ಕಲ್ಪನೆಗಳೆರಡನ್ನೂ ಎಲ್ಲ ಆರೋಗ್ಯವಂತರು ಹಾಗೂ ಹೊಸ ತಲೆಮಾರು ಮೊದಲು ತಿರಸ್ಕರಿಸಬೇಕು; ಧಾರ್ಮಿಕ ಮೂಲಗಳಿಂದ ಈ ಅಸಹನೆ ಹೆಚ್ಚು ಹುಟ್ಟುತ್ತಿದೆ ಎಂಬುದನ್ನು ಮೊದಲು ಅರಿಯಬೇಕು’. ಅಂದರೆ, ಈ ವಿಭಜನೆಯ ಚಿಂತನೆಗಳನ್ನು ಬಿಟ್ಟು ಉದಾರ ಆಧುನಿಕ ಇಂಡಿಯಾವೊಂದನ್ನು ರೂಪಿಸುವ ಬಗೆಯನ್ನು ನಾವು ಚರ್ಚಿಸಬೇಕು.

ಈ ಬಗೆಯ ‘ಧಾರ್ಮಿಕ’ ರಾಷ್ಟ್ರದ ಕಲ್ಪನೆಗೆ ನಮ್ಮ ಸಂವಿಧಾನದ ಒಪ್ಪಿಗೆಯಿಲ್ಲ ಎಂಬ ವಾಸ್ತವವನ್ನು ಮೊದಲು ಒಪ್ಪಿಕೊಳ್ಳಬೇಕು; ಹಲವು ಧರ್ಮ, ಜಾತಿ, ನಂಬಿಕೆಗಳ, ಆಹಾರ ಪದ್ಧತಿಗಳ ದೇಶದಲ್ಲಿ ಜನರನ್ನು ಒಡೆಯಲೆಂದೇ ಹುಟ್ಟಿಕೊಳ್ಳುವ ಐಡೆಂಟಿಟಿಗಳ ಗುಂಪುಗಳು ದೇಶವನ್ನು ಛಿದ್ರವಾಗಿಸುತ್ತಿವೆ ಎಂಬುದನ್ನು ಎಲ್ಲರೂ ಅರಿಯಬೇಕು. ಹಿಂದೊಮ್ಮೆ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಭಾರತಯಾತ್ರೆ ಮಾಡಿದಂತೆ ಈ ಕಾಲದ ಸಜ್ಜನ ನಾಯಕರು ಇಂಡಿಯಾದ ಎಲ್ಲರನ್ನೂ ಒಳಗೊಳ್ಳುವ ಪಾಸಿಟಿವ್ ಆದ ಆಂದೋಲನವೊಂದನ್ನು ರೂಪಿಸಬೇಕು. ಈ ಕೆಲಸ ಒಂದು ಮಟ್ಟದಲ್ಲಾದರೂ ‘ಸ್ವರಾಜ್ ಅಭಿಯಾನ್’ ಮೂಲಕ ಶುರುವಾಗಿದೆ ಎಂಬುದನ್ನು ನಾವು ಗಂಭೀರವಾಗಿ ಗಮನಿಸಬೇಕು.

