ಇಟಲಿ ದೇಶದ ಮಿಲಾನ್ ನಗರದಲ್ಲಿ ‘ಎಕ್ಸ್‌ಪೊ ಮಿಲಾನೊ 2015’ ಹೆಸರಿನ ಒಂದು ಅಂತರರಾಷ್ಟ್ರೀಯ ಮಹಾಮೇಳ ಇದೀಗ ಆರಂಭವಾಗಿದೆ. ಪ್ರಮುಖವಾಗಿ ಆಹಾರದ್ದೇ ಮಹಾಮೇಳ ಅದು. ನಾಳಿನ ಜಗತ್ತಿನಲ್ಲಿ ಆಹಾರ ವಸ್ತುಗಳ ವ್ಯವಹಾರ ಹೇಗಿರುತ್ತದೆ ಎಂಬ ಒಂದು ಝಲಕ್ ಇಲ್ಲಿದೆ:

ಮಾವಿನ ಹಣ್ಣಿನ ದೊಡ್ಡದೊಂದು ರಾಶಿ ಇರುತ್ತದೆ. ಹಣ್ಣನ್ನು ಮುಟ್ಟಿ ನೋಡಬೇಕಿಲ್ಲ; ಹಣ್ಣಿನ ರಾಶಿಯ ಮೇಲೆ ಒಮ್ಮೆ ಕೈಯಾಡಿಸಿದರೆ ಸಾಕು, ಎದುರಿನ ದೊಡ್ಡ ಪರದೆಯಲ್ಲಿ ಆ ಹಣ್ಣುಗಳ ಚರಿತ್ರೆಯೇ ಮೂಡಿಬರುತ್ತದೆ. ಅದರ ಜಾತಿ ಯಾವುದು, ಎಷ್ಟು ದೂರದಿಂದ ಬಂದಿದೆ, ಎಂದು ಕೊಯ್ಲು ಮಾಡಿದ್ದು, ಅದಕ್ಕೆ ಏನೇನು ಕೆಮಿಕಲ್ ಲೇಪನಗಳಿವೆ ಎಲ್ಲವೂ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸತೊಡಗುತ್ತವೆ. ನೀವು ಜಾಗೃತ ಬಳಕೆದಾರರಾಗಿದ್ದರೆ ನಿಮ್ಮ ಆರೋಗ್ಯಕ್ಕೆ ಧಕ್ಕೆಯಾಗದ ಹಣ್ಣುಗಳನ್ನೇ ನೀವು ಖರೀದಿಸುತ್ತೀರಿ. ನೀವು ಜಾಗೃತ ಬೆಳೆಗಾರರಾಗಿದ್ದರೆ ಗ್ರಾಹಕರ ಆರೋಗ್ಯಕ್ಕೆ ಧಕ್ಕೆಯಾಗದ ಫಸಲನ್ನೇ ಬೆಳೆಯುತ್ತೀರಿ. ನೀವು ಜಾಗೃತ ಮಧ್ಯವರ್ತಿಗಳಾಗಿದ್ದರೆ ರೈತನ ಹೆಸರಿಗೆ ಮಸಿ ಬಳಿಯದಂತೆ ಆಹಾರ ವಸ್ತುಗಳ ಪೂರೈಕೆ ಮಾಡುತ್ತೀರಿ. ನೀವು ಪ್ರಾಮಾಣಿಕ ಅಧಿಕಾರಿಯಾಗಿದ್ದರೆ ಎಲ್ಲ ಅಂಗಡಿಗಳಲ್ಲೂ ಇಂಥ ಮಾಹಿತಿ ಫಲಕಗಳು ಇರುವಂತೆ ನೋಡಿಕೊಳ್ಳುತ್ತೀರಿ.

