‘ಶಿಕ್ಷಣ ತಜ್ಞ, 15 ಭಾಷೆಗಳನ್ನು ಕರಗತ ಮಾಡಿಕೊಂಡ ಬಹುಭಾಷಾ ಪಂಡಿತ, ಸುಧಾರಕ, ಆಂಧ್ರಪ್ರದೇಶದ ಮೇಧಾವಿ ಪ್ರಧಾನಿ ಎಂದೇ ಖ್ಯಾತರಾಗಿದ್ದ...’

ಇದು ನವದೆಹಲಿಯ ರಾಷ್ಟ್ರೀಯ ಸ್ಮೃತಿಯಲ್ಲಿ ನೂತನ ವಾಗಿ ನಿರ್ಮಿಸಿರುವ ಪಿ.ವಿ. ನರಸಿಂಹ ರಾವ್ ಸ್ಮಾರಕದ ಶಿಲಾಫಲಕದಲ್ಲಿ ಅಚ್ಚಾಗಿರುವ ಸಾಲುಗಳು. ಬಹುಶಃ ಇದಕ್ಕೆ ದಿವಾಳಿ ಅಂಚಿನಲ್ಲಿದ್ದ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ನೇತಾರ, ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣಕ್ಕೆ ಅಂಕುಶ ಹಾಕಲು ಯತ್ನಿಸಿದ ಧೀಮಂತ ಎಂಬ ಮಾತುಗಳನ್ನೂ ಸೇರಿಸಬಹುದಿತ್ತು.

ಸುಮ್ಮನೆ 25 ವರ್ಷಗಳಷ್ಟು ಹಿಂದೆಹೋಗಿ, ನಮ್ಮ ದೇಶದ ಆಗಿನ ಸ್ಥಿತಿಗತಿಗಳನ್ನು ನೆನಪಿಸಿಕೊಳ್ಳಿ. ಅದು ಭಾರತದ ಆಪತ್ಕಾಲ. ವಿಫಲಗೊಂಡ ನೆಹರೂ ಪ್ರಣೀತ ಸಮಾಜವಾದ, ಇಂದಿರಾರ ಮನಸೋಇಚ್ಛೆಯ ಸರ್ವಾಧಿ ಕಾರ, ತುಷ್ಟೀಕರಣದ ಮತಬ್ಯಾಂಕ್ ರಾಜಕಾರಣ, ಪುಡಿ ಪಕ್ಷಗಳಿಂದ ಉಂಟಾದ ಅಸ್ಥಿರ ರಾಜಕೀಯ ವ್ಯವಸ್ಥೆ, ಈ ಎಲ್ಲದರಿಂದ ದೇಶ ದಿಕ್ಕೆಟ್ಟಿದ್ದ ದಿನಗಳವು.

ಉದ್ದಿಮೆಗಳ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣ. ಇಂತಿಷ್ಟೇ, ಹೀಗೇ ಉತ್ಪಾದಿಸಬೇಕು ಎಂಬ ಕರಾರು, ಎಲ್ಲದಕ್ಕೂ ಪರ ವಾನಗಿ, ಅದನ್ನು ಪಡೆಯುವ ಮಾರ್ಗಗಳೂ ದುಸ್ತರ. ಸೃಜನಶೀಲತೆಗೆ, ಪ್ರಯೋಗಶೀಲತೆಗೆ ಉತ್ತೇಜನವಿಲ್ಲದ ನಿಸ್ತೇಜ ಸರ್ಕಾರಿ ವ್ಯವಸ್ಥೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ತಂದ ಸಾಲ ಆರು ತಿಂಗಳೊಳಗಾಗಿ ಖರ್ಚಾಗಿ, ಸಾಲ ಮರು ಪಾವತಿ ಮಾಡಲಾಗದೆ, ಚಂದ್ರಶೇಖರ್ ನೇತೃತ್ವದ ಸರ್ಕಾರ ಕೈಚೆಲ್ಲಿ ಕುಳಿತ ಸಂದರ್ಭ. 5 ಸಾವಿರ ಕೋಟಿ ಪೌಂಡ್ ಸಾಲವನ್ನು ತೀರಿಸಲಾಗದೆ ಸುಸ್ತಿದಾರನಾಗಿ, ದೇಶ ಜಗತ್ತಿನೆ ದುರು ತಲೆತಗ್ಗಿಸಿ ನಿಲ್ಲಬೇಕಾದ ದೈನೇಸಿ ಸ್ಥಿತಿ.