ಈ ಕಾಲದಲ್ಲಿ ಕೆಲವು ಗುಂಪುಗಳು ಆಸಕ್ತಹಿತಗಳಿಂದ ಹಣ, ಬೆಂಬಲ ಪಡೆದು ಸೃಷ್ಟಿಸುತ್ತಿರುವ ಸಂಘಟಿತ ಅಸಹನೆ ಜನರಲ್ಲಿ ಹಬ್ಬದಂತೆ ತಡೆಯಲು ವಚನಸಾಹಿತ್ಯದ ಆರೋಗ್ಯಕರ ಸಂದೇಶಗಳನ್ನು ತಲುಪಿಸುತ್ತಿರುವ ಉದಾರವಾದಿ ಸ್ವಾಮೀಜಿಗಳು ಆ ಕೆಲಸವನ್ನು ಇನ್ನಷ್ಟು ವ್ಯಾಪಕವಾಗಿ ಮಾಡಬೇಕೆಂಬುದನ್ನು ಕೂಡ ಅವತ್ತು ಸೂಚಿಸಲೆತ್ನಿಸಿದೆ. ಹಾಗೆಯೇ ತತ್ವಪದಗಳು, ಕನಕ ಚಿಂತನೆ, ಸೂಫಿನೋಟಗಳ ಆರೋಗ್ಯವೂ ಮುನ್ನೆಲೆಗೆ ಬರಬೇಕು. ಹಿಂದೂ, ಇಸ್ಲಾಂ ಧರ್ಮಗಳನ್ನು ಅವುಗಳ ಆಧ್ಯಾತ್ಮಿಕ ನೆಲೆಯಲ್ಲಿ ತಲುಪಿಸಬಲ್ಲವರು ಕೂಡ ಸಹನೆಯ ಸಂದೇಶವನ್ನು ಬಿತ್ತರಿಸಬಲ್ಲರು.

ಧರ್ಮಶಾಸ್ತ್ರದ ಕಗ್ಗಗಳನ್ನು ಜನರ ಮೇಲೆ ಛೂ ಬಿಡುವ ಬದಲು ಉಪನಿಷತ್ತಿನ ಉದಾರ ಚಿಂತನೆಗಳನ್ನು ಮುನ್ನೆಲೆಗೆ ತರಬೇಕು. ಬೌದ್ಧ, ಜೈನ, ಸಿಖ್ ಧರ್ಮಗಳಲ್ಲಿ ಅಡಗಿರುವ ಸಹನೆಯ ಪಾಠಗಳನ್ನು ವ್ಯಾಪಕವಾಗಿ ಬಿತ್ತಬೇಕು. ಆದರೆ, ಯಾವುದೇ ಧರ್ಮದಲ್ಲಿ ಜನರನ್ನು ನಿಷ್ಕ್ರಿಯರನ್ನಾಗಿ ಮಾಡುವ ವಿಧಿವಾದಿ ಯೋಚನೆಗಳನ್ನು ಕೈಬಿಟ್ಟು ಉದಾರ ಚಿಂತನೆಗಳನ್ನು ಹೆಕ್ಕಿಕೊಳ್ಳುವ ಎಚ್ಚರವೂ ನಮಗಿರಬೇಕು. ಇವನ್ನೆಲ್ಲ ಈ ಧರ್ಮಗಳನ್ನು ಆಳವಾಗಿ ಬಲ್ಲ ಜವಾಬ್ದಾರಿಯುತ ಚಿಂತಕ, ಚಿಂತಕಿಯರು ಮಾಡುತ್ತಿರಬೇಕಾಗುತ್ತದೆ.

ಅದರ ಜೊತೆಗೆ, ಸಾಹಿತ್ಯವನ್ನು ಆಪ್ತವಾಗಿ ಓದುವ ವಾತಾವರಣ ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸೃಷ್ಟಿಯಾಗಬೇಕು. ಯಾತನೆ, ತಾಳ್ಮೆ, ನೊಂದವರ ನೋವನ್ನು ಅರಿಯುವುದು ಮುಂತಾದ ಸಾರ್ವಕಾಲಿಕ ಮೌಲ್ಯಗಳಿಗೆ ಅರ್ಥವಿಲ್ಲ ಎಂಬಂತೆ ವರ್ತಿಸುವ ಸ್ವಕೇಂದ್ರಿತ ಮನಸ್ಥಿತಿ ಇವತ್ತು ಹೆಚ್ಚುತ್ತಿದೆ. ಶ್ರೇಷ್ಠ ಸಾಹಿತ್ಯ ಇಂಥ ಸ್ವಕೇಂದ್ರಿತತೆಯನ್ನು ಸ್ವಲ್ಪವಾದರೂ ನಿವಾರಿಸಬಲ್ಲದು. ವಿದ್ಯಾರ್ಥಿಗಳಲ್ಲಿ ನಿಜವಾದ ವೈಚಾರಿಕ ಪ್ರಜ್ಞೆ ಬೆಳೆಸಿದರೆ, ಅವರು ಎಲ್ಲ ಬಗೆಯ ಸಂಕುಚಿತತೆಗಳಿಂದ ಹೊರಬರಬಲ್ಲರು. ಆದ್ದರಿಂದ ಗಾಂಧಿ, ಅಂಬೇಡ್ಕರ್, ಲೋಹಿಯಾ ಚಿಂತನೆಗಳು ಶಾಲಾ-ಕಾಲೇಜುಗಳ ಪಠ್ಯಗಳ ಭಾಗವಾಗಬೇಕು.

