ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರದಲ್ಲಿ ಮೋದಿ ಅಭಿವೃದ್ಧಿ ಮಂತ್ರ ಫಲಿಸುವುದೇ?

Published : 4 ಮೇ 2014, 19:30 IST
ಫಾಲೋ ಮಾಡಿ
Comments

ಉತ್ತರ ಪ್ರದೇಶ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯ ತೀರ್ಮಾನಿಸಲು ಹೊರಟಿದೆ. ಒಟ್ಟು 80 ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ದೊಡ್ಡ ರಾಜ್ಯದಲ್ಲಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಪ್ರಯತ್ನಿ­ಸು­ತ್ತಿದೆ. 50ರ ಗಡಿ ದಾಟದ ಹೊರತು ಬಿಜೆಪಿ, ಅದರ ಮಿತ್ರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ.  ‘ಈ ರಾಜ್ಯದಲ್ಲಿ ಹೆಚ್ಚು ಸ್ಥಾನ­ಗ­ಳನ್ನು ಗೆಲ್ಲುವ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂಬ ನಂಬಿಕೆ ಒಂದು ಕಾಲಕ್ಕಿತ್ತು. ಹಿಂದಿನ ಕೆಲವು ಚುನಾ­ವಣೆಗಳು ಇದನ್ನು ಹುಸಿಗೊಳಿಸಿವೆ. 2009ರ ಚುನಾವಣೆಯಲ್ಲಿ ಕೇವಲ 21 ಸ್ಥಾನ­ಗಳನ್ನು ಪಡೆದ ಕಾಂಗ್ರೆಸ್‌ 14 ಪಕ್ಷಗಳ ಬೆಂಬಲ­ದೊಂದಿಗೆ ಸರ್ಕಾರ ಮಾಡಿದೆ.

ಬಿಜೆಪಿ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಏಕೆಂದರೆ ಅದಕ್ಕೆ ಎಲ್ಲ ರಾಜ್ಯಗಳಲ್ಲೂ ರಾಜ­ಕೀಯ ನೆಲೆ ಇಲ್ಲ. ಹೀಗಾಗಿ ನೆಲೆ ಇರುವ ಉತ್ತರ ಪ್ರದೇಶ, ದೆಹಲಿ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ­ಗಡ, ಬಿಹಾರ,  ಕರ್ನಾಟಕದಲ್ಲಿ ಹೆಚ್ಚು ಸ್ಥಾನ­ಗಳನ್ನು ಪಡೆ­­ದರೆ ದೆಹಲಿ ಗದ್ದುಗೆ ಹಿಡಿಯ­ಬಹುದು. ಅದಾಗದಿದ್ದರೆ ಬಿಜೆಪಿ ಕನಸು ಛಿದ್ರ­ವಾ­ಗುತ್ತದೆ. ನರೇಂದ್ರ ಮೋದಿ ಇದೇ ಕಾರಣಕ್ಕೆ 6 ತಿಂಗಳ ಮೊದಲೇ ತಮ್ಮ ‘ನಿಷ್ಠಾವಂತ ಬಂಟ’ ಅಮಿತ್‌ ಷಾ ಅವರನ್ನು ಉತ್ತರಪ್ರದೇಶಕ್ಕೆ ಕಳು­ಹಿ­ಸಿದ್ದು. ಷಾ ತಮಗೆ ವಹಿಸಿರುವ ಜವಾಬ್ದಾರಿ­ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಸಲ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹು­ದೆಂದು ಮಾಧ್ಯಮ ಸಮೀಕ್ಷೆಗಳು ಹೇಳುವ ಹಂತಕ್ಕೆ ಪಕ್ಷ ಬೆಳೆದು ನಿಂತಿದೆ ಎನ್ನುವುದು ಬಿಜೆಪಿ ನಾಯಕರ ವಾದ. ಮೋದಿ ವಾರಾಣಸಿಗೆ ಬಂದಿ­ರು­­ವುದರ ಹಿಂದೆ ಇದೇ ರೀತಿ ರಾಜಕೀಯ ಲೆಕ್ಕಾ­ಚಾರ­ವಿದೆ. ಒಂದೆಡೆ ಹಿಂದೂ ಮತಗಳನ್ನು ಒಗ್ಗೂ­ಡಿ­ಸುವುದು. ಇನ್ನೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ­ಗಳು ಗೆಲ್ಲುವಂತೆ ನೋಡಿ­ಕೊಳ್ಳು­ವುದು ಮೋದಿ ಸ್ಪರ್ಧೆ ಉದ್ದೇಶ.