ಪಾರಾಗಲು ಇದ್ದ ಏಕೈಕ ಮಾರ್ಗ, ರಿಸರ್ವ್ ಬ್ಯಾಂಕಿನಲ್ಲಿದ್ದ ಚಿನ್ನವನ್ನು ಅಡವಿಡುವುದು, ಸಾಲ ತಂದು ಹಣದುಬ್ಬರ ತಗ್ಗುವಂತೆ ಮಾಡಿ, ಜನರಿಗೆ ಅಗತ್ಯ ವಸ್ತುಗಳು ಕೈಗೆಟುಕುವಂತೆ ನೋಡಿ ಕೊಳ್ಳುವುದು. ಹೌದು, ಭಾರತ ಸ್ವಿಟ್ಜರ್‌ಲೆಂಡ್ ಮತ್ತು ಇಂಗ್ಲೆಂಡ್ ಬ್ಯಾಂಕುಗಳಲ್ಲಿ ಗಿರವಿ ಇಟ್ಟದ್ದು ಬರೋಬ್ಬರಿ 67 ಟನ್ ಚಿನ್ನ! ಇಂತಹ ದುರ್ದಿನಗಳಲ್ಲಿ ‘ಅಚ್ಛೇದಿನ್’ ಕನಸು ಕಂಡವರು ಪಿವಿಎನ್.

ಪಿವಿಎನ್ ಅವರದು ಬಹುವರ್ಣದ ವ್ಯಕ್ತಿತ್ವ. ರಾವ್, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು, ನಿಜಾಮರ ವಿರುದ್ಧ ಹೋರಾಟ ಸಂಘಟಿಸಿದವರು. ಸಾಹಿತ್ಯ ಪತ್ರಿಕೆಯೊಂದನ್ನು ಹೊರತಂದವರು. ಮರಾಠಿ ಕಾದಂಬರಿಯನ್ನು ತೆಲುಗಿಗೆ ಅನುವಾದಿಸಿದ್ದರು, ತೆಲುಗಿನದ್ದನ್ನು ಹಿಂದಿಗೆ ಭಾಷಾಂತರಿ ಸಿದ್ದರು. ಸಣ್ಣ ಕತೆಗಳನ್ನು ಬರೆದಿದ್ದರು. 1971ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು.

ಭೂ ಸುಧಾರಣಾ ಯೋಜನೆ ಜಾರಿಗೆ ತಂದರು. ತಾವೇ ಮೊದಲುಗೊಂಡು ತಮ್ಮ ಜಮೀನನ್ನು ಭೂಮಿ ಇಲ್ಲದವರಿಗೆ ಹಂಚಿದರು. ಆದರೆ ಪ್ರಾದೇಶಿಕ ನಾಯಕನನ್ನು ಅತಿಎತ್ತರಕ್ಕೆ ಅಂದಿಗೂ, ಇಂದಿಗೂ ಬೆಳೆಯಗೊಡದ ಕಾಂಗ್ರೆಸ್ ಹೈಕಮಾಂಡ್, ನರಸಿಂಹ ರಾವ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತು.

ಪಿವಿಎನ್ ಅವರನ್ನು ಇಂದಿರಾ ದೆಹಲಿಗೆ ಕರೆಸಿಕೊಂಡರು. ಆಗ ಪಿವಿಎನ್ ತಮ್ಮ ಕಾರ್ಯವೈಖರಿಬದಲಿಸಿಕೊಂಡರು. ಇಂದಿರಾರ ಸಂಪುಟದಲ್ಲಿದ್ದಷ್ಟು ದಿನ ಅವರಿಗೆ ಎದುರಾಡಲಿಲ್ಲ. ಆದರೆ ಲೇಖನಾಮದಿಂದ ಸರ್ಕಾರದ ತಪ್ಪುಗಳನ್ನು ಟೀಕಿಸುವ, ಇಂದಿರಾರ ನಡೆಯನ್ನು ಪ್ರಶ್ನಿಸುವ ಬರವಣಿಗೆ ಚಾಲ್ತಿಯಲ್ಲಿತ್ತು.