ಜೊತೆಗೆ, ಈ ಹುಡುಗ ಹುಡುಗಿಯರು ತಕ್ಷಣಕ್ಕೆ ಕುವೆಂಪು ಹಾಗೂ ಕಾರಂತರ ಬರಹಗಳು, ಬೇಂದ್ರೆ ಕಾವ್ಯ, ಲಂಕೇಶರ ಟೀಕೆ-ಟಿಪ್ಪಣಿಗಳನ್ನು ಆಳವಾಗಿ ಓದಿದರೂ ಸಾಕು, ಅವರಿಗೆ ಇತರರನ್ನು ಅನುಕಂಪದಿಂದ ಅರಿಯುವ ಕಣ್ಣು ಮೂಡಬಲ್ಲದು. ಬಸವಣ್ಣನವರು ಹೇಳಿದ ‘ಅನ್ಯರಿಗೆ ಅಸಹ್ಯ ಪಡಬೇಡ’ ಎಂಬ ವಿವೇಕ ಕನ್ನಡ ಸಾಹಿತ್ಯದ ಎಲ್ಲ ಕಾಲದ ಆರೋಗ್ಯಕರ ಲೇಖಕ, ಲೇಖಕಿಯರಲ್ಲೂ ಇದೆ. ದೇವನೂರರ ಸಾಕವ್ವನ ಅವಮಾನ, ಎಂ.ಕೆ.ಇಂದಿರಾ ಅವರ ಫಣಿಯಮ್ಮನ ಯಾತನೆ, ಸಾರಾ ಅಬೂಬಕ್ಕರ್ ಅವರ ನಾದಿರಾಳ ಪರಕೀಯತೆ… ಎಲ್ಲದಕ್ಕೂ ಕನ್ನಡ ಓದುಗರು ಸಮಾನವಾಗಿ ಮಿಡಿದಿದ್ದಾರೆ. ಇಂಥ ಉದಾರ ಓದುಗರನ್ನು ಸೃಷ್ಟಿ ಮಾಡಿರುವ ಕನ್ನಡ ಪರಿಸರದಲ್ಲಿ ಹಿರಿಯ ಲೇಖಕರಾದ ಪ್ರೊ. ಕೆ.ಎಸ್. ಭಗವಾನ್ ಹಾಗೂ ಪ್ರೊ. ಎಸ್.ಎಲ್. ಭೈರಪ್ಪ ಇಬ್ಬರೂ ದಿನ ಬಿಟ್ಟು ದಿನ ಜನರನ್ನು ಕೆರಳಿಸುವ ಅಪ್ರಸ್ತುತವಾದ ಹಾಗೂ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು.