ಹಿಂದೂ ಮತಗಳನ್ನು ಒಗ್ಗೂಡಿಸುವುದರಲ್ಲಿ ‘ಮುಜಾಫ್ಫರ್‌ ನಗರದ ಕೋಮು ಗಲಭೆ ಬಿಜೆಪಿಗೆ ದೊಡ್ಡ ವರ. ಅದೊಂದು ರೀತಿ ಬಯ­ಸದೇ ಬಂದ ಭಾಗ್ಯ. ಗಲಭೆ ಬಳಿಕ ಹಿಂದೂಗಳು ಒಗ್ಗೂ­ಡಿದ್ದಾರೆ. ಅದರಲ್ಲೂ ಮೇಲ್ಜಾತಿಗಳು, ಹಿಂದು­­ಳಿದ ವರ್ಗಗಳು ಬಿಜೆಪಿ ಬೆಂಬಲಿಸಿವೆ’ ಎಂದು ಆ ಪಕ್ಷದ ಮುಖಂಡರು ನಂಬಿದ್ದಾರೆ. ದಲಿತರ ಕೇರಿಗೂ ಬಿಜೆಪಿ ಪ್ರವೇಶಿಸಿದೆ. ಹಿಂದೂ ಧರ್ಮದ ಬಗ್ಗೆ ಪ್ರವಚನ ನೀಡಿದೆ. ದಲಿತರು ಮತ್ತು ಹಿಂದುಳಿದವರ ಬೆಂಬಲಕ್ಕೆ ಮೋದಿ ಬಣ ಮುಂದಾ­­ಗಿರುವುದು ಮಾಯಾವತಿ ಮತ್ತು ಮುಲಾಯಂ ಆತಂಕಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಮತದಾರರನ್ನು ಸೆಳೆ­ಯಲು ಬಿಜೆಪಿ ಎಲ್ಲ ‘ಪ್ರಬಲ ಅಸ್ತ್ರ’ಗಳನ್ನು ಬಳಸು­ತ್ತಿದೆ. ‘ಗುಜರಾತ್‌ ಅಭಿವೃದ್ಧಿ ಮಂತ್ರ’ ಪಠಿ­ಸಿದೆ. ಮೋದಿ ಸರ್ಕಾರ ಬಂದರೆ, ಉತ್ತರ ಪ್ರದೇಶವೂ ಗುಜರಾತಿನಂತೆ ಅಭಿವೃದ್ಧಿ ಆಗಲಿದೆ ಎಂಬ ಭ್ರಮೆ ಹುಟ್ಟಿಸಿದೆ. ಜಾತಿ ಆಧಾರದ ಮೇಲೇ ಚುನಾವಣೆ ನಡೆಯುವ ರಾಜ್ಯದಲ್ಲಿ ಇದು ಎಷ್ಟರ ಮಟ್ಟಿಗೆ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳುವುದು ಕಷ್ಟ. ಆದರೆ, ಉತ್ತರ ಪ್ರದೇಶ­ದಲ್ಲಿ ಕೆಲವರಾ­ದರೂ ಗುಜರಾತ್‌ ಪ್ರಗತಿ ಕುರಿತು ಮಾತನಾಡುತ್ತಿದ್ದಾರೆ.

ಗುಜರಾತ್‌ ಅಭಿವೃದ್ಧಿ ಕುರಿತು ಎರಡೂ ಬಗೆ ಅಭಿಪ್ರಾಯವಿದೆ. ಆ ರಾಜ್ಯ ನಿಜಕ್ಕೂ ಅಭಿವೃದ್ಧಿ ಆಗಿದೆಯೇ? ಜನರ ಜೀವನ ಮಟ್ಟ ಸುಧಾರಣೆ ಆಗಿದೆಯೇ? ಎನ್ನುವುದು ಚರ್ಚೆ ಆಗಬೇಕಾದ ವಿಷಯ. ಒಮ್ಮೆ ಚುನಾವಣಾ ಆಯೋಗವೇ ಅಪೌ­ಷ್ಟಿ­ಕತೆ ಹಾಗೂ ರಕ್ತ ಹೀನತೆಯಿಂದ ಬಳಲು­ತ್ತಿರುವ ಮಕ್ಕಳ ಸಂಖ್ಯೆ ಉತ್ತರ ಪ್ರದೇಶ­ಕ್ಕಿಂತಲೂ ಗುಜರಾತಿನಲ್ಲೇ ಹೆಚ್ಚು ಎಂದು ಹೇಳಿದೆ.

