ಮೋದಿ ಬಿರುಗಾಳಿ ಮುಗಿದು ಏಳು ದಿನಗಳೂ ಕಳೆದಿರಲಿಲ್ಲ. ಕಳೆದ ಶುಕ್ರವಾರ ದಿಲ್ಲಿಯಲ್ಲಿ ಇನ್ನೊಂದು ವಿಲಕ್ಷಣ ಬಿರುಗಾಳಿ ಬಂತು. ಅದೂ ಹಿಂದಿನ ಎಲ್ಲ ದಾಖಲೆಗಳನ್ನೂ ಒರೆಸಿ ಹಾಕುವಷ್ಟು ಶಕ್ತಿಶಾಲಿಯಾಗಿತ್ತು. ಅಂದು ಅಲ್ಲಿನ ಮೋಡ ಅದೆಷ್ಟು ದಟ್ಟ ಇತ್ತೆಂದರೆ ಸಂಜೆ ಐದಕ್ಕೇ ಪೂರ್ತಿ ಕತ್ತಲು ಆವರಿಸಿತು. ಗಂಟೆಗೆ ೧೧೫ ಕಿ.ಮೀ. ವೇಗದ ಬಿರುಗಾಳಿ ಅದೆಷ್ಟು ತೀವ್ರ ಇತ್ತೆಂದರೆ ನಗರದ ೩೫೦ಕ್ಕೂ ಹೆಚ್ಚು ಮರಗಳನ್ನು ಉರುಳಿಸಿ ೯ ಜನರನ್ನು ಅದು ಬಲಿ ತೆಗೆದುಕೊಂಡಿತು. ಲೋಹದ ಕಂಬಗಳೂ ಪಲ್ಟಿ ಹೊಡೆದವು. ಮೆಟ್ರೊ ರೈಲುಗಳು ಸ್ಥಗಿತಗೊಂಡವು; ವಿಮಾನಗಳು ನಿಂತಲ್ಲೇ ನಿಂತವು. ಕಬ್ಬಿಣದ ಹೆಬ್ಬಾವುಗಳಂತಿರುವ ಮಾಮೂಲು ರೈಲುಗಳೂ ಚಲಿಸಲು ನಿರಾಕರಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದವು.

ವಿಶೇಷ ಏನೆಂದರೆ, ಬಿರುಗಾಳಿಗೆ ಮೊದಲು ‘ಕುಮುಲೊನಿಂಬಸ್ ಮಮ್ಮಾಟಸ್’ ಎಂಬ ಕುಂಭಮೇಘ ಅಂದು ದಿಲ್ಲಿಯಲ್ಲಿ ಕಾಣಿಸಿಕೊಂಡಿತ್ತು. ಈ ಮೋಡಗಳು ವಿಲಕ್ಷಣವಾಗಿರುತ್ತವೆ. ಆಕಾಶದ ತುಂಬ ಸಾವಿರಾರು ಕೆಚ್ಚಲುಗಳ ಸಾಲು ಸಾಲುಗಳನ್ನು ತೂಗುಬಿಟ್ಟಂತೆ ಕಾಣುತ್ತವೆ. ಅದಕ್ಕೆ ‘ಮಮ್ಮಾಟಸ್’ ಅಂದರೆ ಸ್ತನಾಕೃತಿಯ ಮೇಘರಚನೆ ಎನ್ನುತ್ತಾರೆ. ಮೋಡಗಳ ತಳಭಾಗದಲ್ಲಿ ಗಾಳಿ ತೀರಾ ವೇಗದಲ್ಲಿ ವೃತ್ತಾಕಾರ ಸುತ್ತುತ್ತಿದ್ದರೆ ಅಂಥ ಸಂದರ್ಭದಲ್ಲಿ ಹೀಗೆ, ಬಲೂನುಗಳನ್ನು ಸಾಲಾಗಿ ತೂಗುಬಿಟ್ಟಂಥ ಆಕೃತಿಗಳು ಗೋಚರಿಸುತ್ತವೆ. ಒಂದೊಂದು ಬಲೂನೂ ಎರಡು ಮೂರು ಕಿ.ಮೀ. ಅಗಲದ್ದಾಗಿದ್ದು ತನ್ನೊಳಗೆ ಬರ್ಫ ಮಂಜುಗಡ್ಡೆ ಅಥವಾ ಅತಿಶೀತಲ ನೀರನ್ನು ತುಂಬಿಕೊಂಡಿರುತ್ತದೆ. ವಾಯುಮಂಡಲದಲ್ಲಿ ಈ ಮೇಘರಚನೆ ೧೪ ಕಿ.ಮೀ. ಎತ್ತರದವರೆಗೂ ವಿಸ್ತರಿಸಿತ್ತೆಂದು ಹವಾಮಾನ ಇಲಾಖೆ ಮರುದಿನ ಹೇಳಿತು. ಈ ಮಮ್ಮಾಟಸ್ ಮೇಘಗಳು ಕಂಡುವೆಂದರೆ ಭಾರೀ ಬಿರುಗಾಳಿ ಬರಲಿದೆ ಎಂದೇ ಅರ್ಥ.