ಮಾತು, ಬರಹಗಳನ್ನು ಸೆನ್ಸೇಷನ್‌ಗಾಗಿಯೇ ಬಳಸಿ ಅಗ್ಗದ ಪ್ರಚಾರ ಪಡೆಯಲೆತ್ನಿಸುತ್ತಿರುವ ಕಿರಿಯರೂ ತಮ್ಮ ಭಾಷೆ, ನುಡಿಗಟ್ಟುಗಳನ್ನು ತಮ್ಮ ಅಂತಸ್ಸಾಕ್ಷಿಯ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ಕೇವಲ ಜನರ ನಂಬಿಕೆಗಳಿಗೆ ಶಾಕ್ ನೀಡಿದರೆ ಅವರ ಪ್ರಜ್ಞೆಯಲ್ಲಿ ಮಹತ್ತರ ಬದಲಾವಣೆಯಾಗುವುದಿಲ್ಲ; ಗಂಭೀರ ಚಿಂತನೆಗಳನ್ನು ವ್ಯವಧಾನದಿಂದ ಬಿತ್ತುವುದರ ಮೂಲಕವೂ ವೈಚಾರಿಕ ಪ್ರಜ್ಞೆ ಮೂಡಿಸಬಹುದೆಂಬ ನಂಬಿಕೆ ನಮಗಿರಬೇಕು. ಆಗ ಮಾತ್ರ ಮಾರ್ಕ್ಸ್, ರಸೆಲ್ ಎಲ್ಲರ ವೈಚಾರಿಕತೆಯನ್ನೂ ಆಳವಾಗಿ ಹೇಳಿಕೊಟ್ಟು ಜನರಲ್ಲಿ ಹೊಸ ಪ್ರಜ್ಞೆ ರೂಪಿಸಬಹುದು.

ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ, ಇವತ್ತು ಎಲ್ಲೆಡೆ ಹಬ್ಬಿರುವಂತೆ ಕಾಣುವ ಅಸಹನೆಯನ್ನು ಕಡಿಮೆ ಮಾಡಲು ಇನ್ನೂ ಕೆಲವು ಮಾರ್ಗಗಳು ಕಾಣತೊಡಗಿದವು: ಒಂದು, ಯಾರದೋ ದಾಳವಾಗಿ ಅಸಹನೆ ಹಬ್ಬಿಸುವ ವ್ಯಕ್ತಿಗಳು ಚಣ ಯೋಚಿಸಿ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು ಹಾಗೂ ಇವನ್ನೆಲ್ಲ ಮೂಕವಾಗಿ ನೋಡುತ್ತಿರುವ ಸಜ್ಜನರು ಕೊನೆಯ ಪಕ್ಷ ಅಸಹ್ಯವನ್ನಾದರೂ ತೋರುವುದು ಅತ್ಯಗತ್ಯ. ಎರಡು: ಅಸಹನೆ ಹಬ್ಬಿಸುವ ಗುಂಪುಗಳಿಗೆ ರಾಜಕೀಯ ಪಕ್ಷಗಳು, ನಾಯಕರು, ಧರ್ಮಗುರುಗಳು, ಧಾರ್ಮಿಕ, ಸಾಂಸ್ಕೃತಿಕ ಸಂಸ್ಥೆಗಳು ಕೊಡುತ್ತಿರುವ ಒಳಕುಮ್ಮಕ್ಕು ನಿಲ್ಲಬೇಕು.