‘ಮೋದಿ ರಾಜ್ಯ’ದಲ್ಲಿ ಬಡವರು, ದಲಿತರು ಮತ್ತು ಆದಿವಾಸಿಗಳ ಜೀವನ ಸುಧಾರಣೆ ಆಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಉತ್ತರ ಪ್ರದೇಶ ಹಿಂದುಳಿದಿದೆ ಎನ್ನುವುದು ಅಷ್ಟೇ ಸತ್ಯ. ಅದು ಎಷ್ಟರ ಮಟ್ಟಿಗೆ ಎನ್ನುವುದನ್ನು ಕಣ್ಣಾರೆ ನೋಡ­ಬೇಕು. ಈ ಕಾರಣಕ್ಕೆ ಜನ ಮೋದಿ ಅವರ ಗುಜ­ರಾತ್‌್ ಕಡೆ ನೋಡುತ್ತಿರುವುದು. ರಾಜ­ಕೀಯ­­ವಾಗಿ ಪ್ರಬಲವಾಗಿರುವ ರಾಜ್ಯವೊಂದು ಹೇಗೆ ಇಷ್ಟೊಂದು ಹಿಂದುಳಿಯಿತು. ಮೊದಲ ಪ್ರಧಾನಿ ಜವಾಹರಲಾಲ್‌ ಅವರಿಂದ ಹಿಡಿದು ವಾಜ­ಪೇಯಿ­­­ವರೆಗೆ ಎಷ್ಟು ಪ್ರಧಾನ ಮಂತ್ರಿ­­ಗಳನ್ನು ಉತ್ತರ ಪ್ರದೇಶ ಕಂಡಿದೆ.

ಇಲ್ಲಿಂದ ಗೆದ್ದು ಹೋದ ರಾಜಕೀಯ ಘಟಾನುಘಟಿಗಳು ರಾಜ್ಯ­ವನ್ನು ಮರೆತಿದ್ದು ಏಕೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ.
ದೇಶದ ಜನಸಂಖ್ಯೆ ಈಗ 125ಕೋಟಿ. ಉತ್ತರ ಪ್ರದೇಶವೊಂದೇ ಸುಮಾರು 20ಕೋಟಿ ಜನ­ಸಂಖ್ಯೆ ಹೊಂದಿದೆ. ‘ಈ ದೊಡ್ಡ ರಾಜ್ಯವನ್ನು ಹೋಳು ಮಾಡುವುದೊಂದೇ ಸಮಸ್ಯೆಗೆ ಪರಿ­ಹಾರ’ ಎಂದು ವಾದಿಸುವವರಿದ್ದಾರೆ. ‘ಆಂಧ್ರ ವಿಭ­ಜನೆ ಮಾಡಿದ ಯುಪಿಎಗೆ ಉತ್ತರ ಪ್ರದೇಶ ಯಾಕೆ ಕಾಣಲಿಲ್ಲ?’ ಎಂದು ಟೀಕಿಸು­ವವ­ರಿದ್ದಾರೆ.