145 ದೇಶಗಳ, ಮೂರು ಅಂತರರಾಷ್ಟ್ರೀಯ ವ್ಯಾಪಾರೀ ಸಂಸ್ಥೆಗಳ ಹಾಗೂ ಅಸಂಖ್ಯಾತ ಸರ್ಕಾರೇತರ ಸಂಸ್ಥೆಗಳ ಸಹಯೋಗ ಪಡೆದು, ನಾಲ್ಕು ವರ್ಷಗಳ ಸಿದ್ಧತೆಯೊಂದಿಗೆ ಆರಂಭವಾದ ಈ ಪ್ರದರ್ಶನದ ಮುಖ್ಯ ಉದ್ದೇಶ ಏನೆಂದರೆ ಪೃಥ್ವಿಯ ಪರಿಸರ ರಕ್ಷಣೆ ಮತ್ತು ಆಹಾರ ಭದ್ರತೆ. ಇಂದು ಇವೆರಡಕ್ಕೂ ಕಂಟಕ ಬಂದಿದೆ. ಪರಿಸರ ರಕ್ಷಣೆಯೂ ಆಗುತ್ತಿಲ್ಲ. ಇತ್ತ ಬಳಕೆದಾರರ ರಕ್ಷಣೆಯೂ ಆಗುತ್ತಿಲ್ಲ. ಅತ್ತ ಬೆಳೆಗಾರರ ಸ್ಥಿತಿಯೂ ಸುಧಾರಿಸುತ್ತಿಲ್ಲ. ನೆಲದ ಆರೋಗ್ಯವನ್ನು ಕೆಡಿಸಿ ನಮ್ಮೆಲ್ಲರ ಆರೋಗ್ಯವನ್ನೂ ಹದಗೆಡಿಸುವ ವಿಲಕ್ಷಣ ಸಂಕಷ್ಟದಲ್ಲಿ ನಾವೆಲ್ಲ ಸಿಲುಕಿಕೊಂಡಿದ್ದೇವೆ. ಹಿಂದಿನ ಕಾಲದ ಸಾವಯವ, ಸುಸ್ಥಿರ ಕೃಷಿ ವಿಧಾನವನ್ನೂ ಮರೆತಿದ್ದೇವೆ. ತಂತ್ರಜ್ಞಾನದ ಎರ್ರಾಬಿರ್ರಿ ಬೆಳವಣಿಗೆಯಿಂದಾಗಿ ಬದುಕಿನ ಹದವನ್ನೂ ಕಳೆದುಕೊಳ್ಳುತ್ತಿದ್ದೇವೆ. ಈ ಬಿಕ್ಕಟ್ಟಿನಿಂದ ಪಾರಾಗಬೇಕಲ್ಲ? ಮನುಕುಲವನ್ನೂ ರಕ್ಷಿಸಬೇಕು; ಪೃಥ್ವಿಯ ಆರೋಗ್ಯವನ್ನೂ ಸುಸ್ಥಿರವಾಗಿಟ್ಟಿರಬೇಕು. ಹೇಗೆ?

ನಾಳೆ (ಜೂನ್ 5ರ) ವಿಶ್ವ ಪರಿಸರ ದಿನಾಚರಣೆಗಾಗಿ ‘ಏಳು ಶತಕೋಟಿ ಕನಸುಗಳು, ಒಂದೇ ಗ್ರಹ: ಹುಷಾರಾಗಿ ಬಳಕೆ ಮಾಡಿ’ ಎಂಬ ಘೋಷಣೆಯನ್ನು ವಿಶ್ವಸಂಸ್ಥೆ ನೀಡಿದೆ. ಅದಕ್ಕೆ ಪೂರಕವಾಗಿ ಮಿಲಾನ್ ಮೇಳವನ್ನು ಏರ್ಪಡಿಸಲಾಗಿದೆ. ಭೂಮಿಯ ಆರೋಗ್ಯವನ್ನು ಸಾಂಪ್ರದಾಯಿಕ ಕೃಷಿಯಿಂದಲೂ ಕಾಪಾಡಬಹುದು; ಅತ್ಯಾಧುನಿಕ ವಿಜ್ಞಾನದಿಂದ ಇನ್ನೂ ಚೆನ್ನಾಗಿ ರಕ್ಷಿಸಬಹುದು ಎಂಬುದನ್ನು ತಿಳಿಸಬಲ್ಲ ಅದೆಷ್ಟೋ ಪ್ರದರ್ಶನಗಳು ಅಲ್ಲಿ ಸಜ್ಜಾಗಿವೆ.