ಮೂರು: ಕೊನೆಯಪಕ್ಷ ಹೊಸ ತಲೆಮಾರುಗಳಾದರೂ ಈ ವಿಭಜಕ ಗುಂಪುಗಳನ್ನು ತಿರಸ್ಕರಿಸಬೇಕು. ಈ ಗುಂಪುಗಳು ಯಾವುದೇ ಧರ್ಮಕ್ಕೆ, ಪಕ್ಷಕ್ಕೆ ಸೇರಿರಲಿ, ಅವು ಎತ್ತುವ ಪ್ರಶ್ನೆಗಳು ದೇಶಕ್ಕೆ ಮಾರಕ ಹಾಗೂ ಅಪ್ರಸ್ತುತ ಎಂದು ಹೇಳುವ ಜಾತ್ಯತೀತ ವೇದಿಕೆಗಳ, ವ್ಯಕ್ತಿಗಳ ಸಂಖ್ಯೆ ಹೆಚ್ಚಬೇಕು. ನಾಲ್ಕು: ಅಸಹನೆಯ ಬೆಂಕಿ ಹಬ್ಬಿಸಿ ಮೈಕಾಯಿಸಿಕೊಳ್ಳುವ ಗುಂಪುಗಳಿಂದ ದೇಶದ ಆರ್ಥಿಕತೆಗೆ ಸದಾ ಹೊಡೆತ ಬೀಳುತ್ತಿರುತ್ತದೆ ಎಂಬುದನ್ನು ಅಧಿಕಾರ ಉಳಿಸಿಕೊಳ್ಳಲು ಇವಕ್ಕೆ ಕುಮ್ಮಕ್ಕು ಕೊಡುವ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು.

ಸಜ್ಜನ ರಾಜಕೀಯ ನಾಯಕರಾದರೂ ಈ ಅಪಾಯ ಕುರಿತು ಜನರಿಗೆ ಮತ್ತೆಮತ್ತೆ ಹೇಳಬೇಕು. ಪ್ರಧಾನಿ, ಮುಖ್ಯಮಂತ್ರಿಗಳಿಂದ ಹಿಡಿದು ಸಣ್ಣಪುಟ್ಟ ನಾಯಕರವರೆಗೂ ಜನರನ್ನು ಒಡೆಯುವ ಮಾತು ಬಿಟ್ಟು, ಒಗ್ಗೂಡಿಸುವ ಮಾತು ಆಡಬೇಕು. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಹಾಗೆ ಪ್ರಧಾನಿ ದೇಶವನ್ನು ಒಗ್ಗೂಡಿಸುವ ಸಹನೆಯ ಧಾಟಿಯಲ್ಲಿ ಮಾತಾಡತೊಡಗಿದರೆ, ಸಮಸ್ಯೆ ಹತ್ತು ಭಾಗ ಕಡಿಮೆಯಾಗುತ್ತದೆ; ವಿರೋಧ ಪಕ್ಷಗಳು ದೇಶದ ಗಾಯ ತೊಳೆಯುವ ವೈದ್ಯರಂತೆ ರೋಗಪರೀಕ್ಷೆ-ರೋಗಪರಿಹಾರದ ಜವಾಬ್ದಾರಿ ಹೊತ್ತು ಮಾತಾಡತೊಡಗಿದರೆ, ಸಮಸ್ಯೆಯ ಇನ್ನೂ ಹತ್ತು ಭಾಗ ಕಡಿಮೆಯಾಗುತ್ತದೆ.

ಇತ್ತ ವ್ಯವಸ್ಥಿತ ಅಸಹನೆ ಹಬ್ಬಿಸುವ ಗುಂಪುಗಳ ವಿರುದ್ಧ ತಮ್ಮ ಕೆಲಸ ಮಾಡಲು ಕಾನೂನುಪಾಲಕರಿಗೆ ಮುಕ್ತ ಅವಕಾಶವಿರಬೇಕಾಗುತ್ತದೆ. ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಇಂಡಿಯಾದಲ್ಲಿ ಕ್ರೌರ್ಯವೆಸಗಿದಾಗ ಇಲ್ಲಿನ ಮುಸ್ಲಿಮರನ್ನು ಚುಚ್ಚುವ ಹೀನ ಚಾಳಿಯನ್ನು ವಾಚಾಳಿಗಳು ಕೈ ಬಿಡಬೇಕು. ಇಸ್ಲಾಂ ರಕ್ಷಣೆಯ ಹೆಸರಿನಲ್ಲಿ ಭಯೋತ್ಪಾದಕ ಗುಂಪುಗಳು ಆಡುವ ವೀರಾವೇಶದ ಮಾತುಗಳಿಗೆ ತಮ್ಮ ಮಕ್ಕಳು ಬಲಿಯಾಗದಂತೆ, ಯಾವ ಕಾರಣಕ್ಕೂ ಅವುಗಳನ್ನು ಬೆಂಬಲಿಸದಂತೆ ಮುಸ್ಲಿಂ ಪೋಷಕರು ಎಚ್ಚರ ವಹಿಸಬೇಕು. ಇದೇ ಬಗೆಯ ಎಚ್ಚರ ಹಿಂದೂ ಅಥವಾ ಸಿಖ್ ಧರ್ಮರಕ್ಷಣೆಯ ಹೆಸರಿನಲ್ಲಿ ನಡೆಯುವ ವೀರಾವೇಶದ ಪ್ರಚೋದನೆಯ ಸಂದರ್ಭದಲ್ಲೂ ಪೋಷಕರಿಗೆ ಇರಬೇಕಾಗುತ್ತದೆ.

ಅಸಹನೆಯ ಪ್ರತಿಕ್ರಿಯೆಗಳಿಗೆ ‘ಮನೆಯೆ ಮೊದಲ ಪಾಠಶಾಲೆ’ಯಾಗಬಾರದು; ಸಹನೆಯ ವರ್ತನೆಗಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಇವೆಲ್ಲಕ್ಕೆ ಪೂರಕವಾಗಿ ಜನರ ನಿತ್ಯದ ಪ್ರತಿಕ್ರಿಯೆಗಳನ್ನು ರೂಪಿಸಲೆತ್ನಿಸುವ ಸಮೂಹಮಾಧ್ಯಮದ ಬುದ್ಧಿಜೀವಿಗಳು ಅಸಹನೆ ಹಬ್ಬಿಸುವ ಸುದ್ದಿ, ಚರ್ಚೆ, ಚಿತ್ರ ಪ್ರಸಾರಕ್ಕೆ ಸ್ವ-ನಿಯಂತ್ರಣ ಹೇರಿಕೊಳ್ಳುವ ನೈತಿಕ ಜವಾಬ್ದಾರಿ ಹೊರಬೇಕು. ಇವತ್ತು ದೇಶದಲ್ಲಿ ಈ ಅಸಹನೆಯ ಜಾಲಗಳ ಬಗ್ಗೆ ಆತಂಕಗೊಂಡಿರುವ, ಅವನ್ನು ಎದುರಿಸುವ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುತ್ತಿರುವ, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ವ್ಯಕ್ತಿಗಳಿದ್ದಾರೆ.

ಇವಕ್ಕೆಲ್ಲ ಪರಿಹಾರ ಹುಡುಕಲು ಪ್ರಯತ್ನಿಸುತ್ತಿರುವ ರೊಮಿಲಾ ಥಾಪರ್ ಥರದ ದೊಡ್ಡ ಇತಿಹಾಸಕಾರರು, ಅಮರ್ತ್ಯ ಸೇನ್ ಥರದ ದೊಡ್ಡ ಆರ್ಥಿಕ ಚಿಂತಕರಿದ್ದಾರೆ. ಜೀವಮಾನವಿಡೀ ಆಳವಾಗಿ ಸಂಶೋಧನೆ ಮಾಡಿ, ಧ್ಯಾನಿಸಿ ಮಾತಾಡುವ ಇಂಥ ಆತ್ಮಸಾಕ್ಷಿಯ ದನಿಗಳನ್ನು ನಾವು ಎಚ್ಚರದಿಂದ ಕೇಳಿಸಿಕೊಳ್ಳಬೇಕಾಗುತ್ತದೆ. ಇಂಥ ಪಕ್ಷಾತೀತ ಚಿಂತಕರು ಏನಾದರೂ ಹೇಳಿದ ತಕ್ಷಣ ಅವರ ವಿರುದ್ಧ ಚೀರುವವರನ್ನು ಎಲ್ಲ ಸರ್ಕಾರಗಳೂ ತಯಾರು ಮಾಡುತ್ತಿರುತ್ತವೆ. ಆದ್ದರಿಂದ ಇಂಥ ನಿಸ್ವಾರ್ಥಿ ಚಿಂತಕರ ದನಿಗಳು ಚೀರುಮಾರಿಗಳ ಅಬ್ಬರದಲ್ಲಿ ಕಳೆದುಹೋಗದಂತೆ ಕಾಯುವ, ಅವರು ಸೂಚಿಸುವ ಪರಿಹಾರಗಳನ್ನು ಎಲ್ಲೆಡೆ ಹಬ್ಬಿಸುವ ಕೆಲಸವನ್ನು ಸಮೂಹಮಾಧ್ಯಮಗಳು, ವಿಶ್ವವಿದ್ಯಾಲಯಗಳು ಮಾಡುತ್ತಿರಬೇಕಾಗುತ್ತದೆ.