‘ರಾಜ್ಯ ವಿಭಜನೆಯಿಂದ ಅಭಿವೃದ್ಧಿ ಸಾಧ್ಯ­­ವಾಗುವುದಾದರೆ ಜಾರ್ಖಂಡ್‌, ಉತ್ತರಾ­ಖಂಡ ಏಕೆ ಇನ್ನು ಅಭಿವೃದ್ಧಿ ಆಗಿಲ್ಲ’ ಎಂದೂ ಕೇಳು­ವವರಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರ ರಾಜ್ಯವನ್ನು 4 ಭಾಗಗಳಾಗಿ ವಿಂಗಡಿ­ಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾ­ರಕ್ಕೆ ಕಳುಹಿ­ಸಿತ್ತು. ಕೇಂದ್ರ ಅದನ್ನು ಒಪ್ಪ­ಲಿಲ್ಲ. ಉದ್ದೇಶಿತ 4 ರಾಜ್ಯಗಳ ರಾಜಧಾನಿ ಮತ್ತು ಗಡಿ­ಗಳಿಗೆ ಸಂಬಂ­ಧಿಸಿದಂತೆ ಕೆಲವು ಸ್ಪಷ್ಟನೆ­ಗಳನ್ನು ಕೇಳಿ ಪ್ರಸ್ತಾವನೆ ಹಿಂದಕ್ಕೆ ಕಳುಹಿಸಿದೆ. ಬಿಎಸ್‌ಪಿ ಸರ್ಕಾರ ಪತನದ ಬಳಿಕ ಪ್ರಸ್ತಾವನೆ ಮೂಲೆ ಸೇರಿದೆ. ಮುಂದೆ ಅದಕ್ಕೆ ಚಾಲನೆ ಸಿಕ್ಕರೂ ಸಿಗಬಹುದು.

ಉತ್ತರ ಪ್ರದೇಶದಲ್ಲಿ ಗಂಗಾ ಮತ್ತು ಯಮುನಾ ನದಿಗಳು ಹರಿದರೂ ನೀರಿಗೆ ಹಾಹಾ­ಕಾರ. ರಾಜ್ಯದ ಬಹಳಷ್ಟು ನಗರಗಳು ಮತ್ತು ಪಟ್ಟಣ­ಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿ­ಸುತ್ತಿವೆ. ‘ತಾಜ್‌ಮಹಲ್’ ನಗರ ಆಗ್ರಾ­ವನ್ನು ಸಮಸ್ಯೆ ಬಿಟ್ಟಿಲ್ಲ. ಇದರಿಂದಾಗಿ ಪ್ರವಾಸೋ­ದ್ಯಮ ಸೊರಗುತ್ತಿದೆ. 2012ರಲ್ಲಿ ಉತ್ತರ ಪ್ರದೇಶಕ್ಕೆ 1.70ಕೋಟಿ ಸ್ವದೇಶಿ ಮತ್ತು 20 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಫಲ­ವ­ತ್ತಾದ ಭೂಮಿ ಇದ್ದರೂ ಕೃಷಿಯಲ್ಲಿ ಹಿಂದು­ಳಿ­ದಿದೆ. ಕೃಷಿ ಉತ್ಪನ್ನಗಳ ಇಳುವರಿ ಪಂಜಾಬ್‌, ಹರಿಯಾಣಗಳಿಗಿಂತ ಕಡಿಮೆಯಿದೆ. ಅತಿವೃಷ್ಟಿ– ಅನಾ­­ವೃಷ್ಟಿಗಳ ನಡುವೆ ಸಿಕ್ಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅತೀ ಹಿಂದುಳಿದಿರುವ ಬುಂದೇಲ್‌ ಖಂಡದಲ್ಲಿ ಎಂಟು ವರ್ಷದಲ್ಲಿ ಸುಮಾರು ಎರಡು ಸಾವಿರ ರೈತರು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆಂದು ರೈತ ಸಂಘಟನೆಗಳು ಹೇಳುತ್ತವೆ.

ಗಂಗಾ ಮತ್ತು ಯಮುನಾ ಮಾಲಿನ್ಯವೂ ಉತ್ತರ ಪ್ರದೇಶ ಸರ್ಕಾರಕ್ಕೆ ದೊಡ್ಡ ತಲೆನೋವು. ಇದು ಸುಲಭವಾಗಿ ಬಗೆಹರಿಯುವ ಸಮಸ್ಯೆ­­­ಯಲ್ಲ. ಎರಡೂ ನದಿಗಳು ಯಾವ ಪ್ರಮಾಣ­ದಲ್ಲಿ ಮಲೀನವಾಗುತ್ತಿದೆ ಎನ್ನುವುದನ್ನು ಪದ­ಗ­ಳಲ್ಲಿ ಹೇಳುವುದು ಕಷ್ಟ. ಅಲಹಾಬಾದ್‌ ಮತ್ತು ವಾರಾಣಸಿಯಲ್ಲಿ ಗಂಗೆಯ ಒಡಲು ಮಲಿನ ಆಗಿರುವುದನ್ನು ನೋಡಿಬಿಟ್ಟರೆ ಯಾರೂ ನೀರಿಗೆ ಇಳಿಯುವುದಿಲ್ಲ.

