ಅವನೊಬ್ಬ ಪರ್ವತಾರೋಹಿ. ದಶಕಗಳ ತರಬೇತಿ ಮತ್ತು ತಯಾರಿ ಪೂರೈಸಿಕೊಂಡು ತನ್ನ ದೇಶದ ಅತ್ಯಂತ ಎತ್ತರದ ಪರ್ವತ ಶಿಖರ ಹತ್ತಲು ನಡೆದ. ಆತ ದೈಹಿಕವಾಗಿ ಸಿದ್ಧನಾಗಿದ್ದಾನೆ, ಮನಸ್ಸಿನಲ್ಲಿ ಆತ್ಮವಿಶ್ವಾಸವಿದೆ. ಆರೋಹಣ ಪ್ರಾರಂಭವಾಯಿತು. ಕಡಿದಾದ ಪರ್ವತ ಕ್ಷಣಕ್ಷಣಕ್ಕೂ ಅವನ ಮುಂದೆ ಹೊಸ ಹೊಸ ಸವಾಲುಗಳನ್ನು ಎಸೆಯುತ್ತಿತ್ತು.

ಈತನೂ ಈ ತರಹದ ಪರೀಕ್ಷೆಗೆ ಸಿದ್ಧನಾದ್ದರಿಂದ ಅವುಗಳನ್ನು ನಿವಾರಿಸುತ್ತ ನಡೆದ. ಮೇಲೆ ಸಾಗಿದ ಹಾಗೆ ಅವನ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಅವನು ಇಷ್ಟು ವರ್ಷಗಳ ಕಾಲ ಮಾಡಿದ ತಪಸ್ಸಿಗೆ ಫಲ ದೊರಕುವ ಕಾಲ ಹತ್ತಿರ ಬಂತು. ಅವನು ಶಿಖರದಿಂದ ಕೇವಲ ನೂರುಅಡಿ ದೂರದಲ್ಲಿದ್ದಾನೆ. ತನ್ನ ಮುಂದಿದ್ದ ದೊಡ್ಡ ಬಂಡೆಯೊಂದನ್ನು ಸರಿಯಾಗಿ ಏರಿಬಿಟ್ಟರೆ ಸಾಕು, ಮುಂದಿನ ಏರು ಕಷ್ಟದ್ದಲ್ಲ. ಜಾಗ್ರತೆಯಾಗಿ ಬಂಡೆಯಮೇಲೆ ಕಾಲಿಟ್ಟು ಮುಂದೆ ಸಾಗಲು ನೋಡಿದ. ಅವನ ದುರ್ದೈವ.

ಆ ಬಂಡೆ ಮಳೆ, ಚಳಿಗೆ ತನ್ನನ್ನು ಒಡ್ಡಿಕೊಂಡು ತನ್ನ ಬಲವನ್ನು ಕಳೆದುಕೊಂಡಿದೆ. ಇವನು ಕಾಲಿಟ್ಟಿದ್ದೇ ತಡ, ಅದು ಪುಡಿಪುಡಿಯಾಯಿತು. ಇವನ ಹೆಜ್ಜೆ ಜಾರಿತು. ಆತ ಸುಂಯ್ಯೆಂದು ನೆಲದೆಡೆಗೆ ಬೀಳಲಾರಂಭಿಸಿದ. ಬೀಳುತ್ತಲೇ ಇದ್ದ. ಅವನಿಗೆ ತಾನು ಬದುಕುವುದು ಅಸಾಧ್ಯವೆಂಬ ಅರಿವಾಯಿತು. ಆಗ ಕ್ಷಣದಲ್ಲಿ ತನ್ನ ಜೀವನದ ಎಲ್ಲ ಘಟನೆಗಳು ಒಂದಾದ ಮೇಲೊಂದರಂತೆ ಕಣ್ಣ ಮುಂದೆ ಸರಿದುಹೋದವು. ಹೃದಯದಲ್ಲಿ ಜೀವ ಭಯ, ಕಾತುರತೆ ಎಲ್ಲ ನುಗ್ಗಿಬಂದು, `ದೇವರೇ ಕಾಪಾಡು' ಎಂದು ಕೂಗಿದ.

ಅವನು ಇದುವರೆಗೂ ದೇವರನ್ನು ನಂಬಿದವನಲ್ಲ. ಅವನ ದೈವ ಇನ್ನೂ ಚೆನ್ನಾಗಿತ್ತು. ತಾನು ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗ ಮೇಲೆ ಎಲ್ಲೋ ಒಂದು ಕಡೆಗೆ ಸಿಕ್ಕಿ ಹಾಕಿಕೊಂಡಿರಬೇಕು. ನೆಲದಡೆಗೆ ಭಾವಿಸಿ ಬೀಳುವುದು ಥಟ್ಟನೇ ನಿಂತಿತು. ಅವನು ಗಾಳಿಯಲ್ಲಿ ನೇತಾಡತೊಡಗಿದ. ಆಗಲೇ ಕತ್ತಲೆಯಾದ್ದರಿಂದ ತಾನು ಎಲ್ಲಿದ್ದೇನೆ, ಎಷ್ಟು ಎತ್ತರದಲ್ಲಿದ್ದೇನೆ ಎಂಬುದು ತಿಳಿಯುವಂತಿರಲಿಲ್ಲ.

ಕಣ್ಣುಜ್ಜಿಕೊಂಡರೂ ಏನೂ ಕಾಣುತ್ತಿಲ್ಲ. ತಾನು ನೇತಾಡುತ್ತಿರುವ ಹಗ್ಗ ಎಷ್ಟು ಹೊತ್ತು ತನ್ನ ಭಾರವನ್ನು ಹೊತ್ತುಕೊಂಡೀತು ಎನ್ನುವುದನ್ನು ಹೇಳುವುದೂ ಸಾಧ್ಯವಿರಲಿಲ್ಲ.ಆಗ ಮತ್ತಷ್ಟು ಭಯದಿಂದ ಕೂಗಿದ, `ದೇವರೇ ನನ್ನನ್ನು ದಯವಿಟ್ಟು ಕಾಪಾಡು. ನೀನು ನನ್ನನ್ನು ಪಾರು ಮಾಡಿದ್ದೇ ಆದರೆ ನಿನ್ನ ಪರಮಭಕ್ತನಾಗುತ್ತೇನೆ, ನಿನ್ನ ಅಸ್ತಿತ್ವವನ್ನು ಜಗತ್ತಿಗೆಲ್ಲ ತಿಳಿಸುತ್ತೇನೆ'.

ಆಗ ಅವನಿಗೊಂದು ಧ್ವನಿ ಕೇಳಿಸಿತು, `ನಾನು ಇರುವೆನೆಂದು ನಂಬುತ್ತೀಯಾ'? ಅದು ಭಗವಂತನ ಧ್ವನಿ ಎಂದು ಅವನಿಗನ್ನಿಸಿ ಹೇಳಿದ, `ಖಂಡಿತ, ನೀನಿರುವುದನ್ನು ನಂಬುತ್ತೇನೆ'. `ಹಾಗಾದರೆ ನಾನೀಗ ಏನು ಮಾಡಬೇಕು'? ದೇವರು ಕೇಳಿದ. `ನನ್ನನ್ನು ದಯವಿಟ್ಟು ಉಳಿಸು, ಹೇಗಾದರೂ ಮಾಡಿ ನನ್ನನ್ನು ನೆಲಕ್ಕೆ ಮುಟ್ಟಿಸು' ಎಂದ ಪರ್ವತಾರೋಹಿ.

`ಆಯ್ತು, ಹಾಗಾದರೆ ನೀನು ಸೊಂಟಕ್ಕೆ ಕಟ್ಟಿರುವ ಹಗ್ಗ ಕತ್ತರಿಸಿ ಎಸೆದುಬಿಡು' ಎಂದ ದೇವರು. ಈತ ವಿಚಾರ ಮಾಡಿದ, ನನ್ನನ್ನು ಹೇಗಾದರೂ ಜೀವದಿಂದ ಉಳಿಸಿದ್ದರೆ ಅದು ಈ ಹಗ್ಗ. ಅದನ್ನು ಬಿಸಾಕಿದರೆ ಬದುಕುವುದು ಹೇಗೆ? ಕೆಳಗೆ ಪ್ರಪಾತ ಎಷ್ಟು ಆಳವಿದೆಯೋ? ಹೀಗೆಯೇ ಚಿಂತಿಸಿ ಹಗ್ಗ ಕತ್ತರಿಸದೇ ಹಾಗೆಯೇ ಉಳಿದ.

ರಾತ್ರಿಯ ಚಳಿ ಮೈಯನ್ನು ಮರಗಟ್ಟಿಸುತ್ತಿತ್ತು. ಮರುದಿನ ಈ ಪರ್ವತಾರೋಹಿಯನ್ನು ಹುಡುಕಿಬಂದ ರಕ್ಷಣಾ ತಂಡದವರು ಅವನ ದೇಹ ಹಗ್ಗಕ್ಕೆ ತೂಗುಬಿದ್ದಿರುವುದನ್ನು ಕಂಡರು. ಅವನ ದೇಹ ಚಳಿಗೆ ಹೆಪ್ಪುಗಟ್ಟಿ ಹೋಗಿತ್ತು. ಆದರೆ ಅದು ನೆಲದಿಂದ ಕೇವಲ ಐದು ಅಡಿ ಎತ್ತರದ ಮೇಲಿತ್ತು. ರಕ್ಷಣಾ ತಂಡದವರಿಗೆ ಬಹಳ ಆಶ್ಚರ್ಯವಾಯಿತು.

ಪರ್ವತಾರೋಹಿ ಹಗ್ಗ ಕತ್ತರಿಸಿ ಬಿಸಾಕಿದ್ದರೆ ಸುರಕ್ಷಿತವಾಗಿ ನೆಲದ ಮೇಲೆ ಬಿದ್ದು ಬದುಕಿಕೊಳ್ಳುತ್ತಿದ್ದ. ನಮ್ಮ ನಂಬಿಕೆಯೇ ಹೀಗೆ. ಬೇಕಾದಾಗ ನಂಬುತ್ತೇವೆ, ಬೇಡವಾದಾಗ ಬಿಡುತ್ತೇವೆ. ಬಹಳಷ್ಟು ಬಾರಿ ಯಾವುದರಲ್ಲಿಯೂ ನಂಬಿಕೆ ಇಲ್ಲದೇ ಪೆಟ್ಟು ತಿಂದು ಒದ್ದಾಡುತ್ತೇವೆ. ಅದಕ್ಕೇ ತಿಳಿದವರು ನಮ್ಮ ನಂಬಿಕೆಯನ್ನು ಅಂಟಿನಲ್ಲಿ ಸಿಕ್ಕಿಕೊಂಡ ನೊಣಕ್ಕೆ ಹೋಲಿಸುತ್ತಾರೆ. ಅದು ಹಾರಬೇಕೆಂದು ಪಟಪಟನೇ ರೆಕ್ಕೆ ಬಡಿಯುತ್ತದೆ, ಆದರೆ ಹಾರುವುದಿಲ್ಲ. ಹಾರಲಾಗುವುದಿಲ್ಲ, ಒದ್ದಾಟ ತಪ್ಪುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.