ಇಂಥ ವಿಚಿತ್ರ ಮೋಡವಿನ್ಯಾಸ ಸಾಮಾನ್ಯವಾಗಿ ಅಮೆರಿಕದ ಮಿಡ್‌ವೆಸ್ಟ್ ಪ್ರಾಂತಗಳಲ್ಲಿ ಕಾಣುತ್ತದೆ. ಅಲ್ಲಿ ಮಮ್ಮಾಟಸ್ ಮೇಘ ಭಾರೀ ಸುಂಟರಗಾಳಿಯ ಮುನ್ಸೂಚನೆಯನ್ನು ಕೊಟ್ಟು ಒಂದರ್ಧ ಗಂಟೆಯಲ್ಲಿ ಮತ್ತಿನ್ನೇನೇನೋ ರೂಪ ತಾಳಿ, ನೆಲದ ಮೇಲಿನ ಸಾಕಷ್ಟು ಭಾನಗಡಿಗಳಿಗೆ ಕಾರಣವಾಗುತ್ತದೆ. ಅದು ಅಲ್ಲಿ ಟಾರ್ನಾಡೊ, ಹರಿಕೇನ್ ಅಥವಾ ಟ್ವಿಸ್ಟರ್ ಹೆಸರಿನ ಪ್ರಳಯಾಂತಕ ಬಿರುಗಾಳಿಯನ್ನು ಸೃಷ್ಟಿಸುತ್ತದೆ. ದೂಳಿನ ಬುಗುರಿಯಂತೆ ತಿರುಗುತ್ತ ಸಾಗುವ ಸುಂಟರಗಾಳಿ ನೆಲದ ಮೇಲಿದ್ದ ಏನಿಲ್ಲವನ್ನೂ ಕಿತ್ತೆಬ್ಬಿಸಿ ಸುರುಳಿ ಸುರುಳಿ ಸುತ್ತಿಸಿ ಸುತ್ತೆಂಟು ದಿಕ್ಕಿಗೆ ಎಸೆಯುತ್ತ ಸಾಗುತ್ತದೆ. ಬಿಗಿಯಾಗಿ ಹಗ್ಗ ಕಟ್ಟಿರದೇ ಇದ್ದರೆ ಜಂಬೊ ವಿಮಾನಗಳನ್ನೂ ಹಾರಿಸಿಕೊಂಡು ಹೋಗುತ್ತದೆ. ಭಾರತದಲ್ಲಿ ಕಾಣುವುದೇ ಇಲ್ಲವೆನ್ನುವಷ್ಟು ಅಪರೂಪದ ಪ್ರಾಕೃತಿಕ ವಿಕೋಪ ಅದು. ಕಳೆದ ವಾರ ಅಮೆರಿಕ ಸರ್ಕಾರ ನಮ್ಮ ಮೋದಿ ಸರ್ಕಾರದತ್ತ ಮೈತ್ರಿಯ ಹಸ್ತಲಾಘವಕ್ಕೆ ಮುಂದಾಗಿದ್ದು, ಅದೇ ಸಂದರ್ಭದಲ್ಲಿ ದಿಲ್ಲಿಯಲ್ಲಿ ಮಮ್ಮಾಟಸ್ ಮೇಘ ಕಾಣಿಸಿಕೊಂಡಿದ್ದು -ಈ ಎರಡಕ್ಕೂ ಸಂಬಂಧ ಕಲ್ಪಿಸಿ ಕೆಲವರು ತಮಾಷೆ ಮಾಡಿದರು. ಇನ್ನು ಕೆಲವರು ನಮ್ಮ ದೇಶಕ್ಕೂ ಟ್ವಿಸ್ಟರ್ ಸುಂಟರಗಾಳಿ ಪದೇ ಪದೇ ದಾಳಿ ಇಡಬಹುದಾದ ಸಾಧ್ಯತೆಯನ್ನು ಕುರಿತು ಚರ್ಚಿಸಿದರು.