ಎಕ್ಸ್‌ಪೋದಲ್ಲಿ ನಾಳಿನ ತಂತ್ರಜ್ಞಾನದ ಮುನ್ನೋಟಗಳ ಮೆರವಣಿಗೆಯೇ ಇದೆ. ಅಕ್ಟೋಬರ್‌ವರೆಗೂ ಇರುತ್ತದೆ. ಆದರೆ ಅಂಥ ತಂತ್ರಜ್ಞಾನಗಳನ್ನು ಬಳಕೆಗೆ ತರಲು ಬೇಕಾದ ರಾಜಕೀಯ, ಆಡಳಿತಾತ್ಮಕ ಇಚ್ಛಾಶಕ್ತಿ ನಮ್ಮಲ್ಲಿದೆಯೆ ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗುತ್ತದೆ. ಮ್ಯಾಗಿ ನೂಡಲ್‌್ಸ ಬಗ್ಗೆ ಈಗ ಭುಗಿಲೆದ್ದ ರಾಷ್ಟ್ರವ್ಯಾಪಿ ಧಿಮ್ರಂಗವನ್ನೇ ನೋಡಿ: ನೆಸ್ಲೆ ಕಂಪೆನಿಯ ಈ ಶಾವಿಗೆಯಲ್ಲಿ ಅಜಿನೊಮೊಟೊ (ಮೊನೊ ಸೋಡಿಯಂ ಗ್ಲುಟಮೇಟ್- ಎಮ್‌ಎಸ್‌ಜಿ) ಬಳಸುತ್ತಾರೆ ಎಂಬುದು ಮೊದಲೂ ಗೊತ್ತಿತ್ತು. ಅದರಲ್ಲೊಂದೇ ಅಲ್ಲ, ಇತರ ಬ್ರ್ಯಾಂಡ್‌ಗಳ ಶಾವಿಗೆಯಲ್ಲೂ ಪ್ಯಾಕ್ ಮಾಡಿದ ಬಹುತೇಕ ಎಲ್ಲ ಬಗೆಯ ಕುರುಕಲು ತಿಂಡಿಯಲ್ಲೂ ಅದು ಇರುತ್ತದೆ. ಜಾಗತೀಕರಣದ ಹೊಸದರಲ್ಲಿ ಅಮೆರಿಕದ ‘ಕೆಂಟುಕಿ ಚಿಕನ್’ ಮಳಿಗೆ ಬೆಂಗಳೂರಿನಲ್ಲಿ ತೆರೆದಾಗ ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಅದರ ಮೇಲೆ ದೊಡ್ಡ ದಾಳಿಯೇ ನಡೆದಿತ್ತು. ಕೋಳಿ ಮಸಾಲೆಯಲ್ಲಿ ಅಜಿನೊಮೊಟೊ ಹಾಕುತ್ತಾರೆ ಎಂಬುದು ದಾಳಿಯ ಮುಖ್ಯ ಕಾರಣವಾಗಿತ್ತು. ಅಂಥ ರುಚಿವರ್ಧಕ ಕೆಮಿಕಲ್‌ಗಳನ್ನು ಸೇರಿಸಿ, ಟ್ರಾನ್ಸ್‌ಫ್ಯಾಟ್ ಎಂಬ ತೈಲದಲ್ಲಿ ಅದ್ದಿ ಎತ್ತಿದ ಚಿಕನ್ ಫ್ರೈ, ರಸ್ತೆ ಬದಿಯ ಗೋಭಿ ಮಂಚೂರಿ, ಗೋಲ್‌ಗಪ್ಪಾ ಮುಂತಾದ ಜಂಕ್ ಫುಡ್ ತಿಂದು ತಿಂದು ನಮ್ಮ ಜನರೂ ಅಮೆರಿಕದ ಕೆಳಮಧ್ಯಮ ಜನರ ಹಾಗೆ ದಢೂತಿ ಶರೀರ ಬೆಳೆಸಿಕೊಂಡು ನಾನಾ ಬಗೆಯ ಕಾಯಿಲೆಗಳ ಗುಡಾಣವಾಗಿ, ಆಸ್ಪತ್ರೆ- ಔಷಧ, ಜಿಮ್, ಯೋಗಾಮ್ಯಾಟ್, ಜಾಗಿಂಗ್ ಷೂಗಳ ಔದ್ಯಮಿಕ ಅಭಿವೃದ್ಧಿಗೆ ಕಾರಣವಾಗುತ್ತಿದ್ದಾರೆ ಎಂಬುದೂ ಗೊತ್ತಿತ್ತು. ಅಂಥ ಅಗ್ಗದ ಕುರುಕಲು ತಿಂಡಿಗಳಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಮಾಡಬಲ್ಲ ಏನೇನು ಅಂಶಗಳಿವೆ ಎಂಬುದನ್ನು ಪರೀಕ್ಷಿಸಿ ನೋಡಲೆಂದು ನಮ್ಮಲ್ಲಿ ಹೆಲ್ತ್ ಇನ್‌ಸ್ಪೆಕ್ಟರ್‌ಗಳ ಒಂದು ಸೈನ್ಯವೇ ಇದೆ. ಹಿಂದಿನಿಂದಲೂ ಇದ್ದೇ ಇದೆ. ಅವರೆಲ್ಲ ಇಷ್ಟು ವರ್ಷ ಸೋಗಿನ ನಿದ್ದೆಯಲ್ಲಿದ್ದರೆ? ಎಮ್‌ಎಸ್‌ಜಿಯ ಅತಿ ದೊಡ್ಡ ಆಮದುದಾರ ದೇಶಕ್ಕೆ ಅವೆಲ್ಲ ಎಲ್ಲಿ ಹೋಗುತ್ತವೆ ಎಂಬುದು ಗೊತ್ತಿಲ್ಲವೆ?