ಅದು ಜೂನ್ 20, 1991.
ಇಂದಿರಾ ಮತ್ತು ರಾಜೀವ್ ಗಾಂಧಿ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಪಿವಿಎನ್, ರಾಜಕೀಯ ನಿವೃತ್ತಿ ಘೋಷಿಸಿ ದೆಹಲಿಯಿಂದ ಹೈದರಾಬಾದ್ ಕಡೆಗೆ ಮುಖ ಮಾಡಿದ್ದರು. ಶರದ್ ಪವಾರ್ ಮುಂದಿನ ಪ್ರಧಾನಿ ಎಂಬ ಗುಸುಗುಸು ಕೇಳಿಬರುತ್ತಿತ್ತು. ಅದೇ ದಿನ ತಡರಾತ್ರಿ ಹೊತ್ತಿಗೆ ಲೆಕ್ಕಾಚಾರಗಳು ಬದಲಾಗಿದ್ದವು. ಆಂಧ್ರದತ್ತ ಮುಖಮಾಡಿದ್ದ ಪಾಮುಲಪರ್ತಿ ವೆಂಕಟ ನರಸಿಂಹ ರಾವ್, ಪ್ರಧಾನಿ ಕಚೇರಿಯತ್ತ ಹೆಜ್ಜೆಯಿಡುವ ಸಂದರ್ಭ ಒದಗಿಬಂತು.

ರಾಜೀವ್ ಗಾಂಧಿ ಹತ್ಯೆಗೀಡಾಗಿ ತಿಂಗಳು ಕಳೆದಿತ್ತಷ್ಟೇ, ಸೋನಿಯಾರಿಗೆ ರಾಜಕೀಯದ ಸ್ವರವ್ಯಂಜನಗಳ ಅರಿವಿರಲಿಲ್ಲ. ಹಾಗಾಗಿ ಅಚಾನಕ್ಕಾಗಿ ಕಾಂಗ್ರೆಸ್ ಮುನ್ನಡೆಸುವ ಜವಾಬ್ದಾರಿ, ಅಗಾಧ ರಾಜಕೀಯ ಅನುಭವವಿದ್ದ, 70 ವರ್ಷದ, ಮೂರು ಬಾರಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ, ನರಸಿಂಹರಾಯರ ಹೆಗಲಿಗೆ ಬಿತ್ತು!

ಬಹುಶಃ ನೆಹರೂ ಕುಟುಂಬ ನಿಷ್ಠ ಕಾಂಗ್ರೆಸ್ಸಿಗರಿಗೆ, ಪಿವಿಎನ್ ಕೆಲದಿನಗಳ ಹಿಂದಷ್ಟೇ ‘ರಾಜೀವ್ ಯಾವುದೇ ಮುಂದಾಲೋಚನೆಗಳಿಲ್ಲದ, ಅಧಿಕ ಪ್ರಸಂಗಿ ರಾಜಕಾರಣಿ’ ಎಂದು ತಮ್ಮ ಲೇಖನಾಮ ಬಳಸಿ, ಲೇಖನ ಬರೆದಿದ್ದುದು ಗೊತ್ತಿರಲಿಲ್ಲ. ಗೊತ್ತಿದ್ದರೆ ಪಿವಿಎನ್ ಪ್ರಧಾನಿಯಾಗುತ್ತಿರಲಿಲ್ಲ. ಚಂದ್ರಶೇಖರ್ ಅವರ ನಂತರ, ಆಪತ್ಕಾಲದಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೆಗ ಲೇರಿಸಿಕೊಂಡ ರಾವ್, ತಡಮಾಡದೇ ರೂಪಾಯಿಯನ್ನು ಅಪಮೌಲ್ಯಗೊಳಿಸಿದರು.

ಆರ್ಥಿಕ ತಜ್ಞರ ಸಮಿತಿ ಯೊಂದನ್ನು ನೇಮಿಸಿ ಮುಂದಿಡಬೇಕಾದ ಹೆಜ್ಜೆಯನ್ನು ನಿಖರಪಡಿಸಿಕೊಂಡರು. ರಾಷ್ಟ್ರವನ್ನುದ್ದೇಶಿಸಿ ಮಾತನಾ ಡಿದರು, ‘ವಿಷಮ ವ್ಯಾಧಿಗೆ, ತೀವ್ರ ಪ್ರತಿರೋಧಕವನ್ನೇ ನೀಡಬೇಕು. ಸರ್ಕಾರದ ಖರ್ಚು ಮಿತಿಮೀರಿದೆ. There is much fat in government expenditure. This can, and will be cut’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಕುಸಿಯುತ್ತಿದ್ದ ಅರ್ಥ ವ್ಯವಸ್ಥೆಗೆ ಊರುಗೋಲು ನೀಡಲು, ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ. ಐ.ಜಿ.ಪಟೇಲ್ ಅವರನ್ನು ಸಂಪುಟಕ್ಕೆ ಆಹ್ವಾನಿಸಿದರು. ಆದರೆ ಪಟೇಲ್ ಆಸಕ್ತಿ ತೋರದಾಗ ಮನಮೋಹನ್ ಸಿಂಗ್ ವಿತ್ತ ಸಚಿವರಾದರು. ಅವರಿಗೆ ಸ್ವಾತಂತ್ರ್ಯ ನೀಡಿ, ಸಿಂಗ್ ಬೆನ್ನಿಗೆ ರಾವ್ ನಿಂತರು.

ರಾವ್ ನೇತೃತ್ವದ ಸರ್ಕಾರ ತಂದ ಸುಧಾರಣೆಗಳು ಸಾಮಾನ್ಯವಾದವಲ್ಲ. ಉದ್ದಿಮೆಗಳ ಮೇಲಿದ್ದ ಸರ್ಕಾರಿ ಹಿಡಿತ ಸಡಿಲಿಸಿದರು. ಉದ್ಯಮಶೀಲತೆಯನ್ನೇ ಬಂಧಿಸಿಟ್ಟಿದ್ದ ‘ಲೈಸೆನ್ಸ್ ರಾಜ್’ ಕಿತ್ತೆಸೆದರು. ಇಂತಿಷ್ಟೇ ಷೇರು ವಿತರಿಸಬೇಕು, ಇಷ್ಟೇ ಉತ್ಪಾದನೆ ಮಾಡಬೇಕು ಎಂಬೆಲ್ಲಾ ನಿಯಮಗಳನ್ನು ಬದಿಗೆ ಸರಿಸಿದರು.

ಸೆಬಿ ಕಾಯಿದೆ ಜಾರಿಗೊಳಿಸಿ, ಎನ್ಎಸ್ಇ ಮೂಲಕ ಷೇರು ಕೊಳ್ಳುವ, ಮಾರುವ ಪ್ರಕ್ರಿಯೆಯನ್ನು ಸುಲಭಗೊಳಿಸಿದರು. ತೆರಿಗೆ ಇಲಾಖೆಯ ಲೋಪದೋಷಗಳನ್ನು ಸರಿಪಡಿಸಿದರು. ಫಲವಾಗಿ ಕೈಗಾರಿಕಾರಂಗ ಚುರುಕಾಯಿತು, ಉತ್ಪಾದನೆ ಹೆಚ್ಚಾಯಿತು. ಸರ್ಕಾರದ ಬೊಕ್ಕಸ ತುಂಬಿತು. ಜೊತೆಗೆ ದೇಶದ ಬಾಗಿಲನ್ನು ತೆರೆದಿಟ್ಟ ಪರಿಣಾಮ, ವಿದೇಶಿ ಬಂಡವಾಳ ಹರಿದುಬಂತು.

ಈ ಕ್ರಮಗಳಿಂದಲೇ ಭಾರತ ಆರ್ಥಿಕವಾಗಿ ಚೇತರಿಸಿ ಕೊಂಡದ್ದು. ಆದರೆ ರಾವ್ ಯೋಜನೆಗಳಿಗೆ ಪ್ರತಿರೋಧ ವ್ಯಕ್ತವಾಯಿತು. ಒಂದೆಡೆ ಸ್ವತಃ ಕಾಂಗ್ರೆಸ್ಸಿಗರೇ ರಾವ್ ವಿರುದ್ಧ ಸೆಟೆದು ನಿಂತರು. ನೆಹರೂ ತತ್ವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಸಿಟ್ಟಾದರು. ಅರ್ಜುನ್ ಸಿಂಗ್, ವಯಲಾರ್ ರವಿ ಬಂಡಾಯ ಘೋಷಿಸಿದರು.

ಪಕ್ಷದೊ ಳಗಿನ ಭಿನ್ನಮತದ ವಾಸನೆ ಗ್ರಹಿಸಿದ ರಾವ್, ತಿರುಪತಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ದಿ ಟಾಸ್ಕ್ ಅಹೆಡ್’ ಎಂಬ ಮಹತ್ವದ ಭಾಷಣ ಮಾಡಿ, ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿ, ನೆಹರೂ ಪ್ರಣೀತ ಸಮಾಜವಾದದ ನಡುವಿನ ಮಧ್ಯಮ ಮಾರ್ಗದಲ್ಲಿ ನಡೆಯಬೇಕಾದ ಜರೂರಿದೆ ಎಂದು ವಿವರಿಸಿದರು. ನೆಹರೂ, ಇಂದಿರಾ, ರಾಜೀವರ ಚಿಂತನೆಗಳನ್ನು ತಾವು ಬಿಟ್ಟುಕೊಟ್ಟಿಲ್ಲ ಎಂದು ಮನವರಿಕೆ ಮಾಡಿದರು.

ಕಾಂಗ್ರೆಸ್ ಪಕ್ಷದೊಳಗಿನ ಗಾಂಧಿ ಕುಟುಂಬ ನಿಷ್ಠ ಪಡೆ, ಕೊಂಚ ತಣ್ಣಗಾಯಿತು. ಮತ್ತೊಂದೆಡೆ ಎಡಪಕ್ಷಗಳು ಖಾಸಗಿ ಉದ್ಯಮಿಗಳ ಲಾಬಿಗೆ ರಾವ್ ಮಣಿಯುತ್ತಿದ್ದಾರೆ ಎಂದು ಪ್ರತಿಭಟಿಸಿದವು. ಟೀಕೆಗೆ ಅಂಜಿ ಮನಮೋಹನ್ ಸಿಂಗ್ ರಾಜೀನಾಮೆ ಪತ್ರ ಬರೆದರು. ಟೀಕೆಯ ಕೂರಂಬುಗಳಿಗೆ ರಾವ್ ಅಡ್ಡ ನಿಂತು, ‘ಧೋರಣೆ ಬದಲಿಸುವ ಯಾವುದೇ ಆಯ್ಕೆ ಸರ್ಕಾರದ ಮುಂದಿಲ್ಲ. ಇದು ಏಕಮುಖ ರಸ್ತೆ, ಬೇರೆಲ್ಲಾ ದಿಕ್ಕಿನಲ್ಲೂ ನನಗೆ ಕೆಂಪು ದೀಪಗಳೇ ಕಾಣುತ್ತಿವೆ’ ಎಂದು ಕಡ್ಡಿಮುರಿದ ಉತ್ತರವಿತ್ತರು.