ಅಮೆರಿಕದ ಬರ್ಗರ್, ಅಮೆರಿಕದ ಆಪಲ್, ಅಮೆರಿಕದ ವಾಲ್‌ಮಾರ್ಟ್, ಕ್ರೋಗರ್ ಎಲ್ಲ ಬರುತ್ತಿರುವಾಗ ಅಮೆರಿಕದ ಸುಂಟರಗಾಳಿಯೂ ಏಕೆ ಇಲ್ಲಿಗೆ, ದಿಲ್ಲಿಗೆ ಬರಬಾರದು ಎಂಬ ಕುಹಕದ ಪ್ರಶ್ನೆಯನ್ನು ಕೇಳಬೇಕಾದ ಸಂದರ್ಭ ಈಗ ಬಂದಿದ್ದೇನೊ ಹೌದು. ಅಮೆರಿಕದ ಮಾದರಿಯಲ್ಲೇ ನಮ್ಮ ಸಮುದ್ರಗಳಲ್ಲೂ ಪದೇಪದೇ ಚಂಡಮಾರುತಗಳು ಬರುತ್ತಿರುವುದರಿಂದ ಅಮೆರಿಕದ ಪದ್ಧತಿಯನ್ನೇ ಅನುಸರಿಸಿ ನಾವು ಅವಕ್ಕೆಲ್ಲ ‘ಐಲಾ’, ‘ಲೆಹರ್’, ‘ಹೆಲೆನ್’ ಎಂದೆಲ್ಲ ಹೆಸರಿಟ್ಟು ಸಂಬೋಧಿಸತೊಡಗಿದ್ದೇವೆ. ಇನ್ನು, ಪಂಚಮಹಾಭೂತಗಳನ್ನೆಲ್ಲ ಒಟ್ಟಾಗಿ ಗುಡಿಸಿ ತರಬಲ್ಲ ಮಮ್ಮಾಟಸ್ ಮೋಡಗಳ ಆರ್ಭಟವನ್ನು ನೋಡುವುದು ಮಾತ್ರ ಉಳಿದಿದೆ.

ಈ ಮಧ್ಯೆ ಅಮೆರಿಕದಲ್ಲಿ ಮೊನ್ನೆ ಜೂನ್ ೨ರಂದು ವಿವಾದದ ಒಂದು ಭಾರೀ ಸುಂಟರಗಾಳಿ ಎದ್ದಿದೆ. ಕಲ್ಲಿದ್ದಲ ಹೊಗೆಯನ್ನು ಕಕ್ಕುವ ಅಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೊನೆಗೂ ಲಗಾಮು ಹಾಕಲಾಗಿದೆ. ಹೊಗೆಯನ್ನು ನಿಯಂತ್ರಿಸುವ ಬಿಗಿ ನಿಯಮಗಳನ್ನು ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದ್ದಾರೆ. ಇದು ಅಪರೂಪದ ನಿರ್ಧಾರ. ಏಕೆಂದರೆ, ಭೂಮಿಗೆ ತಗುಲಿಕೊಂಡ ನಾನಾ ಬಗೆಯ ಪರಿಸರ ಸಮಸ್ಯೆಗಳ ಬಗ್ಗೆ ಕಳೆದ ೨೫ ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ ಅಮೆರಿಕ (ಮತ್ತು ಆಸ್ಟ್ರೇಲಿಯಾ) ಎಂದೂ ಯಾವುದಕ್ಕೂ ತಲೆ ಬಿಸಿ ಮಾಡಿಕೊಂಡಿರಲಿಲ್ಲ. ಯಾವ ಒಪ್ಪಂದಕ್ಕೂ ಸಹಿ ಹಾಕುತ್ತಿರಲಿಲ್ಲ.