ಪ್ರಸಿದ್ಧ ಕಂಪೆನಿಗಳ ಬಾಟಲಿ ನೀರಿನಲ್ಲಿ ಏನೆಲ್ಲ ವಿಷಕಾರಿ ಅಂಶಗಳಿರುತ್ತವೆ ಎಂಬುದನ್ನು ದಿಲ್ಲಿಯ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆಯ ಲ್ಯಾಬಿನಲ್ಲಿ ಪತ್ತೆ ಮಾಡಿದ ಒಂದು ತಿಂಗಳು ಕಾಲ ಏನೆಲ್ಲ ಗದ್ದಲ ಎದ್ದು ತಣ್ಣಗಾಯಿತು. ಕೋಕೊ ಕೋಲಾದಲ್ಲಿ ಏನೆಲ್ಲ ಕೊಳಕು ದ್ರವ್ಯಗಳಿವೆ ಎಂಬುದು ಅದೇ ಲ್ಯಾಬಿನಲ್ಲಿ ಪತ್ತೆಯಾದಾಗ ಮತ್ತೊಮ್ಮೆ ಅಂಥದ್ದೇ ಗಲಾಟೆ ಎದ್ದು ತಣ್ಣಗಾಯಿತು. ಹೀಗೆ ಗಲಾಟೆ ಎದ್ದಾಗ ಧಿಗ್ಗನೆದ್ದು ಸಿನಿಮಾ ನಟರನ್ನೊ ಕಂಪೆನಿ ಮುಖ್ಯಸ್ಥರನ್ನೊ ಹೆಸರಿಸಿ ದಾವೆ ಹೂಡುವ ಮಾತು ಕೇಳಿಬರುತ್ತದೆ. ಇತ್ತ ಆಹಾರ ವಸ್ತುಗಳ ಗುಣಮಟ್ಟ ಪರೀಕ್ಷಿಸುವವರು ಹೈಟೆಕ್ ಪರೀಕ್ಷಾ ಸಲಕರಣೆ ಮಧ್ಯೆ ಬಾಯಿಗೆ ಹೊಲಿಗೆ ಹಾಕಿಕೊಂಡು ಕಡತಗಳಲ್ಲಿ ಕಣ್ಕಟ್ಟು ಮಾಡುತ್ತಿರುತ್ತಾರೆ. ಯಂತ್ರಗಳ ಖರೀದಿಯೇನೊ ಫಟಾಫಟ್. ಹಾಗೇ ಅದನ್ನು ಮೂಲೆಗುಂಪು ಮಾಡಿಡುವಲ್ಲಿ ಸಿದ್ಧಹಸ್ತರು ನಾವು. ಹಾಲಿನ ಗುಣಮಟ್ಟವನ್ನು ಡೇರಿಗಳಲ್ಲೇ ಪರೀಕ್ಷೆ ಮಾಡಲೆಂದು ಸಾವಿರಾರು ಯಂತ್ರಗಳನ್ನು ಕೆಎಮ್‌ಎಫ್ ಖರೀದಿಸಿ ವಿತರಿಸಿ ನಿರರ್ಥಕ ಮಾಡಿಟ್ಟಿಲ್ಲವೆ? ಡೇರಿಯಿಂದ ಬರುವ ಅನಾರೋಗ್ಯಕರ ಹಾಲನ್ನು ಪ್ಯಾಕ್ ಮಾಡಿ ‘ತಾಜಾ’ ಹಾಲು ಎಂದು ಸುಳ್ಳು ಲೇಬಲ್ ಮುದ್ರಿಸಿ, ಮಾರುಕಟ್ಟೆಗೆ ಬಿಟ್ಟ ಮೇಲಾದರೂ ಅಲ್ಲಿ ಸಿಗುವ ಹಾಲಿನ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಎಂದಾದರೂ ಪರೀಕ್ಷೆ ಮಾಡಿದ್ದನ್ನು ನಾವು ಕೇಳಲೇ ಇಲ್ಲ.

ಮಿಲಾನೊ ಪ್ರದರ್ಶನಕ್ಕೆ ಬಂದ ಇನ್ನೊಂದು ಹೈಟೆಕ್ ತಂತ್ರವನ್ನು ನೋಡೋಣ: ರೈತನ ಯಾವ ಬೆಳೆಗೆ ಎಷ್ಟು ನೀರು ಸಾಕು ಎಂಬ ಮಾಹಿತಿಯನ್ನು ರೈತನ ಕೈಯಲ್ಲಿರುವ ಫೋನ್‌ಗೆ ಆತ ನಿಂತ ನೆಲದಲ್ಲೇ ಮಾಹಿತಿ ಒದಗಿಸುವ ತಂತ್ರಜ್ಞಾನವನ್ನು ನಾಸಾದವರು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ನೀರೊಂದೇ ಅಲ್ಲ, ಎಲೆಯನ್ನೂ ಪರೀಕ್ಷೆ ಮಾಡಿ ಯಾವ ಗಿಡಕ್ಕೆ ಯಾವ ರೋಗ ತಗುಲಿದೆ ಎಂಬುದರ ಬಗ್ಗೆ ರೈತನಿಗೆ ಸಲಹೆ ಕೊಡಬಲ್ಲ ತಂತ್ರಜ್ಞಾನವೂ ಸಿದ್ಧವಾಗಿದೆ. ನಮ್ಮಲ್ಲಿಗೆ ಅಂಥ ತಂತ್ರಜ್ಞಾನ ಬಂದರೂ ಇಲ್ಲಿನ ಸರ್ಕಾರಿ ವ್ಯವಸ್ಥೆಯಲ್ಲಿ ಅದು ಸಾಮಾನ್ಯ ರೈತರ ಸೇವೆಗೆ ಸಿಕ್ಕೀತೆ?

ಹವಾಮಾನ ಮುನ್ಸೂಚನೆಯ ವಿಷಯದಲ್ಲಿ ಈ ಅಸಂಗತ ಢಾಳಾಗಿ ಗೋಚರಿಸುತ್ತದೆ. ಕಳೆದ ಎರಡು ವಾರಗಳಿಂದ ಭಾರೀ ಬಿಸಿಲು, ಸಿಡಿಲು, ಬಿರುಗಾಳಿ, ಜಡಿಮಳೆಯ ಸುದ್ದಿ ಒಂದರ ಮೇಲೊಂದರಂತೆ ಅಪ್ಪಳಿಸುತ್ತಿವೆ. ತಿಂಗಳಿಡೀ ಜಡಿಮಳೆಯ ಹೊಡೆತಕ್ಕೆ ಕಕ್ಕಾಬಿಕ್ಕಿಯಾಗಿ ಕೂತವರಿಗೆ ಮುಂಗಾರು ಮೇ 30ಕ್ಕೆ, ಅಲ್ಲ, ಜೂನ್ 4ಕ್ಕೆ, ಅಲ್ಲ 5ಕ್ಕೆ ಬರಲಿದೆ ಎಂಬ ಅಪ್ರಸ್ತುತ ಮಾಹಿತಿಗಳೇ ಸಿಗುತ್ತಿವೆ ವಿನಾ, ಇಂದು ಸಂಜೆ ನಾನಿದ್ದಲ್ಲಿ ಏನಾಗಲಿಕ್ಕಿದೆ ಎಂದು ತಿಳಿಸುವವರು ಯಾರೂ ಇಲ್ಲ. ಭಾರತೀಯ ಹವಾಮಾನ ಇಲಾಖೆಯ ಜಾಲತಾಣಕ್ಕೆ ಹೋದರೆ ಬರೀ ನಿನ್ನೆಯವರೆಗಿನ ಮಾಹಿತಿಗಳೇ ತುಂಬಿವೆ ವಿನಾ ನಾಳೆ ಏನಾಗಲಿದೆ ಎಂಬುದರ ಮಾಹಿತಿ ಇರುವುದಿಲ್ಲ. ಹಾಗೆಂದು ಅವರಲ್ಲಿ ಯಾವ ತಂತ್ರಜ್ಞಾನಕ್ಕೂ ಕೊರತೆಯಿಲ್ಲ. ಡಾಪ್ಲರ್ ರಡಾರ್‌ಗಳು, ಉಪಗ್ರಹ ಸಂಪರ್ಕ ಸಾಧನಗಳು, ಸೂಪರ್ ಸರ್ವರ್‌ಗಳು ಎಲ್ಲವೂ ಇವೆ. ಬೇಕಿದ್ದ ಮಾಹಿತಿ ಮಾತ್ರ ಸಿಗುತ್ತಿಲ್ಲ.

ಈಗಂತೂ ಹವಾಮಾನ ಯದ್ವಾತದ್ವಾ ಬದಲಾಗುತ್ತಿದೆ. ನಾಳಿನ ಹವಾಮಾನ ಹೇಗಿರುತ್ತದೆ ಎಂಬುದು ಗೊತ್ತಿಲ್ಲದೆ ರೈತರು ವಿಹ್ವಲಗೊಳ್ಳುತ್ತಾರೆ. ಬೆಳೆದು ನಿಂತ ಮೇವಿನ ಪೈರನ್ನು ಕೊಯ್ಲು ಮಾಡದಿದ್ದರೆ ಎಲ್ಲವೂ ನೆಲಕಚ್ಚಬಹುದು. ಕೊಯ್ಲು ಮಾಡಿದರೆ ಮುಗ್ಗಿ ಹಾಳಾಗಬಹುದು. ಮಳೆ ನಕ್ಷತ್ರಗಳೂ ಕೈಕೊಡುವುದರಿಂದ ರಾಗಿ ಬಿತ್ತನೆ ಮಾಡಬೇಕೆ, ಮಾಡಿದರೆ ರಣಬಿಸಿಲು ಬಂದೀತೆ ಎಂಬ ಮಾಹಿತಿಯನ್ನು ರೈತರಿಗೆ ಕೊಡದಿದ್ದರೆ ತಂತ್ರಜ್ಞಾನ ಇದ್ದೇನು ಪ್ರಯೋಜನ? ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ಅದರಲ್ಲಿ ಹವಾ ಮುನ್ಸೂಚನೆ ಕೊಡಬಲ್ಲ ಎಕ್ಯೂವೆದರ್ ಎಂಬ ಆ್ಯಪ್ ಹಾಕಿಕೊಂಡಿದ್ದರೆ ಅದು ನೀವಿದ್ದ ಊರಿನ ಗಂಟೆಗಂಟೆಯ, ಇಡೀ ದಿನದ, ಮುಂದಿನ ಐದು ದಿನಗಳ ಹವಾ ಮುನ್ಸೂಚನೆಯನ್ನು ಸಾಕಷ್ಟು ಖಚಿತವಾಗಿ ನೀಡುತ್ತಿರುತ್ತದೆ. ಅಷ್ಟೇ ಖಚಿತ ಸೂಚನೆ ಕೊಡಬಲ್ಲ ವಿಶ್ವವ್ಯಾಪಿ ‘ವಂಡರ್‌ಗ್ರೌಂಡ್’, ‘ಫಾಲಿಂಗ್‌ರೇನ್’ ಮುಂತಾದ ಜಾಲತಾಣಗಳೂ ಇವೆ. ಕೆನಡಾ ಮತ್ತು ಅಮೆರಿಕದಲ್ಲಿ ‘ಪಾಯಿಂಟ್ ಕಾಸ್ಟ್’ ಪದ್ಧತಿ ಇದೆ. ಅಂದರೆ ನಿಮ್ಮ ಕೈಯಲ್ಲಿರುವ ಫೋನ್ ಸಲಕರಣೆಯೇ ಹವಾಮಾನ ವೀಕ್ಷಣಾಲಯದಂತೆ ವರ್ತಿಸುತ್ತ ನಿಮ್ಮ ಪಿನ್ ಕೋಡ್ ಕ್ಷೇತ್ರದ ಹವಾಮುನ್ಸೂಚನೆಯನ್ನು ನೀಡುತ್ತಿರುತ್ತದೆ. ಸಿಂಗಪುರದಲ್ಲಿ ನಗರದ ಯಾವ ಭಾಗದಲ್ಲಿ ಮಳೆಯಷ್ಟೇ ಅಲ್ಲ, ಮಂಜಿನ ದಟ್ಟಣೆ ಹೇಗಿದೆ ಎಂಬುದರ ವರದಿಯೂ ಸಿಗುತ್ತಿರುತ್ತದೆ.