ಈ ಎಲ್ಲದರ ನಡುವೆ, ಅಪಾರ ದಮನಕ್ಕೊಳಗಾದರೂ ಸಮಾಜದಲ್ಲಿ ಅಸಹನೆಯ ವಿಷಬೀಜ ಬಿತ್ತದೆ ನಿತ್ಯದ ಹೊಟ್ಟೆ ಬಟ್ಟೆಗಾಗಿ ದುಡಿಯುತ್ತಿರುವ ಕೋಟ್ಯಂತರ ಬಡವರಿರುವುದನ್ನು ಮರೆಯಬಾರದು. ಅವರಲ್ಲಿ ಕೆಲವು ವರ್ಗಗಳು ಸಂಘಟಿತವಾಗಿ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಹೋರಾಡುತ್ತಿರುತ್ತವೆ. ಕೆಲವು ಗುರಿಯನ್ನೂ ಮುಟ್ಟುತ್ತಿರುತ್ತವೆ. ಕೆಲವರು ಅಪರೂಪಕ್ಕೊಮ್ಮೆ ಸ್ಫೋಟಗೊಂಡಿರಬಹುದಾದರೂ ಅವರು ದೇಶದಲ್ಲಿ ಅಸಹನೆ ಹಬ್ಬಿಸುವ ದುಷ್ಟತನ ತೋರಿದವರಲ್ಲ.

ದೇಶದ 90 ಭಾಗ ಸಹನಾಜೀವಿಗಳಿಗೆ ಹೋಲಿಸಿದರೆ, ಹಿಡಿಮಂದಿ ಎನ್ನಬಹುದಾದ ವ್ಯಕ್ತಿಗಳು, ಸಂಘಟನೆಗಳು ತಮ್ಮ, ತಮ್ಮವರ ಅಧಿಕಾರಕ್ಕಾಗಿ ಹಬ್ಬಿಸುತ್ತಿರುವ ವಿಷಕ್ಕೆ ಒಂದು ಬೃಹತ್ ದೇಶ ಬಲಿಯಾಗದಂತೆ ನೋಡಿಕೊಳ್ಳುವ, ಅಸಹನೆಯ ವಿಷಕ್ಕೆ ಮದ್ದು ಹುಡುಕುವ ಹೊಣೆ ಲಾಯರುಗಳು, ಡಾಕ್ಟರುಗಳು, ವಿಜ್ಞಾನಿಗಳ ಮೇಲೂ ಇದೆ. ಇಂಥ ಮದ್ದುಹುಡುಕುತ್ತಿರುವ ಎಲ್ಲರೂ ಆ ಕುರಿತು ಮಾತಾಡುವ, ಬರೆಯುವ ಹೊಣೆಯನ್ನು ತಂತಮ್ಮ ಮಿತಿಗಳಲ್ಲಿ ನಿರ್ವಹಿಸುತ್ತಿದ್ದಾರೆ. ಅಸಹನೆಗೆ ಮದ್ದು ಹುಡುಕುವ ಕಾಯಕ ಎಲ್ಲೆಡೆ ಹಬ್ಬಲಿ.