ನಿರಂತರ ವಿದ್ಯುತ್‌ ಸಮಸ್ಯೆ ಉತ್ತರ ಪ್ರದೇಶ­ವನ್ನು ಕಾಡುತ್ತಿದೆ. ರಾಜ್ಯದ ಯಾವುದೇ ನಗರ, ಯಾವುದೇ ಪಟ್ಟಣಗಳಿಗೆ ಹೋದರೂ ಜನ ಸಾಮಾನ್ಯವಾಗಿ ಹೇಳುವುದು ನೀರು, ಲೈಟು ಹಾಗೂ ರಸ್ತೆಗಳಿಲ್ಲ ಎನ್ನುವ ದೂರುಗಳನ್ನು. ಬಹು­­ತೇಕ ಎಲ್ಲ ರಾಜ್ಯಗಳು ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ಇದು ಹೆಚ್ಚೆಂದೇ ಹೇಳಬೇಕು. ದಿನಕ್ಕೆ 8ರಿಂದ 16 ಗಂಟೆ ವಿದ್ಯುತ್‌ ಕಡಿತ­ವಾದರೆ ಜನ ಬದುಕು­ವು­ದಾ­ದರೂ ಹೇಗೆ. ರಾಜ್ಯದ ವಿದ್ಯುತ್‌ ಬೇಡಿಕೆ ಸುಮಾರು 9 ಸಾವಿರ ಮೆ. ವ್ಯಾ. ಪೂರೈಕೆ ಆಗು­ತ್ತಿ­ರು­ವುದು ಐದು ಸಾವಿರ ಮೆ.ವ್ಯಾ. ಉಳಿದ ವಿದ್ಯುತ್‌ ಹೊಂದಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲು. ವಿದ್ಯುತ್‌ ಸಮಸ್ಯೆಯಿಂದಾಗಿ ಮೂರ್ನಾಲ್ಕು ವರ್ಷದಿಂದ ಅರ್ಧದಷ್ಟು ಕಾರ್ಖಾನೆಗಳು ಮುಚ್ಚಿವೆ.