ಪೃಥ್ವಿಯ ಸರಾಸರಿ ಜನರಿಗಿಂತ ೨೦ ಪಟ್ಟು ಹೆಚ್ಚು ಸಂಪನ್ಮೂಲಗಳನ್ನು ಕಬಳಿಸುತ್ತ, ೨೦ ಪಟ್ಟು ಹೆಚ್ಚು ಮಾಲಿನ್ಯವನ್ನು ಕಕ್ಕುತ್ತ ನಿರುಮ್ಮಳವಾಗಿದ್ದ ಈ ದೊಡ್ಡಣ್ಣನ ಧಿಮಾಕು ಎಷ್ಟಿತ್ತೆಂದರೆ ಪರಿಸರ ರಕ್ಷಣೆಗೆಂದೇ ೧೯೯೨ರಲ್ಲಿ ರಿಯೊ ನಗರದಲ್ಲಿ ನಡೆದ ಮೊದಲ ಜಾಗತಿಕ ಶೃಂಗಸಭೆಗೆ ಅಮೆರಿಕದ ಅಧ್ಯಕ್ಷ ಜಾರ್ಜ್ (ಸೀನಿಯರ್) ಬುಷ್ ಬಂದು, ‘ನಾನು ಅಮೆರಿಕದ ಅಧ್ಯಕ್ಷನೇ ಹೊರತೂ ಜಗತ್ತಿನ ಅಧ್ಯಕ್ಷ ಅಲ್ಲ; ಅಮೆರಿಕದ ಪ್ರಜೆಗಳ ಬದುಕಿನ ಸುಖಕ್ಕೆ ಮಿತಿ ಹಾಕುವ ಯಾವ ಜಾಗತಿಕ ಒಪ್ಪಂದಕ್ಕೂ ನಾನು ಸಹಿ ಹಾಕಲಾರೆ’ ಎಂದು ಓಪನ್ನಾಗಿಯೇ ಹೇಳಿ ಹೊರಟು ಹೋಗಿದ್ದರು.

ಈ ಧಿಮಾಕನ್ನು ನಾವೆಲ್ಲ ಸಹಿಸಿಕೊಂಡಿದ್ದರೂ ಭೂಮಿ ಸಹಿಸಿಕೊಳ್ಳಬೇಕಲ್ಲ? ಕಟ್ರಿನಾದಿಂದ ಹಿಡಿದು ಈಚಿನ ಸ್ಯಾಂಡಿವರೆಗೆ ಅಲ್ಲಿ ನಾನಾ ಬಗೆಯ ಚಕ್ರಮಾರುತ, ಚಂಡಮಾರುತ, ರಣಬೇಸಿಗೆ, ಮಹಾಪ್ರವಾಹ, ಉಷ್ಣಮಾರುತ, ಭೂಕುಸಿತ, ಕಾಳ್ಗಿಚ್ಚು, ಹಿಮಪ್ರಳಯಗಳೆಲ್ಲ ಸಾಲುಸಾಲಾಗಿ ವಕ್ಕರಿಸಿ ಅಷ್ಟು ದೊಡ್ಡ ದೇಶ ಪದೇ ಪದೇ ತತ್ತರಿಸಿತು. ಯಾವ ಸರ್ಕಾರ ಬಂದರೂ ತೈಲ-ಕಲ್ಲಿದ್ದಲ ಧನಾಢ್ಯರನ್ನು, ಬೃಹತ್ ಉದ್ಯಮಗಳನ್ನು ನಿಯಂತ್ರಿಸುವುದೇ ಅಸಾಧ್ಯವೆಂಬಂಥ ಪರಿಸ್ಥಿತಿಯನ್ನು ಈ ಪ್ರಕೋಪಗಳೇ ತುಸು ತುಸುವಾಗಿ ಬದಲಾಯಿಸಿದವು. ಅದರ ಫಲವಾಗಿ ಇದೀಗ ಮೊದಲ ಬಾರಿಗೆ ಒಬಾಮಾ ಸರ್ಕಾರ ಕಲ್ಲಿದ್ದಲನ್ನು ಸುಡುವ ಉಷ್ಣವಿದ್ಯುತ್ ಸ್ಥಾವರಗಳಿಂದ ಹೊಮ್ಮುವ ಹೊಗೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸ ಹೊರಟಿದೆ.