ಇಂಥ ಜನೋಪಯೋಗಿ ತಂತ್ರಜ್ಞಾನ ಲಭ್ಯವಿದ್ದರೂ ನಮ್ಮ ರೈತರಿಗೆ ಅದು ಸಿಗುವಂತಿಲ್ಲ ಏಕೆಂದರೆ ಹಳ್ಳಿಗಳಲ್ಲಿ 3ಜಿ ನೆಟ್‌ವರ್ಕ್ ಇರಬೇಕು, ಇಂಗ್ಲಿಷ್ ಗೊತ್ತಿರಬೇಕು. ಇನ್ನು ರೇಡಿಯೊ, ಟಿವಿ ಮೂಲಕ ಗಂಟೆಗಂಟೆಗೆ ಮುನ್ಸೂಚನೆ ಹೇಳಬಹುದಿತ್ತು. ಆದರೆ ನಮ್ಮ ಹವಾಮಾನ ಇಲಾಖೆ ತಾನು ಸಂಗ್ರಹಿಸುವ ಮಾಹಿತಿಗಳನ್ನು ಸುಲಭಕ್ಕೆ ಇತರರೊಂದಿಗೆ ಹಂಚಿಕೊಳ್ಳುತ್ತಿಲ್ಲ. ವಿಮಾನ ನಿಲ್ದಾಣಗಳು ಪ್ರತಿ 15 ನಿಮಿಷಗಳಿಗೊಮ್ಮೆ ಸಾಕಷ್ಟು ಖಚಿತ ಮುನ್ಸೂಚನೆಗಳನ್ನು ಪ್ರಸಾರ ಮಾಡುತ್ತವೆ. ಮಾಡಲೇಬೇಕಾದುದು ಅವಕ್ಕೆ ಅನಿವಾರ್ಯ. ಅಲ್ಲಿಂದಲಾದರೂ ನಮ್ಮ ರೇಡಿಯೊ, ಟಿವಿಗಳು ಗಂಟೆಗೊಮ್ಮೆ ಮರುಪ್ರಸಾರ ಮಾಡಲು ಸಾಧ್ಯವಿದೆ. ಆದರೆ ಮಾಡುತ್ತಿಲ್ಲ.

ಬೆಂಗಳೂರಿನ ಕೆಲವು ಉತ್ಸಾಹಿ ಯುವಕರು ತಮ್ಮ ಛಾವಣಿಯ ಮೇಲೆಯೇ ಹವಾಮಾನ ವೀಕ್ಷಣಾಲಯವನ್ನು ಹೂಡುತ್ತಿದ್ದಾರೆ. ‘ಕ್ರಮೇಣ ನಾವು ವಾಯು ಮಾಲಿನ್ಯವನ್ನೂ ಅಳೆಯಲಿದ್ದೇವೆ’ ಎನ್ನುತ್ತಾರೆ, ಟೆಕಿ ಜಿ.ಎನ್. ತೇಜೇಶ್. ಸರ್ಕಾರಿ ವ್ಯವಸ್ಥೆ ಅಧ್ವಾನವಾಗಿದ್ದರೆ ಕೆಲವರು ತಂತ್ರಜ್ಞಾನವನ್ನು ದುಡಿಸಿಕೊಳ್ಳುತ್ತಾರೆ, ಇನ್ನುಳಿದವರು ದೇವರ ಮೊರೆ ಹೊಗುತ್ತಾರೆ. ಈ ಬಾರಿಯ ಮುಂಗಾರು (ಇಪ್ಪತ್ತು ವರ್ಷಗಳ ಸರಾಸರಿಗೆ ಹೋಲಿಸಿದರೆ) ‘ಶೇಕಡ 12ರಷ್ಟು ಕಡಿಮೆಯಾಗಲಿದೆ’ ಎಂದು ಹವಾಮಾನ ಇಲಾಖೆ ಭವಿಷ್ಯ ಹೇಳಿ ಅನೇಕರ ಕಂಗಾಲಿಗೆ ಕಾರಣವಾಗಿದೆ. ‘ಅಂಥ ಭವಿಷ್ಯ ನಿಜವಾಗದಿರಲೆಂದು ದೇವರನ್ನು ಪ್ರಾರ್ಥಿಸೋಣ’ ಎಂತಲೂ ಭೂವಿಜ್ಞಾನ ಸಚಿವ ಹರ್ಷವರ್ಧನ ಹೇಳಿದ್ದಾರೆ. ತಂತ್ರಜ್ಞಾನ ವಿಫಲವಾಗಲಿ ಎಂದು ಹಾರೈಸುವ ಮಂತ್ರಿಗಳೂ ನಮ್ಮಲ್ಲಿದ್ದಾರೆ ಎಂದಾಯಿತು! ಹಾಗೆ ನೋಡಿದರೆ, ಕಡಿಮೆ ಮಳೆ ಬೀಳಲಿದೆಯೆಂದು ಅಳುತ್ತ ಕೂರುವ ಬದಲು ಶೇ 40ರಷ್ಟು ಆಹಾರ ಧಾನ್ಯಗಳು ಮಳಿಗೆಗಳಲ್ಲೇ ಕೊಳೆತು ಹಾಳಾಗುತ್ತಿರುವ ಬಗ್ಗೆ ನಾವು ಚಿಂತಿಸಬೇಕು. ನಮ್ಮ ಯುವ ವಿಜ್ಞಾನಿಗಳನ್ನು ಕೇಳಿದರೆ ಪ್ರತಿ ಗೋದಾಮಿನಲ್ಲೂ ತೇವಾಂಶ ಅಳೆಯಬಲ್ಲ, ಧಾನ್ಯಗಳ ಮುಗ್ಗುಮಾಸಲು ಸ್ಥಿತಿಗತಿಯನ್ನು ಗಂಟೆಗೊಮ್ಮೆ ತೋರಿಸಬಲ್ಲ ಸಲಕರಣೆಗಳನ್ನು ಸೃಷ್ಟಿಸಿಕೊಟ್ಟಾರು. ಆ ದಾಖಲೆಗಳೆಲ್ಲ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾವಾರು ಅಧಿಕಾರಿಗಳ ಗಣಕದಲ್ಲೇ ಕ್ಷಣಕ್ಷಣಕ್ಕೆ ಕಾಣುವಂತೆ ಕೂಡ ಮಾಡಬಹುದು. ಯಾವ ಗೋದಾಮಿನಲ್ಲಿ ಎಷ್ಟು ಹೆಗ್ಗಣಗಳಿವೆ ಎಂಬುದರ ಲೆಕ್ಕವೂ ಸಿಕ್ಕೀತು! ಆದರೆ ಅಧಿಕಾರಿಗಳಿಗೆ ಕಂಪ್ಯೂಟರ್ ಮೌಸ್ ಮೇಲೆ ಬೆರಳಾಡಿಸಲೂ ಆಸಕ್ತಿ ಇಲ್ಲದಿದ್ದರೆ ಏನು ಪ್ರಯೋಜನ?

ರೈತರ ಕೈಗೆ ಸ್ಮಾರ್ಟ್ ಫೋನ್ ಕೊಟ್ಟು ಅದರಲ್ಲಿ ಅವರವರ ಊರಿನ ದಿನದಿನದ ಹವಾಮಾನ ಭವಿಷ್ಯ ಅವರದೇ ಭಾಷೆಯಲ್ಲಿ ತಿಳಿಯುವಂತೆ ವ್ಯವಸ್ಥೆ ಮಾಡಲು ಸದ್ಯಕ್ಕೆ ಕಷ್ಟವಾಗಬಹುದು. ಅದಕ್ಕೊಂದು ಸುಲಭ ಉಪಾಯವಿದೆ: ಟಿವಿ ಚಾನೆಲ್‌ಗಳಲ್ಲಿ ದಿನವೂ ಬೆಳಿಗ್ಗೆ ನಿತ್ಯ ಭವಿಷ್ಯವನ್ನು ಬಡಬಡಿಸುವ ಬಾಬಾಗಳಿಗೆಲ್ಲ ಸ್ಮಾರ್ಟ್ ಫೋನ್ ನೆರವಿನಿಂದ ಹವಾಮಾನ ಭವಿಷ್ಯವನ್ನು ಹೇಗೆ ಓದಬೇಕೆಂಬ ಬಗ್ಗೆ ತರಬೇತಿ ಕೊಡಬೇಕು. ತುಸುವಾದರೂ ನಂಬಲರ್ಹ ಭವಿಷ್ಯವಾಣಿ ಅವರಿಂದ ಬಂದೀತೇನೊ!
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.