ರಾವ್ ಉದಾರೀಕರಣ, ಖಾಸಗೀಕರಣ, ಜಾಗತೀ ಕರಣದ ಉಪಾಯಗಳನ್ನು ಸಮರ್ಥವಾಗಿ ಬಳಸಿ, ದೇಶಕ್ಕೆ ಆರ್ಥಿಕ ಚೈತನ್ಯ ತುಂಬಿದ್ದಷ್ಟೇ ಅಲ್ಲ, ವಿದೇಶಾಂಗ ನೀತಿಯಲ್ಲೂ ‘ನೆಹರೂ ಪಥ’ ಬದಲಿಸಿದರು. ಇಸ್ರೇಲಿನತ್ತ ಸ್ನೇಹ ಹಸ್ತ ಚಾಚಿದರು. ‘ಲುಕ್ ಈಸ್ಟ್’ ಪಾಲಿಸಿ ತಂದು ಸಿಂಗಪುರ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳೊಂದಿಗೆ ಸಖ್ಯ ಬೆಳೆಸಿದರು. ಇದರಿಂದಾಗಿ ಬಂಡವಾಳ ಹರಿದು ಬಂದದ್ದಲ್ಲದೇ, ಉನ್ನತ ತಂತ್ರಜ್ಞಾನದ ಲಾಭಗಳು ಭಾರತಕ್ಕೆ ದೊರಕುವಂತಾಯಿತು. ಸದ್ದಿಲ್ಲದೇ ಅಣ್ವಸ್ತ್ರ ತಯಾರಿಕೆಗೂ ರಾವ್ ಚಾಲನೆ ಕೊಟ್ಟಾಗಿತ್ತು.

ರಾವ್ ಇಟ್ಟ ದಿಟ್ಟ ಹೆಜ್ಜೆಗಳಿಂದ, ದೇಶ ಕೇವಲ ದಿವಾಳಿಯಂಚಿನಿಂದ ಪಾರಾಗಿದ್ದಲ್ಲ. ಖಾಸಗೀಕರಣ ಮತ್ತು ಜಾಗತೀಕರಣಗಳ ಪರಿಣಾಮವಾಗಿ ಉದ್ಯೋಗ, ತಂತ್ರ ಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಯಿತು. ಸರ್ಕಾರಿ ನೌಕರಿಗಾಗಿ ‘ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್’ನಲ್ಲಿ ಹೆಸರು ನೋಂದಾ ಯಿಸಿ, ವರ್ಷಾನುಗಟ್ಟಲೆ ಉದ್ಯೋಗ ವಿನಿಮಯ ಕೇಂದ್ರದ ಅಂಚೆ ಪತ್ರಕ್ಕೆ ಎದುರು ನೋಡುತ್ತಾ, ಕಚೇರಿಗೆ ಅಲೆಯುತ್ತಾ ಚಪ್ಪಲಿ ಸವೆಸುತ್ತಿದ್ದ ಯುವಕರಿಗೆ, ಖಾಸಗಿ ಉದ್ಯೋಗಗಳು ಸಿಗಲಾರಂಭಿಸಿದವು.

ಹೆಚ್ಚೆಂದರೆ ನೂರು, ಸಾವಿರದಲ್ಲಿ ಮಾತನಾಡುತ್ತಿದ್ದ ಕೆಳಮಧ್ಯಮವರ್ಗ, ಲಕ್ಷಗಳನ್ನು ನೋಡುವಂತಾಯಿತು. ಮೊಬೈಲ್ ಅಗ್ಗವಾಯಿತು. ಪ್ಲಾಸ್ಟಿಕ್ ಮನಿ ಚಾಲ್ತಿಗೆ ಬಂತು. ಸಾಮಾನ್ಯರೂ ಕಾರು ಕೊಳ್ಳುವಂತಾಯಿತು. ಕಂಪ್ಯೂಟರ್ ಗಗನ ಕುಸುಮವಾಗದೇ ಹಿತ್ತಲಿನ ಜಾಜಿಯಾಯಿತು. ಇದೆಲ್ಲವೂ ಸಾಧ್ಯವಾಗಿದ್ದು ಪಿವಿಎನ್ ತೆಗೆದುಕೊಂಡ ಮಹತ್ವದ ನಿರ್ಣಯಗಳಿಂದ ಎನ್ನುವುದನ್ನು ಮರೆಯಲಾದೀತೇ?

ಆದರೆ ಇಷ್ಟೆಲ್ಲಾ ಕೊಡುಗೆಯಿತ್ತ ರಾವ್ ತೀರಿ ಕೊಂಡಾಗ, ಈ ದೇಶ ಅವರನ್ನು ಸರಿಯಾಗಿ ಗೌರವಿಸಲಿಲ್ಲ ಎನ್ನುವುದೇ ನೋವಿನ ಸಂಗತಿ. ನೆಹರೂ ಪಥದಿಂದ ಹೊರಬಂದದ್ದಕ್ಕಾಗಿ, ‘ಇನ್ಸೈಡರ್’ ಕಾದಂಬರಿಯಲ್ಲಿ ಇಂದಿರಾರನ್ನು ಟೀಕಿಸಿದ್ದಕ್ಕಾಗಿ, ಕಾಂಗ್ರೆಸ್ಸನ್ನು ವಂಶ ಪಾರಂಪರ್ಯ ರಾಜಕಾರಣದಿಂದ ಹೊರತರಲು ಪ್ರಯತ್ನಿಸಿದ್ದಕ್ಕಾಗಿ, ಪಿವಿಎನ್ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಯಲ್ಲಿಟ್ಟು, ಶ್ರದ್ಧಾಂಜಲಿ ಸಲ್ಲಿಸಲೂ ಎಐಸಿಸಿ ಸಹಕರಿಸಲಿಲ್ಲ.

ಶವಸಂಸ್ಕಾರ ಮತ್ತು ಸಮಾಧಿಗೂ ದೆಹಲಿಯಲ್ಲಿ ಅವಕಾಶವಾಗಲಿಲ್ಲ. ರಾವ್ ಸಾಧನೆಯನ್ನು ರಾಜೀವ್ ತಲೆಗೆ ಕಟ್ಟುವ ಕೆಲಸವನ್ನು ಖುದ್ದು ಸೋನಿಯಾ, ಎಐಸಿಸಿ ಅಧಿವೇಶನದಲ್ಲಿ ಮಾಡಿದರು. ದೇಶ ಒಪ್ಪದಿದ್ದಾಗ ಮನಮೋಹನ್ ಸಿಂಗ್ ಅವರೇ ‘ಬದಲಾವಣೆಯ ಹರಿಕಾರ’ ಎಂದು ಅವರನ್ನು ಮೊದಲು ಮಾಡಿದರು. ಕಾಂಗ್ರೆಸ್ ಪಕ್ಷದ ಭಿತ್ತಿ ಪತ್ರಗಳಿಂದ, ಬ್ಯಾನರುಗಳಿಂದ ರಾವ್ ಮುಖ ಸರಿದುಹೋಯಿತು.

ಪಿವಿಎನ್ ತೀರಿಕೊಂಡಾಗ, ಆಶ್ರು ಮಿಡಿದಿದ್ದ ಮನ ಮೋಹನ ಸಿಂಗ್, ‘ರಾಜಕೀಯದ ಮೊದಲ ಪಾಠಗಳನ್ನು ಅವರಿಂದ ಕಲಿತೆ, ನರಸಿಂಹರಾಯರು ನನ್ನ ತಂದೆ ಯಿದ್ದಂತೆ’ ಎಂದು ಭಾವುಕರಾಗಿದ್ದರು. ಆದರೆ ತಮ್ಮನ್ನು ರಾಜಕೀಯಕ್ಕೆ ತಂದು, ಆಸರೆಯಾಗಿ ನಿಂತ ರಾವ್ ಅವರನ್ನು ತಮ್ಮ ಪಕ್ಷವೇ ನಿರ್ಲಕ್ಷಿಸಿದಾಗ ತುಟಿ ಕದಲಿಸಲಿಲ್ಲ.