‘ರಿಪೇರಿ ಮಾಡಲು ಸಾಧ್ಯವೇ ಇಲ್ಲದಂಥ ಭೂಗ್ರಹವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಬಿಟ್ಟು ಹೋಗಲು ನಾನು ಬಿಡಲಾರೆ’ ಎಂದು ಒಬಾಮಾ ಹೇಳಿದ್ದಾರೆ. ಹಾಗಾಗಿ ಮೊನ್ನೆ- ನಿನ್ನೆ ಅಲ್ಲಿನ ಎಲ್ಲ ಮಾಧ್ಯಮಗಳಲ್ಲೂ ಅದರದ್ದೇ ಬಿಸಿ ಬಿಸಿ ಚರ್ಚೆ. ‘ವಿದ್ಯುತ್‌ಶಕ್ತಿ ದುಬಾರಿ ಆಗಲಿದೆ’, ‘ಅಮೆರಿಕನ್ನರ ಬದುಕಿನ ವೆಚ್ಚ ಅಪಾರವಾಗಿ ಹೆಚ್ಚಲಿದೆ’ ಎಂದು ಉದ್ಯಮಪತಿಗಳು ಒಂದೆಡೆ ಹುಯಿಲೆಬ್ಬಿಸಿದರೆ ಇತ್ತ ಎಂಜಿನಿಯರ್‌ಗಳು, ವಿಜ್ಞಾನಿಗಳು, ಪರಿಸರ ತಜ್ಞರು ಹಾಗೂ ನೊಬೆಲ್ ವಿಜೇತ ರಾಜಕಾರಣಿ ಅಲ್ ಗೋರ್ನಂಥವರು ಈ ಐತಿಹಾಸಿಕ ನಿರ್ಣಯವನ್ನು ಸ್ವಾಗತಿಸಿದ್ದಾರೆ. ವಿವಾದ ಜೋರಾಗಿದೆ.

‘ಕಾರ್ಬನ್ ಉದ್ಯಮಗಳ ಬಿಗಿಮುಷ್ಟಿಯಿಂದ ಅಮೆರಿಕವನ್ನು ಬಿಡುಗಡೆ ಮಾಡಬೇಕಾದ ಕಾಲ ಬಂದಿದೆ’ ಎಂದು ಅತ್ತ ಒಬಾಮಾ ಹೇಳುತ್ತಿದ್ದಾಗ ಇತ್ತ ನಮ್ಮ ಮೋದಿ ಸರ್ಕಾರದ ಹೊಸ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಏನು ಹೇಳಿದರು ಗೊತ್ತೆ? ‘ಪರಿಸರ ಸಚಿವಾಲಯದ ಬಿಗಿಮುಷ್ಟಿಯಲಿದ್ದ ಕಡತಗಳನ್ನೆಲ್ಲ ವಿಲೇವಾರಿ ಮಾಡಿ, ಅಭಿವೃದ್ಧಿ ಯೋಜನೆಗಳ ಹೆಬ್ಬಾಗಿಲನ್ನು ಒಂದೊಂದಾಗಿ ತೆರೆಯುತ್ತೇನೆ’ ಎಂದಿದ್ದಾರೆ. ಅದರರ್ಥ ಏನೆಂದರೆ, ಕಲ್ಲಿದ್ದಲ ಗಣಿಗಾರಿಕೆಗೆ ಇನ್ನಷ್ಟು ಅರಣ್ಯಗಳು ಧ್ವಂಸವಾಗುತ್ತವೆ; ಹಿಮಾಲಯದ ಇನ್ನಷ್ಟು ನದಿಗಳಿಗೆ ಅಣೆಕಟ್ಟೆಗಳು ಬರುತ್ತವೆ; ನಿಯಮಗಿರಿಯಂಥ ಅದುರಿನ ಬೆಟ್ಟಗಳು ಇನ್ನಷ್ಟು ತ್ವರಿತವಾಗಿ ನೆಲಸಮವಾಗುತ್ತವೆ; ನದಿಜೋಡಣೆಯಂಥ ವಿಧ್ವಂಸಕ ಯೋಜನೆಗಳು ಕಡತ ಕೊಡವಿಕೊಂಡು ಮೇಲೆದ್ದು ವಿಜೃಂಭಿಸುತ್ತವೆ. ಸುಸ್ಥಿರ ಅಭಿವೃದ್ಧಿಯ ಮಾದರಿಗಳ ಬಗ್ಗೆ ಪ್ರಧಾನಿ ಮೋದಿಯವರ ನೀಲನಕ್ಷೆ ಏನೇ ಇದ್ದರೂ, ಸಚಿವಾಲಯಗಳಿಗೆ ನುಸುಳುತ್ತಿರುವ ಹೂಡಿಕೆದಾರರು ದೇಶದ ನಕ್ಷೆಯನ್ನು ಹೇಗೆ ಬದಲಿಸುತ್ತಾರೊ ಹೇಳುವಂತಿಲ್ಲ.

ಅಮೆರಿಕವೆಂಬ ರಾಷ್ಟ್ರದ ಪರಿಸರ ರಕ್ಷಣಾ ಧೋರಣೆ ಇಷ್ಟು ವರ್ಷ ಅದೆಷ್ಟೇ ಒರಟಾಗಿದ್ದರೂ ಅಲ್ಲಿನ ಕೆಲವು ರಾಜ್ಯಗಳು ಭೂಗ್ರಹದ ಸುಭದ್ರ ಭವಿಷ್ಯದತ್ತ ಬಹುದಿಟ್ಟ ಹೆಜ್ಜೆಗಳನ್ನು ಇಡುತ್ತಲೇ ಬಂದಿವೆ. ಉದಾಹರಣೆಗೆ, ಕ್ಯಾಲಿಫೋರ್ನಿಯಾ ರಾಜ್ಯ ಜಗತ್ತಿಗೇ ಮಾದರಿಯೆನಿಸುವ ಅನೇಕ ಕ್ರಮಗಳನ್ನು ಎಲ್ಲಕ್ಕಿಂತ ಮೊದಲು ಕೈಗೊಂಡಿದೆ. ಹೊಗೆ ಉಗುಳದ ಜಲಜನಕದ ಬಸ್‌ಗಳು ಮೊದಲು ರಸ್ತೆಗೆ ಇಳಿದದ್ದೇ ಅಲ್ಲಿ. ಸೌರಶಕ್ತಿ, ಗಾಳಿಶಕ್ತಿ ಯಂತ್ರಗಳು ದೊಡ್ಡ ಪ್ರಮಾಣದಲ್ಲಿ ತಲೆಯೆತ್ತಿದ್ದೇ ಅಲ್ಲಿ; ಶಕ್ತಿ ಉಳಿತಾಯದ ನಾನಾ ಬಗೆಯ ಪರಿಕರಗಳು ಮೊದಲು ಗ್ರಾಹಕರಿಗೆ ಸಿಕ್ಕಿದ್ದೇ ಅಲ್ಲಿ. ಪರಿಸರಸ್ನೇಹಿ ಉದ್ಯಮಗಳು ಲಾಭಗಳಿಸಲು ಸಾಧ್ಯವೆಂಬುದಕ್ಕೆ ಪ್ರಾತ್ಯಕ್ಷಿಕೆಗಳು ಸಿಕ್ಕಿದ್ದೇ ಅಲ್ಲಿ; ಕಾರ್ಬನ್ ಪ್ರಜ್ಞೆ ಎಂಬ ಪರಿಕಲ್ಪನೆ ಮೂಡಿದ್ದೇ ಅಲ್ಲಿ.