ಕೊನೆ ಟಿಪ್ಪಣಿ: ಹುಸಿ ಸಾಂಸ್ಕೃತಿಕ ಪ್ರಶ್ನೆಗಳು v/s ಆರ್ಥಿಕ ವಾಸ್ತವಗಳು
ಇದೊಂದು ಓಪನ್ ಸೀಕ್ರೆಟ್. ಇಂಡಿಯಾದಲ್ಲಿ ಕಾಲಕಾಲಕ್ಕೆ ಇಂಥ ಬಿಕ್ಕಟ್ಟುಗಳನ್ನು ಯಾಕೆ ಸೃಷ್ಟಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ವರ್ಲ್ಡ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ಇಂಡಿಯಾದಲ್ಲಿ ಸುಮಾರು ಐವತ್ತು ಕೋಟಿ ಜನ ಬಡತನದ ರೇಖೆಯ ಕೆಳಗಿದ್ದಾರೆ. ‘ಸ್ವರಾಜ್ ಅಭಿಯಾನ್’ ಅಂಗವಾಗಿ ಕರ್ನಾಟಕದ ರಾಯಚೂರಿನಿಂದ ಶುರು ಮಾಡಿ ಅನೇಕ ರಾಜ್ಯಗಳನ್ನು ಸುತ್ತಿರುವ ಯೋಗೇಂದ್ರ ಯಾದವ್ ಪ್ರಕಾರ ಇಂಡಿಯಾದ ಅರ್ಧಭಾಗ ಬರಗಾಲಕ್ಕೆ ತುತ್ತಾಗತೊಡಗಿದೆ.

ಅಂತರರಾಷ್ಟ್ರೀಯ ಹುನ್ನಾರಗಳು, ಕಾರ್ಪೊರೇಟ್ ವಲಯಗಳು ಹಳ್ಳಿಗಳಿಂದ ರೈತರನ್ನು ಒಕ್ಕಲೆಬ್ಬಿಸುವ ವ್ಯವಸ್ಥಿತ ಪ್ರಯತ್ನ ಮಾಡುತ್ತಲೇ ಇವೆ. ಇಂಡಿಯಾದ ಇಂಥ ಭೀಕರ ವಾಸ್ತವಗಳನ್ನು ಎದುರಿಸಲಾರದ ಸರ್ಕಾರಗಳು, ಅವುಗಳ ಬಾಲಂಗೋಚಿ ಗುಂಪುಗಳು ಜನರ ಮನಸ್ಸನ್ನು ಬೇರೆಡೆ ಹೊರಳಿಸಲು ಕಾಲಕಾಲಕ್ಕೆ ಈ ಬಗೆಯ ಅಜೆಂಡಾಗಳನ್ನು, ಗಲಭೆಗಳನ್ನು ಹುಟ್ಟು ಹಾಕುತ್ತಿರುತ್ತವೆ. ಈ ಫ್ಯಾಸಿಸ್ಟ್ ಹುನ್ನಾರಗಳಲ್ಲಿ ಧಾರ್ಮಿಕ ಗುಂಪುಗಳು, ರಾಜಕೀಯ ಪಕ್ಷಗಳು ಶಾಮೀಲಾಗಿವೆಯೆಂಬ ಸತ್ಯ ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಹುಸಿ ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತಿ ಜನರನ್ನು ದಿಕ್ಕೆಡಿಸುವವರ ಎದುರು ನಿಜವಾದ ಆರ್ಥಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತರುವುದೂ ಅಸಹನೆಯ ಅಜೆಂಡಾವನ್ನು ಹಿಮ್ಮೆಟ್ಟಿಸಬಲ್ಲದು. ಹೊಸ ತಲೆಮಾರು ಇತ್ತ ನೋಡಬೇಕು.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.