ಭಾರತದ ಮಟ್ಟಿಗೆ ಕಾಲ್ಗೆಟ್ ಎಂಬುದು ಟೂತ್‌ಪೇಸ್ಟ್‌ಗೆ ಸಮಾನಾರ್ಥಕವಾದ ಪದ. ಹಾಗೆಯೇ ಜೆರಾಕ್ಸ್ ಎಂಬುದು ಫೋಟೋಸ್ಟಾಟ್ ಪ್ರತಿಗೆ ಸಮಾನಾರ್ಥಕ. ವಾಸ್ತವದಲ್ಲಿ ಕಾಲ್ಗೆಟ್ ಎಂಬುದು ಟೂತ್‌ಪೇಸ್ಟ್ ಬ್ರ್ಯಾಂಡ್ ಮಾತ್ರ. ಹಾಗೆಯೇ ಜೆರಾಕ್ಸ್ ಎಂಬುದು ಫೋಟೋಸ್ಟಾಟ್ ಯಂತ್ರದ ಬ್ರ್ಯಾಂಡ್. ಮಾರುಕಟ್ಟೆಯಲ್ಲಿ ಕಾಲ್ಗೆಟ್ ಅಷ್ಟೇ ಅಲ್ಲದೆ ಇನ್ನೂ ಅನೇಕ ಟೂತ್‌ಪೇಸ್ಟ್ ಬ್ರ್ಯಾಂಡ್‌ಗಳಿವೆ. ಜೆರಾಕ್ಸ್‌ನ ಹೊರತಾಗಿಯೂ ಅನೇಕ ಕಂಪೆನಿಗಳು ಫೋಟೋಸ್ಟಾಟ್ ಯಂತ್ರಗಳನ್ನು ತಯಾರಿಸುತ್ತವೆ.

ಈ ಬ್ರ್ಯಾಂಡ್‌ಗಳು ಎಷ್ಟು ಪ್ರಭಾವಶಾಲಿಯೆಂದರೆ ಉತ್ಪನ್ನದ ಹೆಸರನ್ನೇ ಮರೆಸಿ ಬ್ರ್ಯಾಂಡ್‌ಗಳೇ ಉತ್ಪನ್ನವನ್ನು ಗುರುತಿಸುವಂತೆ ಮಾಡಿಬಿಟ್ಟಿವೆ. ಇಂಥದ್ದೇ ಮತ್ತೊಂದು ಪ್ರಭಾವಶಾಲಿ ಬ್ರ್ಯಾಂಡ್ ಎಂದರೆ ಗೂಗಲ್. ಅಂತರ್ಜಾಲದಲ್ಲಿ ಹುಡುಕಾಟ ನಡೆಸುವುದಕ್ಕೆ ‘Googling’ ಅಥವಾ ‘ಗೂಗಲ್ ಮಾಡುವುದು’ ಎಂದು ಹೇಳುವಷ್ಟರ ಮಟ್ಟಿಗೆ ಗೂಗಲ್ ಜನಪ್ರಿಯ.

ಕಾಲ್ಗೆಟ್ ಮತ್ತು ಜೆರಾಕ್ಸ್‌ಗಳು ನಿರ್ದಿಷ್ಟ ಉತ್ಪನ್ನಗಳ ಸಮಾನಾರ್ಥಕವಾಗಿ ಬಳಕೆಯಾಗುತ್ತಿದ್ದ ಸಂದರ್ಭಕ್ಕೂ ಅಂತರ್ಜಾಲ ಹುಡುಕಾಟಕ್ಕೆ ಗೂಗಲ್ ಸಮಾನಾರ್ಥಕವಾದ ಸಂದರ್ಭಕ್ಕೂ ಒಂದು ಬಹುಮುಖ್ಯ ವ್ಯತ್ಯಾಸವಿದೆ. ಕಾಲ್ಗೆಟ್ ಎಂಬುದು ಟೂತ್‌ಪೇಸ್ಟ್‌ಗೆ ಸಮಾನಾರ್ಥಕವಾಗಿದ್ದರೂ ಇತರ ಕಂಪೆನಿಗಳ ಟೂತ್‌ಪೇಸ್ಟ್‌ಗಳ ಮಾರಾಟಕ್ಕೇನೂ ತೊಂದರೆಯಾಗಿರಲಿಲ್ಲ. ‘ಸಿಬಾಕಾ ಕಾಲ್ಗೇಟ್ ಕೊಡು’ ಎಂದು ಹೇಳುವಷ್ಟರ ಮಟ್ಟಿಗೆ ಅಥವಾ ‘ಕ್ಯಾನನ್ ಜೆರಾಕ್ಸ್ ಮೆಷೀನ್’ ಎಂದು ಗುರುತಿಸುವ ಮಟ್ಟಿಗಷ್ಟೇ ಈ ಬ್ರ್ಯಾಂಡ್‌ಗಳ ಶಕ್ತಿ ಇದ್ದದ್ದು.

ಈ ಎರಡೂ ಸಂದರ್ಭಗಳಲ್ಲಿ ಅಂಕಿತ ನಾಮಪದವೊಂದು ಸಾಮಾನ್ಯ ನಾಮಪದವಾಗಿ ಬದಲಾಗಿತ್ತೇ ಹೊರತು ಈ ಬ್ರ್ಯಾಂಡ್‌ಗಳು ಆಯಾ ಉತ್ಪನ್ನಗಳ ಕ್ಷೇತ್ರದಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಗೂಗಲ್‌ನ ಸಂದರ್ಭದಲ್ಲಿ ಸಂಭವಿಸಿದ್ದು ಇದಕ್ಕೆ ವಿರುದ್ಧವಾಗಿ. ಹುಡುಕಾಟಕ್ಕೆ ಗೂಗಲ್ ಎಂಬ ಪದ ಸಮಾನಾರ್ಥಕವಾಗುವುದರ ಜೊತೆಗೇ ಅಂತರ್ಜಾಲ ಹುಡುಕಾಟ ಕ್ಷೇತ್ರದಲ್ಲಿ ಗೂಗಲ್ ಏಕಸ್ವಾಮ್ಯವನ್ನೂ ಪಡೆದುಕೊಂಡು ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಕಾಲ್ಗೇಟ್‌ನ ಉದಾಹರಣೆಯಲ್ಲಿ ಸಂಭವಿಸಿದಂತೆ ‘ಬಿಂಗ್‌ನಲ್ಲಿ ಗೂಗಲ್ ಮಾಡಿದೆ!’ ಎನ್ನಲಾಗುವುದಿಲ್ಲ.

ಅಂತರ್ಜಾಲ ಹುಡುಕಾಟ ಎಂಬುದು ಸಾಮಾನ್ಯ ಬಳಕೆದಾರನ ಮಟ್ಟಿಗೆ ಒಂದು ಸವಲತ್ತು ಮಾತ್ರ. ಈ ಸವಲತ್ತನ್ನು ಒದಗಿಸುವುದಕ್ಕಾಗಿ ಗೂಗಲ್ ಬಳಕೆದಾರರಿಗೆ ಶುಲ್ಕವನ್ನೇನೂ ವಿಧಿಸುವುದಿಲ್ಲ. ಅದು ತನ್ನ ಖರ್ಚನ್ನು ಭರಿಸಿಕೊಳ್ಳುವುದು ಜಾಹೀರಾತುಗಳ ಮೂಲಕ. ಗೂಗಲ್ ಹುಡುಕಾಟದ ಫಲಿತಾಂಶದ ಮೇಲೆ ಕೆಲವು ಜಾಹೀರಾತುಗಳೂ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಪ್ರಕಟಿಸುವುದಕ್ಕಾಗಿ ಗೂಗಲ್‌ನಿಂದ ‘ಜಾಹೀರಾತು ಪದ’ಗಳನ್ನು ಖರೀದಿಸಬೇಕಾಗುತ್ತದೆ. ಕೆಲವು ಪದಗಳು ಕಡಿಮೆ ಬೆಲೆಗೆ ಸಿಕ್ಕರೆ ಇನ್ನು ಕೆಲವನ್ನು ಹರಾಜಿನಲ್ಲಿ ಪಡೆಯಬೇಕಾಗುತ್ತದೆ.

ಈ ಹರಾಜು ಪ್ರಕ್ರಿಯೆ ಮತ್ತು ಜಾಹೀರಾತುಗಳನ್ನು ಪ್ರಕಟಿಸುವ ಕ್ರಿಯೆಯಲ್ಲಿ ಸ್ಪರ್ಧೆಯನ್ನು ಕೊಲ್ಲುವ ಅನೇಕ ಅಂಶಗಳಿವೆ ಎಂದು ಭಾರತ್ ಮ್ಯಾಟ್ರಿಮನಿ ಡಾಟ್ ಕಾಂ 2012ರಲ್ಲಿ ಸ್ಪರ್ಧಾ ಆಯೋಗಕ್ಕೆ (ಸಿಸಿಐ) ದೂರು ನೀಡಿತ್ತು. ಇದಕ್ಕೆ ಜೈಪುರ ಕನ್ಸ್ಯೂಮರ್ ಯೂನಿಟಿ ಅಂಡ್ ಟ್ರಸ್ಟ್ ಸೊಸೈಟಿ ಕೂಡಾ ಜೊತೆಯಾಗಿತ್ತು.

ಈ ದೂರಿಗೆ ಸಂಬಂಧಿಸಿದಂತೆ ಸಿಸಿಐನ ಮಹಾ ನಿರ್ದೇಶಕರು ತನಿಖೆ ನಡೆಸಿ ಆಗಸ್ಟ್ 24ರಂದು ವರದಿ ಸಲ್ಲಿಸಿದ್ದಾರೆ. 6,000 ಪುಟಗಳಷ್ಟು ಸುದೀರ್ಘವಾಗಿರುವ ಈ ವರದಿ ಗೂಗಲ್ ಸ್ಪರ್ಧಾ ವಿರೋಧಿ ವ್ಯವಹಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ನಿಜವೆನಿಸುತ್ತಿದೆ ಎಂದಿದೆ. ಮಹಾ ನಿರ್ದೇಶಕರ ವರದಿಯ ಆರೋಪಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 10ರೊಳಗೆ ಗೂಗಲ್ ತನ್ನ ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕಿತ್ತು. ಆದರೆ, ಕಂಪೆನಿ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಉತ್ತರಿಸುವುದಕ್ಕೆ ಇನ್ನಷ್ಟು ಸಮಯ ಬೇಕೆಂದು ಕೇಳಿದೆ.

ಇಷ್ಟಕ್ಕೂ ಗೂಗಲ್‌ನ ವ್ಯವಹಾರದಲ್ಲಿರುವ ಸ್ಪರ್ಧಾ ವಿರೋಧಿ ಅಂಶಗಳು ಯಾವುವು? ಈ ಪ್ರಶ್ನೆಗೆ ಉತ್ತರ ಸರಳವಲ್ಲ. ಗೂಗಲ್‌ನ ದೃಷ್ಟಿಯಲ್ಲಿ ‘ಭಾರತ್ ಮ್ಯಾಟ್ರಿಮನಿ’ ಎಂಬುದೂ ಒಂದು ‘ಜಾಹೀರಾತು ಪದಪುಂಜ’. ಈ ಪದಪುಂಜವನ್ನು ಭಾರತ್ ಮ್ಯಾಟ್ರಿಮನಿಯಂಥದ್ದೇ ಸೇವೆ ನೀಡುವ ‘ಮದುವೆ ಡಾಟ್ ಕಾಂ’ ಎಂಬ ಕಂಪೆನಿ ಖರೀದಿಸಿದೆಂತು ಭಾವಿಸೋಣ. ಗೂಗಲ್ ಸರ್ಚ್ ಎಂಜಿನ್‌ನಲ್ಲಿ ‘ಭಾರತ್ ಮ್ಯಾಟ್ರಿಮನಿ’ ಎಂದು ಯಾರಾದರೂ ಹುಡುಕಿದರೆ ಅದರ ಫಲಿತಾಂಶಗಳ ಮೇಲ್ಭಾಗದಲ್ಲಿ ‘ಮದುವೆ ಡಾಟ್ ಕಾಂ’ನ ಜಾಹೀರಾತುಗಳು ಪ್ರತ್ಯಕ್ಷವಾಗುತ್ತವೆ.

ಭಾರತ್ ಮ್ಯಾಟ್ರಿಮನಿ ಎಂಬುದು ಒಂದು ಟ್ರೇಡ್ ಮಾರ್ಕ್. ಅದನ್ನು ‘ಜಾಹೀರಾತು ಪದ’ವಾಗಿ ಬಳಸಕೂಡದು ಎಂದು ಗೂಗಲ್‌ಗೆ ದೂರು ಸಲ್ಲಿಸಿ ವಿನಂತಿ ಮಾಡಿಕೊಂಡ ಮೇಲೆ ಈ ಪದಪುಂಜವನ್ನು ಜಾಹೀರಾತು ಪದಪಟ್ಟಿಯಿಂದ ಹೊರಗಿಡಲಾಯಿತು. ಆದರೆ, ಇಂಗ್ಲಿಷ್‌ನಲ್ಲಿ ಭಿನ್ನ ಸ್ಪೆಲಿಂಗ್ ಬಳಸಿ ಇಂಥದ್ದೇ ಪದವನ್ನು ಸೃಷ್ಟಿಸುವ ಸಾಧ್ಯತೆ ಉಳಿದೇ ಇತ್ತು. ಭಾರತ್ ಮ್ಯಾಟ್ರಿಮನಿಯ ಸ್ಪರ್ಧಿಗಳು ಆ ಸಾಧ್ಯತೆಯನ್ನು ಬಳಸಿಕೊಂಡರು. ಸಮಸ್ಯೆ ಮತ್ತಷ್ಟು ಸಂಕೀರ್ಣವಾಯಿತು.

ಈ ಸಂಬಂಧ ದೂರು ಸ್ವೀಕರಿಸಿದ ಸ್ಪರ್ಧಾ ಆಯೋಗ ತನಿಖೆಯನ್ನು ಆರಂಭಿಸಿದ ಮೇಲೆ ಗೂಗಲ್‌ನ ಸ್ಪರ್ಧೆಯನ್ನು ಹತ್ತಿಕ್ಕುವ ಇನ್ನೂ ಅನೇಕ ಮಾದರಿಗಳು ಒಂದರ ಹಿಂದೆ ಒಂದರಂತೆ ಹೊರಬರಲಾರಂಭಿಸಿದವು. ಅಂತರ್ಜಾಲದಲ್ಲಿರುವ ಕೋಟ್ಯಂತರ ಪುಟಗಳಲ್ಲಿರುವ ಮಾಹಿತಿಯನ್ನು ಜಾಲಾಡಿ ಹುಡುಕುವವರ ಮುಂದಿಡುವ ಗೂಗಲ್‌ನ ಸೇವೆ ಅತ್ಯಂತ ಸಂಕೀರ್ಣವಾದುದು. ಇದಕ್ಕೆ ಬಳಕೆಯಾಗುವ ತಂತ್ರಜ್ಞಾನವನ್ನು ಸ್ವತಃ ಗೂಗಲ್ ಅಭಿವೃದ್ಧಿಪಡಿಸಿ ಗುಟ್ಟಾಗಿಟ್ಟುಕೊಂಡಿದೆ. ಇದರ ಜೊತೆಗೆ ಇ–ಮೇಲ್ ಸೇವೆ, ಗೂಗಲ್ ಮ್ಯಾಪ್ ಎಂಬ ನಕ್ಷೆ ಸೇವೆ, ಗೂಗಲ್ ಪ್ಲಸ್ ಎಂಬ ಸಾಮಾಜಿಕ ಜಾಲತಾಣ, ಯೂಟ್ಯೂಬ್ ಎಂಬ ವಿಡಿಯೊ ಸೇವೆ ಹೀಗೆ ಗೂಗಲ್‌ನ ಅನೇಕ ಸೇವೆಗಳಿವೆ.

ತನ್ನ ಹುಡುಕಾಟದ ಶಕ್ತಿಯನ್ನು ಬಳಸಿಕೊಂಡು ಈ ಸೇವೆಗಳನ್ನು ಜನಪ್ರಿಯಗೊಳಿಸುವುದಕ್ಕೂ ಅದು ಸಾಕಷ್ಟು ತಂತ್ರಗಳನ್ನು ಹೆಣೆಯುತ್ತದೆ. ನಿರ್ದಿಷ್ಟ ಹೋಟೆಲ್ ಅಥವಾ ಕಚೇರಿ ಕುರಿತ ಮಾಹಿತಿಯೊಂದನ್ನು ಗೂಗಲ್‌ನಲ್ಲಿ ಹುಡುಕಿದರೆ ಅದು ಗೂಗಲ್ ಮ್ಯಾಪ್‌ನಲ್ಲಿಯೇ ನಿರ್ದಿಷ್ಟ ವಿಳಾಸ ಎಲ್ಲಿದೆ ಎಂಬುದನ್ನೂ ತೋರಿಸುತ್ತದೆ. ಇದು ಗೂಗಲ್‌ನಂತೆಯೇ ಮ್ಯಾಪ್ ಸೇವೆ ನೀಡುವ ಇನ್ನಿತರ ಕಂಪೆನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರ್ಚ್ ಎಂಜಿನ್ ಕ್ಷೇತ್ರದಲ್ಲಿ ತನಗಿರುವ ಏಕಸ್ವಾಮ್ಯವನ್ನು ಗೂಗಲ್ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ.

ಗೂಗಲ್‌ನ ವಿರುದ್ಧ ಈ ತನಕ ಕೇಳಿಬಂದ ಎಲ್ಲಾ ಆರೋಪಗಳಿಗಿಂತ ಭಿನ್ನವಾದ ಆರೋಪಗಳನ್ನು ಸಿಸಿಐ ಮಹಾನಿರ್ದೇಶಕರ ವರದಿ ಮಾಡುತ್ತಿದೆ. ಗೂಗಲ್ ಹುಡುಕಾಟದ ಫಲಿತಾಂಶಗಳನ್ನು ತನ್ನಿಷ್ಟಕ್ಕೆ ಬೇಕಾದಂತೆ ಬದಲಾಯಿಸುತ್ತದೆ ಎಂಬ ಆರೋಪ ಇದೇ ಮೊದಲ ಬಾರಿಗೆ ಕೇಳಿಬರುತ್ತಿದೆ. ಜಾಹೀರಾತು ಲಿಂಕ್‌ಗಳ ಪ್ರಕಟಣೆಯಲ್ಲಿಯೂ ಅದು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪವೂ ಹೊಸತೇ.

ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್‌ಗೆ ಇರುವ ಶಕ್ತಿಯನ್ನು ಪರಿಗಣಿಸಿ ಈ ಆರೋಪಗಳನ್ನು ನೋಡಿದರೆ ಅದರ ಪರಿಣಾಮ ಎಂಥದ್ದು ಎಂದು ಅರ್ಥವಾಗುತ್ತದೆ. ಇದೇ ಕಾರಣಕ್ಕೆ ಅಂತರ್ಜಾಲವನ್ನು ತಮ್ಮ ವ್ಯವಹಾರದ ವೇದಿಕೆಯನ್ನಾಗಿಸಿಕೊಂಡಿರುವ ಫ್ಲಿಪ್‌ಕಾರ್ಟ್, ಫೇಸ್‌ಬುಕ್, ಮೇಕ್ ಮೈ ಟ್ರಿಪ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಂಪೆನಿಗಳು ಗೂಗಲ್ ಏಕಸ್ವಾಮ್ಯದಿಂದ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿವೆ.

ಈ ಪ್ರಕರಣ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಒಂದು ಕಂಪೆನಿ ಏಕಸ್ವಾಮ್ಯ ಸಾಧಿಸುವುದರ ಅಪಾಯವನ್ನಷ್ಟೇ ಹೇಳುತ್ತಿಲ್ಲ. ಇದು ಈ ಕಾಲದ ಆಡಳಿತ ವ್ಯವಸ್ಥೆ ಎದುರಿಸಬೇಕಾಗಿರುವ ಸವಾಲೊಂದನ್ನು ಅನಾವರಣಗೊಳಿಸುತ್ತಿದೆ. ವಾಣಿಜ್ಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ಖಾತರಿ ಪಡಿಸುವುದಕ್ಕಾಗಿ ಸಿಸಿಐನಂಥ ವ್ಯವಸ್ಥೆಯೊಂದಿದೆ ಎಂದಷ್ಟೇ ಸರ್ಕಾರಗಳು ಸಮಾಧಾನ ಪಡುವಂತಿಲ್ಲ.

2012ರಲ್ಲಿ ಸಲ್ಲಿಕೆಯಾದ ದೂರಿನ ಕುರಿತು ತನಿಖೆ ನಡೆಸುವುದಕ್ಕೆ ಸಿಸಿಐ ತೆಗೆದುಕೊಂಡ ಸಮಯ ಮೂರು ವರ್ಷಗಳು. ಆರು ಸಾವಿರ ಪುಟಗಳ ವರದಿಯ ಅನುಬಂಧದಲ್ಲಿ ಗೂಗಲ್ ನೀಡಿದ ಸ್ಪಷ್ಟೀಕರಣವೇ 2000 ಪುಟಗಳಿಷ್ಟಿದೆಯಂತೆ. ಆರೋಪವನ್ನು ಸಾಬೀತು ಮಾಡುವುದಕ್ಕೆ ಕೇವಲ ವ್ಯಾಪಾರಿ ನಿಯಮಗಳ ಪರಿಶೀಲನೆಯಷ್ಟೇ ಸಾಕಾಗುವುದಿಲ್ಲ. ಅದು ಗೂಗಲ್ ಸೇವೆಗಳಂಥ ತಾಂತ್ರಿಕ ವೇದಿಕೆಯಲ್ಲಿ ಪಾಲನೆಯಾಗಿದೆಯೇ ಎಂಬುದನ್ನು ನೋಡುವ ಕೆಲಸವು ಸಿಸಿಐನ ಮೇಲಿದೆ.

ಇದಕ್ಕೆ ಕೇವಲ ಕಾನೂನು ಜ್ಞಾನವಷ್ಟೇ ಸಾಕಾಗುವುದಿಲ್ಲ. ತಂತ್ರಜ್ಞಾನದ ಆಳವಾದ ಅರಿವು ಬೇಕಾಗುತ್ತದೆ. ಈ ಅರಿವನ್ನು ಇಡೀ
ಆಡಳಿತ ವ್ಯವಸ್ಥೆಗೇ ವಿಸ್ತರಿಸುವುದೇನು ಸಣ್ಣ ವಿಚಾರವಲ್ಲ.

ಸದ್ಯಕ್ಕೇನೋ ಸಿಸಿಐ ಎಂಬ ವ್ಯವಸ್ಥೆ ಗೂಗಲ್‌ನಂಥ ಅಂತಾರಾಷ್ಟ್ರೀಯ ದೈತ್ಯರಿಗೆ ಮೂಗುದಾರ ತೊಡಿಸುತ್ತಿದೆ ಅನ್ನಿಸುತ್ತಿದೆ. ಆದರೆ ಗೂಗಲ್ ಸೇರಿದಂತೆ ಇಂಟರ್ನೆಟ್ ಕ್ಷೇತ್ರದ ದೈತ್ಯರು ನಿತ್ಯವೂ ಅಳವಡಿಸಿಕೊಳ್ಳುತ್ತಿರುವ ತಾಂತ್ರಿಕತೆಗಳ ವೇಗದಲ್ಲಿ ನಮ್ಮ ಕಾನೂನುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಯಂತ್ರಣಾ ವಿಧಾನಗಳನ್ನು ಕೆಲಮಟ್ಟಿಗೆ ಅಳವಡಿಸಿಕೊಳ್ಳಬಹುದು.

ಆದರೆ ಅದು ಎರಡಂಚಿನ ಕತ್ತಿಯಿದ್ದಂತೆ. ‘66ಎ’ಯ ದುರ್ಬಳಕೆಯೇ ಇದನ್ನು ಹೇಳುತ್ತಿದೆ. ತಂತ್ರಜ್ಞಾನದ ಮೂಲಕ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೇಂದ್ರೀಕೃತ ನಿಯಂತ್ರಣವನ್ನು ಸಾಧಿಸಬಹುದು ಎಂದು ಹೊಸ ಕಾಲದ ಸರ್ಕಾರಗಳು ಭಾವಿಸುತ್ತಿವೆ. ಆದರೆ, ಅದೇ ತಂತ್ರಜ್ಞಾನ ನಿಯಂತ್ರಣವೆಂಬ ಪರಿಕಲ್ಪನೆಯನ್ನೇ ಅಪ್ರಸ್ತುತವಾಗಿಸಿಬಿಡಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.