ಮೋದಿ ಇಂಥ ವಿಷಯಗಳಲ್ಲಿ ನಮಗೆ ಮಾದರಿಯಾಗುತ್ತಾರೊ ಬಿಡುತ್ತಾರೊ, ನಮ್ಮ ರಾಜ್ಯದ ನಾಯಕರ ಮಾದರಿಯೇ ನಮಗೆ ಮುಖ್ಯವಾಗುತ್ತದೆ. ಬೇಸರದ ಸಂಗತಿ ಏನೆಂದರೆ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ, ಇಂದಿನ ಮಕ್ಕಳ ಪಠ್ಯಗಳಲ್ಲಿ ಸೇರಿಸಲು ಯೋಗ್ಯವಾದ ಒಂದೇ ಒಂದು ಹೆಜ್ಜೆಯನ್ನೂ ನಮ್ಮ ನಾಯಕರು ಇದುವರೆಗೆ ಮೂಡಿಸಿಲ್ಲ. ಬದಲಿಗೆ ಇವರು, ಪಶ್ಚಿಮ ಘಟ್ಟಗಳ ‘ಯುನೆಸ್ಕೊ ಪರಂಪರೆಯ ಪಟ್ಟ ನಮಗೆ ಬೇಡ’ ಎಂದು ವಿಧಾನ ಸಭೆಯಲ್ಲಿ ಅವಿರೋಧ ನಿರ್ಣಯ ಕೈಗೊಂಡಿದ್ದರು.

ಇದೀಗ ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳನ್ನೂ ಸಡಿಲಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇವರಿಗೆ ದಟ್ಟ ಅರಣ್ಯಗಳಲ್ಲೇ ಗ್ರಾನೈಟ್ ಎತ್ತಬೇಕಂತೆ, ಅಲ್ಲಿನ ತೊರೆಗಳಿಂದ ಮರಳು ಸಾಗಿಸಬೇಕಂತೆ, ಕಿರುಜಲವಿದ್ಯುತ್ ಯೋಜನೆ ಅಲ್ಲೇ ಬೇಕಂತೆ. ಈ ಜನಪ್ರತಿನಿಧಿಗಳಿಗೆ ತಮ್ಮನ್ನು ಸಾಕಿ ಸಲಹುವ ಗುತ್ತಿಗೆದಾರರ ಮೇಲಿರುವ ಋಣಭಾರದ ಒಂದಂಶವಾದರೂ ಇಡೀ ಜೀವಲೋಕವನ್ನು ಸಲಹುವ ಪ್ರಕೃತಿಯ ಮೇಲೆ ಇದ್ದಿದ್ದರೆ ಇಡೀ ರಾಷ್ಟ್ರಕ್ಕೆ ಕರ್ನಾಟಕವೇ ಮಾದರಿಯಾಗಬಹುದಿತ್ತು; ಇದು ಇಂಡಿಯಾದ ಕ್ಯಾಲಿಫೋರ್ನಿಯಾ ಆಗಬಹುದಿತ್ತು.

ಇಂದು ವಿಶ್ವ ಪರಿಸರ ದಿನ. ಭೂಮಿ ಬಿಸಿಯಾಗುತ್ತಿದೆ, ಋತುಮಾನಗಳು ಏರುಪೇರಾಗುತ್ತಿವೆ. ಮುಂಗಾರಿಗೆ ಮೊದಲೇ ದಾಖಲೆ ಸಂಖ್ಯೆಯ ಜನರು ಸಿಡಿಲಿಗೆ ಬಲಿಯಾಗಿದ್ದಾರೆ, ಲಕ್ಷಾಂತರ ಹೆಕ್ಟೇರ್ ಕೃಷಿಫಸಲುಗಳು ನೆಲಕಚ್ಚಿವೆ. ಫೆಬ್ರುವರಿಯ ಅನಿರೀಕ್ಷಿತ ಜಡಿಮಳೆಗೆ ಬಳ್ಳಾರಿಯ ಎ.ಪಿ.ಎಮ್.ಸಿ.