ಏಳು ಸಾವಿರ ಮೆ.ವ್ಯಾ  ಮತ್ತು 1,500 ಮೆ. ವ್ಯಾ. ಉಷ್ಣ ವಿದ್ಯುತ್‌ ಸ್ಥಾವರ ಯೋಜನೆಗಳು ‘ಬಾಲಗ್ರಹ’ಕ್ಕೆ ಗುರಿ­ಯಾಗಿವೆ. ಕಲ್ಲಿ­ದ್ದಲು ಅಲಭ್ಯತೆಯಿಂದ ಕಾರ್ಯಾ­ರಂಭ ಮಾಡಿಲ್ಲ. 2012ರ ಏಪ್ರಿಲ್‌ ಬಳಿಕ ಉದ್ಯಮ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿ­ಕೊಳ್ಳ­ಲಾಗಿದೆ. ಕಳೆದ ವರ್ಷ ₨22ಸಾವಿರ ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಬಂದಿವೆ. ಉತ್ತರ ಪ್ರದೇಶ ಸರ್ಕಾರ, ಲಖನೌ­ದಲ್ಲಿ ‘ಮಾಹಿ­ತಿ ತಂತ್ರಜ್ಞಾನ ಪಾರ್ಕ್‌’ ಸ್ಥಾಪನೆ ಉದ್ದೇಶ ಹೊಂದಿದೆ. ಇವೆಲ್ಲ ಉದ್ಯಮಗಳಿಗೂ ಹೇಗೆ ವಿದ್ಯುತ್‌ ಪೂರೈಕೆಯಾಗ­ಲಿದೆ ಎನ್ನುವುದು ದೊಡ್ಡ ಪ್ರಶ್ನೆ.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳು, ಮಹಾನಗರ ಹಾಗೂ ಪಟ್ಟಣಗಳ ಒಳ­­ರಸ್ತೆಗಳ ಅವ್ಯವಸ್ಥೆ ಕುರಿತು ಹೇಳದಿರುವುದೇ ಒಳ್ಳೆಯದು. ಎಲ್ಲಿಗೆ ಹೋದರೂ ರಸ್ತೆಗಳು ಎಲ್ಲಿವೆ ಎಂದು ಹುಡುಕಬೇಕು. ಉದಾಹರಣೆಗೆ ಹೇಳು­­ವು­ದಾದರೆ ಫೂಲ್‌ಪುರ ಜವಾಹರಲಾಲ್‌ ನೆಹರು ಪ್ರತಿನಿಧಿಸಿದ್ದ ಕ್ಷೇತ್ರ. ಅಲ್ಲಿಂದ ಜಾನ್‌ ಪುರದ ಮೂಲಕ ಹಾದು ಅವರ ಮರಿ ಮೊಮ್ಮ­ಕ್ಕಳು ಸ್ಪರ್ಧಿಸಿರುವ ಸುಲ್ತಾನ್‌ಪುರ ಮತ್ತು ಅಮೇ­ಠಿಗೆ ಹೋಗಬೇಕಾದರೆ ಹರಸಾಹಸ ಪಡ­ಬೇಕು. ಸುಮಾರು 60ಕಿ.ಮೀ ರಸ್ತೆ ಹಳ್ಳ­ಕೊ­ಳ್ಳದ ಪ್ರಯಾಣ. ವಾಹನಗಳು ಎತ್ತಿಹಾಕುವ ರಭ­ಸಕ್ಕೆ ಬೆನ್ನು ನೋವು ಬಂದುಬಿಡುತ್ತದೆ. ಅನೇಕ ಕಡೆ ರಸ್ತೆಗಳಿಲ್ಲದಿದ್ದರೂ ‘ಟೋಲ್‌’ ಸಂಗ್ರಹ ಮಾಡ­ಲಾ­­­ಗುತ್ತದೆ. ಉತ್ತರ ಪ್ರದೇಶ­ದಲ್ಲಿ ಮೂಲ ಸೌಲ­ಭ್ಯ ಅಭಿವೃದ್ಧಿಗೆ ಸಂಪನ್ಮೂಲ ಒದ­ಗಿ­ಸುವುದು ಹೇಗೆಂದು ಯಾರಾದರೂ ಗಂಭೀರ­ವಾಗಿ ಚಿಂತಿಸಿ­ದರೆ, ಬಹುಶಃ ಗಾಬರಿ ಆಗಬಿಡಬಹುದೇನೋ?

ಕೇಂದ್ರ ಯೋಜನಾ ಆಯೋಗವೇ ಹೇಳಿ­ರು­ವಂತೆ ಉತ್ತರ ಪ್ರದೇಶ ವಿದ್ಯುತ್‌, ರಸ್ತೆ, ಸಂಪರ್ಕ ಹಾಗೂ ಬ್ಯಾಂಕಿಂಗ್‌ ವಲಯದಲ್ಲಿ ಬೇರೆ ರಾಜ್ಯ­ಗಳಿ­­ಗಿಂತ ಹಿಂದುಳಿದಿದೆ. ರಾಜ್ಯದ ಶೇ. 32ರಷ್ಟು ಹಳ್ಳಿ­ಗಳು ಮಾತ್ರ ವಿದ್ಯುತ್‌ ಸಂಪರ್ಕ ಪಡೆದಿವೆ. ಹಳ್ಳಿಗಳಿಗೆ ವಿದ್ಯುತ್‌ ಒದಗಿಸಿರುವ ರಾಷ್ಟ್ರದ ಸರಾ­ಸರಿ ಶೇ.84 ಉತ್ತರ ಪ್ರದೇಶ ಹಿಂದುಳಿದಿದೆ ಎಂದು ಹೇಳುವುದಕ್ಕೆ ಮತ್ಯಾವ ಮಾನದಂಡ ಬೇಕು.
ಉತ್ತರ ಪ್ರದೇಶ ಸಾಕ್ಷರತೆ ಪ್ರಮಾಣ ಸಿಕ್ಕಾ­ಪಟ್ಟೆ ಕಡಿಮೆ ಇದೆ. ಶಾಲಾ– ಕಾಲೇಜು, ವೈದ್ಯ ಶಿಕ್ಷಣ, ಎಂಜಿನಿಯರಿಂಗ್‌ ಕಾಲೇಜುಗಳ ಕೊರತೆ ಇದೆ. ರಾಹುಲ್‌ ಗಾಂಧಿ ಪ್ರತಿನಿಧಿಸಿರುವ ಅಮೇಠಿ­­ಯಲ್ಲೇ ಒಂದು ಒಳ್ಳೆ ಪದವಿ ಕಾಲೇ­ಜಿಲ್ಲ. ತಮ್ಮ ಕ್ಷೇತ್ರದ ಯುವಕರ ಭವಿಷ್ಯದ ಬಗ್ಗೆ ಚಿಂತಿ­ಸದ ರಾಹುಲ್‌, ಇಡೀ ದೇಶದ ಯುವಕರ ಭವಿಷ್ಯ ರೂಪಿಸುವುದಾಗಿ ಹೇಳುತ್ತಿರುವುದು ದೊಡ್ಡ ವಿಪರ್ಯಾಸ.