ತಾವೇ ಹತ್ತು ವರ್ಷ ಪ್ರಧಾನಿಯಾದಾಗಲೂ, ಪಿವಿಎನ್ ಹೆಸರಿನಲ್ಲಿ ಯಾವ ಮಹತ್ವದ ಯೋಜನೆಯನ್ನೂ ಘೋಷಿಸಲು ಅವರಿಗೆ ಸಾಧ್ಯವಾಗಲಿಲ್ಲ! ಬಿಡಿ, ತೀರಿಕೊಂಡ 10 ವರ್ಷ ಗಳ ತರುವಾಯವಾದರೂ ಪ್ರಸಕ್ತ ಕೇಂದ್ರ ಸರ್ಕಾರ, ಪ್ರಧಾನಿಯಾಗಿ ಪಿವಿಎನ್ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿ, ಗೌರವ ಸೂಚಕವಾಗಿ ಅವರ ಸ್ಮಾರಕವನ್ನು ದೆಹಲಿಯಲ್ಲಿ ನಿರ್ಮಿಸಲು ಮುಂದಾದದ್ದು ಪ್ರಶಂಸನೀಯ.

ಪಿವಿಎನ್ ಒಬ್ಬ ಕವಿ, ಲೇಖಕ, ‘ಚಾಣಕ್ಯ’ ಎನಿಸಿಕೊಂಡ ಚತುರ ರಾಜಕಾರಣಿ, ಚಂದ್ರಶೇಖರ್ ಅವರು ಕರೆದಂತೆ ಪವಾಡವನ್ನೇ ಮಾಡಿದ ‘ಮೌನಿ ಬಾಬಾ’. ‘ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೂ ಒಂದು ನಿರ್ಧಾರವೇ’ ಎಂಬುದು ಅವರ ಚಾಣಾಕ್ಷ ನಡೆಯಾದರೆ, ‘ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ’ ಎಂಬುದು ರಾವ್ ಬಿಟ್ಟುಹೋದ ಚತುರೋಕ್ತಿ.

‘ವಾಜಪೇಯಿ ನನ್ನ ರಾಜಕೀಯ ಗುರು’ ಎಂದಿದ್ದ ಪಿವಿಎನ್ ಬಗ್ಗೆ, ವಾಜಪೇಯಿ ‘ರಾವ್ ಗುರುವಿಗೇ ಗುರು’ ಎಂದು ಅಭಿಮಾನ ತೋರಿಸಿದ್ದು ಆ ಕಾರಣಕ್ಕಾಗಿಯೇ. ಇಂದು ಸೂಪರ್ ಪವರ್ ಆಗುವ ನಮ್ಮ ಕನಸು ಗರಿಗೆದರಿರುವಾಗ, ಆಧುನಿಕ ಭಾರತಕ್ಕೆ ಆರ್ಥಿಕ ಪುನಶ್ಚೇತನ ನೀಡಿದ ನರಸಿಂಹ ರಾಯರನ್ನು ನೆನೆಯದಿರುವುದು ಹೇಗೆ? ಅಂದಹಾಗೆ, ಮೊನ್ನೆ ಜೂನ್ 28ಕ್ಕೆ ಅವರ ಜನ್ಮದಿನವಿತ್ತು. ಮರುದಿನ ಪತ್ರಿಕೆಗಳ 10ನೇ ಪುಟದಲ್ಲಿ, ‘ಆಂಧ್ರ, ತೆಲಂಗಾಣದಲ್ಲಿ ರಾವ್ ಸ್ಮರಣೆ’ ಎಂಬ ಸಿಂಗಲ್ ಕಾಲಂ ಸುದ್ದಿ ಪ್ರಕಟವಾಯಿತು. ರಾವ್, ನೆಹರೂ ಕುಟುಂಬದವರಲ್ಲ, ಜಾತಿ ಕೇಂದ್ರಿತ ಮತಬ್ಯಾಂಕಿಗೂ ಅವರ ಹೆಸರು ಉಪಯೋಗವಿಲ್ಲ. ಅರ್ಧ ಪುಟದ ಜಾಹೀರಾತು, ಇನ್ನೆಲ್ಲಿಯ ಮಾತು?

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.