ಯಲ್ಲಿ ಸಾವಿರಾರು ಟನ್ ಮುಸುಕಿನ ಜೋಳ ನೀರುಪಾಲಾಗಿದೆ. ಅಂಟಾರ್ಕ್ಟಿಕಾ ಖಂಡದ ಹಿಮದ ಹಾಸುಗಳು ಬಹುದೊಡ್ಡ ಪ್ರಮಾಣದಲ್ಲಿ ನೀರುಪಾಲಾಗುತ್ತಿವೆ. ವಾಯುಮಂಡಲದ ಕಾರ್ಬನ್ನನ್ನು ಹೀರಿ ತೆಗೆಯಬಲ್ಲ ಹೊಸ ಉಪಾಯ ಗೊತ್ತಾದರೆ ಮಾತ್ರ ಸುಸ್ಥಿರ ಭವಿಷ್ಯ ಸಾಧ್ಯವೆಂದು ಐಪಿಸಿಸಿ ಹೇಳಿದೆ. ಸಮುದ್ರ ಮಟ್ಟ ಎಲ್ಲೆಡೆ ಏರುತ್ತಿದೆ. ಈ ದುರ್ಭರ ಪರಿಸ್ಥಿತಿಯಲ್ಲಿ ಭೂಮಿಯ ದುಃಸ್ಥಿತಿ ಕುರಿತು ನಿರ್ಭಯವಾಗಿ ಮಾತಾಡಿರೆಂದು ‘ಯುನೆಸ್ಕೊ’ ಕರೆಕೊಟ್ಟಿದೆ. ‘ನಿಮ್ಮ ದನಿಯನ್ನು ಎತ್ತರಿಸಿ, ಸಮುದ್ರದ ಮಟ್ಟವನ್ನಲ್ಲ’ ಎಂಬ ಘೋಷವಾಕ್ಯದೊಂದಿಗೆ ಭೂಗ್ರಹದ ೧೯೦ ದೇಶಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು ಆಯೋಜಿತವಾಗಿವೆ. ನಾವೂ ಭಾಗಿಯಾಗೋಣವೆಂದು ನಮ್ಮ ಯಾವೊಬ್ಬ ಜನ ನಾಯಕನಾದರೂ ಕರೆ ಕೊಟ್ಟಿದ್ದುಂಟೆ?

ಭೂಮಿಯನ್ನು ಹೋಲುವ, ಆದರೆ ಭೂಮಿಗಿಂತ ೧೭ ಪಟ್ಟು ತೂಕವುಳ್ಳ ‘ಕೆಪ್ಲರ್ ಟೆನ್.ಸಿ’ ಎಂಬ ಗ್ರಹ ಹೊಸದಾಗಿ ಪತ್ತೆಯಾದ ಬಗ್ಗೆ ನಿನ್ನೆಯ ‘ಪ್ರಜಾವಾಣಿ’ ಮುಖಪುಟದಲ್ಲಿ ನೋಡಿದ ಓದುಗರೊಬ್ಬರು ಈ ದಿನ ಈ ಅಂಕಣದಲ್ಲಿ ಅದರದ್ದೇ ಚರ್ಚೆಯಾಗಬೇಕೆಂದು ಸೂಚಿಸಿದ್ದರು. ಏನು ಪ್ರಯೋಜನ? ಬೆಳಕಿನ ವೇಗದಲ್ಲಿ (ಸೆಕೆಂಡಿಗೆ ಮೂರು ಲಕ್ಷ ಕಿ.ಮೀ. ವೇಗದಲ್ಲಿ) ನಿರಂತರ ಧಾವಿಸುತ್ತಿದ್ದರೆ ಆ ಗ್ರಹವನ್ನು ತಲುಪಲು ೫೬೦ ವರ್ಷಗಳು ಬೇಕು. ಇಂದು ಇಲ್ಲಿಂದ ಒಂದು ಕ್ಯಾಮರಾವನ್ನು ಕಳಿಸಿ ಟೆನ್.ಸಿ ಗ್ರಹದ ಚಿತ್ರವನ್ನು ತರಿಸಬೇಕೆಂದರೆ ಕನಿಷ್ಠ ೧೧೨೦ ವರ್ಷ ಬೇಕು. ತಾಜಾ ಚಿತ್ರ ಪಡೆಯಲು ಸಾಧ್ಯವೇ ಇಲ್ಲ. ನಾವು ಅಲ್ಲಿಗೆ ಹೋಗಿ ನೆಲೆಯೂರುವುದಂತೂ ಆಗಹೋಗದ ಮಾತು. ಅದರ ಬದಲು ನಮಗೆ ನೆಲೆ ನೀಡಿರುವ ಈ ಭೂಮಿಯನ್ನೇ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳೋಣ. ಆಗದೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.