ಶಿಕ್ಷಣದ ವಿಷಯಕ್ಕೆ ಬಂದಾಗ ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗುಜ­ರಾತ್‌ ಹಾಗೂ ಪಂಜಾಬ್‌ ಸಾಕಷ್ಟು ಮುಂದಿವೆ. ಉತ್ತರ ಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಮಕ್ಕಳಿಗೆ 20 ಮಾಧ್ಯಮಿಕ, 60 ಪ್ರಾಥಮಿಕ ಶಾಲೆಗಳಿವೆ ಎಂದು ಯೋಜನಾ ಆಯೋಗ ಅಂಕಿಸಂಖ್ಯೆ ನೀಡಿದೆ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದ ಜಿಡಿಪಿ, ತಲಾ ಆದಾಯವೂ ಕಡಿಮೆ ಇದೆ. ಮತೀಯ ಗಲಭೆ, ಧಾರ್ಮಿಕ ಸಂಘ­ರ್ಷ­ಗಳು ಉತ್ತರ ಪ್ರದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಬೆದರಿಕೆ ಆಗಿದೆ ಎನ್ನುವುದು ಯೋಜನಾ ಆಯೋಗದ ವಿಶ್ಲೇಷಣೆ.
ಉತ್ತರ ಪ್ರದೇಶದ ಈ ಪರಿಸ್ಥಿತಿಗೆ ಯಾರನ್ನು ದೂರಬೇಕು.

ಇದರಲ್ಲಿ ಯಾರೊಬ್ಬರ ಪಾತ್ರ­ವಿದೆ ಎಂದು ಬೆರಳು ತೋರಿಸಬೇಕು....ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತ್ರ ಉತ್ತರ ಪ್ರದೇಶದ ಪ್ರಚಾರ ಸಭೆಗಳಲ್ಲಿ ‘ಗುಜರಾತ್‌ ಅಭಿವೃದ್ಧಿ ಯಶೋಗಾಥೆ’ ಹೇಳು­ತ್ತಿದ್ದಾರೆ. ಅವರ ಮಾತನ್ನು ಮತದಾರರು ತದೇಕ­­ಚಿತ್ತವಾಗಿ ಕೇಳುತ್ತಿದ್ದಾರೆ. ‘ನೀವು ಗುಜ­ರಾತ್‌­ಗೆ ಹೋಗಿ ಅಭಿವೃದ್ಧಿ ನೋಡಿದ್ದೀರಾ?’ ಎಂದು ಯಾರ­ನ್ನಾ­ದರೂ ಕೇಳಿದರೆ, ‘ಇಲ್ಲ ಬೇರೆ­ಯವರು ಹೇಳು­ವುದನ್ನು ಕೇಳಿದ್ದೇವೆ’ ಎಂಬ ಉತ್ತರ ಬರುತ್ತದೆ. ಯಾರೂ ನೋಡದ ಗುಜ­ರಾತ್‌ ಪ್ರಗತಿಯನ್ನು ನಿಜವಾಗಿ ವಿಮರ್ಶೆಗೆ ಒಳಪಡಿಸಬೇಕಿದೆ. 
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT